"ತಾಯಿಗುಣದ ಶಿವಗಂಗಾ ರುಮ್ಮಾ"

"ತಾಯಿಗುಣದ ಶಿವಗಂಗಾ ರುಮ್ಮಾ"
ಪ್ರೊ. ಶಿವಗಂಗಾ ರುಮ್ಮಾ ಅವರು ಮೂಲತ: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನವರು. ಪ್ರಸ್ತುತ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ಮಾರ್ಕ್ಸವಾದದ ತತ್ವಗಳನ್ನು ಕುರಿತು ಗಂಭೀರವಾಗಿ ಮಾತನಾಡುವ ಮತ್ತು ಬರವಣಿಗೆ ಮಾಡುವ ಪ್ರಾಧ್ಯಾಪಕಿ ಆಗಿದ್ದಾರೆ. ಹಳೆಗನ್ನಡ, ವಚನ, ಛಂದಸ್ಸು, ಕಾವ್ಯಮೀಮಾಂಸೆಯ ಕುರಿತು ಆಳವಾದ ಜ್ಞಾನವನ್ನು ಹೊಂದಿರುವುದು ಅವರ ವಿದ್ಯಾರ್ಥಿಯಾದ ನಮಗೆ ಆಶ್ಚರ್ಯ ಮೂಡಿಸಿದ್ದು ಇದೆ. ಅಕ್ಕನಾಗಮ್ಮ ನೀಲಾಂಬಿಕೆ, ಬಂದೂಕಿನ ಬಾಯ, ಗುಬ್ಬಿಗೂಡು, ಕಾಲದ ಮಾಯೆ, ನೀರ ನುಡಿ, ಹೊತ್ತು ಹೋಗದ ಮುನ್ನ, ತಳಕ್ಕೆ ನೀರೆರೆದರೆ, ಬೀದರ್ ಜಿಲ್ಲೆಯ ಜನಪದ ಆಹಾರ ಪದ್ಧತಿ ಹಾಗೂ ಆರೋಗ್ಯ ಮುಂತಾದ ಕೃತಿಗಳನ್ನು ರಚಿಸಿದ್ದಲ್ಲದೆ, ನಡುಗನ್ನಡ ಸಾಹಿತ್ಯ ಸಂಗ್ರಹ, 371 ಜೆ ಹಾಗೂ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಮತ್ತು ಆದಿಲ್ ಶಾಹಿ ಕಾಲದ ಕರ್ನಾಟಕದ ಬಹುಸಂಸ್ಕೃತಿ ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ.
ಇಂದಿಗೂ ಕೂಡ ಯಾವುದೇ ಉಪನ್ಯಾಸಗಳಲ್ಲಿ ಭಾಗವಹಿಸಿ ಮಾತನಾಡಿದರೂ ಅವರ ಮಾತುಗಳಲ್ಲಿರುವ ಅಧಿಕೃತ ಜ್ಞಾನವು ಬೆರಗುಗೊಳಿಸುತ್ತದೆ. ಅವರ ಮಾತುಗಳಲ್ಲಿರುವ ವಿಷಯದ ನಿರ್ದಿಷ್ಟತೆ, ಸಾಹಿತ್ಯ ಪಠ್ಯವನ್ನು ನೋಡುವ ಭಿನ್ನವಾದ ಕ್ರಮ ಅವರ ವಿಷಯದ ಅಪಾರ ಜ್ಞಾನವನ್ನು ಗೋಚರಿಸುತ್ತದೆ. ಕನ್ನಡ ಸಾಹಿತ್ಯದ ಪಠ್ಯಗಳು ಬದುಕಿನ ಕ್ರಮವನ್ನು ಹೇಳುವುದರ ಜೊತೆಗೆ ಭೂತ, ವರ್ತಮಾನ, ಭವಿಷ್ಯತ್ತಿನ ಬದುಕನ್ನ ಹೇಳುತ್ತವೆ. ಯಾವುದೇ ಒಂದು ಪಠ್ಯವು ತನ್ನ ಕಾಲದ ಸಾಮಾಜಿಕ, ರಾಜಕೀಯ,ಆರ್ಥಿಕ, ಧರ್ಮ, ಪ್ರಭುತ್ವವನ್ನು ಹೇಗೆ ನಿರೂಪಿಸುತ್ತದೆ ಎಂಬುದನ್ನು ಐತಿಹಾಸಿಕ ಕುರುಹುಗಳ ಸಹಿತ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಉಣಬಡಿಸುವ ಇವರು ಹಳಗನ್ನಡ ಸಾಹಿತ್ಯದ ಕುರಿತು ಅಪಾರವಾದ ಜ್ಞಾನ ಹೊಂದಿರುವ ಪ್ರಾಧ್ಯಾಪಕಿ ಆಗಿದ್ದಾರೆ. ಜಾಗತಿಕ ತಲ್ಲಣಗಳು, ಶ್ರಮ ಸಂಸ್ಕೃತಿ, ಮಹಿಳೆಯ ಪ್ರಾಚೀನ ಪ್ರಸ್ತುತ ಸಂದರ್ಭ, ವಚನಕಾರರ ಆಶಯ, ಹೀಗೆ ಹಲವಾರು ವಿಷಯಗಳ ಕುರಿತು ಹಲವಾರು ಭಿನ್ನ ಆಯಾಮಗಳಲ್ಲಿ ವಿವೇಚಿಸುವ, ಮಾತನಾಡುವ, ಪಸರಿಸುವ ಚಿಂತಕಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳು ಪದವಿಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಪದವಿ ಪಡೆದುಕೊಂಡಿರುವ ಬಹುತೇಕ ವಿದ್ಯಾರ್ಥಿಗಳು ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಶಾಸನಗಳ ಪಠ್ಯಗಳನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮಾನವೀಕ ಭಾಷಾ ನಿಕಾಯದ ಡಿನ್ ರಾಗಿ, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಭಾರಿ
ಕುಲಸಚಿವರಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಲವಾರು ವಿದ್ಯಾರ್ಥಿಗಳಿಗೆ ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡುವ ತಾಯಿ ಗುಣದ ಪ್ರಾಧ್ಯಾಪಕಿಯಾದ ಪ್ರೊ. ಶಿವಗಂಗಾ ರುಮ್ಮಾ ಮೇಡಂ ಅವರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ಪ್ರಧಾನ ಮಾಡುವ 2023 ನೇ ಸಾಲಿನ 'ಸಾಹಿತ್ಯ ಶ್ರೀ' ಪ್ರಶಸ್ತಿಗೆ ಅಕಾಡೆಮಿ ಅಧ್ಯಕ್ಷ ಎಲ್ ಎನ್ ಮುಕುಂದರಾಜ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಶಸ್ತಿಗೆ ಪ್ರೊ. ಶಿವಗಂಗಾ ರುಮ್ಮಾ ಅವರನ್ನು ಆಯ್ಕೆ ಮಾಡಿರುವುದು ನನ್ನಂತ ಹಲವಾರು ವಿದ್ಯಾರ್ಥಿಗಳಿಗೆ ಅತಿ ಸಂತಸ ತಂದಿದೆ.
ಡಾ. ವಿದ್ಯಾಸಾಗರ ದಣ್ಣೂರ ಕನ್ನಡ ಉಪನ್ಯಾಸಕ ಕಲಬುರ್ಗಿ