ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಪೀಠಾಧಿಪತಿಗಳು ಉರಿಲಿಂಗ ಪೆದ್ದಿ ಮಠ ಬೇಲೂರು.

ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಪೀಠಾಧಿಪತಿಗಳು ಉರಿಲಿಂಗ ಪೆದ್ದಿ ಮಠ ಬೇಲೂರು.

ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಪೀಠಾಧಿಪತಿಗಳು ಉರಿಲಿಂಗ ಪೆದ್ದಿ ಮಠ ಬೇಲೂರು. 

ಕಲ್ಯಾಣ ನಾಡಿನ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ‌ ಬೇಲೂರು ಒಂದು ಐತಿಹಾಸಿಕ, ಶರಣರ ನೆಲವಾಗಿದೆ.ಇಲ್ಲಿ ಹಲವು ಮಠಗಳಿವೆ.ಅವುಗಳಲ್ಲಿ ಹನ್ನೆರಡನೆಯ ಶತಮಾನದ ಶರಣರ ಕಾಲದ ಉರಿಲಿಂಗ ಪೆದ್ದಿ ಮಠವೂ ಒಂದಾಗಿದೆ.ಈ ಪರಂಪರೆಯಲ್ಲಿ ಬರುವ ಬೇಲೂರಿನ ಉರಿಲಿಂಗಪೆದ್ದಿ ಮಠದ ಪೀಠಾಧಿ ಪತಿಯಾಗಿರುವ ಪೂಜ್ಯ ಪಂಚಾಕ್ಷರಿ ಸ್ವಾಮಿಗಳು.              

         ಅವರು ಬೇಲೂರಿನ ಶೇಷಬಾಯಿ ಮತ್ತು ಶಿವಕುಮಾಸ್ವಾಮಿಗಳ ಉದರದಲಿ ೦೯-೦೯-೧೯೭೪ ರಂದು ಜನಿಸಿದವರು.ಅವರ ಏಕೈಕ ಪುತ್ರ.ಇವರು ಬಸವಕಲ್ಯಾಣದ ಪ್ರಾಥಮಿಕ ಶಿಕ್ಷಣ ಪಡೆದು ತದನಂತ ರ ಮಠದ ಪೀಠಾಧಿಪತಿಗಳಾದವರು.ತಮ್ಮ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಮಾಡುತ್ತಾ ಬಂದವರು.

ಪೂಜ್ಯರು ಪ್ರತಿವರ್ಷ ವಿಶಿಷ್ಟವಾದ ಸಾಹಿತ್ಯ ಸಮ್ಮೇಳನ ಆಯೋಜಿಸಿದವರು. ಬೀದರ ಜಿಲ್ಲಾ ಗಡಿನಾಡು ಸಮ್ಮೇಳನ,ಹೈ.ಕ.ಸಾಹಿತ್ಯ ಸಮ್ಮೇಳನ, ತತ್ವಪದಕಾರರ ಸಮ್ಮೇಳನ, ಜಿಲ್ಲಾ ಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನ, ದಲಿತ ಶರಣರ ಸಾಹಿತ್ಯ ಸಮ್ಮೇಳನ,ಜಾನಪದ ಸಂಭ್ರಮ, ಜಿಲ್ಲಾ ಬಂಡಾಯ ಸಾಹಿತ್ಯ ಸಮ್ಮೇಳನ,ಹೈ.ಕ.ಮಹಿಳಾ ಸಾಹಿತ್ಯ ಸಮ್ಮೇಳನ,ಜಿಲ್ಲಾ ಶರಣ ಸಾಹಿತ್ಯ ಸಂಶೋಧ ಸಮ್ಮ್ಮೇಳನ, ಸಾಮಾಜಿಕ ಸಾಮರಸ್ಯ ಸಮ್ಮೇಳನ,ಸಂ ವಿಧಾನ ರಕ್ಷಣಾ ಸಮ್ಮೇಳನ,ಶೋಷಿತರ ಸಾಹಿತ್ಯ ಸಮ್ಮೇಳನ,ವಿಮರ್ಶಾ ಸಾಹಿತ್ಯ ಸಮ್ಮೇಳನ,ಜಾನಪದ ಮಹಿಳಾ ಸಮ್ಮೇಳನ,ಗ್ರಂಥಾಲಯ ಸಮ್ಮೇಳನ, ಪ್ರಥಮ ಬೌದ್ಧ ಸಮ್ಮೇಳನ ಇವುಗಳೆಲ್ಲಾ ಹದಿನಾರು ಸಮ್ಮೇಳನಗಳನ್ನು  ಮಾಡಿ ದಾಖಲೆ ನಿರ್ಮಿಸಿದ್ದಾರೆ.

    ಹದಿನೈದು ವರ್ಷಗಳಿಂದ  ಅತ್ಯುತ್ತಮ ಸೇವೆ ಸಸಲ್ಲಿಸಿರುವ  ಇಬ್ಬರಿಗೆ ಉರಿಲಿಂಗ ಪೆದ್ದಿ ಪ್ರಶಸ್ತಿಯನ್ನು ೪೧ ಜನರಿಗೆ,ಕಾಳವ್ವೆ ಪ್ರಶಸ್ತಿ ಒಬ್ಬರಿಗೆ,ಪ್ರತಿವರ್ಷ ಐದು ಜನರಿಗೆ ಗೌರವ ಪ್ರಶಸ್ತಿ,

ಪ್ರತಿ ವರ್ಷ  ನೂರಾರು ಜನರಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ, ಜೊತೆಗೆ   ಗೌರವ ಸನ್ಮಾನ ಮಾಡುತ್ತಿದ್ದಾರೆ 

ಶ್ರೀ ಮಠದಿಂದ ಹದಿನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಗಡಿ ನಾಡು ಭಾಗದಲ್ಲಿ ಕನ್ನಡ ಕಟ್ಟುವ,ಸಾಹಿತಿಗಳಿಗೆ ಮುಕ್ತ ವೇದಿಕೆ ಕಲ್ಪಿಸಿದವರು.ಇವರ ಮಠಕ್ಕೆ ಯಾವುದೇ ಆಸ್ತಿ,ಅಂತಸ್ತು ಇಲ್ಲ   ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಒಳ್ಳೆಯ ಕಾರ್ಯ ಯೋಜನೆ ಹಾಕಿಕೊಂಡು. ತಮ್ಮ ಗುರುವಿನ ಸೇವೆ ಜೊತೆ ಸಾಹಿತ್ಯ ಸಂಸ್ಕೃತಿ ಬೆಳೆಸುವತ್ತಾ ಮುನ್ನಡೆದಿದ್ದಾರೆ.

(ಉರಿಲಿಂಗ ಪೆದ್ದಿ ಮಠದ ಇತಿಹಾಸ)

ಬೇಲೂರ ಗ್ರಾಮಕ್ಕೆ ಮಹತ್ವ ಬರಲು ಭಿಲ್ಲೇಶ ಬೊಮ್ಮಯ್ಯನ ಗುಡಿಯಂತೆಯೇ ದಲಿತ ಶರಣ ಉರಿಲಿಂಗ ಪೆದ್ದಿ ಅವರ ಮಠವೂ ಕಾರಣವಾಗಿದೆ. ಈ ಗ್ರಾಮ ಈಗ ಗ್ರಾಮ ಪಂಚಾಯತ್ ಕೇಂದ್ರವಾಗಿದೆ. ಇಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಖಾಸಗಿ ಶಾಲೆಗಳು ಸಹ ಇದ್ದು ಈಚೆಗೆ ಶೈಕ್ಷಣಿಕ ಕೇಂದ್ರವಾಗಿ ಬೆಳೆದಿದೆ. ಇಲ್ಲಿಂದ ಪೂರ್ವಕ್ಕೆ ಚುಳಕಿನಾಲಾ ಜಲಾಶಯದ ರಸ್ತೆಯಲ್ಲಿ ಉರಿಲಿಂಗಪೆದ್ದಿ ಅವರ ಮಠವಿದೆ. ಮಠದ ಸುತ್ತಲೂ ಮೊದಲು ಪರಿಶಿಷ್ಟ ಜಾತಿಯವರ ಮನೆಗಳಿದ್ದವು. ಕೆಲ ವರ್ಷಗಳ ಹಿಂದೆ ಇಲ್ಲಿಯ ಮನೆಗಳು ಗ್ರಾಮದ ಪಶ್ಚಿಮಕ್ಕೆ ಸ್ಥಳಾಂತರಗೊಂಡವು. ಈ ಕಾರಣ ಇಲ್ಲಿನ ಹಳೆಯ ಕಟ್ಟಡಗಳು ಹಾಳು ಬಿದ್ದಿವೆ. ಇಂಥ ಮನೆಗಳ ಕಲ್ಲು ಮಣ್ಣಿನ ರಾಶಿಯ ನಡುವೆ ಮಠದ ಮಂಟಪ ಮಾತ್ರ ಎದ್ದು ಕಾಣುತ್ತದೆ. ಸುತ್ತಲೂ ಹೊಲಗಳಿದ್ದು ನಿರ್ಜನ ಪ್ರದೇಶವಾಗಿರುವ ಕಾರಣ ವಿಶೇಷ ಸಂದರ್ಭಗಳಲ್ಲಿ ಮಾತ್ರ ಭಕ್ತರು ಮಠಕ್ಕೆ ಭೇಟಿ ಕೊಡುತ್ತಾರೆ.

    ಬಸವಕಲ್ಯಾಣ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿನ ಬಸವಾದಿ ಶರಣರಿಗೆ ಸಂಬಂಧಿಸಿದ ಸ್ಮಾರಕಗಳು ಇತ್ತೀಚಿನವರೆಗೆ ಕತ್ತಲಲ್ಲಿಯೇ ಇದ್ದವು. ಸಂಪೂರ್ಣವಾಗಿ ಹಾಳಾಗಿರುವ ಇವುಗಳನ್ನು ಪುನಃ ಗುರುತಿಸಿ ಅಭಿವೃದ್ಧಿಪಡಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮತ್ತು ಸರ್ಕಾರ್ ಈಚೆಗೆ ಕೈಗೆತ್ತಿಕೊಂಡಿದೆ. ಇದರಂತೆ ಬೇಲೂರಿನ ಉರಿಲಿಂಗ ಪೆದ್ದಿ ಮಠ ಸಹ ಮಠಾಧಿಪತಿಗಳ ಮತ್ತು ಗ್ರಾಮಸ್ಥರ ಪ್ರಯತ್ನ ಹಾಗೂ ಭಕ್ತರ ಸಹಕಾರದಿಂದಾಗಿ ಈಚೆಗೆ ಅಭಿವೃದ್ಧಿ ಕಾಣುತ್ತಿದೆ.

      ಹಾಗೆ ನೋಡಿದರೆ ಕರ್ನಾಟಕ್ ದಲ್ಲಿ ಉರಿಲಿಂಗ ಪೆದ್ದಿ ಮಠಗಳು ಬಹಳಷ್ಟಿವೆ. ಇವೆಲ್ಲ ಮಠಗಳು ಶಕ್ತ್ಯಾನುಸಾರ ಉರಿಲಿಂಗ ಪೆದ್ದಿ ಶರಣರ ಬಗ್ಗೆ ಪ್ರಚಾರ ಕೈಗೊಂಡು ಶರಣ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುತ್ತಿವೆ. ಇವುಗಳಲ್ಲಿ ಕೆಲವು ಮನೆಗಳಂತಿದ್ದರೆ ಇನ್ನು ಕೆಲವು ಮಠಗಳು ದೊಡ್ಡ ದೇವಾಲಯಗಳಂತಿದ್ದು ಅವುಗಳಿಗೆ ಸಾಕಷ್ಟು ಆಸ್ತಿಯೂ ಇದೆ. ಗುಲ್ಬರ್ಗ ಜಿಲ್ಲೆಯ ಕೊಡ್ಲಾ, ಗುಂಡಗುರ್ತಿ,ಟೆಂಗಳಗಿ, ಹೊನಕುಂಟಾ, ಹುರಸಗುಂಡಗಿ, ಯಾದಗಿರಿ, ಬೀದರ ಜಿಲ್ಲೆಯ ಬೇಲೂರು, ಬೇಮಳಖೇಡ್, ಭಾಲ್ಕಿ, ಖಟಕಚಿಂಚೋಳಿ, ಗೋರಟಾ, ಮುಚಳಂಬ, ಪ್ರತಾಪುರ, ತ್ರಿಪುರಾಂತ, ಬಸವಕಲ್ಯಾಣ, ಗೋಧಿ ಹಿಪ್ಪರ್ಗಾ , ಘಾಟಬೋರೋಳ, ಮೈಸೂರು ಜಿಲ್ಲೆಯ ಮಲ್ಕುಂಟಿ, ನಂಜನಗೂಡು, ಮೈಸೂರು, ಎಂ.ಕನ್ನೇನಹಳ್ಳಿ, ಮಾರನಹಳ್ಳಿ, ಬೆಂಕಿಪುರ, ಲಕ್ಷ್ಮಿಪುರ, ಮಡಕುತೊರೆ, ಕಾಳಿಗುಂಡಿ, ಮರಡಿಪುರ, ಚಾಮರಾಜನಗರ ಜಿಲ್ಲೆಯ ಮಣಗಳ್ಳಿ, ಸತ್ಯಗಾಲ, ಕುನಹಳ್ಳಿ, ನರಿಪುರ, ಹುಡಿಗಾಲ, ಯಾಲಕ್ಕೂರು, ಶ್ರೀರಾಮಪುರ, ದಡದಳ್ಳಿ, ಮಂಡ್ಯ ಜಿಲ್ಲೆಯ ಬೆಳಕವಾಡಿ, ಮಂಡ್ಯ, ಅಲಸಳ್ಳಿ, ಹಾಸನ ಜಿಲ್ಲೆಯ ಜೋಗಿಪುರಗಳಲ್ಲಿ ಮಠಗಳಿವೆ. ಈ ಬಗ್ಗೆ ಡಾ.ಸಾಹುಕಾರ ಎಸ್.ಕಾಂಬಳೆ ಅವರು `ಲಿಂಗಾಯತ ಅಸ್ಪೃಶ್ಯರು ಒಂದು ಅಧ್ಯಯನ'ಎನ್ನುವ ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದಾರಲ್ಲದೆ ಈ ಮಠಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿದ್ದಾರೆ.

     ಮೊದಲೇ ತಿಳಿಸಿರುವಂತೆ ಉರಿಲಿಂಗ ಪೆದ್ದಿ ಶರಣರ ಮೂಲ ಸ್ಥಳದ ಬಗ್ಗೆ ವಿದ್ವಾಂಸರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಮಹಾರಾಷ್ಟ್ರದ ಇಂದಿನ ನಾಂದೇಡ ಜಿಲ್ಲೆಯ ಕಂಧಾರ ಅವರ ಹುಟ್ಟೂರು ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಆದರೆ ಬಿಜಾಪುರ ಜಿಲ್ಲೆಯ ನಂದವಾಡಗಿ ಅವರ ಮೂಲ ಸ್ಥಳ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅವರ ಕಾಲಮಾನದ ಬಗ್ಗೆಯೂ ಖಚಿತ ನಿಲುವು ತಾಳಲು ಯಾವುದೇ ಆಧಾರಗಳಿಲ್ಲ. ಅದರಂತೆ ಅವರ ಜೀವನದ ಘಟನೆಗಳ ಬಗ್ಗೆಯೂ ಹೆಚ್ಚಿನ ವಿವರ ಲಭ್ಯವಿಲ್ಲ. ಉರಿಲಿಂಗ ಪೆದ್ದಿಯವರು ಕಂಧಾರದಲ್ಲಿನ ನಲ್ಲೂರು ಮಠದ ಅಧಿಪತಿಯಾಗಿ ಎಷ್ಟು ದಿನ ಉಳಿಯುತ್ತಾರೆ. ಎಂಥ ಪರಿಸ್ಥಿತಿ ಎದುರಿಸುತ್ತಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ದೊರೆಯುವುದಿಲ್ಲ. ಆದರೂ ದಲಿತ ಪೆದ್ದಣ್ಣನಿಗೆ ಪೀಠವನ್ನು ವಹಿಸಿದ ಕಾರಣಕ್ಕಾಗಿ ಉರಿಲಿಂಗ ದೇವರು ಮೇಲ್ವರ್ಗದವರ ಕೆಂಗಣ್ಣಿಗೆ ಗುರಿಯಾಗಿ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಉರಿಲಿಂಗಪೆದ್ದಿ ಸಹ ಜನರ ಕಿರುಕುಳ ತಾಳದೆ ಮಠವನ್ನು ತ್ಯಜಿಸುತ್ತಾರೆ ಎಂಬುದು ಕೆಲವರ ಊಹೆಯಾಗಿದೆ. ಶರಣರ ಕಾರ್ಯಕ್ಷೇತ್ರಕ್ಕ್ಕೆ ಹೋಗದೆ ಗತ್ಯಂತರವಿಲ್ಲ ಎಂಬುದನ್ನು ತಿಳಿದು ಅವರು ಕಲ್ಯಾಣಕ್ಕೆ ಬಂದಿರಬಹುದು ಎನ್ನಲಾಗುತ್ತದೆ.

   ಹೀಗೆ ಬಸವಣ್ಣನ ಸಾನಿಧ್ಯವನ್ನು ಬಯಸಿ ಕಲ್ಯಾಣಕ್ಕೆ ಆಗಮಿಸಿದ ಅವರು ಇಲ್ಲಿಂದ 10 ಕಿ.ಮೀ ದೂರದಲ್ಲಿರುವ ಇಂದು ಬೇಲೂರು ಗ್ರಾಮವಿರುವ ಸ್ಥಳದಲ್ಲಿ ವಾಸ್ತವ್ಯ ಹೂಡುತ್ತಾರೆ ಎನ್ನಲಾಗುತ್ತದೆ. ಕೆಲವು ಗ್ರಂಥಗಳಲ್ಲಿ ಕಲ್ಯಾಣದ ಸಮೀಪದಲ್ಲಿಯೇ ಪೆದ್ದಿಯವರ ಸಮಾಧಿ ಇದೆ ಎಂಬುದು ದಾಖಲಾಗಿದೆ. ಬೇಲೂರ ಮಠವನ್ನು ಬಿಟ್ಟರೆ ಬಸವಕಲ್ಯಾಣದ ಭೀಮನಗರ ಓಣಿಯಲ್ಲಿ ಮಾತ್ರ ಅವರ ಗವಿ ಆಕಾರದ ಮಂದಿರವಿದೆ. ಇವೆರಡರಲ್ಲಿ ಯಾವುದಾದರೊಂದು ಸ್ಥಳದಲ್ಲಿ ಸಮಾಧಿ(ಗದ್ದುಗೆ) ಇರುವ ಸಾಧ್ಯತೆ ಇದೆ.

ಬೇಲೂರನಲ್ಲಿ ಅಂದು ಅವರು ವಾಸಿಸಿದ ಸ್ಥಳವೇ ಮುಂದೆ ಮಠವಾಗಿ ರೂಪುಗೊಂಡಿದೆ. ಅಲ್ಲದೆ ಮಠಕ್ಕೆ ಮಠಾಧಿಪತಿಗಳನ್ನು ನೇಮಿಸುವ ಪರಂಪರೆ ಬೆಳೆದು ಬಂದಿದೆ. ಇದುವರೆಗೆ ಶ್ರೀ ಶಿವಲಿಂಗ ಸ್ವಾಮಿ, ಶ್ರೀ ಶಾಂತವೀರ ಸ್ವಾಮಿ, ಶ್ರೀ ಭಾನುದಾಸ ಸ್ವಾಮಿ, ಶ್ರೀ ಶಣ್ಮುಖ ಸ್ವಾಮಿ, ಶ್ರೀ ಗೋಣಯ್ಯ ಸ್ವಾಮಿ, ಶ್ರೀ ಶಿವಲಿಂಗೇಶ್ವರ ಶಿವಯೋಗಿ, ಶ್ರೀ ಮಹಾದೇವ ಸ್ವಾಮಿ, ಶ್ರೀ ಶಿವಯೋಗಿ ಸ್ವಾಮಿ, ಶ್ರೀ ಬಸವಂತ ಸ್ವಾಮಿ ಒಳಗೊಂಡು 13ಜನ ಸ್ವಾಮಿಗಳು ಪೀಠವನ್ನು ಅಲಂಕರಿಸಿದ್ದಾರೆ. 2001ರಲ್ಲಿ ಇಂದಿನ ಮಠಾಧಿಪತಿಗಳಾದ ಶ್ರೀ ಪಂಚಾಕ್ಷರಿ ಸ್ವಾಮಿಯವರು ಅಧಿಕಾರ ವಹಿಸಿಕೊಂಡರು.

    ಉರಿಲಿಂಗ ಪೆದ್ದಿಯವರ ಮೂಲಸ್ಥಳವಾದ ಕಂಧಾರದವರಾದ ವಗ್ಗೆ (ವಾಘಮಾರೆ) ಕುಟುಂಬದವರು ನೂರಾರು ವರ್ಷಗಳ ಹಿಂದೆಯೇ ಬೇಲೂರಿಗೆ ಬಂದು ವಾಸವಾಗಿದ್ದಾರೆ. ಮುಲ್ಲಾ ಮಸಟಕಿ, ತುಕಾರಾಮ, ಗೀರೆಪ್ಪ, ತುಕನಾಕ, ಗುಂಡಾಜಿ, ಮುಲ್ಲಾ ಜಟಿಂಗ್, ಸೈದಪ್ಪ, ವಿಠ್ಠಲ್, ಕಲ್ಲಪ್ಪ ಅವರು ಈ ಮನೆತನದ ಐದಾರು ತಲೆ ಮಾರಿನ ಪ್ರಮುಖರಾಗಿದ್ದಾರೆ. ಇವರು ಇಲ್ಲಿ `ಕಂಧಾರದೇವಿ'ಯ ಚಿಕ್ಕ ಮಂದಿರವನ್ನೂ ನಿರ್ಮಿಸಿದ್ದಾರೆ. ಉರಿಲಿಂಗ ಪೆದ್ದಿಯವರ ಭಕ್ತರಾಗಿರುವಂತೆ ಇವರು ಕಂಧಾರ ದೇವಿಯ ಆರಾಧಕರು ಸಹ ಆಗಿದ್ದಾರೆ. ಇವರು ಇಲ್ಲಿಗೆ ಆಗಮಿಸಿರುವುದು ಹಾಗೂ ಉರಿಲಿಂಗ ಪೆದ್ದಿಯವರ ಮಠಕ್ಕೆ ಕಟ್ಟಾ ಭಕ್ತರಾಗಿ ನಡೆದುಕೊಂಡು ಬರುತ್ತಿರುವುದನ್ನು ನೋಡಿದರೆ ಪೆದ್ದಿ ಶರಣರ ಮೂಲ ಸ್ಥಳ ಕಂಧಾರವೇ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ...

ಕೃಪೆ: ಭೂಮಂಡಲ