ಶಿಕ್ಷಣ ತಜ್ಞ: ಶ್ರೀ ಹೆಚ್.ಎಸ್.ಪಾಟೀಲ

ಶಿಕ್ಷಣ ತಜ್ಞ: ಶ್ರೀ ಹೆಚ್.ಎಸ್.ಪಾಟೀಲ

ಶಿಕ್ಷಣ ತಜ್ಞ: ಶ್ರೀ ಹೆಚ್.ಎಸ್.ಪಾಟೀಲ

ಲೇಖಕರು: ಡಾ.ಅವಿನಾಶ ಎಸ್.ದೇವನೂರ    

         ಕೊಪ್ಪಳದ ಹಿರಿಯ ಸಾಹಿತಿ ಹೆಚ್ .ಎಸ್. ಪಾಟೀಲ ಅವರು ಕನ್ನಡದ ಬಹುದೊಡ್ಡಕನ್ನಡ ಪರಿಚಾರಕರು. ಒಬ್ಬ ಶಿಕ್ಷಕರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆ ಅಪಾರವಾದದ್ದು. ಮೂಲತಃ ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ ಗ್ರಾಮದ ಗೌಡಕಿ ಮನೆತನದ ಪೊಲೀಸ್ ಗೌಡರ ಮನೆತನದಲ್ಲಿ ಏಕೈಕ ಮಗನಾಗಿ 1942 ರಲ್ಲಿ ಜನಿಸಿದರು.

    ‌ ಇವರು ಪ್ರಾರಂಭದಲ್ಲಿ ಬಿಸರಹಳ್ಳಿಯ ಗಾಂವಠೀ ಶಾಲೆಯಲ್ಲಿ ಶಿಕ್ಷಣ ಅಭ್ಯಾಸ ಪ್ರಾರಂಭವಾಯಿತು. ನಂತರ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ಕೊಪ್ಪಳದ ಪ್ರತಿಷ್ಠಿತ ಶ್ರೀ ಗವಿಸಿದ್ದೇಶ್ವರ ಹೈಸ್ಕೂಲಿನಲ್ಲಿ ಶಿಕ್ಷಣವನ್ನು ಪಡೆದು ಎಸ್ .ಎಸ್ .ಎಲ್. ಸಿ ಪರೀಕ್ಷೆ ಮುಗಿಸಿದ ನಂತರವೇ ಅದೇ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿದರು. ಆನಂತರ ಪಿ.ಯು.ಸಿ ,ಬಿ.ಎ. ಪದವಿಯನ್ನು ಪಡೆದುಕೊಂಡರು.ಬಿಇಡಿ ಪದವಿಯನ್ನು ಮೈಸೂರಿನಿಂದ ಪಡೆದವರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಎಂ.ಎ. ಕನ್ನಡ ಪದವಿಯನ್ನು ಬಾಹ್ಯ ಅಭ್ಯರ್ಥಿಯಾಗಿ ಪೊರೈಸಿದರು. ಇವರ ಶೈಕ್ಷಣಿಕ ಸೇವೆ ಅತ್ಯಂತ ಮಹತ್ವದ್ದಾಗಿದೆ.

         ಪ್ರಾರಂಭದಲ್ಲಿ ತಾವು ಕಲಿತ ಶಾಲೆ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದರು. ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಕನ್ನಡದ ಬೋಧಕರಾಗಿ ಮಹತ್ವದ ಸ್ಥಾನವನ್ನು ಹೊಂದಿದರು.ಆದರ್ಶ ಶಿಕ್ಷಕರಾಗಿ ಸೇವೆ ಸಂದಿದೆ.ಜಾತ್ಯಾ ತೀತ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ಮಾಡಿದ್ದಾರೆ.ಅವರು ಮನುಕುಲದ ಶಿಕ್ಷಕರು. ಶಿಕ್ಷಣದ ಮಹತ್ವವನ್ನು ಗ್ರಾಮೀಣ ಪ್ರದೇಶದಲ್ಲಿ ಪಸರಿಸುವಂತೆ ಮಾಡಿದ ವ್ಯಕ್ತಿ.

          ಅವರು ತಮ್ಮ ಜೀವನದಲ್ಲಿ ಸಾಕಷ್ಟು ನೋವುಗಳು ಸಂಘರ್ಷಗಳನ್ನು ಕಂಡರೂ ಸಹಿತ ಅಂಜದೇ ಅಳುಕದೆ ತಮ್ಮದೇ ಆದ ಶೈಕ್ಷಣಿಕ ಸಾಧನೆಯನ್ನು ಮಾಡುತ್ತಾ ಬಂದವರು. ಮೊದಲ ಪ್ರಾಶಸ್ತ್ಯ ಜೀವನ -ಶಿಕ್ಷಣಕ್ಕೆ ಮಹತ್ವವನ್ನು ಕೊಟ್ಟಿರುವಂತಹ ಶಿಕ್ಷಣ ಪ್ರೇಮಿ.ಶಿಕ್ಷಣದ ಮೇಲೆ ಅಪಾರವಾದ ಕಾಳಜಿಯನ್ನು ಹೊಂದಿರುವ ಶ್ರೀ ಎಚ್.ಎಸ್ .ಪಾಟೀಲ ಅವರು ಶೈಕ್ಷಣಿಕವಾಗಿ 01-07- 1961 ರಿಂದ 31-1975 ರವರೆಗೆ ಸುಮಾರು 14 ವರ್ಷಗಳ ಕಾಲ ಕೊಪ್ಪಳದ ಶ್ರೀಗವಿಸಿದ್ದೇಶ್ವರ ಪ್ರೌಢಶಾಲೆಯ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದರು. ಆನಂತರ1975 ರಿಂದ 1990 ವರೆಗೆ ಕೊಪ್ಪಳ ತಾಲೂಕಿನ ಅಳವಂಡಿಯ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಯರಾಗಿ ಹಾಗೂ ಕಾಲೇಜಿನ ಪ್ರಾಚಾರ್ಯರಾಗಿ ಸೇವೆಯನ್ನು ಸಲ್ಲಿಸಿದರು.1990 ರಿಂದ 2000 ವರೆಗೆ ಕೊಪ್ಪಳದ ಕಾಳಿದಾಸ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 31-8 -2018 ರವರೆಗೆ ನಿವೃತ್ತರಾದರು.ಸುಮಾರು ಮೂವತ್ತೊಂಬತ್ತು ವರ್ಷಗಳ ಕಾಲ ನಿರಂತರ ಬೋಧನೆ,ಆಡಳಿತ ನಿರ್ವಹಿಸಿದರು.

     ‌‌ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಬೇಕೆಂಬ ಸದುದ್ದೇಶದಿಂದ ನಿವೃತ್ತರಾದ ನಂತರ ಕೊಪ್ಪಳದ ಕೇದಾರಲಿಂಗ ಬಿ.ಸಿ.ಎ ಕಾಲೇಜಿನಲ್ಲಿ ಹಾಗೂ ರೇಣುಕಮ್ಮ ಬಸಪ್ಪ ದಿವಟರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ 2004 ರಿಂದ 2008ರ ವರೆಗೆ ಸೇವೆಯನ್ನು ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶದ ಹಳ್ಳಿಗಾಡಿನ ಮಕ್ಕಳಿಗೆ ಶೈಕ್ಷಣಿಕ ಸೇವೆಯನ್ನು ಒದಗಿಸುವ ಸಲುವಾಗಿ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡಿದ್ದಾರೆ ಆ ಪ್ರೇರಣೆಯಿಂದ ಇಂದು ಹಲವಾರು ಸಾವಿರಾರು ವಿದ್ಯಾರ್ಥಿಗಳು ಅನೇಕ ವೃತ್ತಿಯಲ್ಲಿ ತಮ್ಮ ಜೀವನವನ್ನು ಕಳೆದುಕೊಂಡು ಉನ್ನತ ಸ್ಥಾನದಲ್ಲಿ ಇದ್ದಾರೆ. ಇವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಬೆಳವಣಿಗೆ ಆಗಿರುವುದು ಅತ್ಯಂತ ಸಂತೋಷದ ಸಂಗತಿ. ಅಲ್ಲದೆ ಅವರು ಒಬ್ಬ ಶಿಕ್ಷಣ ತಜ್ಞರಾಗಿ ಗವಿಸಿದ್ದೇಶ್ವರ ಪ್ರೌಢಶಾಲೆ ಮತ್ತು ಅಳವಂಡಿಯ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಅನೇಕ ಸಾಹಿತಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕವಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿದ್ದಾರೆ.ಹಾಗೂ ವಿದ್ಯಾರ್ಥಿಗಳ ಮನಸ್ಸಿಗೆ ನೋವಾಗದಂತೆ ಕಲಿಕೆಯನ್ನು ಮಾಡುತ್ತಾ ಬಂದವರು. ಅವರು ಬಡತನದ ಅನೇಕ ತೊಂದರೆಯಲ್ಲಿರುವ ವಿದ್ಯಾರ್ಥಿಗಳಿಗೆ ತಮ್ಮ ಸಹಾಯ ಹಸ್ತವನ್ನು ನೀಡುತ್ತಾ ಬಂದವರು. ಅವರಿಗೆ ಫೀಸು ಕಟ್ಟಲು ಆಗದಿದ್ದಾಗ ಫೀಸು ಕಟ್ಟಿ ಓದಿನ ರುಚಿ ಹಚ್ಚಿದರು.ಅವರಿಗೆ ಪುಸ್ತಕಗಳನ್ನ ಕೊಡಿಸಿ ಶಾಲೆಗೆ ಪ್ರವೇಶವನ್ನು ಮಾಡಿಸಿದವರು. ಹೀಗಾಗಿ ಇಂದಿಗೂ ಕೂಡ ಅವರ ಶಿಷ್ಯರು ಅವರನ್ನು ಮನದಾಳದಿಂದ ಹಾರೈಸುತ್ತಾರೆ. ಅವರ ಪ್ರೀತಿಯನ್ನು ಅವರ ಕಲಿಕೆ ವಿಧಾನವನ್ನು ಕೂಡ ಎಲ್ಲರೂ ಇಂದಿಗೂ ಗಮನಿಸುತ್ತಾರೆ.ಅವರ ಬಗ್ಗೆ ಅಪಾರವಾದ ಪ್ರೀತಿಯನ್ನು ವಿದ್ಯಾರ್ಥಿ ಸಮುದಾಯ ಹೊಂದಿದೆ. ಅವರ ಶೈಕ್ಷಣಿಕ ಕಾರ್ಯ ಬಹಳ ಮಹತ್ವಪೂರ್ಣವಾಗಿರತಕ್ಕಂಥ ಅಳವಂಡಿಯಂತಹ ಒಂದು ಸಣ್ಣ ಗ್ರಾಮದಲ್ಲಿ ಹೈಸ್ಕೂಲನ್ನು ಅತ್ಯಂತ ಎತಗತರ ಶಿಖರಕ್ಕೆ ಏರಿಸುವಲ್ಲಿ ಅವರ ಪಾತ್ರ ಗಣನೀಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರು ಆಗಿರುವ ಅಳವಂಡಿಯ ಶಿವಮೂರ್ತಿ ಸ್ವಾಮಿಗಳು ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದರು.ಚನ್ನಯ್ಯ ಸ್ವಾಮಿ,ಗುರುಮೂರ್ತಿ ಸ್ವಾಮುಗಳೊಂದಿಗೆ ಒಡನಾಟ ಹೊಂದಿ ಆ ಸಂಸ್ಥೆಯ ಅಡಿ ಯಲ್ಲಿ ಬಿಇಡಿ ಕಾಲೇಜು ಗದಗ ಮತ್ತು ಅಳವಂಡಿಯಲ್ಲಿ ಪದವಿ ಪೂರ್ವ ಕಾಲೇಜು ತೆರೆಯಲು ಮೂಲ ಕಾರಣ ಪಾಟೀಲರು. ವಿದ್ಯಾರ್ಥಿಗಳಿಗೆ ಫ್ರೀ ಜನರಲ್ ವಸತಿ ನಿಲಯವನ್ನು ಪ್ರಾರಂಭಿಸಿ ತಮ್ಮ ಸ್ವಂತ ಸಂಬಳದಿಂದ ಹಣವನ್ನು ಹಾಕಿ ಹಾಸ್ಟೆಲ್ ನ್ನು ನಡೆಸಿದರು. ಮುಂದೆ ಸಂಸ್ಕೃತ ಪಾಠ ಶಾಲೆ ,ಸಂಗೀತ, ಚಿತ್ರಕಲೆ ಮತ್ತು ಕ್ರೀಡೆಗಳಿಗೆ ಗಮನ ನೀಡಿದರು.ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೇರೇಪಿಸಿದರು.ವಾರ್ಷಿಕೋತ್ಸವದ ಮೂಲಕ,ಪ್ರವಾಸದ ಮೂಲಕ ಕೋಶ-ದೇಶದ ಅನುಭವ ಒಟ್ಟೊಟ್ಟಿಗೆ ನೀಡಿದ ವರು. ಕೊಪ್ಪಳದಲ್ಲಿ ಕಾಳಿದಾಸ ಪ್ರೌಢ ಶಾಲೆಯನ್ನು ತೆರೆಯುವಲ್ಲಿ ಇವರ ಪಾತ್ರ ಗಣನೀಯವಾಗಿದೆ. ಹಾಗೆ ಅಂದಿನ ಶಾಸಕ ಮಲ್ಲಿಕಾರ್ಜುನ ದಿವಟರವರ ಮನವೊಲಿಸಿ ಪಾಟೀಲರು ಸೇರಿಕೊಂಡು ನೃಪತುಂಗ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು.ಅದರ ಅಧ್ಯಕ್ಷರಾಗಿ ದಿವಟರ,ಸಂಸ್ಥಾಪಕ ಕಾರ್ಯದರ್ಶಿಯಾಗಿ ಬಿಸರಹಳ್ಳಿ ಮತ್ತು ಬೆಣಕಲ್ಲದಲ್ಲಿ ಎರಡು ಪ್ರೌಢಶಾಲೆಯನ್ನು ಪ್ರಾರಂಭಿಸಿ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಮನೆ ಬಾಗಿಲಿಗೆ ಶಿಕ್ಷಣದ ವ್ಯವಸ್ಥೆಯನ್ನು ಕಟ್ಟಿಕೊಡುವ ಕೆಲಸವನ್ನು ಹೆಚ್.ಎಸ್. ಪಾಟೀಲರು ಮಾಡಿದ್ದಾರೆ. ಆನಂತರ ಕೊಪ್ಪಳದ ಹಿಂದಿ ಪ್ರಚಾರ ಸಭಾ, ಮದ್ರಾಸ್ ಸಂಚಾಲಿತ ಹಿಂದಿ ಬಿ.ಎಡ್ ಕಾಲೇಜಿನಲ್ಲಿ ಕನ್ನಡ ಬೋಧಕರಾಗಿ ಸೇವೆಯನ್ನು ಕೂಡ ಸಲ್ಲಿಸುತ್ತಾ, ಶೈಕ್ಷಣಿಕ ಸಾಧನೆ ಮಾಡಿದ ಪಾಟೀಲರು ಒಬ್ಬ ಶಿಕ್ಷಣ ತಜ್ಞರಾಗಿದ್ದಾರೆ ಇವರ ಮಾರ್ಗದರ್ಶನದಲ್ಲಿ ಕಲಿತಿರುವ ಗವಿಸಿದ್ಧ ಎನ್. ಬಳ್ಳಾರಿ, ಈಶ್ವರ ಹತ್ತಿ ,ಹನುಮಪ್ಪ ವೋಡ್ರಟ್ಟಿ, ಎಚ್.ಎಲ್. ಹಿರೇಗೌಡರ, ಡಾ. ಸಂಗಯ್ಯ ಶಿರೂರುಮಠ, ಡಾ. ಪಾರ್ವತಿ ಪೂಜಾರ, ಮಾದೇವಪ್ಪ ಹೊಟ್ಟಿನ, ರಾಮಣ್ಣ ವೇಮಲಿ, ಎಂ.ಬಿ. ಅಳವಂಡಿ,ಮಾರುತಿ ವಾಲಿಕಾರ್, ಡಾ. ಎಂ.ಐ. ಮುದಗಲ್, ಮದನ್ ಲಾಲ್ ಜೈನ್ ,ನೀಲಕಂಠಯ್ಯ ಹಿರೇಮಠ, ಶ್ರೀಷ.ಬ್ರ. ನಾಗಭೂ ಷಣ ಶಿವಾಚಾರ್ಯರು ಇಂತಹ ಅನೇಕ ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಶಿಕ್ಷಣವನ್ನು ಪಡೆದು ಉನ್ನತ ಸ್ಥಾನವನ್ನು ಪಡೆದಿರುವವರು .

    ಅದರಂತೆ ಕ್ರಿಯಾಶೀಲರಾಗಿ,ಸತತ ಅಧ್ಯಯನದಲ್ಲಿ ನಿರತರು. ಕೊಪಣ ಕೋಶವಾಗಿ ನಮ್ಮೆದುರಿಗೆ ಇದ್ದಾರೆ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಕೃತಿಗಳನ್ನು ರಚಿಸುವುದಕ್ಕಿಂತ ಲೇಖಕರನ್ನು, ಯುವ ಕವಿಗಳನ್ನು, ಕಲಾವಿದರನ್ನು, ಸಾಹಿತಿಗಳನ್ನು, ಸೃಷ್ಟಿ ಮಾಡಿದ ಒಬ್ಬ ಹಿರಿಯ ಕಿಂಗ್ ಮೇಕರ್ ಸಾಹಿತಿಯಾಗಿದ್ದಾರೆ.ತಮಗಿಂತ ಇತರರನ್ನು ಬೆಳೆಸುವಲ್ಲಿ ಸಂತಸ ಪಡುವ ವ್ಯಕ್ತಿ ಮಾತ್ರ ಅಲ್ಲ ಅವರೊಬ್ಬ ಶಕ್ತಿಯಾಗಿ ನಿಂತಿದ್ದಾರೆ.ಅವರ ಬರವಣಿಗೆ- ಓದು ವಿದ್ಯಾರ್ಥಿ ಆದಾಗಿನಿಂದ ಹಿಡಿದು ಇಂದಿನ ಎಂಬತ್ತು ಮೂರು ವರ್ಷದಲ್ಲಿ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿ ಅನೇಕರಿಗೆ ಸಾಹಿತ್ಯ, ಸಂಸ್ಕೃತಿ,ಚರಿತ್ರೆಯ ಆಕರ ಗ್ರಂಥವಾಗಿದ್ದಾರೆ.ನೆನಪಿನ ಶಕ್ತಿ ಆಗಾಧವಾಗಿದೆ. ಬಿಡಿ ಬಿಡಿ ಯಾಗಿ ಅವರ ಬರಹಗಳು ಬಂದರು ಸಹಿತ ಅವರು ಪ್ರಕಟಣೆಗೆ ತೊಡಗಿಕೊಂಡದ್ದು 2003 ರಲ್ಲಿ.ಅಲ್ಲಿಂದ ಕೊಪ್ಪಳ ಜಿಲ್ಲೆಯ ರಂಗಭೂಮಿ, ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕೊಪ್ಪಳ ಶ್ರೀ ಗವಿಸಿದ್ದೇಶ್ವರರು, ಪಂಡಿತ ನಾಗಭೂಷಣ್ ಶಾಸ್ತ್ರಿಗಳು, ಕೊಪ್ಪಳ ಶ್ರೀ ಗವಿಮಠ ,ಕೊಪ್ಪಳ ತಾಲೂಕ ದರ್ಶನ, ಕೊಪ್ಪಳ ಶ್ರೀ ಗವಿಮಠದ ಲಿಂಗೈಕ್ಯ ಜಗದ್ಗುರು ಶಿವಶಾಂತ ವೀರ ಮಹಾಸ್ವಾಮಿಗಳು, ಗವಿಸಿದ್ದ ಬಳ್ಳಾರಿ, ಕೊಪ್ಪಳ ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ಪರಂಪರೆ, ಕೊಪ್ಪಳ ಶ್ರೀ ಗವಿ ಸಿದ್ದೇಶ್ವರ ಮಠ, ಕಿನ್ನಾಳ ಕಲೆ, ರಂಗ ಅಭಿನಯತ್ರಿ ರೆಹಮಾನವ್ವ ಕಲ್ಮನಿ,ರಂಗ ಸಾಧಕಿ ರೆಹಮಾನವ್ವ, ನನ್ನ ಜನ ನನ್ನ ಜಗತ್ತು ಎಂಬ ಹದಿನೈದು ಕೃತಿಗಳನ್ನು ಸ್ವತಂತ್ರವಾಗಿ ರಚಿಸಿ ಈ ನಾಡಿಗೆ ಮಹತ್ವದ ಕೊಡುಗೆಯನ್ನು ಕೊಟ್ಟಿದ್ದಾರೆ. ಅದರ ಜೊತೆಗೆ ಸಂಪಾದಿತ ಕೃತಿಗಳಾಗಿ ತಿರುಳ್ಗನ್ನಡ, ಶಾಂತ ಪ್ರಭೆ,ವಿಮೋಚನೆ ,ಚುಟು ಕು ಚಿಲುಮೆ,ಕೊಪ್ಪಳ ಜಿಲ್ಲಾ ದರ್ಶನ, ಪಾರಸೀ ಕವೀಂದ್ರ ರು, ಕೊಪಣ ಸಿರಿ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿಯ ರೂವಾರಿ ವೈಜನಾಥ ಪಾಟೀಲ ಮುಂತಾದ ಹತ್ತಕ್ಕೂ ಹೆಚ್ಚು ಸಂಪಾದನಾ ಕೃತಿಗಳನ್ನು ಹೊರತಂದಿರುವ ಹೆಚ್.ಎಸ್ ಪಾಟೀಲರು ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದಾರೆಮ ಅವರೊಬ್ಬ ಹೋರಾಟಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಇತಿಹಾಸ ಪ್ರಜ್ಞೆಯನ್ನು ಹೊಂದಿರುವ ಅಪರೂಪದ ವ್ಯಕ್ತಿ. ಇದರ ಜೊತೆಗೆ ಅವರೊಬ್ಬ ಶ್ರೇಷ್ಠ ಶಿಕ್ಷಣ ತಜ್ಞರಾಗಿ ಕಾಣುತ್ತಿದ್ದಾರೆ.ಶಿಕ್ಷಣ ಸೇವೆ ಮಾಡಿದರೂ ಪ್ರಶಸ್ತಿಗೆ ಬೆನ್ನು ಹತ್ತದ ವ್ಯಕ್ತಿ.

      ಅವರ ಅಪರೂಪದ ಶೈಕ್ಷಣಿಕ ಸೇವೆಗೆ ಅವರ ಸಾಹಿತ್ಯ ಸೇವೆ ಪರಿಗಣಿಸಿ ಕೊಪ್ಪಳ ಜಿಲ್ಲಾಡಳಿತ ನೀಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶ್ರೀಮತಿ ಚಂದಮ್ಮ ಚಂದ್ರಪ್ಪ ನೀರಾವರಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಇವರ ಮುಡಿಗೆ ಸೇರಿವೆ. ಇದರೊಂದಿಗೆ ಅನೇಕ ಸಂಘ ಸಂಸ್ಥೆಗಳು ಮತ್ತು ಮಠಾಧೀಶರು ಇವರನ್ನು ಗೌರವಿಸಿದ್ದಾರೆ ಜೊತೆಗೆ. ಕೊಪ್ಪಳ ಜಿಲ್ಲೆಯ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕೊಪ್ಪಳ ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಮಾಡಿದ ಭಾಷಣ ಇಂದಿಗೂ ಕೂಡ ಮನನೀಯವಾಗಿದೆ.ಇವರ ಸಾಹಿತ್ಯ ಸೇವೆ ಜೀವಮಾನದ ಸಾಧನೆಯನ್ನು ಪರಿಗಣಿಸಿ ಕನ್ನಡ ನಾಡು ಲೇಖಕರ ಓದುಗರ ಸಹಕಾರ ಸಂಘದ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಕಲ್ಯಾಣ ಕರ್ನಾಟಕಕ್ಕೆ ಸಂದ ಗೌರವವಾಗಿದೆ.

(ಇಂದು ದಿನಾಂಕ: ೦೯-೦೨-೨೦೨೫ರಂದು ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ನಿಮಿತ್ಯ ಲೇಖನ)