ಆಳಂದ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು

ಆಳಂದ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು
(ಆಳಂದ ನಂದವಾಡಗಿ ಮತ್ತು ಜಾಲವಾದಿ ಗ್ರಾಮದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಮೂಲಕರ್ತ್ಯ ಶ್ರೀ ಮಹಾಂತ ಶಿವಯೋಗಿಗಳ ಪುಣ್ಯ ಸ್ಮರಣೆ ಮಾ. 8ರಂದು ಆಳಂದ ಶ್ರೀಮಠದಲ್ಲಿ ನಡೆಯಲಿರುವ ಸವಿನೆನಪಿನ ಪ್ರಯುಕ್ತ ಲೇಖನೆ)
ಆಳಂದ ಮಹಾಂತ ಶಿವಯೋಗಿಗಳು ಆರಾಧಿಸಿ ಬಂದ ಭಕ್ತರಿಗೆ ಕಾಮಧೇನು ಕಲ್ಪವೃಕ್ಷ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು
ಜಗತ್ತಿನ ಧಾರ್ಮಿಕ ರಂಗದಲ್ಲಿ ಭಾರತಕ್ಕೆ ವಿಶಿಷ್ಠಸ್ಥಾನವಿದೆ. ಈ ದೇಶದಲ್ಲಿ ಸಾವಿರಾರು ಮಹಾತ್ಮರು ಜನಿಸಿ ಮಾನವಕುಲಕ್ಕೆ ದಾರಿದೀಪವಾಗಿದ್ದಾರೆ
ಅನೇಕತೆಯಲ್ಲಿ ಏಕತೆಯನ್ನು ಸಾರಿ “ಮಾನವ ಕುಲಂ ತಾನೋದೆ ವಲಂ” ಎನ್ನುವುದು ತತ್ವವನ್ನು ಸಾರಿದ್ದಾರೆ. ದೇವನೊಬ್ಬ ನಾಮ ಹಲವು ಆಗಿದ್ದರೂ ಮುಟ್ಟುವ ಗುರಿ ಒಂದೇ ಎಂದು ತಿಳಿಸಿ ಐಕ್ಯತೆಯ ಮಂತ್ರ ಬೋಧಿಸಿದ ಅನಂತ ಧರ್ಮಗಳಲ್ಲಿ ವೀರಶೈವ ಲಿಂಗಾಯತ ಧರ್ಮವೂ ಒಂದಾಗಿದೆ.
ಇವನಾರವ, ಇವನಾರವ ಎಂದೆನಿಸದೇ ಎಲ್ಲರೂ ನಮ್ಮವರೆ ಎನ್ನುವ ವಿಶಾಲ ತಳಹದಿಯ ಮೇಲೆ ಆಚಾರ್ಯ ತತ್ವ, ಶರಣ ತತ್ವ ಭೋದಿಸಿ ಎಲ್ಲರನ್ನು ಸಮಾನವಾಗಿ ಕಂಡು ಸಮನ್ವಯತೆಯ ಹರಿಕಾರರಾದ್ದಾರೆ.
ಇಂತಹ ಭವ್ಯ ಪರಂಪರೆಯಲ್ಲಿ ಗುಲ್ಬರ್ಗಾ ಜಿಲ್ಲೆಯ ಆಳಂದ ನಗರದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠ 800-900 ವರ್ಷಗಳ ಇತಿಹಾಸ ಹೊಂದಿದೆ. ಶ್ರೀಮಠದ ಮೂಲಕರ್ತೃ ಶ್ರೀ ಮಹಾಂತೇಶ್ವರರು ಅನಂತ ಶಿಷ್ಯರನ್ನು ಹೊಂದಿದ್ದಾರೆ.
ಮಹಾಂತ ಶಿವಯೋಗಿಗಳು ಶಿವನಪ್ಪಣೆಯಂತೆ ಮಹಾರಾಷ್ಟ್ರ ಪ್ರಾಂತ್ಯದ ಗಂಗಾಖೇಡ ಗ್ರಾಮದಲ್ಲಿ ಜನಿಸಿ ಮಂಗಳವೇಡಾ ಹಿರೇಮಠದ ಶ್ರೀ ರೇಣುಕ ಶಿವಾಚಾರ್ಯರಿಂದ ದೀಕ್ಷಾ ಸಂಪನ್ನರಾಗಿ ಪ್ರತಿನಿತ್ಯ ಲಿಂಗಪೂಜೆ ಜಪ-ತಪದ ಮೂಲಕ ಆದ್ಯಾತ್ಮ ಶಕ್ತಿಯನ್ನು ಸಂಪಾದಿಸುತ್ತಾ ಅಂಗಲಿ0ಗ ಸಮರತೆಯಲ್ಲಿ ಪ್ರಭುತ್ವ ಸಂಪನ್ನರಾಗಿ ಬೆಳೆಯುತ್ತಾರೆ. ಪೂಜ್ಯರು ಅಲ್ಲಿಂದ “ಹಂಪೆಯಾತ್ರೆಯ” ಸಂಕಲ್ಪದೊ0ದಿಗೆ “ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ” ಎಂಬುವ ರೀತಿಯಲ್ಲಿ ತಮ್ಮ ಶಿಷ್ಯ ಉರುಲಿಂಗದೇವರೊ0ದಿಗೆ ಪಾದಯಾತ್ರೆಯನ್ನು ಆರಂಭಿಸುತ್ತಾರೆ. ದೇಶದೊಡಲಲ್ಲಿ ಅವಿತ ದಾನವಿ ವೃತ್ತಿಯನ್ನು ನಿರ್ಮೂಲ ಮಾಡುತ್ತಾ ಜನರಲ್ಲಿ ಧರ್ಮ ಶಿಲೆಗಳನ್ನು ಜಾಗೃತಿಮಾಡಿ ತಮ್ಮ ಜೀವಿತಾವಧಿಯನ್ನು ಈಶಸೇವೆಗೆ ಮೀಸಲಿಡಬೇಕೆಂದು ಬಯಸಿದರು. ಕತ್ತಲಿದ್ದೆಡೆಗೆ ಚಿತರಶ್ಮಿಯಾಗಿ ಅಜ್ಞಾನದ ಭವವನ್ನು ಹರಿದೊಗೆಯಲು ತಮ್ಮನ್ನು ತಾವು ಸಮರ್ಪಿಸಲು ಬಯಸಿದರು. ಗುರುಗಳಾದ ರೇಣುಕ ಶಿವಾಚಾರ್ಯರ ಅಪ್ಪಣೆ ಹಾಗೂ ಶುಭಾಶೀರ್ವಾದವನ್ನು ಪಡೆದುಕೊಂಡು ತಮ್ಮ ಮುಂದಿನ ಆದ್ಯಾತ್ಮದ ಬದುಕಿನೆಡೆಗೆ ಪಯಣ ಆರಂಭಿಸಿದರು.
ಕಲ್ಯಾಣ ಪ್ರವೇಶ :-
ಮಹಾಂತ ಶಿವಯೋಗಿಗಳು ಸುಕ್ಷೇತ್ರ ಗಂಗಾಖೇಡದಿ0ದ ಶರಣರ ಬೀಡಾದ ಬಸವಕಲ್ಯಾಣಕ್ಕೆ ಆಗಮಿಸಿ ಶ್ರೀ ಘನಲಿಂಗ ಶಿವಯೋಗಿಗಳ ಮಠಕ್ಕೆ ಬರುತ್ತಾರೆ. ಕೆಲ ದಿನಗಳ ಕಾಲ ಪೂಜ್ಯರೊಡನೆ ದಿನನಿತ್ಯ ಶರಣ ಕುಲತಿಲಕ ಭಕ್ತ ಬಂಡಾರಿ ಬಸವಣ್ಣನವರ ನೇತೃತ್ವದಲ್ಲಿ ನಡೆಯುತ್ತಿದ್ದ ಅನುಭವ ಮಂಟಪದ ಧಾರ್ಮಿಕ ಆದ್ಯಾತ್ಮಿಕ ಚರ್ಚೆ ಹಾಗೂ ಚಿಂತನೆಯಲ್ಲಿ ಮಹಾಂತ ಶಿವಯೋಗಿಗಳು ಭಾಗವಹಿಸಿದರು ಅಲ್ಲದೇ ವೀರಶೈವ ಧರ್ಮದ ಪಂಚಾಚಾರ, ಷಟಸ್ಥಲ, ಅಷ್ಟಾವರಣಗಳ ತತ್ವವಿವೇಚನೆಯಲ್ಲಿ ತಮ್ಮ ಪಾಂಡಿತ್ಯ ನುಡಿಗಳನ್ನು ಪ್ರಚುರಪಡಿಸಿದರು ಹಾಗೂ ಎಲ್ಲ ಅನುಭವಿಗಳ ಶರಣ ದರ್ಶನವನ್ನು ಆಲಿಸಿ ಸರ್ವರ ಪ್ರೀತಿಗೆ ಪಾತ್ರರಾದರು.
ಆಳಂದ ಪಟ್ಟಣಕ್ಕೆ ಆಗಮನ :-
ಕಲ್ಯಾಣದಿಂದ ಹೊರಟ ಮಹಾಂತ ಶಿವಯೋಗಿಗಳು ದಾರಿಯುದ್ದಕ್ಕೂ ಬರುವ ಹಳ್ಳಿಗಳಾದ ಹತ್ತರಗಾ ಕೋತನಹಿಪ್ಪರಗಾ ಎಲ್ಲ ಕಡೆ ಭಕ್ತರ ಆಹ್ವಾನವನ್ನು ಸ್ವೀಕರಿಸಿ ಬಯಕೆಗಳನ್ನು ಈಡೇರಿಸುತಾ ತಮ್ಮ ಶಿವಲಿಂಗಾರ್ಚನೆಗಳನ್ನು ನೆರವೇರಿಸಿಕೊಂಡು, ಅಜ್ಞಾನವ ಕಂಡಲ್ಲಿ ಜಾತಿ-ಮತಗಳ ಹೊಳವು ತೆರೆದಾಗ ಭಕ್ತರಿಗೆ ತಿಳಿಹೇಳಿ ತೋರುವ ಸೃಷ್ಠಿಯ ರಹಸ್ಯವನ್ನು ವಿವರಿಸುತ್ತಾ “ಅಲದಿಪುರ” (ಆಲದಿ, ಆಳಂದ) ಪಟ್ಟಣಕ್ಕೆ ಆಗಮಿಸುತ್ತಾರೆ. ಸಂಜೆ ಮುನ್ನ ಅವಿರತವಾದ ನಡುಗೆಯಲ್ಲಿ ಸಾಗಿ ಬಂದು ಪುರದೀಚೆ ದೊಡ್ಡದಾದ ಆಲದಮರ, ಅದರ ಬಳಿಯೇ ಒಂದು ಶಿವಾಲಯ ಆ ಆಲದಮರದಿಂದ ಅನತಿದೂರದಲ್ಲಿ ಹಲವಾರು ಮನೆಗಳು ಜನರ ವಾಸವಾಗಿರುವುದು ತೋರುತ್ತಿತ್ತು, ಪೂಜ್ಯರ ಆಗಮನವನ್ನು ಗಮನಿಸಿ ಕೆಲ ಹಿರಿಯರು ಬಂದು ನಮಸ್ಕರಿಸಿ ಮಾತನಾಡಿಸಿದಾಗ ಜನರು ಪೂಜ್ಯರೇ, ನೀವು ಈ ಸ್ಥಳದಲ್ಲಿ ತಂಗುವುದು ಬೇಡ ತಮಗೆ ಶಿವಪೂಜೆಗೆ ಅನುಕೂಲವಾಗುವ ಮನೆ ನಿಗದಿಮಾಡುತ್ತೇವೆ. ಅಲ್ಲಿ ಬಂದು ವಿಶ್ರಾಂತಿಸಿ ಎಂದಾಗ ಮಹಾಂತ ಶಿವಯೋಗಿಗಳು ಇರಲಿ ಶಿವಾಲಯದಲ್ಲೇ ನಾವು ತಂಗುತ್ತೇವೆ ಎನ್ನುವುದಾಗಿ ಹೇಳಿದರು. ಅಲ್ಲಿನ ಜನ ಇಲ್ಲಾ ಪೂಜ್ಯರೇ ಹಲವಾರು ವರ್ಷಗಳಿಂದ ಈ ಆಲದಮರದಲ್ಲಿ ಬ್ರಹ್ಮರಾಕ್ಷಸರು ಇರುವರು ಇಲ್ಲಿಯವರೆಗೆ ಅನೇಕ ಜೀವಗಳಿಗೆ ತೊಂದರೆ ನೀಡಿ ಬಲಿ ತೆಗೆದುಕೊಂಡಿವೆ ಹಾಗೂ ನಮ್ಮ ಪಟ್ಟಣಕ್ಕೆ ಒಂದು ಶಾಪವಾಗಿ ಪರಿಣಮಿಸಿದ್ದಾರೆ ಎಂದರು. ಆಗ ಪೂಜ್ಯರು ಹೆದರದಿರಿ ಗುರುಕಾರಣ್ಯದಿಂದ ಯಾವ ಅಪಾಯವೂ ಆಗುವುದಿಲ್ಲ. ನಾವು ಶಾಂತವಾಗಿ ನಮ್ಮ ಸ್ನಾನ ಪೂಜಾದಿ ಕ್ರಿಯೆಗಳನ್ನು ಮುಗಿಸಿಕೊಂಡು ವಿಶ್ರಾಂತಿ ಪಡೆಯುತ್ತೇವೆ ಎಂದು ಊರ ಜನರನ್ನು ಸಮಾಧಾನ ಪಡಿಸಿ ಕಳಿಸಿದರು, ರಾತ್ರಿ ಸರಿಸುಮಾರು 12 ಗಂಟೆ ಆಲದಮರದ ಎಲೆಗಳಲ್ಲಿ ಒಂದು ತರಹದ ಗಾಳಿಗೆ ಉದುರಿದ ಹಾಗೆ ಜೋರಾದ ಕರ್ಕಶನಾದ, ಅಬ್ಬರ ಇದೆಲ್ಲಾ ಕೇಳಿಸಿಕೊಂಡ ಶಿಷ್ಯ ಉರುಲಿಂಗದೇವರು ಎದ್ದು ಮರದಕಡೆ ಗಮನಿಸಿದಾಗ ಎರಡು ದೈತ್ಯಾಕಾರದ ದೇಹಗಳು, ವಿಕಾರ ಮುಖ, ಕೋರೆಹಲ್ಲುಗಳಲ್ಲ ವಿಕೃತ ನಗುವಿನ ರಾಕ್ಷಸರನ್ನು ಕಂಡು ವಿಚಲಿತರಾಗಿ ಗುರುಗಳ ಹತ್ತಿರ ಹೋಗಿ ವಿಷಯ ಮುಟ್ಟಸಿದರು. ನಂತರ ಶಿವಾಲಯದ ಆಚೆ ಬಂದು ಗುರುಗಳು ಬ್ರಹ್ಮ ರಾಕ್ಷರನ್ನು ಕಂಡು ಯಾಕೆ ಈ ಪುರದ ಜನರಿಗೆ ಹಾಗೂ ಇಲ್ಲಿ ಬಂದ ಯಾತ್ರಿಕರಿಗೆ ತೊಂದರೆ ಕೊಡುತ್ತೀರಿ ಎಂದೆಲ್ಲಾ ವಿಚಾರಿಸಿದಾಗ ಇಲ್ಲಿಗೆ ಬಂದವರು ನಮ್ಮ ಹಸಿವನ್ನು ಇಂಗಿಸುವ ಬಲಿಗಳು ಇಲ್ಲಿಯವರೆಗೆ ಅದೇಷ್ಟೋ ಪ್ರಾಣಗಳನ್ನು ನಾವು ತೆಗೆದು ಭಕ್ಷಿಸಿದ್ದೇವೆ, ಇಂದು ನಿಮ್ಮಿಬ್ಬರ ಸರದಿ ಎಂದು ಗಹಗಹಸಿ ನಕ್ಕಾಗ ಮಹಾಂತ ಶಿವಯೋಗಿಗಳು ತಮ್ಮ ಶಿಷ್ಯನಿಗೆ ಒಳಗಿರುವ ಕಮಂಡಲವನ್ನು ತರಿಸಿ ತಮ್ಮ ಶುಭ ಹಸ್ತದ ಮೂಲಕ ಪ್ರಣವ ಪಂಚಾಕ್ಷರ ಮಂತ್ರ ಪಠಣೆಯೊಂದಿಗೆ ಶಿವಯೋಗ ಸಾಧನದ ಮುಖಾಂತರ ರಾಕ್ಷಸರ ಮೇಲೆ ಗುರುಪಾದೋದಕವನ್ನು ಸಿಂಪಡಿಸಿದರು. ಕ್ಷಣಾರ್ಧದಲ್ಲೇ ದೈತ್ಯ ವಿಕಾರ ದೇಹಿಗಳಾಗಿದ್ದ ರಾಕ್ಷಸರು ಸುಂದರ ಕಿನ್ನರ ದಂಪತಿಗಳಾಗಿ ಶ್ರೀ ಗುರು ಮಹಾಂತರ ಪಾದದ ಮೇಲೆರಿಗೆ ತಮ್ಮ ವೃತ್ತಾಂತವನ್ನು ತಿಳಿಸಿ ಶಾಪಗ್ರಸ್ತರಾಗಿದ್ದ ನಮಗೆ ಒಬ್ಬ ಶಿವಯೋಗಿಗಳ ಆಗಮನದ ಮೂಲಕ ಶಾಪ ವಿಮೋಚನೆಯಾಗಿ ಮೂಲರೂಪ ದೊರಕುತ್ತದೆ ಎಂಬುದು ಇಂದಿಗೆ ತಮ್ಮಿಂದ ನೇರವೇರಿದೆ, ಮಹಾನುಭಾವರೇ ಎಂದ ತಿಳಿಸಿದರು, ಬೆಳಗಾಗುವುದರೊಳಗೆ ಈ ಶುಭ ಸಮಾಚಾರ ಆಲದಿಪುರದ ಎಲ್ಲ ಜನರಿಗೆ ತಿಳಿಯುತ್ತಿದ್ದಂತೆ ಸರ್ವರೂ ಬಂದು ಪೂಜ್ಯರಿಗೆ ಶರಣಾಗತರಾಗಿ ಬಹು ವರ್ಷಗಳಿಂದ ಕಾಡುತಿದ್ದ ರಾಕ್ಷಸ ಶಾಪ ವಿಮೋಚನೆಮಾಡಿ ನಗರವನ್ನು ಪುನೀತಗೊಳಿಸಿದ್ದಕ್ಕಾಗಿ ಇಲ್ಲಿಯೇ ವಾಸವಾಗುವಂತೆ ಬೇಡಿಕೊಂಡಿದ್ದು ಮೂಲಮಠದ ಸ್ಥಾಪನೆಗೆ ಕಾರಣವಾಯಿತು. ಭಕ್ತರ ಅಪೇಕ್ಷೆಯ ಮೇರೆಗೆ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಉದಯವಾಯಿತು.
ಅಂಬಾಭವಾನಿ ಸಾಕ್ಷಾತ್ಕಾರ (ಪಟ್ಟಾಧಿಕಾರ ಕಾರ್ಯ) :-
ಆಳಂದದ ದೇವಾಲಯದಲ್ಲಿ ರಾತ್ರಿ ವಿಶ್ರಾಂತಿ ಸಮಯದಲ್ಲಿ ಕನಸೊಂದು ಮಹಾಂತ ಶಿವಯೋಗಿಗಳಿಗೆ ಬಿದ್ದಿತು ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಪೂಜ್ಯರಿಗೆ ಜಗದಂಬೆ ಅಂಬಾಭವಾನಿ ಪ್ರತ್ಯಕ್ಷಳಾಗಿ “ಮಹಾಂತ” ನಾನಾರೆಂಬುದು ನೆನಪಿಗೆ ಬಂತೆ? ಮರೆಯಲೆಂತು ಸಾಧ್ಯವಮ್ಮ ಹೆತ್ತ ತಾಯಿಯ ಮಡಿಲ ತೊರೆದು ತಂದೆಯ ಅಪ್ಪಣೆ ಪ್ರಕಾರ ಭೂಲೋಕಕ್ಕೆ ಬಂದಿರುವೆ ಮತ್ತೆ ನಿನ್ನ ಮಡಿಲ ಸೇರುವುದೊಂದೆ ಎನ್ನ ಗುರಿ ಎಂದರು.
ಕAದಾ ನಿನ್ನಿಂದ ಇನ್ನು ಲೋಕಕಲ್ಯಾಣ ಕಾರ್ಯಗಳಾಗುವುದು ಬಹಳ ಇದೆ, ಅವೆಲ್ಲವನ್ನು ಪೂರೈಸು ನನ್ನ ಮಾತನೊಂದು ಶಿರಸಾವಹಿಸಿ ಪಾಲಿಸು “ಆಳಂದ ಪುರದಲ್ಲಿ ನಿನ್ನ ಮೂಲಮಠವುಳ್ಳದ್ದಾಗಲಿ, ಈಗಾಲೇ ನೀನು ಮಹಾತ್ಮ ಎನಿಸಿದ್ದಿಯಾ ಭಕ್ತರ ಏಳಿಗೆ ನಿನ್ನ ಗುರಿ” ಅವರ ಬಯಕೆಯನ್ನು ಬದಿಗೊತ್ತಬೇಡ ಹಲವಾರು ದಿನಗಳು ಇಲ್ಲೆ ಇದ್ದು, ಧಾರ್ಮಿಕತೆಯನ್ನು ಬೆಳಸುತ್ತಾ ನಂತರ ಪಂಪಾಪತಿಯ ದರ್ಶನಕ್ಕಾಗಿ ನಿನ್ನ ಪ್ರಯಾಣ ಮುಂದುವರಿಯಲಿ ಸದಾಕಾಲ ಈ ತಾಯಿಯ ಕೃಪೆ ನಿನಗಿರುತ್ತದೆ ಎಂದು ಹೇಳಿ ನಾನಿನ್ನು ಬರುವೆ ಎಂದು ಮರೆಯಾಗುತ್ತಾಳೆ.
ನಂತರ ತಾಯಿಯ ಅಪ್ಪಣೆ ಹಾಗೂ ಪುರದ ಭಕ್ತರ ಬಯಕೆಯನ್ನು ಮನ್ನಿಸಿ ಪೂಜ್ಯರು ಅಲ್ಲೆ ನೆಲೆನಿಂತು ಭಕ್ತರೊಡಗೂಡಿ ದಿವ್ಯವಾದ ಮಠವನ್ನು ನಿರ್ಮಿಸಿ ಕೆಲ ದಿನಗಳನ್ನು ಅಲ್ಲೇ ನಿತ್ಯ ನಿರಂತರ ಪೂಜೆ ಪಠಣ, ದೀಕ್ಷೆ ಪ್ರವಚನಗಳ ಮೂಲಕ ಜನಮಾನಸವನ್ನು ತಿದ್ದುವ ಕಾರ್ಯದಲ್ಲಿ ನಿರತರಾದರು. ಮಠದ ನಿರ್ಮಾಣ ಆದರೆ ಅಷ್ಟೇ ಸಾಲದು ನಮ್ಮ ಕರ್ತವ್ಯ ಮುಗಿಯಲಿಲ್ಲ ಮಹಾಂತರಿಗೆ ಮಠದ ಪೀಠಾಧಿಕಾರ ವಹಿಸಿಕೊಡಬೇಕು. ಅಧಿಕಾರ ಸಂಭ್ರಮ ವಿಜೃಂಬಣೆಯಿAದ ಸಾಗಬೇಕು ಅಲ್ಲಿಗೆ ನಮ್ಮ ಗುರುಸೇವೆ ಸಾರ್ಥಕ ಹೊಂದಿರುತ್ತದೆ ಎಂದು ಸರ್ವ ಭಕ್ತಾದಿಗಳು ಪೂಜ್ಯರಿಗೆ ಅರಿಕೆ ಮಾಡಿಕೊಂಡರು. ಭಕ್ತರ ಭಕ್ತಿಯನ್ನು ಜಗದಂಬೆಯ ಅಪ್ಪಣೆಯಂದು ಭಾವಿಸಿ ಒಪ್ಪಿಕೊಂಡರು. ನಂತರದಲ್ಲಿ ಆಳಂದ ನಗರದಲ್ಲಿ ಜಾತ್ರೆಯ ಸಂಭ್ರಮ, ಪ್ರತಿ ಮನೆ-ಮನೆಯಲ್ಲಿ ಸಂತಸ ವಾತಾವರಣ ಶ್ರೀಮಠದ ತುಂಬಾ ಭಕ್ತಿಯ ಕಲರವ ಸರ್ವರೂ ಸಮರ್ಪಣಾ ಭಾವದೊಂದಿಗೆ ಮಹಾಂತರ ಗುರುಪಟ್ಟಾಧಿಕಾರವನ್ನು ನೇರವೇರಿಸಿದರು.
ಜಾಲವಾದಿ ಶಂಕರನ ದರುಶನ ಮತ್ತು ಮಠಸ್ಥಾಪನೆ: *
ಆಳಂದದಿAದ ಮುಂದೆ ಹಂಪೆಯ ಕಡೆಯ ಪಯಣವನ್ನು ಆರಂಭಿಸಿದ ಪೂಜ್ಯರ ಮಾರ್ಗದಲ್ಲಿ ಬರುವ ಜಿಡಗಾ, ಕೊರಳ್ಳಿ, ಹಿರೊಳ್ಳಿ, ಅಪಜಲ್‌ಪೂರ, ಸಿಂಧಗಿ ಹೀಗೆ ಹತ್ತು-ಹಲವಾರು ಹಳ್ಳಿ-ಪಟ್ಟಣಗಳನ್ನು ಸಂಚರಿಸುತ್ತಾ ಎಲ್ಲ ಕಡೆ ಧರ್ಮ-ಸಂಸ್ಕಾರ-ಪೂಜೆ-ಲಿAಗದೀಕ್ಷೆ ಧಾರ್ಮಿಕ ಪರಂಪರೆಯನ್ನು ಜನರಿಗೆ ಭಕ್ತಿಯ ಬೋಧನೆಯನ್ನುಗೈಯುತ್ತಾ ಪಯಣಿಸುತ್ತಿದ್ದರು. ದೇವರಹಿಪ್ಪರಗಿ ತಾಲ್ಲೂಕಿನ ಜಾಲವಾದ ಗ್ರಾಮಕ್ಕೆ ತಲುಪುವ ಮೊದಲ ದಿನವೇ ಆ ಊರಿನ ಆರಾಧ್ಯದೈವ ಶ್ರೀ ಶಂಕರಲಿAಗೇಶ್ವರ ಬಹು ಪುರಾತನ ಇತಿಹಾಸವುಳ್ಳ ದೇವಸ್ಥಾನವಾಗಿದೆ. ಒಂದು ದಿನ ರಾತ್ರಿ ಊರಿನ ಪುರ ದೇಸಾಯಿಯವರ ಕನಸಿನಲ್ಲಿ ಶ್ರೀ ಶಂಕರರು ಪ್ರತ್ಯಕ್ಷರಾದರು “ದೇಸಾಯಿಯವರೇ ನಾಳೆ ಸಂಜೆ ಈ ಊರಿಗೆ ಒಬ್ಬ ಮಹಾತ್ಮ ಪುಣ್ಯಪುರುಷ್ಯರಾದ ಅಲದಿಯ ಮಹಾಂತ ಶಿವಯೋಗಿಗಳು ಆಗಮೀಸುತ್ತಾರೆ. ಸಮಸ್ತ ಸದ್ಭಕ್ತರು ಆತ್ಮೀಯತೆಯಿಂದ ಪೂಜ್ಯರನ್ನು ಸ್ವಾಗತಿಸಿ ಗೌರವಿಸುವುದಷ್ಟೇ ಅಲ್ಲದೇ ನನ್ನ ಆಲಯದ ಎಡಭಾಗದಲ್ಲಿ ಜಾಗೆಯನ್ನು ಕೊಟ್ಟು ಭಕ್ತರೆಲ್ಲರೂ ಸೇರಿ ಪೂಜ್ಯರಿಗೆ ಮಠ ನಿರ್ಮಾಣ ಮಾಡಿಕೊಡಬೇಕು ಅಲ್ಲಿಯವರೆಗೆ ಅವರು ನನ್ನ ಆಲಯದಲ್ಲಿ ವಾಸವಿರಲಿ ಎಂಬುದಾಗಿ ತಿಳಿಸಿದರು. ಬೆಳಗ್ಗೆ ಎದ್ದ ದೇಸಾಯಿಯವರು ಊರಿನ ಎಲ್ಲಾ ಜಾತಿ ಧರ್ಮದ ಜನರನ್ನು ಸಭೆ ಸೇರಿಸಿ ನಡೆದ ಕನಸಿನ ವೃತ್ತಾಂತವನ್ನೆಲ್ಲಾ ತಿಳಿಸಿದರು. ಜನರು ಖುಷಿಯಿಂದ ಒಪ್ಪಿಕೊಂಡು ಪೂಜ್ಯರ ಸ್ವಾಗತಕ್ಕಾಗಿ ಊರ ಹೊರಗೆ ಸಕಲವಾದ್ಯ-ವೈಭೋಗ ಹಾಗೂ ಕಳಸ-ಕನ್ನಡಿಯೊಂದಿಗೆ ನಿಂತಿರುವುದನ್ನು ಕಂಡುಬರುತ್ತಿದ್ದ ಪೂಜ್ಯರಿಗೆ ಆಶ್ವರ್ಯವಾಯಿತು. ಎಲ್ಲ ಭಕ್ತರನ್ನು ಭೇಟಿಯಾಗಿ ಉತ್ಸವದ ಮೂಲಕ ಶ್ರೀ ಶಂಕರಲಿAಗೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ಊರಿನ ಮುಖ್ಯಸ್ಥರೆಲ್ಲಾ ಶಿವನ ಆಜ್ಞೆಯನ್ನು ದೇಸಾಯಿಯವರ ಕನಸಿನಲ್ಲಿ ಆಗಿದ್ದನ್ನು ಹೇಳಿದಾಗ ಪೂಜ್ಯರು ಆಗಲಿ ಎಲ್ಲವೂ ಶಿವನಿಚ್ಛೇ ನಮ್ಮದೇನಿದೆ ಎಂದು ಮಠ ನಿರ್ಮಾಣಕ್ಕೆ ಒಪ್ಪಿಗೆ ನೀಡಿದರು. ಕೆಲವೇ ದಿನಗಳಲ್ಲಿ ಪೂಜ್ಯರಿಗೆ ಸುಂದರವಾದ ಮಠ ತಯಾರಿಸಿ ಪೂಜೆ-ಪುನಸ್ಕಾರ ಪುರಾಣ ಕಾರ್ಯದೊಂದಿಗೆ ಮಠ ಸ್ಥಾಪನೆಯಾಯಿತು. ಇಂದಿಗೂ ಅಲ್ಲಿ ಶಂಕರನ ಹಾಗೂ ಮಹಾಂತರ ಜಾತ್ರಾ ಮಹೋತ್ಸವ ಕೂಡಿ ನಡೆಯುತ್ತಿರುವುದು, ಇದಕ್ಕೆಲ್ಲಾ ಜೀವಂತ ಸಾಕ್ಷಿಯಾಗಿದೆ.
ಸಂಗಮನಾಥನ ಕ್ಷೇತ್ರದೆಡೆಗೆ ಪಯಣ:- ಬಿಜಾಪುರ ಸುಲ್ತಾನರಿಗೆ ಕರುಣೆ (ಆಶೀರ್ವದಿಸಿದ್ದು)
ಜಾಲವಾದಿಯಲ್ಲಿ ಕೆಲ ತಿಂಗಳುಗಳ ಕಾಲ ಇದ್ದು ಭಕ್ತರ ಜೊತೆಗೆ ದೀಕ್ಷೆ-ಸಂಸ್ಕಾರಗಳನ್ನು ನೀಡಿ ಮುಂದೆ ಜೊತೆಗಿದ್ದ ಶಿಷ್ಯ ಉರುಲಿಂಗದೇವರ ಜೊತೆಗೆ ಕೂಡಲಸಂಗಮನಾಥನ ಕ್ಷೇತ್ರದೆಡೆಗೆ ಪಯಣವನ್ನು ಆರಂಭಿಸಿದರು. ದಾರಿಯಲ್ಲಿ ಉಕ್ಕಲಿ, ಎಂಬತ್ನಾಳ, ಹೂವಿನಹಿಪ್ಪರಗಿ, ಮುದ್ದೇಬಿಹಾಳ ಮುಂತಾದ ಊರುಗಳಲ್ಲಿ ಶಿಷ್ಯಜನರನ್ನು ಸಂಪಾದಿಸಿ ಅವರಿಗೆಲ್ಲಾ ಧರ್ಮಮಾರ್ಗ ಅರಿಯುತ್ತಾ ತ್ರಿವೇಣಿ ಸಂಗಮ ಪುಣ್ಯಕ್ಷೇತ್ರ ಕೂಡಲಸಂಗಮದ ಒಂದು ಶಾಂತಮಯ ವಾತಾವರಣದ ಅನತಿದೂರದ ತೋಟದ ಮರದ ಕೆಳಗಡೆ ಪೂಜಾ ಕೈಂಕರ್ಯವನ್ನು ಪೂಜ್ಯರಾದ ಮಹಾಂತ ಶಿವಯೋಗಿಗಳು ಕೈಗೊಂಡಿದ್ದರು, ಉರುಲಿಂಗದೇವರು ಪೂಜೆಗೆ ಬೇಕಾದ ಎಲ್ಲಾ ವ್ಯವಸ್ಥೆ ಸೇವೆಯನ್ನು ಮಾಡುತ್ತಿದ್ದರು.
ಹೀಗಿರಲು ಆ ಅಡವಿಯಲ್ಲಿ ಬಿಜಾಪೂರದ ಸುಲ್ತಾನರು ಬೇಟೆಯಾಡಲು ಬಂದಿದ್ದರು. ಪೂಜ್ಯರನ್ನು ದೂರದಿಂದಲೇ ನೋಡಿ ತಮ್ಮ ಸೈನಿಕರಿಗೆ ವಿಚಾರಿಸಲು ಕಳುಹಿಸಿದರು. ತಿರುಗಿಬಂದ ಸೈನಿಕರು ಅಲ್ಲಿ ಅಲದಿಯ ಮಹಾಂತ ಶಿವಯೋಗಿಗಳು ಲಿಂಗಪೂಜಾ ನಿರತರಾಗಿದ್ದಾರೆ ಎಂಬುದಾಗಿ ತಿಳಿಸಿದಾಗ ಸುಲ್ತಾನರಾಜರು ಕುಹಕದ ರೂಪದಲ್ಲಿ ಹಾಗೋ ಹಾಗಿದ್ದರೆ ಪೂಜ್ಯರಿಗೆ ಪ್ರಸಾದರೂಪದಲ್ಲಿ ನಾನು ಬೇಟೆಯಾಡಿದ ಜಿಂಕೆ ಮಾಂಸವನ್ನು ಕೊಟ್ಟು ಬನ್ನಿರಿ ಹಸಿ ಮಾಂಸವನ್ನು ಎಡೆ ಹಿಡಿಯಲಿ” ಎಂದನು ಸೈನಿಕರು ಒಂದು ತಟ್ಟೆಯಲ್ಲಿ ಮಾಂಸವನ್ನು ಹಾಕಿ ಅದರ ಮೇಲೆ ಒಂದು ರೇಶ್ಮೆ ವಸ್ತçವನ್ನು ಮುಚ್ಚಿ ತಂದು ಉರುಲಿಂಗದೇವರಲ್ಲಿ ನೀಡಿದರು. ಆಗ ಪೂಜ್ಯರೇ ಬಿಜಾಪೂರದ ಸುಲ್ತಾನರು ತಮ್ಮ ಶಿವಪೂಜೆಯ ಪ್ರಸಾದಕ್ಕಾಗಿ ಬೇಟೆಯಾಡಿದ ಜಿಂಕೆ ಮಾಂಸವನ್ನು ಕಳುಹಿಸಿದ್ದಾರೆ ಎಂದಾಗ ಶಿವಯೋಗಿಗಳು ನಸುನಕ್ಕು ಆಗಲಿ ಶಿವನ ಅಪ್ಪಣೆ ಲಿಂಗಯ್ಯನಿಗೆ ಎಡೆಯಾಗಲಿ ಪಾದೋದಕವನ್ನು ಸಿಂಪಡಿಸಿ ತನ್ನಿರಿ ಎಂದಾಗ ಪೂಜ್ಯರ ಪಾದೋದಕವನ್ನು ಹಾಕಿ ಮೇಲೆ ಇರುವ ರೇಶ್ಮೆ ವಸ್ತçವನ್ನು ತೆಗೆದುನೋಡಿದರೆ ರಾಜ ಕಳುಹಿಸಿದ್ದ ಹಸಿಮಾಂಸ ಮಲ್ಲಿಗೆಯ ಹೂವುಗಳಾಗಿ ಪರಿವರ್ತನೆ ಹೊಂದಿದ್ದವು, ಪೂಜ್ಯರು ಅವುಗಳನ್ನು ಲಿಂಗಪೂಜೆಗೆ ಸಮರ್ಪಿಸಿದರು. ಇದನೆಲ್ಲಾ ಗಮನಿಸಿದ ಸೈನಿಕರು ನಡೆದ ವೃತ್ತಾಂತವನ್ನು ರಾಜನ ಹತ್ತಿರ ಹೋಗಿಹೇಳಿದರು, ಆಗ ತನ್ನ ತಪ್ಪನ್ನು ಅರಿತ ಸುಲ್ತಾನರು ಓಡಿಬಂದು ಪೂಜ್ಯರ ಹತ್ತಿರ ದೈನ್ಯತೆಯಿಂದ ನಮಸ್ಕರಿಸಿ ಕ್ಷಮೆಯನ್ನು ಬೇಡಿದನು.
ಪೂಜ್ಯರೇ ತಮ್ಮ ತಪೋಬಲವನ್ನು ಅರಿಯದೆ ನಮ್ಮಿಂದಾದ ಘೋರತಪ್ಪಿಗೆ ಕರುಣೆಯಿತ್ತು ಆರ್ಶಿವದಿಸಿ ಎಂದು ಭಿನ್ನವಸಿಕೊಂಡನು. ಮಹಾಂತರು ಇರಲಿ ರಾಜ ಎಲ್ಲಾ ಭಗವಂತನ ಇಚ್ಛೇ ನಿಮ್ಮಿಂದ ಈ ರಾಜ್ಯ ಸುಖೀಭವ ಎನ್ನಿಸಲಿ ಆ ತರಹದ ಆಡಳಿತ ನಿಮ್ಮ ಅವಧಿಯಲ್ಲಿ ಜರುಗಲಿ ಎಂದು ಸಂಪೂರ್ಣ ಆಶೀರ್ವಾದವನ್ನು ಪೂಜ್ಯರು ಮಾಡಿದ ನಂತರ ರಾಜನು “ಶಿವಯೋಗಿಗಳೇ ನಿಮ್ಮಲ್ಲಿ ನನ್ನದೊಂದು ಕೋರಿಕೆ ನಮ್ಮ ಬಿಜಾಪೂರದ ಕೊನೆಹಳ್ಳಿ ಗಡಿಯಾದ ನಂದವಾಡಿಗೆಯಲ್ಲಿ ತಾವು ನೆಲೆ ನಿಂತು ನಮ್ಮ ಸಾಮ್ರಾಜ್ಯಕ್ಕೆ ಸದಾ ಶ್ರೀರಕ್ಷೆ ಆಗಿರಬೇಕೆನ್ನುವುದು ನಮ್ಮ ವಿನಂತಿ ಎಂದರು” ಪೂಜ್ಯರು ಆಗಲಿ ದೇವನಪ್ಪಣೆಯಲ್ಲಿ ಕೆಲದಿನಗಳಿದ್ದು ಮುಂದೆ ನಾವು ಹಂಪೆಗೆ ಪಯಣುಸುತ್ತೇವೆ ಎಂದು ತಿಳಿಸಿದರು. ಆಗ ರಾಜನು ನಂದವಾಡಗಿಯ ಸಾಮಂತ ಅರಸನಾದ ನಂದರಾಜನಿಗೆ ತನ್ನ ಸೈನಿಕರಿಂದ ವಿಷಯವನ್ನು ಮುಟ್ಟಿಸಿಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮತ್ತು ಮಠದ ನಿರ್ಮಾಣವಾಗಬೇಕು, ಇನಾಮು ಜಮೀನನ್ನು ಮಠಕ್ಕೆ ದಾನವಾಗಿ ನೀಡಬೇಕು ಎಂಬುದನ್ನು ತಿಳಿಸಿದನು. 3-4 ದಿನ ಸಂಗಮ ಕ್ಷೇತ್ರದಲ್ಲಿ ತಂಗಿದ್ದ ಶ್ರೀಗಳವರು ಮುಂದೆ ನಂದವಾಡಗಿಯ ಕಡೆಗೆ ಆಗಮಿಸಿದರು. ಮೊದಲೇ ಸ್ವಾಗತಕ್ಕೆ ಬೇಕಾದ ಏರ್ಪಾಡನ್ನು ಮಾಡಿದ್ದ ನಂದರಾಜ ಮಹಾಂತ ಶಿವಯೋಗಿಗಳನ್ನು ಆತ್ಮೀಯವಾಗಿ ಭಕ್ತಿಯಿಂದ ನಂದವಾಡಗಿಗೆ ಸ್ವಾಗತ ಮಾಡಿಕೊಂಡನು.
ನ0ದಕುಮಾರನಿಗೆ ಪ್ರಾಣದಾನ:-
ಮಠ ನಿರ್ಮಾಣದ ನಂತರ ಪೂಜ್ಯರು ತಪೋನುಷ್ಠಾನವನ್ನು ಕೈಗೊಂಡಿರುವಾಗ ಇತ್ತ ಜೋತಿಷ್ಯಯೊಬ್ಬರ ಮಾತಿನಂತೆ ಪುರದರಸ ನಂದರಾಜನ ಕುಮಾರನಿಗೆ ಅಪಮೃತ್ಯ ಇದೆ ಎನ್ನುವುದನ್ನು ಕೇಳಿದ್ದ ರಾಜ ಅದಕೆಲ್ಲ ಅಂಜದೆ ಶಿವನಿಚ್ಛೆಯಿಂದ ಬದುಕು ನಡೆಸುತ್ತಿದ್ದರು. ಹೀಗಿರಲು ಒಂದು ದಿನ 16ರ ವಯಸ್ಸಿಗೆ ಬಂದ ಕುಮಾರ ಅಂಗರಕ್ಷಕರ ಕಣ್ಣುತಪ್ಪಿಸಿ ಈಜಾಡುವ ಆಸೆಯಿಂದ ಕರೆಗೆ ಬಂದನು ಅತ್ತ ಎಲ್ಲರೂ ಹುಡುಕುತ್ತಿರುವಾಗ ಕುಮಾರ ಕರೆಯಲ್ಲಿ ಕಾಲು ಇಳಿಬಿಟ್ಟು ಆಟವಾಡುತ್ತಿದ್ದ ಸಮಯದಲ್ಲಿ ಮೊಸಳೆಯೊಂದು ಬಂದು ಕಾಲನ್ನು ಕಚ್ಚಿ ಎಳೆದು ಒಯ್ಯುತ್ತಿರುವಾಗ ಕುಮಾರನ ಚೀರಾಟ ಕೇಳಿ ಸೈನಿಕರು ಓಡಿ ಬರುವುದರೊಳಗಾಗಿ ಪ್ರಾಣಪಕ್ಷಿ ಹಾರಿಹೊಗಿತ್ತು. ಭಯದಿಂದಲೇ ಕುಮಾರನ ಶವವನ್ನು ಅರಮನೆಗೆ ತಂದರು. ರಾಜ-ರಾಣಿ ಸಮಸ್ತರು ದುಃಖದ ಮಡಿಲಲ್ಲಿರುವಾಗ ಮಂತ್ರಿಗಳು ಬಂದು ರಾಜರೇ ನಿಮ್ಮ ದುಃಖ ಪರಿಹರಿಸುವ ಶಕ್ತಿಯೇ ಊರಲ್ಲಿದೆ ಆ ಮಹಾತ್ಮ ಮಹಾಂತನ ಸನ್ನಿಧಿಗೆ ಹೋಗೋಣ ಎಂದರು.
ರಾಜರು ಕುಮಾರನ ಶವದೊಂದಿಗೆ ಓಡೋಡಿ ಶ್ರೀಮಠಕ್ಕೆ ಆಗಮಿಸಿ ಹೊರಗಿದ್ದ ಶಿಷ್ಯ ಉರುಲಿಂಗದೇವರು ಎಲ್ಲ ಸಮಾಚಾರವನ್ನು ಪೂಜಾನಿರತ ಮಹಾಂತರಿಗೆ ಅರಿಕೆ ಮಾಡಿಕೊಂಡಾಗ, ಗುರುಗಳು ಭಸ್ಮ ಪಾದೋದಕವನ್ನು ತರಲು ತಿಳಿಸಿಹೊರಗಡೆ ಬಂದು ರಾಜ-ಮಹಾರಾಣಿಯರಿಗೆ ಸಮಾಧಾನದ ಮಾತುಗಳನ್ನು ಹೇಳುತ್ತಾ ಭಸ್ಮವನ್ನು ದೇಹಕೆಲ್ಲಾ ಲೇಪಿಸಿ ಪಾದೋದಕವನ್ನು ಸಿಂಪಡಿಸುತ್ತಿರುವಾಗ ಸತ್ತುಬಿದ್ದ ಕುಮಾರನು ಎದ್ದು ಎಲ್ಲರನ್ನು ನೋಡಿ ಗುರುಗಳ ಪಾದಕಮಲಗಳಿಗೆ ವಂದಿಸಿದನು. ನಂದರಾಜ ಅವನ ಪರಿವಾರದವರೆಲ್ಲಾ ನಡೆದ ಘಟನೆಯನ್ನು ಕಂಡು ಹರ್ಷದಿಂದ ಪೂಜ್ಯರಿಗೆ ಧೀರ್ಘದಂಡ ಪ್ರಣಾಮಗಳನ್ನು ಸಲ್ಲಿಸಿ ಭಕ್ತಿಭಾವವನ್ನು ಸಮರ್ಪಿಸಿದರು.
ಪಂಪಾಕ್ಷೇತ್ರದಲ್ಲಿ ಅನುಷ್ಠಾನ ಆಳಂದಕ್ಕೆ ನಿರ್ಗಮನ :-
ಶಿವನ ಜಡೆಯ ನಿವಾಸಿನಿ ಗಂಗೆಯAತೆ ಅವಳ ತಂಗಿಯಾದ ತುಂಗೆಯು ಪವಿತ್ರಾತ್ಮವಾದ ಪಂಪಾಪತಿಯ ಪಾದ ತೊಳೆಯಲು ವಿರುಪಾಕ್ಷನ ಸನ್ನಿಧಿಗೆ ಶರಣು ಹೋದ ಹಾಗೆ ಇದ್ದಿತು. ವಟುವೃಕ್ಷಗಳಿಂದ ಸಂಪತ್ತುಬರಿತವಾದ ಕಾಡು ಅರಣ್ಯದಲ್ಲಿ ಬೆಳೆದ ಬಿಲ್ವಮರಗಳು, ಪುಷ್ಪ ಲತಾದಿಗಳು, ಈ ತರಹದ ಪುಣ್ಯ ವಾತಾವರಣದಿಂದ ಹಂಪೆ ಕಂಗೊಳಿಸುತಲಿತ್ತು, ಅಂತದ ಕ್ಷೇತ್ರದಲ್ಲಿ ಪೂಜ್ಯರು ಹಲವಾರು ತಿಂಗಳುಗಳ ಕಾಲ ಲಿಂಗ ಪೂಜಾನುಷ್ಠಾನವನ್ನು ಕೈಗೊಂಡರು. ಪೂಜಾನಿರತ ಸಮಯದಲ್ಲಿ ಲಿಂಗದಲ್ಲೇ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದರು. ಇತ್ತ ನಂದವಾಡಗಿಯಲ್ಲಿ ಶಿಷ್ಯರಾದ ಉರುಲಿಂಗದೇವರನ್ನು ಪಟ್ಟಕಟ್ಟಿದ್ದರು ಮುಂದೆ ಕಳ್ಳವೃತ್ತಿಯಲ್ಲಿದ್ದ ಒಬ್ಬ ಪೆದ್ದಿಯನ್ನು ಶ್ರೇಷ್ಠ ಶರಣನನ್ನುಗಿಸಿದ್ದು ಮುಂದೆ ಅವರನ್ನೇ ಮಠದ ಪೀಠಾಧಿಪತಿಗಳನ್ನಾಗಿ ಮಾಡಿದ್ದು ಶ್ರೀಮಠದ ಇತಿಹಾಸದ ಪುಟಗಳಲ್ಲಿ ಅವಿಸ್ಮರಣೀಯವಾದ ಘಳಿಗೆಯಾಗಿದೆ. ಇವೆಲ್ಲವುಗಳನ್ನು ಕಣ್ತುಂಬಿಕೊ0ಡ ಮಹಾಂತ ಶಿವಯೋಗಿಗಳು ಮೂಲಮಠಕ್ಕೆ ತೆರಳಲು ಮನಸ್ಸು ಮಾಡಿದರು. ಅಷ್ಟೋತ್ತಿಗೆ ದೇಹಕ್ಕೆ ಮುಪ್ಪಾವರಿಸಿತ್ತು. ಕೂದಲೆಲ್ಲಾ ಶ್ವೇತವರ್ಣಕ್ಕೆ ತಿರುಗಿದ್ದವು. ಹಂಪೆಯಿAದ ಮಾರ್ಗಮದ್ಯದಲ್ಲಿ ಪಗಡದಿನ್ನಿ, ಮಸ್ಕಿ, ಲಿಂಗಸೂಗೂರು, ಗೆಜ್ಜಲಗಟ್ಟಿ, ಸರ್ಜಾಪೂರ ಹೀಗೆ ಮುಂತಾದ ಊರುಗಳಲ್ಲಿ ಭಕ್ತರಿಗೆ ಲಿಂಗದೀಕ್ಷೆ ಧರ್ಮಸಂಸ್ಕಾರ ನೀಡಿ ಶಿಷ್ಯತ್ವವನ್ನು ದಯಪಾಲಿಸುತ್ತಾ ಮಹಾಂತ ಶಿವಯೋಗಿಗಳು ಆಳಂದ ಕಡೆಗೆ ಪಯಣವನ್ನು ಸಮೀಪಿಸಿದರು.
ಸಂತ ಮಶಾಕರ-ಮಹಾಂತರ ಸಮ್ಮಿಲನ :-
ಇತ್ತ ಅಲದಿ (ಆಳಂದ), ಗ್ರಾಮದೀಚೆ ಪಡುವಣ ದಿಕ್ಕಿನಲ್ಲಿ ಸಂತಲಾಡ್ಲೆ ಮಶಾಕರು (ಇಸ್ಲಾಂ ಧರ್ಮ ಗುರುಗಳು) ಮಸೀದೆಯನ್ನು ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತಾವು ಸ್ವತಃ ತೊಡಗಿಸಿಕೊಂಡಿದ್ದರು. ಮಹಾಂತರು ಹಿರೊಳ್ಳಿಗ್ರಾಮದಿಂದ ಪುರದೆಡೆಗೆ ಬರುವುದನ್ನು ಮೊದಲೇ ಗುರುಗಳ ಆಗಮನದ ಜ್ಞಾನ ಸ್ಪರ್ಶವಾಯಿತು. “ಅಲ್ಲಾ ಆಪ್‌ಕಾ ದರ್ಶನ್” ಎಂದು ಕಟ್ಟುತ್ತಿದ್ದ ಗೋಡೆಗೆ ನಡೆಯಲು ಆಜ್ಞೆ ನೀಡಿದರು. ಗೋಡೆ ಮಶಾಕ್‌ರೊಂದಿಗೆ ಮಹಾಂತರ ದರ್ಶನಕ್ಕಾಗಿ ಹೊರಡಿತು. ಎಲ್ಲರೂ ಅಚ್ಚರಿಗೊಂಡರು ಇತ್ತ ಮಹಾಂತರಿಗೆ ಮಶಾಕರ ಆಗಮನದ ಅರಿವಾಗಿ ಭಕ್ತರು ಹೊತ್ತಿದ್ದ ಮೇಣೆಯನ್ನು ಕೈಬಿಡಲು ಆಜ್ಞಾಪಿಸಿದರು. ಯೋಗಮುದ್ರೆಯಿಂದ ಭೂಮಿಯಿಂದ ಅಂತರದಲ್ಲಿ ಮೇಣೆ ಚಲಿಸಲು ಆರಂಭಿಸಿತು. ಒಂದೆಡೆ ನಡೆದು ಬರುತ್ತಿರುವ ಸಂತರ ಗೋಡೆ ಇನ್ನೊಂದೆಡೆ ತೇಲಿ ಬರುತ್ತಿರುವ ಮಹಾತ್ಮರ ಮೇಣೆ ಇದನೆಲ್ಲಾ ಗಮನಿಸಿದ ಹಿಂದೂ-ಮುಸ್ಲಿಂ ಬಾಂಧವರು “ಮಹಾಂತ ಮಶಾಕ್ ದೋಸ್ತುರ್ ಹೋದೀನ್” ಎಂದು ಜಯಘೋಷ ಉದ್ಘೋಶಿಸಿ ಮೇಣೆ-ಗೋಡೆ ಸಂಧಿಸಿದವು ಮಶಾಕ ಮಹಾಂತರ ತನು-ಮನಗಳನ್ನು ಸಂಧಿಸಿದರು, ಅವರರ‍್ವರ ಸ್ನೇಹಸಂಗಮ ಅಪೂರ್ವವಾಗಿತ್ತು.
ಮಹಾತ್ಮ ಮಹಾಂತರೇ ನಡೆದಿರುವ ಮಸೀದಿಯಲ್ಲಿ ಪಾದವಿಟ್ಟು ಆಶೀರ್ವದಿಸಬೇಕು ಎಂದಾಗ ಆಗಲಿ ಸಂತರೇ ಎಂದು ಹೋದರು ಪಶ್ಚಿಮ ದಿಕ್ಕಿನಲ್ಲಿ ನೀವು ವಾಸವಿರಿ ಪೂರ್ವ ದಿಕ್ಕಿನಲ್ಲಿ ನಮ್ಮ ಶ್ರೀಮಠ ಇದೆ ಇರ್ವರ ಕೃಪಾನೆರಳಲ್ಲಿ ಆಳಂದ ನಗರವಾಗಲಿ, ಜನರು ಸುಭೀಕ್ಷೆಯಿಂದ ಇರುವ ಹಾಗೆ ಕಾಪಾಡೋಣ ಎಂದು ತಿಳಿಸಿದರು.
“ಏಕಂ ಸತ್ ವಿಪ್ರಾ ಬಹುದಾವದಂತಿ” “ದೇವನೊಬ್ಬ ನಾಮ ಹಲವು” ಎಂದು ಶರಣಧರ್ಮ ಹೇಳುತ್ತದೆ. ನೀವು ಮುಸ್ಲಿಂರಾಗಿದ್ದರೂ ನೀತಿಯಲ್ಲಿ ಪ್ರಭುವಾಗಿ ಜನಾಂಗಕ್ಕೆ ಸಂತರಾಗಿದ್ದೀರಿ ಹಿಂದುಗಳು ಈಶ್ವರನೆಂದರೆ ಮುಸ್ಲಿಂರೂ ‘ಅಲ್ಲಾ’ ಎಂದು ಭಗವಂತನನ್ನು ಪೂಜಿಸುವುದು. ಭಾವೈಕ್ಯತೆ ಸಾಧಿಸುವುದೇ ನಿಜವಾದ ಭಕ್ತರ ಧರ್ಮ ಹೀಗೆ ಅನಂತ ರೀತಿಯಲ್ಲಿ ಮಹಾಂತರ ಉಪದೇಶವನ್ನು ಕೇಳುತ್ತಿದ್ದ ಮಶಾಕ ಸಂತರು ಆನಂದದಲ್ಲಿ ಮೈ ಮರೆತಿದ್ದರು. ನಂತರ ಇಸ್ಲಾಂ ಧರ್ಮದವರು ಗೌರವಿಸಿ ಸತ್ಕರಿಸಿದರು. ಮಹಾಂತರು ಭಕ್ತ ಜಯಘೋಷದ ನಡುವೆ ಶ್ರೀಮಠಕ್ಕೆ ದಯಮಾಡಿಸಿದರು.
ಮರಿ ಮಹಾಂತರಿಗೆ ಪಟ್ಟಾಧಿಕಾರ, ಶಿವಯೋಗಿಗಳ ಲಿಂಗೈಕ್ಯ ವಿಚಾರ :-
ಪೂಜ್ಯ ಮಹಾತಪಸ್ವಿಗಳ ಅಪ್ಪಣೆಯ ಮೇರೆಗೆ ಅಲದಿಪುರದ ನಿವಾಸಿಗಳು ಆಳಂದನಗರದ ಶ್ರೀ ಮಹಾಂತೇಶ್ವರ ಹಿರೇಮಠದ ಉತ್ತರಾಧಿಕಾರಿಯ ಅನ್ವೇಷಣೆಯಲ್ಲಿ ತೊಡಗಿದರು. ಶಿವಯೋಗಿಗಳು ಕಲ್ಯಾಣದ ಹತ್ತಿರದ ನಾರಾಯಣಪುರದ ಹೀರಮಠದಲ್ಲಿ ಜನಿಸಿದ ಸದ್ವಂಶ ಸಂಭೂತನಾದ ಮರಿಮಹಾಂತರನ್ನು ಅಪೇಕ್ಷಿಸಿದರು. ಭಕ್ತರು ಮಹಾಂತರು ಕೂಡಿ ಮರಿಮಹಾಂತರನ್ನು ಆಳಂದಕ್ಕೆ ಕರೆದುತಂದರು. ಶಿವಯೋಗಿಗಳು ಚಿನ್ನಕ್ಕೆ ಸಂಸ್ಕಾರ ಕೊಡುವಂತೆ ತಮ್ಮ ಶಿಷ್ಯೋತ್ತಮನಿಗೆ ಮದ್ವಿರಶೈವ ಧರ್ಮದ ಮೂಲತತ್ವಗಳನ್ನು ವ್ಯಾಖ್ಯಾನಿಸಿ “ವೀರಶೈವ ಸಿದ್ದಾಂತ ಶಿಖಾಮಣಿ”ಯನ್ನು ಅಷ್ಟಾವರಣ, ಪಂಚಾಚಾರ ಷಟ್‌ಸ್ಥಲಗಳನ್ನು ಸೂಕ್ಷö್ಮವಾಗಿ ವಿವರಿಸಿದರು.
ಒಂದು ದಿನ ಸ್ನಾನ ಪೂಜಾದಿಗಳನೆಲ್ಲಾ ಮುಗಿಸಿ ವಿಶ್ರಾಂತದಲ್ಲಿದ್ದ ಮಹಾಂತರ ಕನಸಿನಲ್ಲಿ ಪರಶಿವನು ಬಂದು “ಮಗು ಮಹಾಂತ” ಎಂದಾಗ ಶಿವಯೋಗಿಗಳು ಸಂತುಷ್ಟರಾಗಿ ಪಾದಕ್ಕೇರಗಿ ಕಾರಣ ಕೇಳಲು “ಮಹಾಂತ ಇನ್ನು ನನ್ನ ಕರ್ತವ್ಯ ಈ ಭೂಮಿಯಲ್ಲಿ ತೃಪ್ತಿತಂದಿದೆ ನನ್ನ ಸನ್ನಿಧಿಗೆ ಮರಿಮಹಾಂತರಿಗೆ ಪಟ್ಟಾಧಿಕಾರ ಹುಣ್ಣಿಮೆಯಂದು ನೀಡಿ ಕೈಲಾಸಕ್ಕೆ ಬಾ” ಎಂದು ಕಣ್ಮರೆಯಾದನು ಶಿವಯೋಗಿಗಳು ಶಿವನ ದರ್ಶನದಿಂದ ಸಂತೋಷಭರಿತರಾಗಿ ಬೆಳಗ್ಗೆ ಪುರದ ಹಿರಿಯರನ್ನೆಲ್ಲಾ ಕರೆದು ಪಟ್ಟಾಧಿಕಾರಕ್ಕೆ ಸಿದ್ದತೆ ಮಾಡಿ ಶುಭದಿನದಂದು ಅನುಗ್ರಹ ಶಿವದೀಕ್ಷೆ ಮಂತ್ರೋಪದೇಶದ ಮೂಲಕ ಮರಿಮಹಾಂತರಿಗೆ ಪಟ್ಟವನ್ನು ಕರುಣಿಸಿದರು. ಕೆಲ ದಿನಗಳ ನಂತರ ಇದೇ ಶಿವರಾತ್ರಿ ಶಿವಯೋಗದಿಂದ ಒಂದುವಾರ ಪಾಲ್ಗುಣ ಶುದ್ದ ಸಪ್ತಮಿ ವರೆಗೂ ಮಠದಲ್ಲಿ ಜ್ಞಾನ ಗಂಗೋತ್ರಿ ಜರುಗಲಿ ಅಂದೇ ನಮಗೆ ಶಿವನಲ್ಲಿ ಬರಲು ಅಪ್ಪಣೆಯಾಗಿದೆ ಎಂದು ಮಹಾಂತರು ತಿಳಿಸಿದರು. ಭಕ್ತ ಸಂಕುಲ ದುಃಖ ಭರಿತರಾಗಿ ಅನಾಥ ಪ್ರಜ್ಞೆಯಲ್ಲಿ ಕಣ್ಣೀರಾಕುತ್ತಿದ್ದ ಎಲ್ಲರನ್ನು ಸಂತೈಸಿ ಸರ್ವರಿಗೂ ಶುಭಾಶೀರ್ವಾದ ನಿಡಿ ಸಪ್ತಮಿಯಂದು ಮಹಾಂತ ಶಿವಯೋಗಿಗಳು ತಮ್ಮ ಚೇತನಾಶಕ್ತಿಯನ್ನು ಪರಮಶಕ್ತಿಯಲ್ಲಿ ಒಂದುಗೂಡಿಸಿ ಶಿವನಲ್ಲಿ ಬೆರೆತರು. ಮಹಾಂತರು ಬೌತಿಕ ಶರೀರ ಅಗಲಿದರೂ ಇಂದಿಗೂ ಭಕ್ತಿಯಿಂದ ಸೆರದವರ ಹೃದಯ ಸಿಂಹಾಸನದಲ್ಲಿ ಬೆಳಕಾಗಿ ನೆಲೆರೆ ನಿಂತಿದ್ದಾರೆ. ಹೀಗೆ ಅಂದಿನಿ0ದ ಇಂದಿನವರೆಗೂ ಶ್ರೀಮಠ ಪರಂಪರೆಯಲ್ಲಿ 35 ಜನ ಮಹಾಸ್ವಾಮೀಜಿಗಳು ಭಕ್ತರ ಕಷ್ಟಕಳೆದು ಶಿವರೂಪಿಗಳಾಗಿ ಪೀಠವನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಪೂಜ್ಯರಾದ ಶ್ರೀ ಷ.ಬ್ರ. ತಪೋನಿಧಿ ಮಹಾಂತಲಿ0ಗ ಶಿವಾಚಾರ್ಯರು ಅನುಷ್ಠಾನ ಮೂರ್ತಿಗಳಾಗಿ ಜನರ ಬವಣೆಯನ್ನು ಕಳೆಯುವ ಭವರೋಗ ವೈದ್ಯರೆನಿಸಿದ್ದಾರೆ. ಪ್ರವಚನ ಪುರಾಣ ಎಲ್ಲಾ ಶ್ರೀಮಠಗಳ ಜೀರ್ಣೋದ್ದಾರ, ಸಮಾಜೋದ್ದಾರಕ ಕಾರ್ಯಗಳೊಂದಿಗೆ ಮಹಾಂತೇಶ್ವರ ಹಿರೇಮಠವನ್ನು ಎಲ್ಲಾಕಡೆ ಜನಮಾಸನಗೊಳಿಸಿದ್ದಾರೆ. ಪ್ರಸ್ತುತ ಶ್ರೀಗಳು 37ನೇ ಪೀಠಾಧಿಕಾರಿಗಳು ಸದ್ವಂಶ ಸಂಭುತರಾದ ಶ್ರೀ ಡಾ|| ಚನ್ನಬಸವದೇವರಿಗೆ ಶ್ರೀಮಠದ ಜವಾಬ್ದಾರಿಹೊರಿಸಿ, ಮೈಸೂರ ಸುತ್ತೂರ ಮಠದಲ್ಲಿ ಎಂ.ಎ. ಪದವಿಪಡೆದಿದ್ದಾರೆ. ಅಲ್ಲದೆ ಕೇಂದ್ರ ಸರಕಾರದಿಂದ ಡಾ|| ಪಡೆದ ಪೂಜ್ಯರಿಗೆ 2 ವಷ್ಗಳ ಹಿಂದೆ ಅದ್ದೂರಿಯಾಗಿ ಪಟ್ಟಾಧಿಕಾರವೇರಿಸಿದ್ದಾರೆ. ಅವರೂ ಸಾಹಿತ್ಯ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಮುನ್ನಡೆದಿದ್ದಾರೆ, ಭಕ್ತರ ಪ್ರೀತಿಗೆ ಪಾತ್ರರಾಗಿ ಸಮಾಜಮುಖಿ ಕಾರ್ಯದಲ್ಲಿ ಮುನ್ನಡೆದಿದ್ದಾರೆ.
ವರದಿ ಡಾ ಅವಿನಾಶ S ದೇವನೂರ