ಒಂದು ಅವಕಾಶ ಹಲವು ಅದ್ಬುತಗಳ ಸೃಷ್ಟಿ

ಒಂದು ಅವಕಾಶ ಹಲವು ಅದ್ಬುತಗಳ ಸೃಷ್ಟಿ

"ಒಂದು ಅವಕಾಶ ಹಲವು ಅದ್ಭುತಗಳ ಸೃಷ್ಟಿ"

ವಿಫುಲ ಅವಕಾಶಗಳು ಪ್ರತಿಭೆಯನ್ನು, ಸೃಜನಶೀಲತೆಯನ್ನು ಹೆಕ್ಕಿ ತೆಗೆಯಲು ಸಹಾಯಕಾರಿ. ಒಂದು ವೇದಿಕೆ ಹಲವು ಅದ್ಭುತಗಳನ್ನು ಸೃಷ್ಟಿಸಿ ಎಲ್ಲೆಡೆ ಮಿನುಗುವಂತೆ ಮಾಡುತ್ತದೆ. ಅವಕಾಶ ಕೊಡದೆ ಇರುವುದು ಒಂದು ಶಕ್ತಿಯನ್ನು ಹೊರಲೋಕಕ್ಕೆ ಪರಿಚಯಿಸದಿರಲು ನಾವೇ ಕಾರಣರಾಗುತ್ತೇವೆ. ಕುದುರೆಯನ್ನು ಹತ್ತಿಸದೆಯೇ ನಿನಗೆ ಸವಾರಿ ಬರದು. ಅದರ ಅನುಭವವಿಲ್ಲ, ನಿಯಂತ್ರಣ ಮಾಡಲಾಗದು, ಬರೀ ನಕಾರಾತ್ಮಕ ಅಂಶಗಳನ್ನು ಬಿಂಬಿಸಿದರೆ ಆತ ಅದರ ಹತ್ತಿರವೂ ಸುಳಿಯುವುದಿಲ್ಲ.ಮುಂಬರುವ ಹಲವು ವರ್ಷಗಳ ಕಾಲ ಆ ವ್ಯಕ್ತಿ ಅದರ ಬಗ್ಗೆ ಕಲ್ಪನೆಯೂ ಕೂಡಾ ಮಾಡಲಾರನು. 

ಒಂದು ಧನಾತ್ಮಕ ಮಾತು ಸಾಕು ಸವಾರಿ ಮಾಡದಿದ್ದರೂ ಚಿಂತೆ ಇಲ್ಲ , ನಾನು ಮಾಡಬಲ್ಲೆ ಎನ್ನುವ ಛಲ ಅವನ ಎದೆಯಾಳದಿ ಉಳಿದು ಮುಂದೆಯಾದರೂ ಸಾಧಿಸಲು ಹೊರಡುವನು.

 ಜನವರಿ ಫೆಬ್ರವರಿ ತಿಂಗಳು ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗಾಗಿ "ಮಕ್ಕಳ ಹಬ್ಬಗಳು" ಆಯೋಜನೆಗೊಂಡಿದ್ದವು. ನಾನು ಕೂಡಾ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದೆ.ಹತ್ತು ದಿನಗಳ ಕಾಲ ಜಿಲ್ಲಾ ಹಬ್ಬದಲ್ಲಿ ನಿಯೋಜನೆ ಮೇಲೆ ತೆರಳಿದ್ದೆ.ಆಗ ನನ್ನ ತಲೆಯಲ್ಲಿ ನನ್ನ ಶಾಲಾ ವಿದ್ಯಾರ್ಥಿಗಳಿಗೆ ಏನಾದರೂ ಕೆಲಸ ಕೊಡಬೇಕಲ್ಲ ಎಂಬ ಯೋಚನೆ ಬಂತು. ಹಬ್ಬ ಮುಗಿದ ಮೇಲೆ "ಆಂಗ್ಲ ಭಾಷಾ ಕಲಿಕಾ ಮೇಳ"ಮಾಡೋಣಾ ಎಂದೆ.ಮಕ್ಕಳು ತಡ ಮಾಡದೆ ಹೌದು ಎಂದು ತಲೆ ಅಲ್ಲಾಡಿಸಿ ಒಪ್ಪಿಗೆ ಸೂಚಿಸಿದರು. ಹಾಗಿದ್ದರೆ ಬನ್ನಿ ನಿಮ್ಮೆಲ್ಲರಿಗೂ ಒಂದೊಂದು ಟಾಪಿಕ್ ಕೊಡುತ್ತೇನೆ ಎಂದೆ. ಎಲ್ಲರೂ ತಾ ಮುಂದು ನಾ ಮುಂದು ಎಂದು ಒಂದೊಂದು ಟಾಪಿಕ್ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪಡೆದರು.ತೀರಾ ಕಲಿಕೆಯಲ್ಲಿ ಹಿಂದುಳಿದವರಿಗೂ ಒಂದೊಂದು ಸರಳ ಟಾಪಿಕ್ ಕೊಡಲಾಯಿತು. ನಿಮಗೆ ಹತ್ತು ದಿನ ಸಮಯವಿದೆ, ಹೇಗೆಲ್ಲಾ ವಿಷಯ ತಯಾರಿ ಮಾಡಬೇಕು,ಯಾವ ರೀತಿ ಪ್ರಸ್ತುತ ಪಡಿಸಬೇಕು,ಒಬ್ಬರಿಗಿಂತ ಒಬ್ಬರದು ಹೇಗೆ ವಿಭಿನ್ನ ಮತ್ತು ವಿಶಿಷ್ಟವಾಗಿರಬೇಕು ಎಂಬ ಆಲೋಚನೆಯಲ್ಲಿ ಮುಳುಗಿ ಖಂಡಿತ ಯಶವನ್ನು ಕಾಣಲಿದ್ದೀರಿ ಎಂದೆ.

ಒಂದಿಷ್ಟು ಟಿಪ್ಸ್ ಸಹ ಕೊಟ್ಟೆ, ಬೇಕ್ಕಿದ್ದರೆ ಯೂಟ್ಯೂಬ್ ಮತ್ತು ಹಿರಿಯ ವಿದ್ಯಾರ್ಥಿಗಳ ಸಹಾಯ ಪಡೆಯಬಹುದು ಎಂಬುದನ್ನ ತಿಳಿಸಲಾಯಿತು.

 ಅವರ ಮುಖದಲ್ಲಿ ನನಗಾಗ ಒಂದು ಧನಾತ್ಮಕ ಸಾಧಿಸಿದ ಶಕ್ತಿ ಗೋಚರಿಸಿತು.ನಾನು ಗೆಲ್ಲುತ್ತೇನೆ,ನಾನು ಹೇಳುತ್ತೇನೆ, ನಾನು ಮಾತಾಡುತ್ತೇನೆ, ನಾನೇಕೆ ಮಾಡಬಾರದು? ಎಂಬೆಲ್ಲ ಮಾತುಗಳು ಹಾದುಹೋದವು. ಇನ್ನೇನು ಬೇಕು? ನಮ್ಮ ಮಕ್ಕಳು ತಾವು ಗೆದ್ದದ್ದಲ್ಲದೆ ನಮ್ಮನ್ನು ಗೆಲ್ಲಿಸಿ ಬಿಡುತ್ತಾರೆ.

ಮಕ್ಕಳ ಉತ್ಸಾಹ ಈಗ ಇಮ್ಮಡಿಕೊಂಡಿತ್ತು.ಅವರ ತಯಾರಿ ವಿಷಯ ವಸ್ತು,ಚಾರ್ಟ್, ಮಾದರಿಗಳನ್ನು ಹಬ್ಬ ಮುಗಿದ ಮೇಲೆ ಗಮನಿಸಿದೆ.ಅವರ ಪರಿಶ್ರಮ, ಸೃಜನಶೀಲತೆ ವಸ್ತುವಿನ ಸೌಂದರೀಕರಣ ಕಂಡು ಆನಂದಮಯನಾದೆ. ಒಂದಿಷ್ಟು ಸಲಹೆ, ಕರೆಕ್ಷನ್ ಕೂಡ ಮಾಡಿದೆ. ಆರಂಭ ಮತ್ತು ಕೊನೆ ಹೇಗೆ ಇರಬೇಕು ಎಂಬುದನ್ನ ತಿಳಿಸಲಾಯಿತು.

ಮೈ ನೇಮ್ ಇಸ್,,,,,,,, ಥ್ಯಾಂಕ್ಯು,..... ನಾಲ್ಕೈದು ದಿವಸ ಇದರಲ್ಲಿಯೇ ಮುಳುಗಿ ಬಿಟ್ಟರು. ಅವರ ತಮಗೆ ಕೊಟ್ಟ ಕುರ್ಚಿ,ಟೇಬಲ್,ಬೆಂಚ್,ಬೋರ್ಡ್, ಎಲ್ಲವನ್ನೂ ಮೇಳದ ದಿನ ಶೃಂಗಾರಮಯಗೊಳಿಸಿದ್ದರು. ಆ ದಿನ ಇಡೀ ಶಾಲೆ ಆಂಗ್ಲಮಯವಾಗಿತ್ತು. 5,6,7,8 ತರಗತಿಯ ಆರವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದರು.ನಿಜಕ್ಕೂ ಮಕ್ಕಳು ಒಬ್ಬರಿಗಿಂತ ಒಬ್ಬರು ಅದ್ಭುತ ರೀತಿಯಲ್ಲಿ ತಮ್ಮ ವಿಷಯಗಳನ್ನು ಪ್ರಸ್ತುತಪಡಿಸಿದರು.ಗ್ರಾಮಸ್ಥರಿಂದ,

ಗಣ್ಯರಿಂದ ಕಾಮೆಂಟ್ ಸಹ ಬರೆಯಿಸಿಕೊಂಡಿದ್ದರು. ನನಗೆ ಆ ಕಮೆಂಟ್ಸ್ ನಿನಗೆ ಈ ಕಮೆಂಟ್ಸ್ ಎಂಬ ಚರ್ಚೆ ಅವರ ನಡುವೆ ಬಿಡುವಿನ ವೇಳೆಯಲ್ಲಿ ನಡೆಯುತ್ತಿತ್ತು. ಗ್ರಾಮಸ್ಥರು ಮಕ್ಕಳ ಭಾಷೆಯನ್ನು ಕಂಡು ದಂಗಾಗಿ ಹೋದರು. ಪಕ್ಕದ ಎರಡ್ಮೂರು ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ನಮ್ಮ ಶಾಲೆಯ ಮಕ್ಕಳ ಪ್ರತಿಭೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.ಅತಿಥಿಗಳಾಗಿ ಆಗಮಿಸಿದ ಡಾ.ಸಂಗಣ್ಣ ಸಿಂಗೆ ಮತ್ತು ರವಿಚಂದ್ರ ಅತನೂರ ಅವರು ವಿದ್ಯಾರ್ಥಿಗಳೆಲ್ಲರ ಪ್ರೆಜೆಂಟೆಷನ್ ಕೇಳಿ,ಚರ್ಚೆಗಿಳಿದು,ಹಾಸ್ಯ ಮಾಡಿ ಇಂಗ್ಲಿಷ್ ನಲ್ಲಿ ಸಂವನಿಸಿ ಹರ್ಷಿತಗೊಂಡು ಮಕ್ಕಳ ಬೆನ್ನು ತಟ್ಟಿದರು.

ನಿಖಿತಾ ಹೋಳಿ ಎಂಬ ವಿದ್ಯಾರ್ಥಿನಿಯ ಸೆಂಟೆನ್ಸ್ ಇಸ್ ಸುಂಟಿಪುಡಿ ನೆಗೆಡಿ ಬಂದ್ರ ಹಾಕೊಂಡು ಕುಡಿ ಎಂಬ ಹಾಸ್ಯದ ನಂತರ ಆರಂಭವಾಗುವ ವಿಷಯ ಮಂಡನೆ,ಸೈಲೆಂಟ್ ಲೆಟರ್ಸ್ ಅನ್ನು ಮೆಣದ ಬತ್ತಿಯಲ್ಲಿ ಬರೆದು ನಂತರ ಕುಂಕುಮ ಹಚ್ಚಿ ತೋರಿಸಿದ ಪೃಥ್ವಿ ಇಟಗಿ,ಅಡುಗೆ ಮನೆಯ ಎಲ್ಲ ಪದಾರ್ಥಗಳನ್ನು ಆಂಗ್ಲ ಭಾಷೆಯಲ್ಲಿ ಹೇಳಿ ಮನಗೆದ್ದ ಐಶ್ವರ್ಯ ಯಾಳಗಿ,

ರ್ಯಾಪರ್ಸ್ (ವೇಸ್ಟ್) ಗಳ ಚಾರ್ಟ್ ನಿಂದ ತಿನ್ನುವ ವಸ್ತುಗಳ ಪರಿಚಯಿಸಿದ ಶೀಲಮ್ಮ ಇಟಗಿ.ಹೀಗೆ ಎಲ್ಲರೂ ಅಧ್ಬುತ ಕಾರ್ಯ ಮಾಡಿ ಗೆದ್ದಿದ್ದರು.

ಮುಖ್ಯಗುರುಗಳಾದ ಜಾವೀದ ಹುಂಡೇಕಾರ ಈ ಮುಂಚೆ "ಶಾಲಾ ಮಟ್ಟದ ಕಲಿಕಾ ಹಬ್ಬ" ಮಾಡುವಾಗ ಸಂಪೂರ್ಣ ಸಹಕಾರ ನೀಡಿದ್ದರು.ಆಂಗ್ಲ ಭಾಷಾ ಮೇಳಕ್ಕೂ ಸಹ ಎಲ್ಲ ಸೌಲಭ್ಯ ಒದಗಿಸಿದರು.ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಿದ್ಧಾರಾಮ ಮಾಹೂರ ಇಂತಹ ಕೆಲಸಗಳಿಗೆ ಸದಾ ಬೆಂಗಾವಲಾಗಿರುತ್ತಾರೆ.

ಕುದುರೆ ಹತ್ತಿದ ಮಕ್ಕಳ ಸವಾರಿ ಈಗ ಎಲ್ಲೆಡೆ ಸಂಚರಿಸುತ್ತೀದೆ.ನಿಯಂತ್ರಣವೂ ಉಂಟು,ವಿಶ್ವಾಸವೂ ಉಂಟು ವೇಗವೂ ಉಂಟು.

"ಮೊದಲು ಮನಸ್ಸು ಮಾಡಿ ಬಿಡಿ ಅದ್ಭುತಗಳು ತನ್ನಿಂದ ತಾನೇ ಸೃಷ್ಟಿಯಾಗುತ್ತವೆ. ನಿಮ್ಮ ಸೃಷ್ಟಿಯೆಡೆಗೆ ಎಲ್ಲ ದೃಷ್ಟಿಗಳು ಹೊರಳುತ್ತವೆ".

ಪರಮಾನಂದ ಎಸ್ ಸರಸಂಬಿ

ಶಿಕ್ಷಕರು ಸಹಿಪ್ರಾ ಶಾಲೆ ಕೆಕ್ಕರಸಾವಳಗಿ

ಅಫಜಲಪೂರ ಕಲಬುರಗಿ

7022783643