ಆರೋಗ್ಯ ಸೇವೆಯ ಅಸಮಾನತೆ ನೀಗಬೇಕು : ಡಾ. ಅಜೈಕುಮಾರ್
ಡಾ. ಪಿ ಎಸ್ ಶಂಕರ್ ಪ್ರತಿಷ್ಠಾನದ ರಜತ ಸಂಭ್ರಮ:
ಆರೋಗ್ಯ ಸೇವೆಯ ಅಸಮಾನತೆ ನೀಗಬೇಕು : ಡಾ. ಅಜೈಕುಮಾರ್
ಕಲಬುರಗಿ: ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿರುವ ಅಸಮಾನತೆ ನಿವಾರಣೆಗೊಂಡು ಸಾರ್ವತ್ರಿಕ ಆರೋಗ್ಯ ಸೇವೆಯು ಎಲ್ಲರಿಗೂ ಸಿಗುವಂತಾಗಬೇಕು ಎಂದು ಬೆಂಗಳೂರು ಎಚ್ ಸಿ ಜಿ(ಹೆಲ್ತ್ ಕೇರ್ ಗ್ಲೋಬಲ್) ಆಸ್ಪತ್ರೆಯ ಕಾರ್ಯನಿರ್ವಾಹಕ ಅಧ್ಯಕ್ಷರಾದ ಡಾ. ಬಿ.ಎಸ್. ಅಜೈಕುಮಾರ್ ಹೇಳಿದರು.
ಕಲಬುರಗಿಯಲ್ಲಿ ಜನವರಿ ಒಂದರಂದು ನಡೆದ ಡಾ. ಪಿ.ಎಸ್ ಶಂಕರ್ ಪ್ರತಿಷ್ಠಾನದ ರಜತೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ, ವೈದ್ಯ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಿಜ್ಞಾನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ "ಡಾ. ಪಿ ಎಸ್ ಶಂಕರ್ ರಾಷ್ಟ್ರೀಯ ವೈದ್ಯ ಶ್ರೀ" ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತ ಇಡೀ ವಿಶ್ವದಲ್ಲೇ ಭಾರತೀಯ ವೈದ್ಯರು ಅತ್ಯಂತ ಶ್ರೇಷ್ಠ ಸೇವೆಯನ್ನು ನೀಡುತ್ತಿದ್ದು ಅಮೆರಿಕ ಮತ್ತು ಲಂಡನ್ ಮುಂತಾದ ರಾಷ್ಟ್ರಗಳಲ್ಲಿ ಆ ದೇಶದ ವೈದ್ಯರುಗಳಿಗಿಂತಲೂ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಆದರೆ ವಸಾಹತುಶಾಹಿ ಮನೋಧರ್ಮ ಮತ್ತು ಸಂಶೋಧನೆ ಯ ಕೊರತೆಯಿಂದಾಗಿ ಹಿಂದುಳಿಯಲು ಮೂಲಕಾರಣವಾಗಿದೆ. ಜೊತೆಗೆ ವೈದ್ಯಕೀಯ ರಂಗದ ಬೆಳವಣಿಗೆಗೆ ಭ್ರಷ್ಟಾಚಾರವು ಕೂಡಾ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದರಿಂದ ಅಭಿವೃದ್ಧಿಯ ವೇಗ ಕಡಿಮೆಯಾಗುತ್ತಿದೆ. ಭಾರತದ ವೈದ್ಯರು ಅಂಕಿ ಲಿಅಂಶ ಮತ್ತು ದಾಖಲೆಗಳನ್ನು ಸಂಗ್ರಹಿಸಿ ಪರಿಣಾಮಕಾರಿ ಸಂಶೋಧನೆಯನ್ನು ನಡೆಸಿದರೆ ವೈದ್ಯಕೀಯ ರಂಗದಲ್ಲಿ ಅದ್ಭುತ ಸಾಧನೆಯನ್ನು ವಿಶ್ವಕ್ಕೆ ತೋರಿಸಿಕೊಡಬಹುದು. ಪ್ರಜ್ಞಾಪೂರ್ವಕವಾಗಿ ಕಾರ್ಯ ನಡೆಸಿದರೆ ವೈದ್ಯಕೀಯ ರಂಗದಲ್ಲಿ ವಿಶ್ವ ಗುರುತಿಸುವ ಸಾಧನೆ ಮಾಡಬಹುದು. ಶ್ರೀಮಂತನಿಗೆ ಮತ್ತು ಬಡವರಿಗೆ ಸಮಾನವಾದ ಆರೋಗ್ಯ ಸೇವೆ ಲಭ್ಯವಾಗುವುದು. ಅದಕ್ಕಾಗಿ ಆರೋಗ್ಯ ಕ್ಷೇತ್ರದ ಬದಲಾವಣೆಗೆ ಯುವ ವೈದ್ಯರು ಮುಂದಾಗಬೇಕು ಎಂದು ಡಾ. ಅಜೈಕುಮಾರ್ ಕರೆ ನೀಡಿದರು.
ಪ್ರತಿಷ್ಠಾನವು ನೀಡಿದ ನಗದು ಪುರಸ್ಕಾರವನ್ನು ಮರಳಿ ಪ್ರತಿಷ್ಠಾನದ ಸೇವಾ ಕಾರ್ಯಗಳಿಗೆ ಅವರು ಹಸ್ತಾಂತರಿಸಿ ವೈದ್ಯಕೀಯ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ ಪ್ರತಿಷ್ಠಾನದ ಕೆಲಸ ಸ್ತುತ್ಯಾರ್ಹ ಎಂದು ಡಾ. ರಾಜಕುಮಾರ್ ಹೇಳಿದರು.
ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ಅಗತ್ಯ: ಡಾ. ಯೋಗಣ್ಣ
ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ವೈದ್ಯ ವಿಜ್ಞಾನವು ಶರವೇಗದಲ್ಲಿ ಬೆಳೆಯುತ್ತಿದ್ದು ಮುಂದಿನ ದಿನಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಎಲ್ಲ ರೀತಿಯ ಪಠ್ಯ ಪದಕೋಶಗಳನ್ನು ರಚಿಸಲಾಗುತ್ತಿದೆ. ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಲಭ್ಯವಾದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗುತ್ತದೆ ಮತ್ತು ನಗರ ಮತ್ತು ಗ್ರಾಮೀಣ ಎಂಬ ತಾರತಮ್ಯ ಕೂಡಾ ತಪ್ಪುತ್ತದೆ ಎಂದು ಡಾ. ಪಿ.ಎಸ್ ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಪಡೆದ ಮೈಸೂರಿನ ಸುಯೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಎಸ್. ಪಿ ಯೋಗಣ್ಣ ಹೇಳಿದರು.
ಕನ್ನಡ ವೈದ್ಯ ಸಾಹಿತ್ಯ ಕ್ಷೇತ್ರದಲ್ಲಿ 200 ಕ್ಕೂ ಹೆಚ್ಚು ಲೇಖಕರು ಇದ್ದಾರೆ. 3000ಕ್ಕೂ ಹೆಚ್ಚಿನ ಕನ್ನಡ ವೈದ್ಯ ಸಾಹಿತ್ಯ ಪುಸ್ತಕಗಳು ಲಭ್ಯವಿದ್ದು ಕನ್ನಡ ವೈದ್ಯ ವಿಶ್ವಕೋಶ ಈಗಾಗಲೇ ಮುದ್ರಣಗೊಂಡಿದೆ.13 ಪಠ್ಯಪುಸ್ತಕಗಳು 600 ಕ್ಕೂ ಹೆಚ್ಚು ವಿಷಯಗಳ ಪಠ್ಯಕ್ರಮ ಒಳಗೊಂಡ ವೈದ್ಯವಿಜ್ಞಾನ ವಿಶ್ವಕೋಶ ಕನ್ನಡದಲ್ಲಿ ಸಿದ್ಧಗೊಳ್ಳುತ್ತಿದೆ. 30ಸಾವಿರ ಪದ ಕೋಶಗಳ ಕೃತಿ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲೇ ರಾಜೀವ್ ಗಾಂಧಿ ವೈದ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಬಿಡುಗಡೆಗೊಳ್ಳಲಿದೆ. ತದನಂತರ ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ನೀಡಬೇಕೆಂಬ ಬೇಡಿಕೆಯನ್ನು ಸರಕಾರಕ್ಕೆ ಮಂಡಿಸಲಾಗುವುದು ಎಂದು ಹೇಳಿದರು.
ಆರೋಗ್ಯ, ಶಿಕ್ಷಣ, ಸಾಮಾಜಿಕ ಅಭಿವೃದ್ಧಿ ಗೆ ಆದ್ಯತೆ ಅಗತ್ಯ: ಡಾ. ತುಳಸಿ ಮಾಲಾ
ಆರೋಗ್ಯ ಕ್ಷೇತ್ರ ಶಿಕ್ಷಣ ರಂಗ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಸಾಮಾಜಿಕ ಮೌಲ್ಯಗಳ ಪುನರುತ್ಥಾನಕ್ಕೆ ಡಾ. ಪಿ. ಎಸ್ ಶಂಕರ್ ಪ್ರತಿಷ್ಠಾನವು ಮಾದರಿ ಕೆಲಸವನ್ನು ಮಾಡುತ್ತಿದೆ ಎಂದು ರಜತೋತ್ಸವ ಸಂಚಿಕೆಯನ್ನು ಬಿಡುಗಡೆ ಮಾಡಿದ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ ತುಳಸಿಮಾಲಾ ಅಭಿಪ್ರಾಯ ಪಟ್ಟರು. ಸಾಮಾಜಿಕ ಅಭಿವೃದ್ಧಿ ಸಾಧಿಸಲು ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರದ ಕೌಶಲ್ಯವನ್ನು ಪ್ರಜ್ಞಾಪೂರ್ವಕವಾಗಿ ಬಳಕೆ ಮಾಡಿ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳೊಂದಿಗೆ ಕಟ್ಟಿ ಬೆಳೆಸಬೇಕಾಗಿದೆ. ಭಾರತದ ಯುವಜನತೆ ಭರವಸೆಯಾಗಿದ್ದು ಅಂತಹ ಮಾನವ ಸಂಪನ್ಮೂಲ ಬಳಕೆಯ ಮನಸ್ಥಿತಿ ನಿರ್ಮಾಣವಾಗಬೇಕಾಗಿದೆ. ಸಮುದಾಯದ ಸಬಲೀಕರಣ, ನಾಗರಿಕ ಪ್ರಜ್ಞೆ ಸಮಾನ ಆಸಕ್ತಿ ಗುರುತಿಸಿ ಮುಂದುವರಿಸಿಕೊಂಡು ಸಮಾಜಕ್ಕೆ ದಾರಿ ದೀಪವಾಗಬೇಕಾಗಿದೆ ಎಂದು ಹೇಳಿದರು.
ಡಾ. ಪಿ ಎಸ್ ಶಂಕರ್ ಪ್ರತಿಷ್ಠಾನವು ವೈದ್ಯಕೀಯ, ಸಾಂಸ್ಕೃತಿಕ ಮತ್ತು ಗ್ರಂಥಾಲಯ ಈ ರಂಗಗಳಲ್ಲಿ ವಿಧಾಯಕ ಕೆಲಸಗಳನ್ನು ಮಾಡಿ ಜ್ಞಾನ, ವಿವೇಕ ಪ್ರಜ್ಞೆ, ಮೌಲ್ಯಗಳನ್ನು ಅಭಿವ್ಯಕ್ತಗೊಳಿಸುತ್ತಿರುವ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸುಜಾನಾ ಶಿವಾನಂದ ಮುಲ್ಲತ್ತಿ ತೇರದಾಳ, ಮೊಹಮ್ಮದ್ ಸುಹೇಲ್ ದಾವಣಗೆರೆ, ಕೊಟ್ರೇಶ ಶಿವಮೂರ್ತಿ ಬಸಾಪುರ ಶಿರಬಡಗಿ, ಪ್ರಸನ್ನ ನಾಗರಾಜ ಸರ್ವದೆ ಚಿಕ್ಕೆರೂರ, ಪೂಜಾ ವಿಶ್ವನಾಥ ಉಚಾಟ್ಟೆ ಬನಶಂಕರಿ, ಶಿವರುದ್ರಪ್ಪ ನಿಬೆಣ್ಣೆ ಕಲಬುರಗಿ, ಸಿದ್ದನಗೌಡ ರಾಮನಗೌಡ ಪಾಟೀಲ್ ಅರ್ಜುಣಗಿ, ಪಂಚಾಕ್ಷರಿ ರಾಜಶೇಖರ ಲೋಣಿಮಠ ಕಲಬುರಗಿ, ತೇಜಸ್ ಮಲ್ಲಿಕಾರ್ಜುನ ಗೋವಿಂದಪುರ ಮಠ ಮುಧೋಳ 2024 - 29ನೇ ಸಾಲಿನ ವೈದ್ಯ ವಿದ್ಯಾರ್ಥಿ ವೇತನವನ್ನು ಹಾಗೂ ಇಂಜಿನಿಯರಿಂಗ್ ನಲ್ಲಿ ಮಾನಸ ಎಂ. ಬಿ ಚಿತ್ರದುರ್ಗ ವಿದ್ಯಾರ್ಥಿ ವೇತನ ಪಡೆದರು.
ಕಾರ್ಯಕ್ರಮದಲ್ಲಿ ಡಾ. ಪಿ. ಎಸ್ ಶಂಕರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಯಾದಗಿರಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ. ಎಸ್ ಮುಧೋಳ್ ವಿಜ್ಞಾನ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಅಂಬಿಕಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷರಾದ ಡಾ. ಎಚ್ ವೀರಭದ್ರಪ್ಪ ಖಜಾಂಚಿ ಡಾ. ಪಿ ಎಂ ಬಿರಾದಾರ್ ಜಂಟಿ ಕಾರ್ಯದರ್ಶಿಗಳಾದ ಡಾ. ಎಸ್ ಎ. ಮಾಲಿ ಪಾಟೀಲ್, ಡಾ. ಇಂದಿರಾ ವೀರಭದ್ರಪ್ಪ, ಸದಾನಂದ ಮಹಾಗಾಂಕರ್, ಮಾಚಿ ಲೋಕಸಭಾ ಸದಸ್ಯ ಡಾ. ಬಿ.ಜಿ ಜವಳಿ, ಹೈ.ಕ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬಸವರಾಜ್ ಭೀಮಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಕು. ರಾಜಶ್ರೀ ಪ್ರಾರ್ಥನಾಗೀತೆ ಹಾಡಿದರು. ಕಾರ್ಯದರ್ಶಿ ನರೇಂದ್ರ ಬಡಶೇಷಿ ಸ್ವಾಗತಿಸಿ ನಿರೂಪಣೆ ಗೈದರು. ರಾಮಕೃಷ್ಣ ರೆಡ್ಡಿ ಧನ್ಯವಾದವಿತ್ತರು.