ಸೌರಶಕ್ತಿಯ ಮೂಲಪುರುಷ ಮತ್ತು ಕಲೆಗಳ ಆರಾಧಕ ಶ್ರೀ ಶ್ರೀ ಶ್ರೀ ಸವಿತಾ ಮಹರ್ಷಿ
ಸೌರಶಕ್ತಿಯ ಮೂಲಪುರುಷ ಮತ್ತು ಕಲೆಗಳ ಆರಾಧಕ ಶ್ರೀ ಶ್ರೀ ಶ್ರೀ ಸವಿತಾ ಮಹರ್ಷಿ
ಭಾರತೀಯ ಪುರಾಣ ಮತ್ತು ಸಂಸ್ಕೃತಿಯಲ್ಲಿ ಋಷಿಮುನಿಗಳಿಗೆ ಅತ್ಯುನ್ನತ ಸ್ಥಾನವಿದೆ ಲೋಕ ಕಲ್ಯಾಣಕ್ಕಾಗಿ ತಪಸ್ಸುಗೈದ ಮಹಾನ್ ಚೇತನಗಳಲ್ಲಿ ಸವಿತಾ ಮಹರ್ಷಿ ಅವರು ಪ್ರಮುಖರು. ಇವರು ಕೇವಲ ಒಬ್ಬ ವ್ಯಕ್ತಿಯಲ್ಲ, ಜ್ಞಾನ ಕಲೆ ಮತ್ತು ತೇಜಸ್ಸಿನ ಸಂಕೇತ. ಸೂರ್ಯನ ಅದಿದೇವತೆಯಾದ "ಸವಿತೃ" ಅಂಶ ಸಂಭೂತರಾದ ಇವರು ಸಮಾಜಕ್ಕೆ ಶಿಸ್ತು, ಕಲೆ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದವರು. ಸವಿತಾ ಮಹರ್ಷಿಗಳನ್ನು ಸೂರ್ಯನ ಸ್ವರೂಪವೆಂದು ಪೂಜಿಸಲಾಗುತ್ತದೆ.
ಸವಿತಾ ಮಹರ್ಷಿ ಅವರ ಪೂರ್ವಜರ ಬಗ್ಗೆ ಹಲವಾರು ಪುರಾಣ ಕೃತಿಗಳಲ್ಲಿ ಬರುವ ಸಪ್ತಋಷಿಗಳಲ್ಲಿ ಒಬ್ಬರಾದ ಕಶ್ಯಪ ಮುನಿ ಇವರ ವ್ಯಕ್ತಿತ್ವವು ಅಪಾರ ಶಕ್ತಿಯ ಪ್ರತೀಕವಾಗಿ ತೋರುತ್ತದೆ. ಕಶ್ಯಪ ಮುನಿ ಇವರಿಗೆ ದಿತಿ, ಅದಿತಿ, ದನು, ಕಲಾ, ದನಾಯು, ಸಿಂಹಿಕಾ, ಕ್ರೋಧಾ, ಪ್ರಾಥಾ, ವಿಶ್ವ, ವಿನತಾ,ಕಪಿಲಾ, ಮುನಿ, ಕದ್ರು ಎಂಬ ಹದಿಮೂರು ಜನ ಹೆಂಡತಿಯರು, ಇವರಲ್ಲಿ ಅದಿತಿಯ ಮಕ್ಕಳೇ ದೇವರು, ದಿತಿಯ ಮಕ್ಕಳು ದೈತ್ಯರು, ಇವರ ಉಳಿದ ಪತ್ನಿಯರಲ್ಲಿ ನಾಗರು, ಉರಗರು, ಗರುಡ,ಪಕ್ಷಿಗಳು, ಪ್ರಾಣಿಗಳು, ಮೊದಲಾದ ಜೀವರಾಶಿಗಳು ಜನಿಸಿದವೆಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಕಶ್ಯಪ ಮುನಿ ಮೊದಲನೆಯ ಹೆಂಡತಿ ಅದಿತಿಗೆ 33 ಜನ ದೇವರು ಜನಿಸಿದರು. ಅವರಲ್ಲಿ ದಶಪುತ್ರನಾಗಿ ಸವಿತಾ ಮಹರ್ಷಿಯವರು ಒಬ್ಬರು ಎಂದು ಪುರಾಣಗಳಿಂದ ತಿಳಿದು ಬರುತ್ತದೆ. (ವಿಷ್ಣು ಮತ್ತು ಲಿಂಗ ಪುರಾಣಗಳಲ್ಲಿ) ಉಲ್ಲೇಖವಿದೆ.
ಕಾಶಿ ಕ್ಷೇತ್ರದಲ್ಲಿ ದೊರೆತ ಮಹಾಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಬ್ರಹ್ಮದೇವ, ಶಿವ ಮತ್ತು ವಿಷ್ಣು ಜೊತೆ ಯಾಗ-ಯಜ್ಞಗಳನ್ನು ಮಾಡುವ ಸಂದರ್ಭದಲ್ಲಿ ಶಿವನ ಮುಖದ ಗಡ್ಡಕ್ಕೆ ಮತ್ತು ಮೀಸೆಗೆ ಅಗ್ನಿ ಸ್ಪರ್ಶವಾಗಿ ಶಿವನು ಆಶುಚಿಯಾಗಿ ಕಾಣುತ್ತಿರುತ್ತಾನೆ. ಇದನ್ನು ಪಕ್ಕದಲ್ಲಿದ್ದ ಪಾರ್ವತಿಯು ನೋಡಿ ಅದನ್ನು ತೆಗೆಯುವಂತೆ ಶಿವನಿಗೆ ಸೂಕ್ಷ್ಮವಾಗಿ ಸೂಚಿಸಿದ ಕಾರಣ ಅದರಂತೆ ಶಿವನು ತನ್ನ ಬಲಗಣ್ಣಿನಿಂದ ಒಬ್ಬ ಪುರುಷನನ್ನು ಸೃಷ್ಟಿಸಿದನು. ಅವನು ನಾನಾ ವಿವಿಧ ಸಲಕರಣೆಗಳ ಪೆಟ್ಟಿಗೆ ಸಮೇತ ಹುಟ್ಟಿ ಬಂದು ಶಿವನ ಗಡ್ಡ ಮೀಸೆಗಳನ್ನು ತೆಗೆದು ಮೆಚ್ಚಿಸಿದನು. ಅದರಿಂದ ಸುಪ್ರೀತನಾದ ಶಿವನು ಅವನ ಸೇವೆಗೆ ಕೊಡುಗೆಯಾಗಿ ಕೆಲವು ವಾದ್ಯಗಳನ್ನು ದಯಪಾಲಿಸಿದನು. ಆತನೇ ಕ್ಷೌರಿಕ ಜನಾಂಗದ ಮೂಲಪುರುಷ ಶ್ರೀ ಶ್ರೀ ಶ್ರೀ ಸವಿತಾ ಮಹರ್ಷಿಯವರು. ಶಿವನ ಕಣ್ಣಿನಿಂದ ಹುಟ್ಟಿದ ಹಾಗೂ ಸೂರ್ಯನ ಮತ್ತೊಂದು ಹೆಸರು 'ಸವಿತೃ ' ಆಗಿರುವುದರಿಂದ ಸವಿತಾ ಮಹರ್ಷಿ ಎಂದು ಪೌರಾಣಿಕ ಕಥೆಗಳಲ್ಲಿ ಉಲ್ಲೇಖವಾಗಿರುತ್ತದೆ.
ಆದಿಪುರುಷನ ಅವಿರ್ಭಾವ ಭಾರತೀಯ ಇತಿಹಾಸ ಮತ್ತು ಪುರಾಣಗಳು ಜಗತ್ತಿಗೆ ಶ್ರೇಷ್ಠ ದಾರ್ಶನಿಕರನ್ನು ನೀಡಿವೆ. ಅಂತಹವರಲ್ಲಿ ಸವಿತಾ ಮಹರ್ಷಿಗಳು ಅತ್ಯಂತ ವಿಶಿಷ್ಟವಾದವರು. ಹೀಗಾಗಿ ರಥಸಪ್ತಮಿಯ ಮೇಘಮಾಸದಂದು ಸವಿತಾ ಮಹರ್ಷಿ ಜಯಂತಿ ಶುಕ್ಲ ಪಕ್ಷದ ಸಪ್ತಮಿ ದಿನ ಸೂರ್ಯರಾಧನೆಗೆ ವಿಶೇಷ ಸರ್ವದಿನ. ಸೂರ್ಯ ಸಮಭಾಜಕ ರೇಖೆಯನ್ನು ಉತ್ತರಾಭಿಮುಖವಾಗಿ ಹಾದು ಹೋಗುವ ಸಮಯ ಇಲ್ಲಿಂದ ಹಗಲು-ರಾತ್ರಿ ಸಮ ಪ್ರಮಾಣದಲ್ಲಿ ಇರುತ್ತದೆ. ಈ ರಥಸಪ್ತಮಿಯು ಋತುಮಾನದ ಹಬ್ಬ ಸೂರ್ಯ ಸಾಕ್ಷಾತ್ ಶ್ರೀಮಾನ್ ನಾರಾಯಣನ ಪ್ರತಿರೂಪ ಈ ದಿನದಂದು ಸೂರ್ಯನಾರಾಯಣ ಉಪಾಸಕರಿಗೆ ಸವಿತಾ ಜನರೆಂದು ಕರೆಯುವರು. ಈ ಉಪಾಸನ ಮಾಡುವುದರಿಂದ ಬ್ರಹ್ಮ ವಿದ್ಯೆ, ಮಹಾವಿದ್ಯೆ ಮತ್ತು ವರಹವಿದ್ಯೆಗಳು ಲಭಿಸುತ್ತದೆ.
ಬ್ರಹ್ಮ ಜ್ಞಾನವನ್ನು ಹೊಂದಿದ ಸವಿತಾ ಮಹರ್ಷಿ ಅವರು ಹಿಂದೂ ಧರ್ಮದ ಪವಿತ್ರ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದರು ಎಂದು ಪ್ರತೀತಿ ಇದೆ. ಸವಿತಾ ಮಹರ್ಷಿಯ ಪುತ್ರಿಯಾದ ಗಾಯತ್ರಿ ದೇವಿಯ ಮಂತ್ರಗಳಲ್ಲಿ ಸವಿತೃ ಎಂಬ ಪದ ಸ್ಪಷ್ಟವಾಗಿ ಕಾಣುತ್ತದೆ. ಸವಿತಾ ಮಹರ್ಷಿಯವರು ಹುಟ್ಟಿದ ಬಗ್ಗೆ ಸಂಸ್ಕೃತ ಗ್ರಂಥವಾದ ನಾಭಿಕ್ ಪುರಾಣ ಮತ್ತು ಕುಮಾರಸಂಭವ ಗ್ರಂಥಗಳಲ್ಲಿ ಉಲ್ಲೇಖವಿದೆ.
ಸವಿತಾ ಮಹರ್ಷಿಗೆ ಸೃಷ್ಟಿಕರ್ತರು ನೀಡಿದ ಆಯುಷ್ ಮಾರ್ಗಗಳಲ್ಲಿ ಮೂರು ಕರ್ಮಗಳಾದ ಚೌಲಕರ್ಮ, ಆಯುರ್ವೇದ, ಸಂಗೀತ ಅದರ ಜೊತೆಗೆ ಪರಿಕರಣಗಳನ್ನು ನೀಡಿರುತ್ತಾರೆ. ಚೌಲಕರ್ಮವೆಂದರೆ ತಮ್ಮ ಆಯುಷ್ಯದಲ್ಲಿ ಮಾಡಿದ ಕರ್ಮ ಅವರ ಕೇಶಗಳಲ್ಲಿ ಸಂಗ್ರಹವಾಗಿರುತ್ತದೆ ಕೇಶ ಮುಂಡನ ಮಾಡಿಸುವುದರಿಂದ ಕರ್ಮಗಳು ಪರಿಹಾರವಾಗುತ್ತವೆ ಎನ್ನುವುದು ಹಿಂದೂಗಳ ನಂಬಿಕೆ ಈಗಲೂ ತೀರ್ಥಕ್ಷೇತ್ರಗಳಲ್ಲಿ ಕರ್ಮಗಳ ಪರಿಹಾರಕ್ಕಾಗಿ ಮುಡಿಯನ್ನು ದೇವರಿಗೆ ಒಪ್ಪಿಸುವ ಸಂಪ್ರದಾಯ ನೋಡಬಹುದು. ಇದುವೇ ಚೌಲಕರ್ಮದ ಮರ್ಮವಾಗಿರುತ್ತದೆ. ಆಯುರ್ವೇದದ ಪಾರಂಪರಿಕ ವೈದ್ಯರು ಭಾರತದ ಹಲವು ಭಾಗಗಳಲ್ಲಿ ಮತ್ತು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಸವಿತಾ ಸಮುದಾಯದವರು ಕಂಡು ಬರುತ್ತಾರೆ. ವೈದ್ಯ ವೃತ್ತಿಯನ್ನು ಬ್ರಿಟಿಷರು ಭಾರತವನ್ನು ಆಕ್ರಮಿಸುವವರೆಗೆ ವೈದ್ಯ ಸೇವೆಯನ್ನು ಕ್ಷೌರಿಕರು ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಬಂದಿರುವುದು ಹಲವು ಭಾರತೀಯ ಇತಿಹಾಸಕಾರರ ಲೇಖನಗಳಲ್ಲಿ ಉಲ್ಲೇಖವಾಗಿದೆ. ಭೂಲೋಕದಲ್ಲಿ ರೋಗರುಜನಗಳಿಂದ ಜನರು ಬಳಲುತ್ತಿದ್ದಾರೆ ಈ ರೋಗಗಳನ್ನು ನಿವಾರಿಸಲು ಸವಿತಾ ಮಹರ್ಷಿರವರಿಗೆ ಸೃಷ್ಟಿಕರ್ತರು ವರವನ್ನು ಕರುಣಿಸತ್ತಾರೆ. ಆದ್ದರಿಂದ ಇವತ್ತಿಗೂ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ವೈದ್ಯ ಮನೆತನಗಳು ಸವಿತಾ ಜನಾಂಗದಲ್ಲಿ ಬೇರೂರಿವೆ.
ಸಂಗೀತ ಸೇವೆಯಲ್ಲಿ ಸವಿತಾ ಸಮಾಜದವರ ಸೇವೆ ಶ್ಲಾಘನೀಯವಾದದ್ದು ಸಂಗೀತ ಸೇವೆಯಲ್ಲಿ ಅಂತರಾಷ್ಟ್ರೀಯ ಮೇರು ಪರ್ವತ ಏರಿ ಸಾಧನೆಯ ಮೈಲುಗಲ್ಲು ಹಾಕಿದ ರಾಯಚೂರಿನ ಶ್ರೀ ನರಸಿಂಹಲು ವಡವಟ್ಟಿ ಸವಿತಾ ಸಮಾಜಕ್ಕೆ ಶಕ್ತಿಯಾಗಿದ್ದಾರೆ. ಹೀಗೆ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಗೀತಗಾರರು ಇದ್ದಾರೆ. ಅವರನ್ನು ಸರಕಾರ ಪರಿಗಣಿಸಿ ಪ್ರೋತ್ಸಾಹ ನೀಡಿ ಪ್ರಶಸ್ತಿಗಳನ್ನು ಕೊಡುವುದರ ಮೂಲಕ ಗೌರವ ಹೆಚ್ಚಿಸ ಬೇಕು. ಹಿರಿಯ ಕಲಾವಿದರಿಗೆ ಗೌರವ ಧನವನ್ನು ನೀಡಿ ಪ್ರೋತ್ಸಾಹಿಸಬೇಕು. ಸಂಗೀತ ವಿಶ್ವವಿದ್ಯಾಲಯದಲ್ಲಿ ಸವಿತಾ ಸಮುದಾಯದವರಿಗೆ ಪ್ರಥಮ ಆದ್ಯತೆ ನೀಡಬೇಕು. ಸರಕಾರಿ ಸೌಲಭ್ಯ ನೀಡಿ ಬೆಂಬಲಿಸಿದಾಗ ಸವಿತಾ ಸಮಾಜಕ್ಕೆ ಸೃಷ್ಟಿಕರ್ತನು ಕೊಟ್ಟ ವರವು ವರದನವಾಗುತ್ತದೆ. ಸವಿತಾ ಸಮಾಜದವರು ಮದುವೆ ಮಂಗಳ ಕಾರ್ಯಕ್ಕೆ ಎಲ್ಲಾ ಜನಾಂಗದವರ ಶುಭ ಕಾರ್ಯಗಳಲ್ಲಿ ಸಂಗೀತ ಪ್ರತಿಭೆಯನ್ನು ತೋರುತ್ತಿದ್ದು. ಸರಕಾರವು ಸರ್ಕಾರಿ ಸಾಂಸ್ಕೃತಿ ಕಾರ್ಯಕ್ರಮಕ್ಕೆ ಸವಿತಾ ಸಮಾಜದವರ ಸಂಗೀತ ಸೇವೆಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಮುಂದಾಗಬೇಕು ಎನ್ನುವುದು ಸವಿತಾ ಸಮಾಜದ ಸದಾಶಯವಾಗಿದೆ.
ಸವಿತಾ ಮಹರ್ಷಿ ಅವರಿಗೆ ಆರು ಕೈಗಳಿದ್ದು ಅವುಗಳು ಅವರ ಅಪಾರ ಶಕ್ತಿ ಸಾಮರ್ಥ್ಯದ ಸಂಕೇತವಾಗಿ ತೋರಿಸಲಾಗಿದೆ. ಮಹರ್ಷಿ ಅವರ ಒಂದನೇ ಕೈಯಲ್ಲಿ ತಾವೇ ರಚಿಸಿದ ಸಾಮವೇದ ಗ್ರಂಥವನ್ನು ಮತ್ತು ಎರಡನೇ ಕೈಯಲ್ಲಿ ಜಪಮಾಲೆಗಳನ್ನು ಮೂರನೇ ಕೈಯಲ್ಲಿ ಅಮೃತದ ಕುಂಭವನ್ನು ನಾಲ್ಕನೇ ಕೈಯಲ್ಲಿ ಕಮಲದ ಹೂವನ್ನು ಐದನೇ ಕೈಯಲ್ಲಿ ಅಭಯ ಹಸ್ತವಾಗಿ ಆರನೇ ಕೈಯಲ್ಲಿ ವೀಣೆಯನ್ನು ಹಿಡಿದಿರುವುದನ್ನು ತೋರಿಸಲಾಗಿದೆ. ಮಹರ್ಷಿಯವರ ಮುಂಭಾಗದಲ್ಲಿ ಹಂಸ ಉಳಿದ ಪರಿಕರಗಳು ಮಹರ್ಷಿಯವರ ತ್ರಿವಿಧ ಸೇವೆಗೆ ಅಗತ್ಯವಾದ ವಸ್ತುಗಳಾಗಿರುತ್ತವೆ.ಸವಿತಾ ಮಹರ್ಷಿಯವರ ಆರು ಕೈಗಳಲ್ಲಿ ಭಕ್ತಿ-ಶಕ್ತಿ ತುಂಬಿಕೊಂಡಿದೆ.
ಸವಿತಾ ಬಂಧುಗಳ ಉಲ್ಲೇಖವು ಶಾಸನ ಮತ್ತು ಕೃತಿಗಳಲ್ಲಿ ಕಂಡುಬರುತ್ತದೆ. ಮೈಸೂರಿನ ದೊರೆ ಮುಮ್ಮಡಿ ಕೃಷ್ಣರಾಜ ಒಡೆಯರ ಅವರ ಕಾಲದಲ್ಲಿ ಕ್ರಿ.ಶ ಸುಮಾರು 1830ರಲ್ಲಿ ಯಾದವ ಕವಿಯ "ಕಲಾವತಿ ಪರಿಣಯ" ಎಂಬ ಗದ್ಯ ಕೃತಿಯಲ್ಲಿ ಸವಿತಾ ಸಮಾಜದ ಮೌರಿ ಎಂಬುವವರು ವಾದ್ಯವನ್ನು ನುಡಿಸುವಲ್ಲಿ ಪ್ರವೀಣರಾಗಿದ್ದರು. ದೇವರ ಉತ್ಸವ ಕಾರ್ಯದಲ್ಲಿ ವಾದ್ಯವನ್ನು ನುಡಿಸುತ್ತಿದ್ದರು. ಇದಕ್ಕಿಂತ ಪೂರ್ವದಲ್ಲಿ ಕ್ರಿ.ಶ 1534 ರ ಶಾಸನದಲ್ಲಿ ಸವಿತಾ ಸಮುದಾಯದ ಭೈರಪ್ಪ ನಾಯಕನ ಮಗ ಕೃಷ್ಣಪ್ಪನಾಯಕನು ಕೊಗಲಿ ಜಿಲ್ಲೆಯ ಕೊಟ್ಟೂರು ಮತ್ತು 32 ಪ್ರಾಂತ್ಯಗಳನ್ನು ಆಳುತ್ತಿದ್ದರು ಎಂದು ಶಾಸನಗಳಿಂದ ತಿಳಿಯಬಹುದಾಗಿದೆ. ಇವರ ಆಳ್ವಿಕೆಯಲ್ಲಿ ತೆರಿಗೆಯಿಂದ ವಿನಾಯಿತಿ ಇತ್ತು.
ಸವಿತಾ ಸಮಾಜದವರು ಸೌಂದರ್ಯ, ಶುಚಿತ್ವ, ಹಾಗೂ ಆರೋಗ್ಯದ ಮೌಲ್ಯಗಳನ್ನು ಬೋಧಿಸಿದವರು. ಸವಿತಾ ಎಂದರೆ ಸೂರ್ಯ. ಸೂರ್ಯನು ಹೇಗೆ ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಿ ಬೆಳಕು ನೀಡುತ್ತಾನೋ ಹಾಗೆಯೇ ಸವಿತಾ ಮಹರ್ಷಿಗಳು ಮಾನವನ ಅಜ್ಞಾನವನ್ನು ಹೋಗಲಾಡಿಸಿ ಕಾಯಕದ ಮಹತ್ವವನ್ನು ಸಾರಿದವರು. ದೇವತೆಗಳ ಶಿಲ್ಪಿಯಾದ ವಿಶ್ವಕರ್ಮರವರ ಸಮಕಾಲೀನರಾಗಿ ಸೃಷ್ಟಿಯ ಸೌಂದರ್ಯವನ್ನು ವರ್ಧಿಸುವ ಹೊಣೆಯನ್ನು ಇವರು ಹೊತ್ತಿದ್ದರು. ಸವಿತೃ ದೇವನ ಅಂಶದಿಂದ ಜನಿಸಿದ ಇವರು ಹುಟ್ಟಿನಿಂದಲೇ ದಿವ್ಯತೇಜಸನ್ನು ಹೊಂದಿದ್ದರು. ಅವರ ತಪಸ್ಸಿನ ಶಕ್ತಿ ಎಷ್ಟಿತ್ತಂದರೆ, ದೇವತೆಗಳು ಸಹ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇವರ ಬಳಿ ಆಗಮಿಸುತ್ತಿದ್ದರು. ಸವಿತೃ ಎಂದರೆ ಪ್ರೇರೇಪಿಸುವವನು ಅಥವಾ ಜಗತ್ತನ್ನು ಬೆಳಗುವವನು ಎಂದರ್ಥ.
ಅಂದಿನ ಕಾಲದಲ್ಲಿ ಕ್ಷೌರಿಕರು ಕೇವಲ ಕೇಶ ವಿನ್ಯಾಸಕರಲ್ಲದೆ ನಾಡಿವಿಜ್ಞಾನ ಮತ್ತು ಆಯುರ್ವೇದದಲ್ಲಿ ಪರಿಣಿತರಾಗಿದ್ದರು. ಸವಿತಾ ಮಹರ್ಷಿರವರ ಹೆಸರು ವೇದಗಳ ಕಾಲದಲ್ಲಿ ಗಾಯತ್ರಿ ಮಂತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಸವಿತೃ ದೇವನ ಆರಾಧನೆಯು ಬುದ್ಧಿಯನ್ನು ಪ್ರಚೋದಿಸುತ್ತದೆ ಎಂಬ ನಂಬಿಕೆ ಇದೆ. ಸೂರ್ಯನ ಕಿರಣಗಳಿಂದ ರೋಗಗಳನ್ನು ಗುಣಪಡಿಸುವ ಸೌರ ಚಿಕಿತ್ಸೆಯ ಬಗ್ಗೆ ಇವರು ಅರಿವು ಮೂಡಿಸಿದ್ದರು. ಇತರರ ಸೇವೆ ಮಾಡುವುದೇ ಪರಮಾತ್ಮನ ಸೇವೆ ಎಂದು ಮಹರ್ಷಿಯವರು ನಂಬಿದ್ದರು.
ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ರಾಜ ಮಹಾರಾಜರಿಂದ ಸಾಮಾನ್ಯರವರೆಗೆ ಸವಿತಾ ಮಹರ್ಷಿರವರ ಸೇವೆಯನ್ನು ಪಡೆಯುತ್ತಿದ್ದರು. ಇದು ಅವರ ವೃತ್ತಿಯ ಸರ್ವವ್ಯಾಪ ಕಲೆಯನ್ನು ತೋರಿಸುತ್ತದೆ. ಅವರು ಕಲಿಸಿದ "ನೈರ್ಮಲ್ಯ ಪಾಠವೇ" ಇಂದಿನ ಆಧುನಿಕ ವೈದ್ಯಕೀಯ ಶಾಸ್ತ್ರಕ್ಕೆ ಅಡಿಪಾಯ ಎನ್ನಬಹುದು. ಗಾಯತ್ರಿ ಮಂತ್ರವು ಸವಿತಾ ದೇವನಿಗೆ ಸಮರ್ಪಿತವಾಗಿದೆ."ತತ್ ಸವಿತುರ್ ವರೇಣ್ಯಂ" ಎಂದರೆ ಆ ಸವಿತೃ ದೇವನ ಪ್ರಕಾಶವನ್ನು ನಾವು ಧ್ಯಾನಿಸುತ್ತೇನೆ ಎಂದರ್ಥ. ಸವಿತಾ ಮಹರ್ಷಿಗಳು ಈ ಮಂತ್ರದ ಶಕ್ತಿಯನ್ನು ಜಗತ್ತಿಗೆ ಸಾರಿದರು. ಬುದ್ಧಿ ಶಕ್ತಿಯನ್ನು ಪ್ರಚೋದಿಸುವ ಏಕಾಗ್ರತೆಯನ್ನು ಹೆಚ್ಚಿಸುವ ಮತ್ತು ಆತ್ಮ ಬಲವನ್ನು ವೃದ್ಧಿಸುವ ತತ್ವವೇ ಸವಿತಾ ತತ್ವವಾಗಿದೆ .
ಸವಿತಾ ಮಹರ್ಷಿಗಳ ಜೀವನ ಪದ್ಧತಿಯು ಅತ್ಯಂತ ಶಿಸ್ತಿನಿಂದ ಕೂಡಿತ್ತು. ಮುಂಜಾನೆಯ ಸೂರ್ಯೋದಯಕ್ಕೆ ಮುನ್ನ ಎದ್ದು ಸೂರ್ಯ ಪಾಸನೆ ಮಾಡುವುದು ಶುದ್ಧ ಮನಸ್ಸಿನಿಂದ ಕಾಯಕದಲ್ಲಿ ತೊಡಗುವುದು. ಅವರ ದಿನಚರಿ ಆಗಿತ್ತು. ಅವರ ಅನುಯಾಯಿಗಳು ಇಂದಿಗೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುತ್ತಾರೆ. "ಶುಚಿತ್ವವೇ ದೇವರು" ಎಂಬುವುದು ಇವರ ಜೀವನದ ಮೂಲ ಮಂತ್ರವಾಗಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಫ್ಯಾಷನ್ ಮತ್ತು ಸೌಂದರ್ಯವರ್ಧಕಗಳ ಉದ್ಯಮ ವಾಗಿದೆ. ಆದರೆ ಇದರ ಮೂಲ ಬೇರುಗಳು ಸವಿತಾ ಮಹರ್ಷಿಗಳು ಹಾಕಿ ಕೊಟ್ಟ ತಳಹದಿಯಲ್ಲಿವೆ. ಅವರು ಕಲಿಸಿದ ಕೇಶ ಕಲೆ ಮತ್ತು ಶರೀರ ವಿಜ್ಞಾನವು ಇಂದು ಹೊಸ ರೂಪ ಪಡೆದಿದೆ ಅವರ ತಾಳ್ಮೆ, ಕೌಶಲ್ಯ ಮತ್ತು ಸೇವಾ ಮನೋಭಾವವು ಇಂದಿನ ವೃತ್ತಿಪರರಿಗೆ ಮಾದರಿಯಾಗಿದೆ.
ಸವಿತಾ ಮಹರ್ಷಿಗಳು ಭಾರತೀಯ ಸಂಸ್ಕೃತಿಯ ಅಪ್ರತಿಮ ರತ್ನ. ಅವರು ಕಾಯಕ ಮತ್ತು ಜ್ಞಾನದ ನಡುವೆ ಸಮತೋಲನವನ್ನು ತಂದವರು. ಅವರ ಜೀವನ ಶೈಲಿಯು ನಮಗೆ ಕಲಿಸುವ ಪಾಠವೆಂದರೆ ಮಾಡುವ ಕೆಲಸ ಸಣ್ಣದಿರಲಿ ಅಥವಾ ದೊಡ್ಡದಿರಲಿ ಅದನ್ನು ಭಕ್ತಿಯಿಂದ ಮತ್ತು ಕಲಾತ್ಮಕವಾಗಿ ಮಾಡಿದರೆ ಅದು ದೇವರಿಗೆ ಸಲ್ಲಿಸುವ ಪೂಜೆಯಾಗುತ್ತದೆ. "ಸವಿತಾ ಬಂದು ನಾವೆಲ್ಲ ಒಂದು" ಎಂದು ದಿನಾಂಕ 25.01.2026ರ ರವಿವಾರದಂದು ಶ್ರೀ ಶ್ರೀ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಸವಿತಾ ಮಹರ್ಷಿರವರ ಆಶೀರ್ವಾದ ಸಮಾಜದ ಮೇಲೆ ಸದಾ ಇರಲಿ ಅವರ ತತ್ವಗಳು ಎಲ್ಲರನ್ನು ಸದಾ ಸನ್ಮಾರ್ಗದಲ್ಲಿ ನಡೆಸಲಿ ಸವಿತಾ ಸಮಾಜವು ಮುನ್ನಡೆಯಲ್ಲಿ ಎಂದು ಆಶಿಸುವೆ.
ಗ್ರಂಥ ಋಣಿ
೧. ಸವಿತಾ ಮಹರ್ಷಿಯ ಚರಿತ್ರೆ.
ಸಂ. ವೆಂಕಟಾಚಲಪತಿ ಪಿ.ಬಿ
ಡಾ. ನಾಗಪ್ಪ ಟಿ ಗೋಗಿ
ಸಹ ಪ್ರಾಧ್ಯಾಪಕರು ,ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ
