ಕೋಲ ಶಾಂತಯ್ಯ

ಸುಖದುಃಖ ಸತಿ ಪುರುಷಂಗೂ ಸರಿ.
ಗತಿ ಭೇದ ಕರ್ತೃ ಭೃತ್ಯಂಗೂ ಸರಿ.
ನೀರು ನೆಲದಂತೆ, ಸಾರ ಸುಧೆಯಂತೆ
ಭಕ್ತ ಜಂಗಮದ ಇರವು. ಕರ್ಪೂರ
ಉರಿಯಂತೆ ಇದು ನಿಶ್ಚಯ.
ನಿನ್ನ ನೀನರಿ, ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗ ಸಂಗ
*ಕೋಲ ಶಾಂತಯ್ಯ*
*ವಚನ ಅನುಸಂಧಾನ*
ಶರಣರ ವಚನಗಳನ್ನು ವರ್ತಮಾನದ ಬದುಕಿನ
ಗತಿಯಲ್ಲಿಟ್ಟು; ಅಂಗಭಾವದ ಅರಿವಿನ ಮಿತಿಗೆ ಒಗ್ಗಿಸಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ
ಮತ್ತು ಮನಸ್ಸಿನ ಲಿಂಗಭಾವಕ್ಕೆ ವಚನಾಶಯವು ದಕ್ಕುವ ಹಾಗೆ ಪರಿಶೋಧಿಸಿ ಚಿಜ್ಯೋತಿ ಬೆಳಗನ್ನ ಅನುಭವಿಸುವಂತೆ, ವಚನ ಪಚನ ಪರಿಣಾಮದ ಜಂಗಮ ಭಾವದಲ್ಲಿ ಅನುಭಾವ ವೇದ್ಯವಾಗುವ ಹಾಗೆ ದಿವ್ಯಾನಂದದ ಸುಧೆಯನ್ನ ಸೂರೆಗೊಂಡು ಸುಖಿಸಲು ಸಾಧ್ಯವಾಗುವ ಹಾಗೆ ಅನುಸಂಧಾನ ಮಾಡಿ ಅನುಭೂತಿಯನ್ನು ಹೊಂದಲು ಅವಕಾಶ ಮಾಡಿ ಕೊಡಬೇಕಾದಂಥಾ ತುರ್ತಿನ ದರ್ದಂತೂ ಹಿಂದೆಂದಿಗಿಂತಲೂ ಇಂದಿನ ಆಧುನಿಕ ಬದುಕಿನ
ಅತ್ಯಗತ್ಯವಾಗಿದೆ. ಶರಣರ ತತ್ವ ಸಿದ್ಧಾಂತಗಳನ್ನು ಇಂಬಿಟ್ಟುಕೊಂಡ ವಚನಗಳು ಪ್ರತಿಬಿಂಬಿಸುವ ವೈಚಾರಿಕ ವೈಜ್ಞಾನಿಕ ಸಾಮಾಜಿಕ ನೈತಿಕ ಹಾಗೂ ಸಾಂಸ್ಕೃತಿಕ ಕಾಳಜಿಯ ಕಷಾಯವನ್ನು ಸೋಸಿ, ಜನಮಾನಸಕ್ಕೆ ಮುತ್ತಿದ ಕತ್ತಲೆಯ ಕಾಯಿಲೆಯ ಕಳೆಯಲು ಕರುಣಿಸಿ ಕುಡಿಸಬೇಕಾಗಿದೆ.ಹಾಗಾಗಿ ವಚನಗಳನ್ನು ಧಾರ್ಮಿಕ ನೆಲೆಯಲ್ಲಿ ಮಾತ್ರವೇ ಇಟ್ಟು ನೋಡಿ ಕೈಮುಗಿದು ಕಣ್ಮುಚ್ಚಿದ್ರೆ ಶರಣರ ನಿಜವಾದ ವಚನಾಶಯ ಖರೇನ ಪ್ರಯೋಜನಕ್ಕೆ ಬಾರದೇ ಹೋಗುತ್ತದೆ. ಆದ್ದರಿಂದ ಅದನ್ನು ಈಗ ಪಕ್ಕಕ್ಕಿಟ್ಪು ಅನುಸಂಧಾನ ಮಾಡಿ ನೋಡೋಣ.
*#ಸುಖದುಃಖ ಸತಿ ಪುರುಷಂಗೂ ಸರಿ.*
*ಗತಿ ಭೇದ ಕರ್ತೃ ಭೃತ್ಯಂಗೂ #ಸರಿ.*
ಭವದ (ಭಕ್ತಿಯ) ಭೌತಿಕ ಬದುಕಿನಲ್ಲಿ ಪಂಚಭೂ ತಗಳ ಕಾರಣದಿಂದಾಗಿ ಬರುವಂತಹ ಐಹಿಕದ ಸುಖದುಃಖಗಳು ಸತಿ(ಪುರುಷ)ಪತಿಗಳಿಬ್ಬರಿಗೂ ಯಾವ ತರತಮವಿಲ್ಲದೇ ನಿಸರ್ಗ ಸಹಜವಾಗಿ ಅದು ಸರಿಸಮನಾಗಿ ಹಂಚಿಕೆಯಾಗಿ ಬರುತ್ತವೆ. ಹಾಗೆಯೇ ಕರ್ತೃ(ಒಡೆಯ)ನಿಗೂ ಮತ್ತು ಭೃತ್ಯ (ಸೇವಕ)ನಿಗೂ ಕೂಡಾ ಯಾವುದೇ ಭೇದ ಭಾವ ಇಲ್ಲದೆ ಸರಿ ಸಮನಾಗಿ ಸ್ಥಿತಿ ಗತಿ ಇರುತ್ತದೆ ಎಂಬ ನಿಶ್ಚಿತ ನಿಲುವು ಎನ್ನುವುದು ಶರಣರದ್ದಾಗಿದೆ.
*#ನೀರು ನೆಲದಂತೆ*, *ಸಾರ ಸುಧೆಯಂತೆ*
*ಭಕ್ತ ಜಂಗಮದ ಇರವು.* *ಕರ್ಪೂರ*
*ಉರಿಯಂತೆ ಇದು #ನಿಶ್ಚಯ.*
ಮಳೆಯ ಹನಿ ಭೂಮಿಯ ತಾಗುವ ಮೊದಲು ಅದಕ್ಕೆ ರುಚಿ ಬಣ್ಣ ಇರುವುದಿಲ್ಲ.ಆದರೆ ಮಳೆಯ ಹನಿ ಮಣ್ಣು ಸೇರಿದಂತೆ ಮಣ್ಣಿನ ರುಚಿ ಹಾಗೂ ಬಣ್ಣವನ್ನು ಒಳಗೊಂಡು ಹರಿಯುವುದು. ಇಲ್ಲಿ ನೀರು ನೆಲದಂತೆ ಅಂದ್ರೆ ಅವುಗಳ ಸಾಂಗತ್ಯದಂ ತೆ ಉಪ್ಪು ಅಥವಾ ಸಿಹಿಯ ಸ್ವಾದವನ್ನು ತಾಳುತ್ತ
ದೆ. ಬೀಜ ಮೊಳೆಯಲು ನೀರು ನೆಲದ ಸಾಂಗತ್ಯ ಅಗತ್ಯವಿದೆ.ಅದರಂತೆ; ಸಾರ ಅಂದರೆ ಅರ್ಥವು ಅದು ಹಣ್ಣಿನಂಥ ವಸ್ತುವಿನದ್ದು ಅಥವಾ ಪದದ ರುಚಿಯದ್ದು ಇಲ್ಲವೆ ನಾಮದ ಸಾರವೇ ಆಗಿರಲಿ ಅದು ಸುಧೆಯ ಸ್ವಾದದಂತೆ ಸ್ವಾದಿಷ್ಟವಾಗಿರುತ್ತ ದೆ. ಈ ಪದ ದ್ವಯಗಳ ಪರಿಣಾಮ ಅನನ್ಯವಾದ ಅವಿನಾಭಾವದಂತೆ, ಭಕ್ತನ ಮತ್ತು ಜಂಗಮದ ಸಾಂಗತ್ಯ ಸಂಬಂಧವು ಅಷ್ಟು ಗಾಢವಾಗಿರುತ್ತದೆ
ಬಂಧುರವಾಗಿರುತ್ತದೆ ಎಂದು ವಚನಕಾರ ಶರಣ ಹೇಳಿದ್ದಾರೆ. ಇದನ್ನು ಕರ್ಪೂರ ಮತ್ತು ಉರಿಯ ಪರಸ್ಪರ ಅರ್ಥಪೂರ್ಣ ಸಮರ್ಪಣೆಜೊತೆಯಲ್ಲಿ ನಿಶ್ಚಿತಗೊಳಿಸಿ ಕಣ್ಮನಕ್ಕೆ ತಾಗುವಂತೆ ಹೇಳಿದ್ದಾರೆ
*#ನಿನ್ನ ನೀನರಿ, ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗ #ಸಂಗ*
ಮೇಲಿನ ವಚನದ ಸಾಲಿನಲ್ಲಿ ಹೇಳಿರುವ ಹಾಗೆ ನಿನ್ನ ನೀನರಿ ಎಂದರೆ ಭಕ್ತನಾದವನು ತನ್ನ ಒಳಗೆ ಇರುವ ಪ್ರಾಣ ಜಂಗಮವನ್ನು; ನೀರು ಮತ್ತು ನೆಲದ ಸಾಂಗತ್ಯ, ಸಾರ ಮತ್ತು ಸುಧೆಯಂತೆಂದು ಅರಿತುಕೊಂಡು ಬೆರೆತರೆ ಆಗ ಆತ ತನ್ನ ತಾನೇ ಅರಿತಂತೆ ಎಂದು ಹೇಳಿದ್ದಾರೆ. ಮುಂದುವರಿದು ಕರ್ಪೂರ(ಭಕ್ತ) ಉರಿಯ(ಜಂಗಮ)ದಲ್ಲಿ ಬೆರೆತು ಕರಗಿ ಪರಿಮಳಿಸಿ ಉರಿಯಲ್ಲಿ ಉರಿಯಾಗಿಯೇ ಹೋಗುಂತೆ ಪುಣ್ಯಾರಣ್ಯ ದಹನ ಭೀಮೇಶ್ವರ ಲಿಂಗ ನಿರಂಗ ಸಂಗ ಹೊಂದಿರುವ ಹಾಗೆ ಎಂದು ಇಲ್ಲಿ ವಚನಕಾರ ಶರಣರಾದ ಕೋಲ ಶಾಂತಯ್ಯ ನವರು ಭಕ್ತನ ಚಿತ್ಚೈತನ್ಯವು ವಿಶ್ವ ಚೈತನ್ಯವಾದ ಚಿನ್ಮಯದೊಂದಿಗೆ ಐಕ್ಯವಾಗಿ ತಾನೇ ಚಿನ್ಮಯ ನಾದಂತೆ ಆಗುವನು ಎಂದು ಶರಣ ಸಂಸ್ಕೃತಿಯ ಜ್ಯೋತಿ ಮುಟ್ಟಿ ಜ್ಯೋತಿ ಆದಂತೆ ಎನ್ನುವುದನ್ನು ಈ ವಚನದಲ್ಲಿ ನಿದರ್ಶನಗೊಳಿಸಿ ಹೇಳಿದ್ದಾರೆ.
*ಅಳಗುಂಡಿ ಅಂದಾನಯ್ಯ*