ಹೊಲಗಳಿಗೆ ದಾರಿ ವ್ಯವಸ್ಥೆ ಮಾಡಿಕೊಡಿ- ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ಸೂಚನೆ

ಹೊಲಗಳಿಗೆ ದಾರಿ ವ್ಯವಸ್ಥೆ ಮಾಡಿಕೊಡಿ- ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ಸೂಚನೆ

ಹೊಲಗಳಿಗೆ ದಾರಿ ವ್ಯವಸ್ಥೆ ಮಾಡಿಕೊಡಿ- ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ಸೂಚನೆ-

ಗ್ರಾಮ ಸಂಚಾರದಲ್ಲಿ ರೈತರ ಕೃಷಿ ಜಮೀನುಗಳಿಗೆ ದಾರಿ ಸಮಸ್ಯೆಯ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಗ್ರಾಮಸ್ಥರ ಸಹಯೋಗದೊಂದಿಗೆ ಸಮಸ್ಯೆ ಇತ್ಯರ್ಥಪಡಿಸುವಂತೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗ್ರಾಮ ಸಂಚಾರದ ನಿಮಿತ್ತ ಜ.19ರಂದು ಕಮಲನಗರ ತಾಲ್ಲೂಕಿನ ಬೆಂಬ್ರಾ, ಕೋರೆಕಲ್, ಠಾಣಾ ಕುಶನೂರ, ನಿಡೋದಾ, ಹಾಲಹಳ್ಳಿ, ಬಳತ್(ಕೆ), ಬಳತ್(ಬಿ), ಸಂಗಮ್, ಖೇಡ್ ಹಾಗೂ ಕಾಳಗಾಪೂರ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ನೇರ ಸಂವಾದ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.

ಗ್ರಾಮಸ್ಥರು ಮತ್ತು ರೈತರು ತಮ್ಮ ಹೊಲಗಳಿಗೆ ತೆರಳಲು ಅನುಕೂಲವಾಗುವಂತೆ ಹಳೆಯ ದಾರಿಗಳನ್ನು ಪುನರುಜ್ಜೀವನಗೊಳಿಸಿ, ಅತಿಕ್ರಮಣಗೊಂಡಿರುವ ದಾರಿಗಳನ್ನು ತೆರವುಗೊಳಿಸುವುದು ಅಗತ್ಯವಾಗಿದೆ. ರೈತರು ಕೃಷಿ ಚಟುವಟಿಕೆ ನಡೆಸಲು ದಾರಿ ಸಮಸ್ಯೆಯಿಂದ ಅಡಚಣೆ ಎದುರಿಸಬಾರದು ಎಂಬುದು ನನ್ನ‌ ಆಶಯವಾಗಿದೆ ಎಂದು ಶಾಸಕರು ಹೇಳಿದರು. 

ಪ್ರತಿ ಗ್ರಾಮದಲ್ಲಿಯೂ ಹೊಲಗಳಿಗೆ ಹೋಗುವ ದಾರಿಗಳ ವಿವರಗಳನ್ನು ಸಂಗ್ರಹಿಸಿ, ಸಮಸ್ಯೆಯಿರುವ ಸ್ಥಳಗಳನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ರೈತರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅವರು ಸೂಚಿಸಿದರು.

 *ಗ್ರಾಮಸ್ಥರಲ್ಲಿ‌ ಮನವಿ:* ಎಲ್ಲ ರೈತರಿಗೂ ತಮ್ಮ ಹೊಲಗಳಿಗೆ ಹೋಗಲು ದಾರಿಯ ಅವಶ್ಯಕತೆಯಿರುತ್ತದೆ. ಆದರೆ ಕೆಲವರು ದಾರಿಯ ಅಗತ್ಯವಿದ್ದರೂ ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಕೆಲವರಿಂದಾಗಿ ಗ್ರಾಮದ‌ ಬಹಳಷ್ಟು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ರಸ್ತೆ ನಿರ್ಮಾಣಕ್ಕೆ ತೊಡಕಾಗಿ ಸಮಸ್ಯೆ ಎಂದಿನಂತೆ ಮುಂದುವರೆಯುತ್ತದೆ.

ಹಾಗಾಗಿ ಗ್ರಾಮಸ್ಥರು ಒಟ್ಟಾಗಿ ಕುಳಿತು ಆಂತರಿಕ ಸಮಸ್ಯೆಯನ್ನು ಬಗೆಹರಿಸಿಕೊಂಡು ಎಲ್ಲರ ಒಪ್ಪಿಗೆ ಪಡೆದು ರಸ್ತೆ ನಿರ್ಮಿಸುವ ಪ್ರಸ್ತಾವನೆ‌ ಸಲ್ಲಿಸಿದಲ್ಲಿ ಭೂದಾಖಲೆಗಳ ಇಲಾಖೆಯಿಂದ ಸರ್ವೇ ಮಾಡಿಸಿ ಗ್ರಾಮ ಪಂಚಾಯಿತಿಯ ಮೂಲಕ ರಸ್ತೆ ನಿರ್ಮಿಸಲು ಕ್ರಮ ವಹಿಸಲಾಗುತ್ತದೆ‌. ಗ್ರಾಮಸ್ಥರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಶಾಸಕರು ತಿಳಿಸಿದರು.

ಗ್ರಾಮ ಸಂಚಾರದಲ್ಲಿ ಸಾರ್ವಜನಿಕರು ರಸ್ತೆ, ಕುಡಿಯುವ ನೀರು, ವಿದ್ಯುತ್, ವಸತಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಶಾಸಕರ ಗಮನಕ್ಕೆ ತಂದರು. ಪ್ರತಿಯೊಂದು ಅಹವಾಲಿಗೂ ಸ್ಪಂದಿಸಿದ ಶಾಸಕ ಪ್ರಭು ಬಿ. ಚವ್ಹಾಣ ಅವರು, ಸಮಸ್ಯೆ ಇತ್ಯರ್ಥಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಅಮಿತ ಕುಲಕರ್ಣಿ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾಯ ಕೌಟಗೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಲೋಕೋಪಯೋಗಿ ಉಲಾಖೆ ಎಇಇ ಪ್ರೇಮಸಾಗರ, ಪಂಚಾಯತ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಬಿಇಓ‌ ಬಿ‌.ಜೆ ರಂಗೇಶ, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ, ಸಿಡಿಪಿಓ ಇಮಲಪ್ಪ, ಎಡಿಎಲ್ಆರ್ ರಾಜಶ್ರೀ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ,‌ ಧನರಾಜ ವಡೆಯರ್, ಗಿರೀಶ ವಡೆಯರ್, ಮಂಜು ಸ್ವಾಮಿ, ಬಾಲಾಜಿ‌ ಠಾಕೂರ, ಸಂದೀಪ ಪಾಟೀಲ, ಶಿವಕುಮಾರ ಬಿರಾದಾರ, ಉದಯ ಸೋಲಾಪೂರೆ, ಪ್ರವೀಣ ಕಾರಬಾರಿ, ಯೋಗೇಶ ಬಿರಾದಾರ, ಶ್ರೀಮಂತ ಪಾಟೀಲ‌ ಸೇರಿದಂತೆ ಇತರರಿದ್ದರು.