ಬಾಲ ಭಾರತಿ ಶಾಲೆಯಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ : ವಿಜಯಭಾಸ್ಕರ
ಬಾಲ ಭಾರತಿ ಶಾಲೆಯಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ : ವಿಜಯಭಾಸ್ಕರ
ಸೇಡಂ.ಜ.19 ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆ ಶೈಕ್ಷಣಿಕವಾಗಿ ತನ್ನನ್ನು ತಾನು ಅರ್ಪಿಸಿಕೊಂಡಿದೆ. ಸೇಡಂ ತಾಲೂಕಿನ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ವು ಅನುಕೂಲರವಾಗುವ ನಿಟ್ಟಿನಲ್ಲಿ ಬಾಲ ಭಾರತಿ ವಿದ್ಯಾ ಮಂದಿರ ಪ್ರಾಥಮಿಕ ಶಾಲಾ ಶಿಕ್ಷಣ ನೀಡಿದೆ ಎಂದು ಪತ್ರಕರ್ತ ವಿಜಯಭಾಸ್ಕರರೆಡ್ಡಿ ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆರೇಬೊಮ್ಮನಹಳ್ಳಿ ಸಭಾಂಗಣದಲ್ಲಿ ನಡೆದ ಶ್ರೀ ಬಾಲ ಭಾರತಿ ವಿದ್ಯಾಮಂದಿರ ಪ್ರಾಥಮಿಕ ಶಾಲಾ 52 ನೇ ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ದೈವಿ ನೆಲೆಯಾದ ಶ್ರೀ ಕೊತ್ತಲ ಬಸವೇಶ್ವರ ಅಂಗಳದಲ್ಲಿ 52 ವರ್ಷಗಳ ಹಿಂದೆ ಪೂಜ್ಯ ಮಡಿವಾಳೇಶ್ವರ ಸ್ವಾಮಿಗಳು ಆರಂಭಿಸಿದ ಶಿಕ್ಷಣ ಸಂಸ್ಥೆ ಸಂಸ್ಥಾಪನಾ ಶಾಲೆ ಬಾಲಭಾರತಿ ವಿದ್ಯಾಮಂದಿರ ಅನೇಕ ವಿದ್ಯಾರ್ಥಿಗಳ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವಲ್ಲಿ ಅಭೂತಪೂರ್ವ ಪಾತ್ರ ವಹಿಸಿದೆ ಎಂದರು.
ಮಕ್ಕಳಲ್ಲಿ ವಚನಗಳ ಪಠಣ ಮಾಡಿಸುವ ಮೂಲಕ ಬಾಲ ಭಾರತಿ ಶಾಲೆಯ ಅಂಗಳದಲ್ಲಿ ನಿತ್ಯವೂ ಒಂದಿಲ್ಲೊಂದು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಿಂತನಾ ಕೂಟ ಹಮ್ಮಿಕೊಳ್ಳಲಾಗುತ್ತದೆ. ಶಾಲಾ ವಾತಾವರಣದಿಂದ ಅನೇಕ ಸಾಧಕರು ಹೊರಹೊಮ್ಮಿದ್ದಾರೆ. ಜೊತೆಗೆ ಸಂಸ್ಥೆಯ ನಿರಂತರ ಕಾಳಜಿಯಿಂದ ಹೆಚ್ಚಿನ ಮಕ್ಕಳು ಉನ್ನತ ಮಟ್ಟಕ್ಕೆ ಏರಿದ್ದಾರೆ ಎಂದರು.
ಶೈಕ್ಷಣಿಕ ಚಿಂತನಾ ಕೂಡ ಉಪನ್ಯಾಸ ನೀಡಿದ ಶಿಕ್ಷಕ, ಸಂಪನ್ಮೂಲ ವ್ಯಕ್ತಿ ಅಂಬಾರಾಯ ಧನಗರ ಮಾತನಾಡಿ, ಮಕ್ಕಳಲ್ಲಿ ಶಿಸ್ತು ಹಾಗೂ ಸಮಯ ಪಾಲನೆ ಮುಖ್ಯವಾದ ಅಂಶವಾಗಿದೆ. ಪ್ರಾತಃಕಾಲದಲ್ಲಿ ಎದ್ದು ಅಭ್ಯಾಸ ಮಾಡುವ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗಿರುತ್ತದೆ. ಧಾರವಾಹಿಗಳಿಂಸ ಹೊರಬಂದು ಮಕ್ಕಳ ಕಡೆ ಇಂದಿನ ಪೋಷಕರು ಗಮನ ನೀಡಬೇಕೆಂದು ಮಾರ್ಮಿಕವಾಗಿ ಹೇಳಿದರು.
ಇಂದಿನ ಮಕ್ಕಳು ಮೊಬೈಲ್ ಹಾಗೂ ಟಿವಿ ಗೀಳಿಗೆ ಬೀಳದೆ, ಪುಸ್ತಕಗಳ ಸ್ನೇಹ ಮಾಡಬೇಕಿದೆ. ಒಂದೊಳ್ಳೆ ಪುಸ್ತಕ ನಮ್ಮಜೀವನ ರೂಪಿಸಲು ಹೆಚ್ಚು ಸಹಾಯಕಾರಿಯಾಗುತ್ತದೆ. ಶಾಲೆಗೆ ಬರುವ ಮಕ್ಕಳು ಶಿಸ್ತು ಹಾಗೂ ಸಮಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ಸದಾನಂದ ಬೂದಿ ಮಾತನಾಡಿ, ಸಂಸ್ಥೆಯು ಮಡಿವಾಳ ಶ್ರೀಗಳ ಅಮೃಯ ಹಸ್ತದಿಂದ ಆರಂಭವಾಗಿ 52 ವರ್ಷಗಳ ಸುಧೀರ್ಘ ಕಾಲ ಮುನ್ನಡೆದುಕೊಂಡು ಬಂದಿದೆ. ಶಾಲೆಗೆ ಅನೇಕ ಸಾಧಕರು ಆಗಮಿಸಿ ಮಕ್ಕಳ ಮನೋವಿಕಾಸ ವೃದ್ಧಿಯಾಗುವಲ್ಲಿ ಪಾತ್ರವಹಿಸಿದ್ದಾರೆ ಎಂದರು.
ಶಾಲೆಯ ಮುಖ್ಯ ಗುರುಗಳಾದ ಲಿಂಗಪ್ಪ ಬಿರಾದಾರ ಪ್ರಾಸ್ತಾವಿಕ ಮಾತಗಳಾಡಿ ಶಾಲೆ ನಡೆದು ಬಂದ ದಾರಿಯ ಬಗ್ಗೆ ವಿವರಣೆ ನೀಡಿದರು. ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಮಕ್ಕಳ ಪೋಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಜೊತೆಗೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ವೇದಿಕೆ ಮೇಲೆ ಸಂಸ್ಕೃತ ಪಾಠಶಾಲಾ ಮುಖ್ಯ ಗುರು ಸಂಗಮೇಶ ಮೂಡಬೂಳ ಇದ್ದರು.
