ಶೀರೂರು ಶ್ರೀಗಳ ಪರ್ಯಾಯೋತ್ಸವ ಭಕ್ತಿ ಸಂಪನ್ನವಾಗಲಿ: ಡಾ.ಪೆರ್ಲ
ಶೀರೂರು ಶ್ರೀಗಳ ಪರ್ಯಾಯೋತ್ಸವ ಭಕ್ತಿ ಸಂಪನ್ನವಾಗಲಿ: ಡಾ.ಪೆರ್ಲ
ಕಲಬುರಗಿ : ಉಡುಪಿಯ ಶ್ರೀಕೃಷ್ಣ ಪೂಜಾ ಕೈಂಕರ್ಯ ನಡೆಸಲು ಜ.18 ರಂದು ಸರ್ವಜ್ಞ ಪೀಠವೇರಿದ ಯುವ ಸನ್ಯಾಸಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಮುಂದಿನ ಎರಡು ವರ್ಷಗಳ ಅವಧಿಯು ಭಕ್ತಿ ಸಂಪನ್ನತೆಯಿಂದ ನಾಡಿನ ಕೀರ್ತಿ ಹೆಚ್ಚಲಿ ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ.ಸದಾನಂದ ಪೆರ್ಲ ಭಕ್ತಿ ಶುಭಾಶಯ ಕೋರಿದ್ದಾರೆ.
ರಜತ ಪೀಠ ನಗರಿ ಉಡುಪಿಯಲ್ಲಿ ಪರ್ಯಾಯ ಪೀಠದಿಂದ ನಿರ್ಗಮಿತ ಯತಿ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಜ.18ರಂದು ಸುಪ್ರಭಾತದ ವೇಳೆ ಶೀರೂರುಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ ಎರಡು ವರ್ಷಗಳ ಪರ್ಯಾಯಕ್ಕೆ ಶುಭಾಶೀರ್ವಾದ ಮಾಡಿ ಹರಸಿದರು. ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳರವರ ಪ್ರಥಮ ಪರ್ಯಾಯ ಪರ್ವ ಆರಂಭಗೊಂಡಂತಾಗಿದೆ.ಪರ್ಯಾಯ ಅಧಿಕಾರ ಹಸ್ತಾಂತರದ ಭಾಗವಾಗಿ ಅಕ್ಷಯ ಪಾತ್ರೆ, ಸಟ್ಟುಗ, ಗರ್ಭಗೃಹದ ಕೀಲಿಕೈ ಪರ್ಯಾಯಶ್ರಿಗಳಿಗೆ ಹಸ್ತಾಂತರಿಸಿ ಶ್ರೀಕೃಷ್ಣ ಪೂಜಾ ಕೈಂಕರ್ಯದ ಅಧಿಕಾರವನ್ನು ಅಧಿಕೃತವಾಗಿ ವರ್ಗಾಯಿಸಿದರು.
ಪರ್ಯಾಯ ಪೂರ್ವ ಸಂಚಾರದ ವೇಳೆ ಕಲಬುರಗಿ ಶ್ರೀರಾಮ ಮಂದಿರಕ್ಕೆ ಆಗಮಿಸಿದ ಶೀರೂರು ಶ್ರೀಗಳು ಕಲಬುರಗಿಯ ಕೃಷ್ಣ ಭಕ್ತರಿಗೆ ಉಡುಪಿ ಕೃಷ್ಣ ಸದಾ ಸ್ವಾಗತಿಸಿ ಇಷ್ಟಾರ್ಥ ಅಭೀಷ್ಟೆ ಈಡೇರಿಸಲಿದ್ದಾನೆ. ಭಕ್ತ ಸಂಕುಲಕ್ಕೆ ಪರ್ಯಾಯ ಪೀಠದಿಂದ ಸದಾ ಸ್ವಾಗತ ಎಂದು ಆಹ್ವಾನ ಕೂಡಾ ನೀಡಿದ್ದರು.
ಪುತ್ತಿಗೆ ಮಠದ 30ನೆಯ ಯತಿಶ್ರೀ ಸುಗುಣೇಂದ್ರ ತೀರ್ಥರು ವಿಶ್ವಗೀತಾ ಪರ್ಯಾಯ ನಡೆಸಿ ಅಪೂರ್ವ ಕೆಲಸಗಳನ್ನು ಮಾಡಿ ಪ್ರಧಾನಿಯವರನ್ನು ಆಹ್ವಾನಿಸಿ ಲಕ್ಷ ಕಂಠ ಗೀತಾ ಪಾರಾಯಣ,ಕನಕನ ಕಿಂಡಿಗೆ ಕನಕ ಕವಚ ಹೀಗೆ ಅನೇಕ ಮಹತ್ವದ ಕೆಲಸಗಳಿಂದ ದಾಖಲೆ ಮಾಡಿದ್ದರು. ಶೀರೂರು ಮಠದ ಮುಂದಿನ ಎರಡು ವರ್ಷ ಶ್ರೀಕೃಷ್ಣ ಪೂಜಾ ಕೈಂಕರ್ಯ ಧಾರ್ಮಿಕ ಸಾಂಸ್ಕೃತಿಕ ಅನುಷ್ಠಾನದಿಂದ ಶ್ರೀಕೃಷ್ಣ ಮಠದ ಕೀರ್ತಿಯು ಅಷ್ಟ ದಿಕ್ಕುಗಳಿಗೆ ಪಸರಿಸಲಿ.ಕನ್ನಡ ನಾಡಿನ ಧಾರ್ಮಿಕ ಶ್ರದ್ಧಾ ಕೇಂದ್ರ ಜಗದಗಲ ಭಕ್ತಿ ಸಂಭ್ರಮದಿಂದ ಸಂಪನ್ನಗೊಳ್ಳಲಿ ಎಂದು ಡಾ.ಪೆರ್ಲ ಭಕ್ತಿ ಶುಭಾಶಯ ಕೋರಿದ್ದಾರೆ.
