ಹಿರಿಯ ಪುರಾತತ್ತ್ವ ಶಾಸ್ತ್ರಜ್ಞ ಡಾ. ಎಂ.ಎಸ್. ಕೃಷ್ಣಮೂರ್ತಿ ಅಭಿಪ್ರಾಯ ಕನಗನಹಳ್ಳಿ ಸನ್ನತಿ ವಿಶಿಷ್ಟ ಬೌದ್ಧ ಕೇಂದ್ರ
ಹಿರಿಯ ಪುರಾತತ್ತ್ವ ಶಾಸ್ತ್ರಜ್ಞ ಡಾ. ಎಂ.ಎಸ್. ಕೃಷ್ಣಮೂರ್ತಿ ಅಭಿಪ್ರಾಯ
ಕನಗನಹಳ್ಳಿ ಸನ್ನತಿ ವಿಶಿಷ್ಟ ಬೌದ್ಧ ಕೇಂದ್ರ
ಕಲಬುರಗಿ : ಭಾರತ ದೇಶದಲ್ಲಿಯೇ ಕನಗನಹಳ್ಳಿ ಸನ್ನತಿ ವಿಶಿಷ್ಟ ಬೌದ್ಧ ಕೇಂದ್ರವಾಗಿದೆ. ಇಲ್ಲಿನ ಬೌದ್ಧ ಮಹಾ ಸ್ತೂಫಗಳು ಮತ್ತು ಶಾಸನಗಳು ಬುದ್ಧನ ಜೀವನದ ಐತಿಹಾಸಿಕ ಪರಂಪರೆಯನ್ನು ಹೇಳುತ್ತವೆ. ಅಲ್ಲಿನ ಕುರುಹುಗಳು ನಮ್ಮೆಲ್ಲರಿಗೂ ಮುಂದಿನ ಭವಿಷ್ಯದ ಬಗ್ಗೆ ಭರವಸೆ ಮೂಡಿಸುತ್ತವೆ ಎಂದು ಮೈಸೂರಿನ ಹಿರಿಯ ಪುರಾತತ್ತ್ವಶಾಸ್ತ್ರಜ್ಞ ಡಾ. ಎಂ.ಎಸ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಕಲಬುರಗಿಯ ನಳಂದ ವಿಹಾರದ ಪಾಲಿ ಇನ್‌ಸ್ಟಿಟ್ಯೂಟ್ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ 'ಸನ್ನತಿ (ಕನಗನಹಳ್ಳಿ) ಬೌದ್ಧ ಕೇಂದ್ರದ ಸಾಂಸ್ಕೃತಿಕ ಆಯಾಮಗಳು' ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿ 1954 ರಲ್ಲಿ ಕಪಟರಾಳ ಕೃಷ್ಣರಾವ್ ಅವರು ಸನ್ನತಿಯ ಮಹತ್ವ ದಾಖಲೆಗಳನ್ನು ಶೋಧಿಸಿ ಅವುಗಳ ಮಹತ್ವವನ್ನು ದಾಖಲಿಸಿದ್ದಾರೆ. ಅಲ್ಲಿನ ಬಹಳ ಅಪರೂಪದ ವಸ್ತುಗಳು, ಶಿಲ್ಪಗಳು, ಬೌತಿಕ ಅವಶೇಷಗಳು ಮತ್ತು ಪುರಾವೆಗಳು ಬುದ್ಧನ ಜೀವನ ಮತ್ತು ಸಾಧನೆಗಳನ್ನು ಹೇಳುತ್ತವೆ. ‘ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ’ ಯೋಜನೆಗಾಗಿ ಸನ್ನತಿ ಭೇಟಿ ಸಂದರ್ಭದಲ್ಲಿ ಸಿಕ್ಕಿದ ಪಳಿಯುಳಿಕೆಗಳಲ್ಲಿ ಮಹತ್ವದ ಅಂಶಗಳು ದೊರಕಿವೆ ಎಂದರು.
ಸನ್ನತಿಯ ವಸ್ತುಗಳು ಮತ್ತು ಶಿಲೆಗಳ ಆಯಾಮ ಬಹಳ ದೊಡ್ಡದಿದೆ. ಪ್ರತಿ ಶಿಲೆಗಳ ಮೇಲೆ ಬುದ್ಧನ ಕುರಿತ ಹೆಳಿಕೆಗಳು, ಚಿತ್ರಗಳಿವೆ. ಸನ್ನತಿಯ ಶಿಲೆಗಳ ಮೇಲೆ ‘ರಾಯ ಅಶೋಕೋ’ ಎಂಬ ವಾಕ್ಯವಿದೆ. ಬಹುಶಃ ಅಶೋಕ ಸನ್ನತಿಗೆ ಬಂದಿರಬಹುದೆAಬ ಗೋಚರವಿದೆ. ಮೊದಲು ಹೀನಯಾನ ಸಂಸ್ಕೃತಿ, ಅನಂತರ ಮಹಾಯಾನ ಪಂಥ ಬೆಳೆದಿದೆ. ಅದು ಯಾವಾಗ ಬದಲಾಯಿತು ಎಂಬುದಕ್ಕೂ ಸಹ ಕುರುಹುಗಳು ಪತ್ತೆಯಾಗಿವೆ. ಬುದ್ಧನ ಹುಟ್ಟು, ಧ್ಯಾನ, ಶಾಂತಿ ಮಾರ್ಗ, ಪರಿನಿರ್ವಾಣ, ಧರ್ಮಚಕ್ರದ ನಿರೂಪಣೆ, ಅಶೋಕನ ಬೌದ್ಧಧರ್ಮ ಪ್ರಚಾರ, ಬ್ರಾಹ್ಮಿಲಿಪಿ ಮತ್ತಿ ಪಾಲಿ ಭಾಷೆಯಲ್ಲಿ ದಾಖಲಿರುವ ಬುದ್ಧನ ಜೀವನ ಚರಿತ್ರೆಯ ಅವಶೇಷಗಳ ಮತ್ತು ಕುರುಹುಗಳ ಸಂಗತಿಗಳನ್ನು ಛಾಯಾಚಿತ್ರಗಳನ್ನು ಪ್ರದರ್ಶಿಸಿ ಬೆಳಕು ಚೆಲ್ಲಿದರು. ಪುರಾತತ್ವ ಇಲಾಖೆ ಉತ್ಖನನ ಸಂದರ್ಭದಲ್ಲಿ ಸಂಗ್ರಹಿಸಿ ಪ್ರಕಟಿಸಿರುವ ಮಾಹಿತಿಗಳನ್ನು ವಿವರಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸನ್ನತಿ ಕೇಂದ್ರ ವಿಶ್ವದಲ್ಲಿಯೇ ಅತಿ ಹೆಚ್ಚಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರಖ್ಯಾತ ಹಂಪಿ ಕ್ಷೇತ್ರದಂತೆ ಬೌದ್ಧ ಕ್ಷೇತ್ರ ಸನ್ನತಿ ಕೂಡ ಪ್ರಸಿದ್ಧಿ ಪಡೆಯಬೇಕಿದೆ. ಸನ್ನತಿ ಕೇವಲ ಸ್ಥಳವಲ್ಲ. ಅದೊಂದು ಭಾರತೀಯರ ನಾಗರೀಕತೆ ಮತ್ತು ಪರಂಪರೆ. ಕಲ್ಯಾಣ ಕರ್ನಾಟಕ ಭಾಗದ ಸಂಪತ್ತು, ಸುಪ್ರಸಿದ್ಧ ಸ್ಥಳ, ಪ್ರೇಕ್ಷಣೀಯ ಸ್ಥಳವಾಗಿದೆ. ಈ ಕ್ಷೇತ್ರದ ಬಗ್ಗೆ ಹೆಚ್ಚು ಅಧ್ಯಯನ ಮತ್ತು ಸಂಶೋಧನೆಗಳು ಬೆಳಕು ಚೆಲ್ಲಬೇಕಿದೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್. ಟಿ. ಪೋತೆ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲಬುರಗಿಯಲ್ಲಿ ಮೇರು ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಕಾಳಜಿ ಮತ್ತು ಮುತುವರ್ಜಿಯಿಂದ ಸ್ಥಾಪನೆಗೊಂಡಿರುವ ಎರಡು ಸಂಸ್ಥೆಗಳು ಒಪ್ಪಂದದ ಮೂಲಕ ಪಾಲಿ ಮತ್ತು ಬೌದ್ಧ ಪಿಜಿ ಡಿಪ್ಲೊಮಾ ಕೋರ್ಸುಗಳನ್ನು ನಡೆಸುತ್ತಿದೆ. ಹದಿನೈದು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಾರ್ಯಾಗಾರ, ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ವರ್ಷದಿಂದ ಎಂಎ ಇನ್ ಪಾಲಿ ಮತ್ತು ಬೌದ್ಧ ಸ್ಟಡೀಸ್ ಆರಂಭಿಸಲು ಈಗಾಗಲೇ ಪಠ್ಯಕ್ರಮ ಸಿದ್ಧಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ನಳಂದ ವಿಹಾರದ ಪಾಲಿ ಇನ್‌ಸ್ಟಿಟ್ಯೂಟ್ ಹಾಗೂ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಅತಿಥಿ ಉಪನ್ಯಾಸಕರು, ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ಮತ್ತು ಮತ್ತಿತರರು ಭಾಗವಹಿಸಿದ್ದರು. ಸಂಗೀತ ವಿಭಾಗದ ಅಧ್ಯಾಪಕರಾದ ಡಾ. ಲಕ್ಷಿö್ಮಶಂಕರ ಜೋಷಿ, ಡಾ. ದಾನಮ್ಮ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಸಂಶೋಧನಾ ವಿದ್ಯಾರ್ಥಿ ಭಾಗ್ಯಶ್ರೀ ನಿರೂಪಿಸಿದರು.
ವಿಚಾರ ಸಂಕಿರಣದ ಮೊದಲನೇ ಗೋಷ್ಠಿಯಲ್ಲಿ ಬೆಂಗಳೂರು ಐ.ಜಿ.ಎನ್.ಸಿ ಪೇಲಿಯೋ ಗ್ರಾಫಿಸ್ಟ್ ಡಾ. ಸದ್ಯೋಜಾತ ಭಟ್ಟ 'ಸನ್ನತಿ ಶಾಸನಗಳು ಲಿಪಿ-ಭಾಷೆ ಸ್ವರೂಪ ವಿಚಾರ, ಚಾಣಕ್ಯ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಅರ್ಜುನ್ ಭಾರದ್ವಾಜ್ 'ಸನ್ನತಿ ಶಿಲ್ಪ ವಾಸ್ತುಶಿಲ್ಪ ಲಕ್ಷಣ', ಸಂಶೋಧಕ ಡಾ. ಕೇಯೂರ ರಾಮಚಂದ್ರ ಕರಗುದರಿ 'ಸನ್ನತಿ ಜಾತಕಶಿಲ್ಪಗಳು ಕಥಾನಕದ ಹಿನ್ನೆಲೆಯಲ್ಲಿ' ಹಾಗೂ ವರ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸಿ. ಚಂದ್ರಪ್ಪ 'ಸನ್ನತಿ ಮತ್ತು ಅಶೋಕ ಸಂಬಂಧಗಳ ಸ್ವರೂಪ' ಕುರಿತು ಮಾತನಾಡಿದರು. ಎರಡನೇ ಗೋಷ್ಠಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ದೇವರ ಕೊಂಡಾರೆಡ್ಡಿ 'ಸನ್ನತಿ ಮತ್ತು ರಾಜಮನೆತನಗಳು', ಸಂಶೋಧಕ ಡಾ.ಎಸ್. ಚಂದ್ರಮೋಹನ್ 'ಸನ್ನತಿ ಮತ್ತು ಬೌದ್ಧ ಧರ್ಮ', ಕನ್ನಡ ಅಧ್ಯಯನ ಸಂಸ್ಥೆ ಅತಿಥಿ ಉಪನ್ಯಾಸಕ ಡಾ. ಎಂ.ಬಿ. ಕಟ್ಟಿ' ಸನ್ನತಿ ಮತ್ತು ಇತರ ಬೌದ್ಧ ಕೇಂದ್ರಗಳು' ಕುರಿತು ವಿಷಯ ಮಂಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ ಲಂಡನಕರ್ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿದರು. ನಳಂದ ವಿಹಾರದ ಪಾಲಿ ಇನ್‌ಸ್ಟಿಟ್ಯೂಟ್‌ನ ಗೌರವ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ. ಬಸವರಾಜ ಸಣ್ಣಕ್ಕಿ ಹಾಗೂ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ನಿರ್ದೇಶಕ ಹಾಗೂ ಕಲಾ ನಿಕಾಯದ ಡೀನ್ ಪ್ರೊ. ಎಚ್.ಟಿ. ಪೋತೆ ಉಪಸ್ಥಿತರಿದ್ದರು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಎರಡು ವರ್ಷಗಳ ಎಂಎ ಪಾಲಿ ಮತ್ತು ಬೌದ್ಧ ಸ್ಟಡೀಸ್ ಮತ್ತು ಒಂದು ವರ್ಷದ ಪಿಜಿ ಡಿಪ್ಲೊಮಾ ಕೋರ್ಸುಗಳನ್ನು ಕನ್ನಡ ಮತ್ತು ಇಂಗ್ಲೀಷ್ (ಡಿಸ್ಟೆನ್ಸ ಮೋಡ್) ಭಾಷೆಗಳಲ್ಲಿ ಆರಂಭಿಸಲು ಸಿದ್ಧತೆ ನಡೆದಿದೆ. ಬೇರೆ ವಿಶ್ವವಿದ್ಯಾಲಯಗಳಲ್ಲಿ ಈ ಅವಕಾಶ ಕಡಿಮೆಯಿದೆ. ಅಂತರರಾಷ್ಟ್ರೀಯ ಮತ್ತು ಹೊರ ರಾಜ್ಯದ ಆಸಕ್ತರು ಪಾಲಿ ಮತ್ತು ಬೌದ್ಧ ಸ್ಟಡೀಸ್ ಕೋರ್ಸುಗಳನ್ನು ಕಲಿಯಲು ಪ್ರೋತ್ಸಾಹ ನೀಡುವ ಉದ್ದೇಶವಿದೆ. ಈಗಾಗಲೇ ಅಧ್ಯಯನ ಮಂಡಳಿ ಸಭೆಯಲ್ಲಿ ಪಠ್ಯಕ್ರಮಕ್ಕೆ ಅಂತಿಮ ರೂಪ ನೀಡಲಾಗಿದೆ. ಹೆಚ್ಚಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಪಾಲಿ ಮತ್ತು ಬೌದ್ಧ ವಿಷಯಗಳು ಕಲಿಕೆಗೆ ಅವಕಾಶ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ಪಾಲಿ ಮತ್ತು ಬೌದ್ಧ ವಿಷಯ ಕುರಿತು ಅಂತರ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಲು ಯೋಜನೆ ರೂಪಿಸಲಾಗುವುದು.
ಪ್ರೊ. ಶಶಿಕಾಂತ್ ಎಸ್. ಉಡಿಕೇರಿ
ಕುಲಪತಿಗಳು ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ
