ನಗರದಲ್ಲಿ ಅಪರಾಜಿತ ಶಾಲೆಯ ವಾರ್ಷಿಕ ಕ್ರೀಡಾ ಮಹೋತ್ಸವ ಜರುಗಿತು
ನಗರದಲ್ಲಿ ಅಪರಾಜಿತ ಶಾಲೆಯ ವಾರ್ಷಿಕ ಕ್ರೀಡಾ ಮಹೋತ್ಸವ ಜರುಗಿತು
ಕಲಬುರಗಿ : ದಿನಾಂಕ 05-01-2026 ರಂದು ಕಲಬುರಗಿ ನಗರದ ಜೈ ಭವಾನಿ ಎಜುಕೇಶನ್ ಹಾಗೂ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಅಪರಾಜಿತ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಶಾಲೆಯ ವಾರ್ಷಿಕ ಕ್ರೀಡಾ ಮಹೋತ್ಸವ ಅತ್ಯಂತ ಉತ್ಸಾಹ ಹಾಗೂ ಶಿಸ್ತಿನಿಂದ ಜರುಗಿತು.
ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ವಕೀಲರಾದ ರಾಜಗೋಪಾಲ ಭಂಡಾರಿ ಅವರು ಸ್ವಾಗತಿಸಿದರು.
ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಖ್ಯಾತ ದೈಹಿಕ ನಿರ್ದೇಶಕರಾದ ಶ್ರೀ ಆನಂದ ಗುತ್ತೇದಾರ ಕ್ರೀಡಾ ಮಹೋತ್ಸವ
ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಕ್ರೀಡಾ ಕ್ಷೇತ್ರದ ಮೇಲಿನ ಆಸಕ್ತಿಯನ್ನು ಚಿಕ್ಕ ವಯಸ್ಸಿನಿಂದಲೇ ಬೆಳೆಸಬೇಕು. ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿದರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗುತ್ತದೆ ಹಾಗೂ ಅವರು ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಿ ಹೆಸರು ಮಾಡುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡ ಖ್ಯಾತ ಕರಾಟೆ ಪಟು ಹಾಗೂ ಮಾಧ್ಯಮ ವರದಿಗಾರರಾದ ಶ್ರೀ ಅಂಬರೀಶ ಜೋಗಿ ಮಾತನಾಡಿ, ಚಿಕ್ಕ ಮಕ್ಕಳ ಕೈಗೆ ಮೊಬೈಲ್ ಕೊಡುವುದನ್ನು ತಪ್ಪಿಸಿ, ತಮ್ಮ ಆಸಕ್ತಿಯ ಕ್ರೀಡೆಗಳಲ್ಲಿ ಭಾಗವಹಿಸಲು ಪಾಲಕರು ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳು ಶಾಲೆಗೆ, ದೇಶಕ್ಕೆ ಮತ್ತು ಪಾಲಕರಿಗೆ ಕೀರ್ತಿ ತರುತ್ತಾರೆ. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಇದು ಪಾಲಕರ ಮೊದಲ ಆದ್ಯತೆಯಾಗಬೇಕು ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪುಷ್ಪಾಂಜಲಿ ಆರ್. ಭಂಡಾರಿ ಕ್ರೀಡಾ ಮಹೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು–ಗೆಲುವಿಗಿಂತ ಸಕ್ರಿಯವಾಗಿ ಭಾಗವಹಿಸುವ ಮನೋಭಾವ ಮುಖ್ಯ. ನಿರಂತರ ಭಾಗವಹಿಸುವಿಕೆಯಿಂದಲೇ ಆಸಕ್ತಿ ಬೆಳೆಯುತ್ತಾ, ಮುಂದಿನ ದಿನಗಳಲ್ಲಿ ಜಯಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯ ವಿದ್ಯಾರ್ಥಿಗಳಾದ ವಿಕಿಲ್ ಮತ್ತು ಸಂಗೀತಾ ಅವರ ನೇತೃತ್ವದಲ್ಲಿ ಭವ್ಯ ಪಥಸಂಚಲನ ನಡೆಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಕುಮಾರಿ ಭೂಮಿಕಾ ಭಂಡಾರಿ ಅವರು ನಿಭಾಯಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಶ್ರೀಮತಿ ಭಾಗ್ಯಶ್ರೀ, ವಿಜಯಲಕ್ಷ್ಮಿ, ಸಾಕ್ಷಿ ಸೇರಿದಂತೆ ಇತರರು ಸಹಕರಿಸಿದರು. ಶಿಕ್ಷಣ ಪ್ರೇಮಿ ಮಹಾ ಪೋಷಕ ನ್ಯಾಯವಾದಿ ವಿನೋದಕುಮಾರ್ ಜನೆವರಿ ಪತ್ರಿಕ ಪ್ರಕಟಣೆಗೆ ತಿಳಿಸಿದ್ದಾರೆ.
