ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಯುಜಿಸಿ ನಿಯಮ ಉಲ್ಲಂಘನೆ ಗುಲ್ಬರ್ಗ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ವಿರುದ್ಧ ಗಂಭೀರ ಆರೋಪ
ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಯುಜಿಸಿ ನಿಯಮ ಉಲ್ಲಂಘನೆ
ಗುಲ್ಬರ್ಗ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ವಿರುದ್ಧ ಗಂಭೀರ ಆರೋಪ
ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ – ತನಿಖೆಗೆ ಒತ್ತಾಯ
ಕಲಬುರ್ಗಿ: 2025–26ನೇ ಸಾಲಿನ ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರ್ಗಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ಅನರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದರ ಪರಿಣಾಮವಾಗಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಮಾತೃ ಸ್ಪಂದನಾ ಸೇವಾ ಸಂಸ್ಥೆ (ರಿ), ಕಲಬುರ್ಗಿ ಹಾಗೂ ಮಾತೋಶ್ರೀ ಸಾವಿತ್ರಿಬಾಯಿ ಪುಲೆ ಪದವಿದರರ ಹಿತರಕ್ಷಣಾ ವೇದಿಕೆ ಗಂಭೀರ ಆರೋಪ ಮಾಡಿವೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾತೃ ಸ್ಪಂದನಾ ಸೇವಾ ಸಂಸ್ಥೆಯ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಸಿದ್ದೇಶ್ವರಿ ಪಾಟೀಲ ಅವರು, “ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಹಾಗೂ ಪತ್ರಿಕೋದ್ಯಮ ವಿಭಾಗದ ಸಂಯೋಜಕರಾದ ಡಾ. ಸುರೇಶ ಜಾಂಗೆ ಅವರು ಯುಜಿಸಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅನರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಅರ್ಹ ಅಭ್ಯರ್ಥಿಗಳು ಪದೇಪದೇ ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ” ಎಂದು ದೂರಿದರು.
ಅವರು ಮುಂದುವರೆದು, “ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ದಿವ್ಯನಿರ್ಲಕ್ಷದಿಂದಲೇ ಅರ್ಹ ಅಭ್ಯರ್ಥಿಗಳು ಕೆಲಸ ಕಳೆದುಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ 2024–25ರಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದ ಅಭ್ಯರ್ಥಿಗಳನ್ನೇ ಮುಂದುವರಿಸಲಾಗಿದೆ ಎಂದು ವಿವಿ ಅಧಿಕಾರಿಗಳು ಹೇಳುತ್ತಿದ್ದರೂ, ಆ ವರ್ಷ ಸೇವೆ ಸಲ್ಲಿಸಿದ ಡಾ. ಸಾಯಬಣ್ಣಾ ಈರಣ್ಣ ಅವರನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿದೆ. ಇದಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ” ಎಂದು ಹೇಳಿದರು.
2024–25ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಸಿದ್ಧಪಡಿಸಿದ್ದ ಮೊದಲ ನಾಲ್ಕು ಜನರ ಆಯ್ಕೆ ಪಟ್ಟಿಯಲ್ಲಿ ಡಾ. ಸಾಯಬಣ್ಣಾ ಈರಣ್ಣ ಅವರ ಹೆಸರು ಇದ್ದು, ನಂತರ ಸಿಂಡಿಕೇಟ್ ಸಭೆಯಲ್ಲಿ ಅಪೂರ್ಣ ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗಿದೆ. ಇದು ಗಂಭೀರ ಅಕ್ರಮ ಹಾಗೂ ಭ್ರಷ್ಟಾಚಾರದ ಸೂಚನೆ ಎಂದು ಅವರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಗೌರವಾನ್ವಿತ ನೂತನ ಕುಲಪತಿಗಳು ಹಾಗೂ ಸಿಂಡಿಕೇಟ್ ಸದಸ್ಯರು ನಿವೃತ್ತ ನ್ಯಾಯಾಧೀಶರು ಮತ್ತು ಸಿಂಡಿಕೇಟ್ ಸದಸ್ಯರನ್ನು ಒಳಗೊಂಡ ತನಿಖಾ ಸಮಿತಿಯನ್ನು ರಚಿಸಿ, ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಾದ ಎಲ್ಲಾ ಲೋಪದೋಷಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಯುಜಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಾಮಾಜಿಕ ನ್ಯಾಯ ಹಾಗೂ ಲಿಂಗ ಸಮಾನತೆಗೆ ಆದ್ಯತೆ ನೀಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಅನರ್ಹ ಅಭ್ಯರ್ಥಿಗಳಿಗೆ ಈಗಾಗಲೇ ನೀಡಿರುವ ಆದೇಶಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
“ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ವಿವಿಧ ಸಂಘಟನೆಗಳೊಂದಿಗೆ ಸೇರಿ ಕುಲಸಚಿವರು ಹಾಗೂ ವಿಭಾಗ ಸಂಯೋಜಕರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಯೋಗೇಶ್,ಪಲ್ಲವಿ ಪಾಟೀಲ (ಸೇಡಂ),ಡಾ. ಸಾಯಬಣ್ಣಾ ಈರಣ್ಣ ಗುಡುಬಾ ಉಪಸ್ಥಿತರಿದ್ದರು.
