ಟೆಂಗಳಿ ಗ್ರಾಮದಲ್ಲಿ ದೇಹಾಂಗದಾನ ಜಾಗೃತಿ ಕಾರ್ಯಕ್ರಮ
ಟೆಂಗಳಿ ಗ್ರಾಮದಲ್ಲಿ ದೇಹಾಂಗದಾನ ಜಾಗೃತಿ ಕಾರ್ಯಕ್ರಮ
ಕಲಬುರಗಿ, ಮಾ.2: ಜಿಲ್ಲೆಯ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಅಂಡಗಿ ಪ್ರತಿಷ್ಠಾನ ವತಿಯಿಂದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಲಿಂ. ಶಿವಶರಣಪ್ಪ ಅಂಡಗಿ ಅವರ ಪುಣ್ಯಸ್ಮರಣೆ ನಿಮಿತ್ತ “ದೇಹಾಂಗದಾನ ಜಾಗೃತಿ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಅಧ್ಯಕ್ಷ ಡಾ. ಶಿವಾನಂದ ಹೂಗಾರ ಮಾತನಾಡಿ, ಸಾವಿನ ನಂತರ ದೇಹವನ್ನು ಸುಟ್ಟು ಅಥವಾ ಮಣ್ಣಿನಲ್ಲಿ ಹೂಳಿ ನಾಶ ಮಾಡುವುದಕ್ಕಿಂತ ದೇಹಧಾನ ಮಾಡುವ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಬಹುದು ಎಂದು ತಿಳಿಸಿದರು. ದೇಹದಾನದಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ನೇತ್ರದಾನದ ಮೂಲಕ ಅಂಧರ ಬದುಕಿಗೆ ಬೆಳಕು ನೀಡಬಹುದಾಗಿದೆ. ಅಂಗಾಂಗ ದಾನದ ಮೂಲಕ ಸಾವಿನ ಅಂಚಿನಲ್ಲಿರುವ ಅನೇಕ ಜೀವಗಳನ್ನು ಉಳಿಸಬಹುದು ಎಂದು ಅವರು ಜಾಗೃತಿ ಮೂಡಿಸಿದರು. ಮರಣೋತ್ತರ ದೇಹ-ಅಂಗಾಂಗಗಳನ್ನು ನಾಶ ಮಾಡದೇ ದಾನ ಮಾಡುವ ಮೂಲಕ ಸಾವನ್ನು ಸಾರ್ಥಕಗೊಳಿಸಬೇಕೆಂದು ಕರೆ ನೀಡಿದರು.
ವಿಜ್ಞಾನಿ ಪ್ರೊ. ಬಿ.ಎ. ಪಾಟೀಲ ಮಹಾಗಾಂವ ಅವರು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಹಾಂಗದಾನ ನೋಂದಣಿ ಮಾಡಿಸಿಕೊಂಡವರು ನಿಧನರಾದ ನಂತರ ಅವರ ಅಂತಿಮ ಇಚ್ಛೆಯಂತೆ ದೇಹದಾನ ನೆರವೇರಿಸುವ ಹೊಣೆಗಾರಿಕೆ ಕುಟುಂಬ ಸದಸ್ಯರ ಮೇಲಿದೆ ಎಂದು ಹೇಳಿದರು.
ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಸಾರ್ಥಕಗೊಳಿಸಬೇಕೆಂದು ಅಭಿಪ್ರಾಯಪಟ್ಟರು.
ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿ,ಪುಣ್ಯಸ್ಮರಣೆ ಎಂಬ ನೆಪದಲ್ಲಿ ಹಿರಿಯ ಅನುಭವಿಗಳಿಂದ ಸತ್ತ ನಂತರವೂ ಸಮಾಜ ಸೇವೆ ಹೇಗೆ ಮಾಡಬಹುದು ಎಂಬ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ವೈಯಕ್ತಿಕ ಕಾರ್ಯಕ್ರಮವಾಗಿದ್ದರೂ ಸಾಮಾಜಿಕ ಕಳಕಳಿಯಿಂದ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಗಪ್ಪ ಮಂಠಾಳೆ, ಸಿದ್ರಾಮಪ್ಪ ಅಂಡಗಿ, ಶರಣಪ್ಪ ಕಲಬುರಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ಶರಣಪ್ಪಗೌಡ ಪಸಾರ, ರಮೇಶ್ ಮಂಠಾಳೆ, ಶೇಖರ ಲಾಳಿ ಮುತ್ತಗಿ, ಬಸವರಾಜ ಮುಲಗೆ, ಶ್ರೀಶೈಲ ದಮ್ಮುರೆ ಅಣೂರ, ವೈಜನಾಥ ಮಂಠಾಳೆ, ಅವಿನಾಶ ಅಂಡಗಿ, ಜಗನಾಥ ಪಟೇಲ, ಚಂದ್ರ ಕಲ್ಡಿ, ಬಸವರಾಜ ಬೈರಿ, ನಾಗಣ್ಣ ಪಟೇಲ, ಶಿವರಾಯ ನಾಗಶೆಟ್ಟಿ, ರಾಜು ಪಟೇಲ, ಬಸವರಾಜ ಪಟೇಲ, ಬಸವರಾಜ ದಣ್ಣೂರ, ಬಸವರಾಜ ಘಂಟಿ, ರಾಜೇಶ್ವರಿ ಅಂಡಗಿ, ಸುಜ್ಞಾನಮ್ಮ ಪಟೇಲ, ಹೇಮಾವತಿ ಆಂದೇಲಿ, ಜಯಶ್ರೀ ಮಂಠಾಳೆ, ರೇಖಾ ಅಂಡಗಿ, ನಿರ್ಮಲಾ ಅರಜಂಬಗಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
