ಭಾರತ ಸೌಹಾರ್ದತೆ, ಆಧ್ಯಾತ್ಮ ಚಿಂತನೆಯ ನೆಲ- ಡಾ. ಇಂದುಮತಿ ಪಾಟೀಲ ಅಭಿಪ್ರಾಯ

ಭಾರತ ಸೌಹಾರ್ದತೆ, ಆಧ್ಯಾತ್ಮ ಚಿಂತನೆಯ ನೆಲ- ಡಾ. ಇಂದುಮತಿ ಪಾಟೀಲ ಅಭಿಪ್ರಾಯ

ಡಾ. ಬರಗೂರು ರಾಮಚಂದ್ರಪ್ಪ ರಚನೆಯ 'ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಾ. ಇಂದುಮತಿ ಪಾಟೀಲ ಅಭಿಪ್ರಾಯ

ಭಾರತ ಸೌಹಾರ್ದತೆ, ಆಧ್ಯಾತ್ಮ ಚಿಂತನೆಯ ನೆಲ- 

ಕಲಬುರಗಿ : ಬಾರತದ ದೇಶ ಸೌಹಾರ್ದತೆ ಮತ್ತು ಆಧ್ಯಾತ್ಮ ಚಿಂತನೆಯ ನೆಲ. ನುಡಿದಂತೆ ನಡೆದ ಮಹಾಪುರುಷರ ಚರಿತ್ರೆ ಮತ್ತು ಪರಂಪರೆ ಸಮಾಜದಲ್ಲಿ ಸೈದ್ದಾಂತಿಕ ಮತ್ತು ಬಾವನಾತ್ಮಕತೆಯ ಕತ್ತಲು ಆವರಿಸಿ ಪ್ರಜ್ಞಾವಂತಿಕೆ ಮತ್ತು ಸೌಹಾರ್ದತೆ ಮರೀಚಿಕೆಯಾಗಿದೆ ಎಂದು ಫರಹತಾಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಇಂದುಮತಿ ಪಾಟೀಲ್ ಅಭಿಪ್ರಾಯಪಟ್ಟರು.  

ಕುಸನೂರು ರಸ್ತೆಯ ಜಿಡಿಎ ಬಡಾವಣೆಯಲ್ಲಿರುವ ಜನರಂಗ ಮತ್ತು ಬೆಂಗಳೂರಿನ ಜನ ಪ್ರಕಾಸನದ ಸಹಯೋಗದಲ್ಲಿ ಆಯೋಜಿಸಿದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರ 'ಸೌಹಾರ್ಧ ಭಾರತ ಸಮಾನತೆಯ ಸ್ನೇಹಿತ' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ ದೇಶದಲ್ಲಿ ಗುರು ಹಿರಿಯರ ಪರಂಪರೆಯಿದೆ. ಸ್ವಾಮಿ ವಿವೇಕಾನಂದ, ಪರಮಹಂಸ, ಕಡಕೊಳರ ಪರಂಪರೆ ಚರಿತ್ರೆ ಇರುವ ಈ ನೆಲದಲ್ಲಿ ದೇಶಕ್ಕಾಗಿ ದುಡಿದು ಪ್ರಾಣತ್ಯಾಗ ಮಾಡಿದ ಮಹನೀಯರ ಕೊಡುಗೆ ಸ್ಮರಿಕೊಳ್ಳಬೇಕು. ಸದೃಢ ಭಾರತದಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಸ್ನೇಹಪರತೆಯನ್ನು ಜನಮನದಲ್ಲಿ ಬಿತ್ತಬೇಕಿದೆ. ಸರ್ವರಲ್ಲೂ ಸಮಾನ ಮನಸ್ಸು ಬೆಳೆದರೆ ಮಾತ್ರ ಸೌಹಾರ್ದ ಪರಂಪರೆ ಉಳಿಸಲು ಸಾದ್ಯ ಎಂದರು. 

ಯುವ ಬರಹಗಾರ ಡಾ. ಪಿ. ನಂದಕುಮಾರ ಪುಸ್ತಕ ಕುರಿತು ಮಾತನಾಡಿ ಇಡೀ ಪ್ರಪಂಚ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಗ್ಗೆ ಮಾತನಾಡುತ್ತಿರುವ ಕಾಲದಲ್ಲಿ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ರಚಿಸಿರುವ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿಯಲ್ಲಿ ತೊಂಬತ್ತೆರಡು ಪುಟಗಳ ಪುಸ್ತಕದಲ್ಲಿ 10 ಲೇಖನಗಳಿವೆ. ಸ್ವಾಮಿ ವಿವೇಕಾನಂದರ ಅಮೇರಿಕಾದ ಚಿಕಾಗೋ ನಗರದಲ್ಲಿ ಹಿಂದುಧರ್ಮ ಕುರಿತ ಭಾಷಣ, ಡಾ. ಬಿ. ಆರ್. ಅಂಬೇಡ್ಕರ್ ಅವರ ಸಮಾನತೆ ಮತ್ತು ಸೌಹಾರ್ದತೆ, ದ್ವೇಷ ಬಿಟ್ಟು ದೇಶ ಕಟ್ಡು ಮತ್ತು ತಾಯ್ತನವನ್ನು ಕಳೆದುಕೊಳ್ಳುತ್ತಿರುವ ಸಮಾಜ ವಿಷಯಗಳು ವಾಸ್ತವ ಸಮಾಜದಲ್ಲಿನ ಜಾತಿ, ಅಸಮಾನತೆ, ದುರ್ಬಲ ಜನರ ಬಾದೆಗಳು ಮತ್ತು ಎಂಬತ್ತರ ದಶಕದಲ್ಲಿ ಎಚ್ಚರಗೊಂಡ ದಲಿತ ಚಳುವಳಿ ಪ್ರಖರತೆಯ ಅಂಶಗಳಿವೆ. ಭಾರತವನ್ನು ವಿಶ್ವಗುರು ಎಂದು ಹೇಳುತ್ತಿರುವ ಕಾಲದಲ್ಲಿ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಮರ್ಯಾದೆ ಹತ್ಯೆ, ಅತ್ಯಾಚಾರ ಪ್ರಕರಣಗಳು ನಿತ್ಯ ಸದ್ದು ಮಾಡುತ್ತಿವೆ. ಯುವಕರ ನ್ಯಾಯಯುತ ಚಳುವಳಿಗಳನ್ನು ಹತ್ತಿಕ್ಕಲಾಗುತ್ತಿದೆ. ಬಡವರು, ದುರ್ಬಲರು ಮತ್ತು ಅನಕ್ಷರಸ್ಥರನ್ನು ಭಾವನಾತ್ಮಕವಾಗಿ ಸೆಳೆದು ಬೌದ್ದಿಕತೆಯನ್ನು ಮರೆಮಾಚಲಾಗುತ್ತಿದೆ. ಸೌಹಾರ್ದ ಪರಂಪರೆಯನ್ನು ಆಳುವ ವರ್ಗದ ಒಡೆದಾಳುವ ನೀತಿ, ಧರ್ಮವನ್ನು ಮುನ್ನೆಲೆಗೆ ತಂದು ಯುವ ಜನರಲ್ಲಿ ಸಾಮರಸ್ಯ ಕೆಡಿಸುತ್ತಿರುವ ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಬರಗೂರು ಅವರು ನಿಜವಾದ ಸೌಹಾರ್ದ ಭಾರತವನ್ನು ಪರಿಚಯಿಸಿದ್ದಾರೆ ಎಂದರು. 

ಪತ್ರಗಾರ ಇಲಾಖೆಯ ಡಾ. ವೀರಶೆಟ್ಟಿ ಗಾರಂಪಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಸೌಹಾರ್ದತೆ ಮತ್ತು ನೈತಿಕ ಜವಾಬ್ದಾರಿಗಳು ಹೆಚ್ಚಾಗಿವೆ. ಹಿಂದು ಮುಸ್ಲಿಂ ಅರಸರ ಆಳ್ವಿಕೆ ಕಾಲದಲ್ಲಿಯೂ ಪರಸ್ಪರ ಸೌಹಾರ್ದತೆ ಬೆಳೆದಿರುವುದು ಇತಿಹಾಸದಲ್ಲಿ ದಾಖಲಾಗಿವೆ ಎಂದರು.  

ಜನರಂಗ ಅಧ್ಯಕ್ಷ ಶಂಕ್ರಯ್ಯ ಆರ್. ಘಂಟಿ ಅತಿಥಿಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬರಗೂರು ರಾಮಚಂದ್ರಪ್ಪ ಅವರ ಕೃತಿ ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ವರ್ತಮಾನದ ಜನರಲ್ಲಿ ಸೌಹಾರ್ದ ಭಾವನೆ ಬಿತ್ತಿ. ಬೆಳೆಸುವ ಮೂಲಕ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಬರಲೆಂದು ಆಶಿಸಿದರು.  

ಕಾರ್ಯಕ್ರಮದಲ್ಲಿ ಎಚ್.ಎಸ್. ಬಸವಪ್ರಭು, ಡಾ. ಅಜೀಮ್ ಪಾಷಾ, ಸುಭಾಶ್ಚಂದ್ರ ಗಂಧಿಗಡಿ, ಭೀಮಶೆಟ್ಟಿ ರುದ್ರಾಕ್ಷಿ, ಮಲ್ಲಿಕಾರ್ಜುನ ಎಸ್., ಬಸವರಾಜ ನೆಲೋಗಿ, ಅಬ್ದುಲ್ ವಹೀದ್ ಮುಂತಾದವರಿದ್ದರು. ಸಂಗಯ್ಯ ಹಳ್ಳದಮಠ ಶಿಶುನಾಳ ಷರೀಫರ ಅನುಭಾವಗೀತೆ ಹಾಡಿದರು. ಪತ್ರಿಕೋದ್ಯಮ ಉಪನ್ಯಾಸಕ ಡಾ. ಕೆ. ಎಂ. ಕುಮಾರಸ್ವಾಮಿ ವಂದಿಸಿದರು.