ಕಲಬುರಗಿಯಲ್ಲಿ ಮೊದಲ “ಕಲ್ಯಾಣ ಕರ್ನಾಟಕ ಚಿತ್ರಸಂತೆ” – ಫೆ.17ರಂದು ಅದ್ದೂರಿ ಆಯೋಜನೆ

ಕಲಬುರಗಿಯಲ್ಲಿ ಮೊದಲ “ಕಲ್ಯಾಣ ಕರ್ನಾಟಕ ಚಿತ್ರಸಂತೆ” – ಫೆ.17ರಂದು ಅದ್ದೂರಿ ಆಯೋಜನೆ

ಕಲಬುರಗಿಯಲ್ಲಿ ಮೊದಲ “ಕಲ್ಯಾಣ ಕರ್ನಾಟಕ ಚಿತ್ರಸಂತೆ” – ಫೆ.17ರಂದು ಅದ್ದೂರಿ ಆಯೋಜನೆ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಚಿತ್ರಕಲೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ನೆಲೆಯಾಗಿದೆ. ಆದಿನ ಚಿತ್ರಕಲೆಯ ಹೊರಹುಗಳಿಂದ ಹಿಡಿದು ಜನಪದ ಹಾಗೂ ಶಿಷ್ಯ ಸಂಪ್ರದಾಯದ ಭಿತ್ತಿಚಿತ್ರಗಳವರೆಗೆ ವೈವಿಧ್ಯಮಯ ಕಲಾಪರಂಪರೆಯನ್ನು ಹೊಂದಿರುವ ಈ ಭಾಗವು ವಿಜಯನಗರ ಶೈಲಿಯ ಬೇರುಗಳಿಂದ ಪ್ರೇರಿತವಾಗಿ ಕಿನ್ನಾಳ, ಗರುಡಾದ್ರಿ ಮುಂತಾದ ವಿಭಿನ್ನ ಶೈಲಿಗಳ ಮೂಲಕ ವಿಶಾಲ ವಿಸ್ತಾರ ಪಡೆದಿದೆ. ಸುರಪುರ ಸಂಸ್ಥಾನದ ಗರುಡಾದ್ರಿ ಕಲೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವುದು ಈ ನೆಲದ ಕಲಾಸಂಪತ್ತಿಗೆ ಸಾಕ್ಷಿಯಾಗಿದೆ.

ಈ ಹಿನ್ನೆಲೆಯಲ್ಲೇ ಕಲ್ಯಾಣ ಕರ್ನಾಟಕದ ಶ್ರೇಷ್ಠ ಕಲಾಗುರುಗಳ ಮಾರ್ಗದರ್ಶನದಲ್ಲಿ ಹಾಗೂ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮೊಟ್ಟ ಮೊದಲ ಬಾರಿಗೆ “1ನೇ ಕಲ್ಯಾಣ ಕರ್ನಾಟಕ ಚಿತ್ರಸಂತೆ”ಆಯೋಜಿಸಲಾಗುತ್ತಿದೆ.

ಡೆಕ್ಕನ್ ಆರ್ಟ್ ಸೊಸೈಟಿ (ರಿ), ಕಲಬುರಗಿ; ರೇಷ್ಮೆ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ), ಕಲಬುರಗಿ; ಕಲಾ ನಮನ ಟ್ರಸ್ಟ್ (ರಿ), ಕೊಂಕಲ್ (ಜಿಲ್ಲೆ: ಯಾದಗಿರಿ); ಅಲ್-ಅಮೀನ್ ಎಜುಕೇಶನ್ ಸೊಸೈಟಿ (ರಿ), ವಾಡಿ (ಜಿಲ್ಲೆ: ಕಲಬುರಗಿ); ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ (ರಿ), ಕಲಬುರಗಿ; ಸ್ನೇಹ ಲಲಿತಕಲಾ ಬಳಗ (ರಿ), ಬಳ್ಳಾರಿ; ಜನಕಲ್ಯಾಣ ಚಾರಿಟೇಬಲ್ ಟ್ರಸ್ಟ್ (ರಿ), ಕಲಬುರಗಿ; ಆರ್ಟ್ ಗ್ಯಾಲರಿ 2000, ಕಲಬುರಗಿ; ಫನ್ ಅಕಾಡೆಮಿ, ಕಲಬುರಗಿ; ಎನ್.ಕೆ. ಆರ್ಟ್ ಅಂಡ್ ಕಲ್ಚರಲ್ ಸೊಸೈಟಿ (ರಿ), ಕಲಬುರಗಿ; ಶ್ರೀ ಮಾರ್ಕೆಟಿಂಗ್ ಅಸೋಸಿಯೇಟ್ಸ್, ಕಲಬುರಗಿ ಹಾಗೂ ಬೀದರ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಚಿತ್ರಸಂತೆ ದಿನಾಂಕ 17 ಫೆಬ್ರವರಿ 2026ರಂದು ಬೆಳಿಗ್ಗೆ 11.00 ಗಂಟೆಗೆ ಕಲಬುರಗಿ ನಗರದ ಟೌನ್ ಹಾಲ್ ಎದುರುಗಡೆ ಇರುವ ಸಾರ್ವಜನಿಕ ಉದ್ಯಾನವನದಲ್ಲಿ ಉದ್ಘಾಟನೆಯಾಗಿ, ಸಂಜೆ 7.00 ಗಂಟೆಯವರೆಗೆ ನಡೆಯಲಿದೆ.

ಈ ಚಿತ್ರಸಂತೆಯಲ್ಲಿ ಭಾಗವಹಿಸುವ ದೃಶ್ಯಕಲಾವಿದರಿಗೆ ಉಚಿತ ಮಳಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಅವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು. ಅಲ್ಲದೆ ನಗರದ ಎಲ್ಲಾ ಶಾಲಾ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗಾಗಿ ಸ್ಥಳದಲ್ಲೇ ಚಿತ್ರ ಬರೆಹ ಸ್ಪರ್ಧೆ ಏರ್ಪಡಿಸಲಾಗಿದ್ದು, ಉತ್ತಮ ಚಿತ್ರಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು.

ಹಿರಿಯ, ಕಿರಿಯ, ಯುವ ಕಲಾವಿದರು ಹಾಗೂ ಕಲಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕಲಾಕೃತಿಗಳು ಜನಸಾಮಾನ್ಯರ ಮನಸೂರೆಗೊಳ್ಳುವಂತೆ ಮಾಡುವ ಮಹತ್ವದ ಉದ್ದೇಶದಿಂದ ಈ ಚಿತ್ರಸಂತೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲೆಯ ಸುವಾಸನೆ ಸವಿಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಹಿದ್ ಪಾಶಾ ಮಾಹಿತಿ ನೀಡಿದರು. ಆರ್. ಪಾಟೀಲ, ರಾಮಗೀರಿ ಪಾಟೀಲ, ರಾಜಶೇಖರ್ ರರ್ಯಾಮಣ್ಣ, ಎಸ್.ಎಂ. ನೀಲಾ ಹಾಗೂ ಎಸ್. ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.