ಜೇನುಹುಳಗಳ ದಾಳಿ: ಐವರು ರೈತರು ಗಂಭೀರ ಸ್ಥಿತಿಯಲ್ಲಿ
ಜೇನುಹುಳಗಳ ದಾಳಿ: ಐವರು ರೈತರು ಗಂಭೀರ ಸ್ಥಿತಿಯಲ್ಲಿ
ಗದಗ, ಫೆ. 25: ಗದಗ ಜಿಲ್ಲೆಯ ರೋಣ ತಾಲೂಕಿನ ಕುರುಡಗಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಹಾಗೂ ಮಹಿಳೆಯರ ಮೇಲೆ ಹೆಬ್ಬಿ ಜೇನುಹುಳಗಳ ಗುಂಪು ದಾಳಿ ನಡೆಸಿದ ಘಟನೆ ಸಂಭವಿಸಿದೆ.
ಹುಳಗಳ ದಾಳಿಯಿಂದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡವರ ವಿವರಗಳು ಹೀಗಿವೆ:
ನಬಿಸಾಬ್ ನದಾಫ್ (74), ಶಿವಗಂಗಾವ್ವ ಗವಾರಿ (66), ಈರವ್ವ ಹೈಗಾರ್ (50), ಕಸ್ತೂರಿವ್ವ ಗವಾರಿ (60) ಹಾಗೂ ವೀರೇಶ ಹೈಗಾರ (30).
ಗ್ರಾಮದ ಹಿರಿಯರು ಘಟನೆಯ ಕುರಿತು ಮಾಹಿತಿ ನೀಡಿದ್ದು, ಹೊಲದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಜೇನುಹುಳಗಳ ಗುಂಪು ಏಕಾಏಕಿ ದಾಳಿ ನಡೆಸಿದುದಾಗಿ ತಿಳಿಸಿದ್ದಾರೆ. ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಹೆಚ್ಚಿನ ಚಿಕಿತ್ಸಾ ನೆರವು ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳು ಕ್ರಮವಹಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
*ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ, ಗದಗ*
