ಗೋವಿಂದ ಸುಂದರಧಾಮ: ಭಕ್ತಿ–ಸಂಸ್ಕಾರ–ಶಾಂತಿಯ ಸಂಗಮ
ಗೋವಿಂದ ಸುಂದರಧಾಮ: ಭಕ್ತಿ–ಸಂಸ್ಕಾರ–ಶಾಂತಿಯ ಸಂಗಮ
ವೈಕುಂಠ ಏಕಾದಶಿ ಪ್ರಯುಕ್ತ ಬಸವನಗುಡಿಯ ಐತಿಹಾಸಿಕ ಸೋಸಲೆ ವ್ಯಾಸರಾಜ ಮಠದ ಶ್ರೀನಿವಾಸ ಸನ್ನಿಧಾನದಲ್ಲಿ ಡಿ.೩೦ರಂದು ವೈಭವೋಪೇತ ಮಹೋತ್ಸವ. ತಿರುಪತಿಯ ಪ್ರತಿರೂಪದಂತಿರುವ ಈ ಕ್ಷೇತ್ರದಲ್ಲಿ ಅಖಂಡ ಭಾಗವತ ಪ್ರವಚನ, ವಿಶೇಷ ಪೂಜೆಗಳ ಆಯೋಜನೆ.
ಬೇಡಿದ್ದನ್ನು ನೀಡುವ ಕಾಮಧೇನು, ಕೇಳಿದ್ದನ್ನು ಕೊಡುವ ಕಲ್ಪವೃಕ್ಷ, ಕಷ್ಟಕಾರ್ಪಣ್ಯಗಳನ್ನು ದೂರ ಮಾಡುವ ಕರುಣಾಮೂರ್ತಿ ಶ್ರೀವೆಂಕಟೇಶ್ವರನ ದರ್ಶನಕ್ಕಾಗಿ ತಿರುಪತಿಗೆ ದಿನನಿತ್ಯ ಭಕ್ತಸಾಗರವೇ ಹರಿದು ಹೋಗುತ್ತದೆ. ಆದರೆ ತಿರುಪತಿಯಷ್ಟೇ ಭಕ್ತಿಭಾವ ಮತ್ತು ದಿವ್ಯತೆಯನ್ನು ಬೆಂಗಳೂರಿನಲ್ಲಿಯೇ ಅನುಭವಿಸಬಹುದಾದ ಅಪರೂಪದ ಕ್ಷೇತ್ರವೊಂದು ಇದೆ—ಐತಿಹಾಸಿಕ ಬಸವನಗುಡಿಯ ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀನಿವಾಸ ಸನ್ನಿಧಾನ.
ಬೆಂಗಳೂರು ನಗರದ ಧಾರ್ಮಿಕ–ಸಾಂಸ್ಕೃತಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಈ ಕ್ಷೇತ್ರ, ಗಾಂಧಿ ಬಜಾರ್ ಸಮೀಪದ ಬೆಣ್ಣೆ ಗೋವಿಂದಪ್ಪ ರಸ್ತೆಯಲ್ಲಿ ನೆಲೆಸಿದೆ. ಶ್ರೀ ವ್ಯಾಸರಾಜರು ತಿರುಪತಿಯಲ್ಲಿ ಶ್ರೀನಿವಾಸನನ್ನು ಪೂಜಿಸಿದ ಸ್ಮರಣಾರ್ಥವಾಗಿ, ಭೂವರಾಹ, ನರಸಿಂಹ, ಮಹಾಲಕ್ಷ್ಮೀ ಸಮೇತರಾಗಿ ಏಳು ಅಡಿ ಎತ್ತರದ ಶ್ರೀ ಪ್ರಸನ್ನ ವರದ ವೆಂಕಟೇಶ್ವರನ ಪ್ರತಿಷ್ಠಾಪನೆ ಇಲ್ಲಿ ನಡೆದಿದ್ದು, ಇದರ ಹಿಂದೆ ಶ್ರೀಮಠದ ಹಿಂದಿನ ಪೀಠಾಧಿಪತಿಗಳಾದ ಶ್ರೀ ವಿದ್ಯಾವಾಚಸ್ಪತಿ ತೀರ್ಥರ ಮಹತ್ತರ ಸಂಕಲ್ಪವಿದೆ.
ಶುದ್ಧ ವೈಷ್ಣವ ಸಂಪ್ರದಾಯದಂತೆ ಇಲ್ಲಿ ಪ್ರತಿನಿತ್ಯ ತಂತ್ರಸಾರೋಕ್ತ ಪೂಜಾ ವಿಧಿವಿಧಾನಗಳು ನೆರವೇರುತ್ತಿವೆ. ಶಂಖ–ಚಕ್ರಧಾರಿಯಾಗಿ ಬಲಗೈಯಿಂದ ತನ್ನ ಪಾದಪದ್ಮವನ್ನು ತೋರಿಸುತ್ತ, ಎಡಗೈಯನ್ನು ಕಟಿಯ ಮೇಲೆ ಇಟ್ಟು ನಿಂತಿರುವ ಶ್ರೀನಿವಾಸನು ಪಾದಸೇವೆಯೇ ಮೋಕ್ಷಮಾರ್ಗ ಎಂಬ ಸಂದೇಶವನ್ನು ಭಕ್ತರಿಗೆ ನೀಡುತ್ತಾನೆ.
ಮಠವಿರುವ ನಿವೇಶನವನ್ನು ದಾನವಾಗಿ ನೀಡಿದವರು ಧರ್ಮಾಸಕ್ತ ವಜ್ರಪಡಿ ವ್ಯಾಪಾರಸ್ಥರಾದ ಬೆಣ್ಣೆ ಗೋವಿಂದಪ್ಪನವರು. ಅವರ ಸ್ಮರಣಾರ್ಥವಾಗಿಯೇ ಈ ರಸ್ತೆಗೆ ಅವರ ಹೆಸರನ್ನು ನೀಡಲಾಗಿದೆ. ೧೮೮೩ರಲ್ಲಿ ಬಸವನಗುಡಿಯಲ್ಲಿ ಛತ್ರ ನಿರ್ಮಾಣ ಆರಂಭಿಸಿ, ಧರ್ಮ ಮತ್ತು ದಾನದ ಸಂಕೇತವಾಗಿ ಈ ಕ್ಷೇತ್ರವನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಂತರ ಅವರ ಪುತ್ರರಾದ ಬೆಣ್ಣೆ ಸುಬ್ಬರಾಯರು ಮತ್ತು ನಾರಾಯಣಸ್ವಾಮಿಯವರು ಈ ಕಾರ್ಯವನ್ನು ಮುಂದುವರಿಸಿದರು.
ಕಾಲಕ್ರಮೇಣ ಶ್ರೀ ವಿದ್ಯಾಪಯೋನಿಧಿ ತೀರ್ಥರ ಮಾರ್ಗದರ್ಶನದಲ್ಲಿ ಈ ಕ್ಷೇತ್ರವು ಗೋವಿಂದ ಸುಂದರಧಾಮವೆಂಬ ಬೃಹತ್ ಪುಣ್ಯಕ್ಷೇತ್ರವಾಗಿ ವಿಕಸನಗೊಂಡಿತು. ೨೦೦೦ ಭಾಗವತ ಮಹಾಮಂಗಳ ಹಾಗೂ ಸಹಸ್ರಚಂದ್ರ ದರ್ಶನದ ಅಂಗವಾಗಿ ಪ್ರತಿಷ್ಠಿತಗೊಂಡ ಭವ್ಯ ಶ್ರೀನಿವಾಸ ಮೂರ್ತಿ, ಇಂದು ಭಕ್ತರ ಆಸ್ಥೆಯ ಕೇಂದ್ರವಾಗಿದೆ.
ಇದೇ ಡಿ.೩೦ರಂದು ವೈಕುಂಠ ಏಕಾದಶಿ ಪ್ರಯುಕ್ತ ಇಲ್ಲಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಹಾಗೂ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀಮದ್ಭಾಗವತ ಪುರಾಣ ಅಖಂಡ ಪ್ರವಚನ ಮಾಲಿಕೆ ಆಯೋಜಿಸಲಾಗಿದೆ.
ಬೆಳಿಗ್ಗೆ 8.30ರಿಂದ ರಾತ್ರಿ 11.30ರವರೆಗೆ ನಾಡಿನ ಖ್ಯಾತ ವಿದ್ವಾಂಸರಿಂದ ನಿರಂತರ ಪ್ರವಚನ ನಡೆಯಲಿದ್ದು, ಈ ಪರ್ವಕಾಲದಲ್ಲಿ ಭಾಗವತ ಶ್ರವಣವು ಮೋಕ್ಷಸಾಧನವೆಂದು ಆಯೋಜಕರು ತಿಳಿಸಿದ್ದಾರೆ. ತಿರುಪತಿಯ ಪ್ರತಿರೂಪದಂತಿರುವ ಈ ಶ್ರೀನಿವಾಸನ ದರ್ಶನದಿಂದ ಕೃತಾರ್ಥರಾಗಲು ಇದು ಭಕ್ತರಿಗೆ ದೊರಕಿರುವ ಅಪೂರ್ವ ಅವಕಾಶ.
