ಅಕ್ಕಲಕೋಟದಲ್ಲಿ ಉಚಿತ ಹಟಗಾರ ವಧು–ವರರ ಸಮಾವೇಶಕ್ಕೆ ಭರ್ಜರಿ ಸ್ಪಂದನೆ
ಅಕ್ಕಲಕೋಟದಲ್ಲಿ ಉಚಿತ ಹಟಗಾರ ವಧು–ವರರ ಸಮಾವೇಶಕ್ಕೆ ಭರ್ಜರಿ ಸ್ಪಂದನೆ
450 ವರರಿಗೆ ಕೇವಲ 20 ವಧುಗಳು – ಹೆಣ್ಣಿನ ಕೊರತೆ ಸ್ಪಷ್ಟ
ಅಕ್ಕಲಕೋಟದಲ್ಲಿ : ಜರುಗಿದ ಉಚಿತ ಹಟಗಾರ ವಧು–ವರರ ಸಮಾವೇಶದಲ್ಲಿ ಹೆಣ್ಣಿನ ಕೊರತೆ ತೀವ್ರವಾಗಿ ಎದ್ದು ಕಾಣಿತು. ಸಮಾವೇಶದಲ್ಲಿ ಸುಮಾರು 450 ವರರು ಹಾಗೂ ಕೇವಲ 20 ವಧುಗಳು ಭಾಗವಹಿಸಿದ್ದು, ಸಮಾಜ ಎದುರಿಸುತ್ತಿರುವ ಅಸಮತೋಲನದ ಗಂಭೀರ ಚಿತ್ರಣವನ್ನು ತೋರಿಸಿತು.
ಡಿಸೆಂಬರ್ 28, 2025 (ರವಿವಾರ) ಬೆಳಿಗ್ಗೆ 11 ಗಂಟೆಗೆ ಅಕ್ಕಲಕೋಟದ ಸದ್ಗುರು ಶರಣ ಮಠದಲ್ಲಿ 2025ನೇ ಸಾಲಿನ ಉಚಿತ ಹಟಗಾರ ವಧು–ವರರ ಸಮಾವೇಶ ಅದ್ಧೂರಿಯಾಗಿ ಜರುಗಿತು.
ಇಂದಿನ ದಿನಮಾನಗಳಲ್ಲಿ ಒಕ್ಕಲುತನ, ನೇಕಾರಿಕೆ ಸೇರಿದಂತೆ ಕಾಯಕಾಧಾರಿತ ವೃತ್ತಿಗಳನ್ನು ಮಾಡುತ್ತಿರುವ ಯುವಕರಿಗೆ ವಿವಾಹಕ್ಕಾಗಿ ಹೆಣ್ಣು ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಮಾವೇಶದಲ್ಲಿ ಭಾಗವಹಿಸಿದ ಹಿರಿಯರು ಆತಂಕ ವ್ಯಕ್ತಪಡಿಸಿದರು. ಹೆಣ್ಣು–ಗಂಡು ಸಮಾನವಾಗಿ ಪ್ರೀತಿ, ಗೌರವ ಹಾಗೂ ಸ್ವಾಭಿಮಾನ ಬೆಳೆಸಿದಾಗ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ನೇಕಾರರ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ, ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು. ನಿರುದ್ಯೋಗ ಯುವಕ–ಯುವತಿಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಯಿತು.
ಪ್ರತಿ ವರ್ಷ ಈ ರೀತಿಯ ಸಮಾವೇಶಗಳನ್ನು ಆಯೋಜಿಸುವುದರಿಂದ ಸಮಾಜದಲ್ಲಿರುವ ಹೆಣ್ಣು–ಗಂಡಿನ ಕೊರತೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಸಮುದಾಯದ ಒಗ್ಗಟ್ಟು ಹಾಗೂ ಸಾಮಾಜಿಕ ಸಮಾನತೆಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಆಯೋಜಕರು ತಿಳಿಸಿದರು.
ಅಕ್ಕಲಕೋಟದ ಶಂಕರ ದೊಡ್ಡಮನಿ ಅವರ ಹಟಗಾರ ಶಿವಾಚಾರ್ಯ ಪ್ರತಿಷ್ಠಾನ*ದ ನೈತೃತ್ವದಲ್ಲಿ, ಪತ್ರಕರ್ತ ಓಂ ಶಂಕರ ಹುಲಗೇರಿ, ಹಿರಿಯ ವಕೀಲ ಸುನೀಲ್ ಜೇವುರೆ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ಸಮೂಹ ಪರಿಚಯ ಮಹಾ ಸಮ್ಮೇಳನವಾಗಿ ರೂಪುಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಾಜಿ ಮಹಾರಾಜರ ವಂಶಸ್ಥರಾದ 16ನೇ ಶ್ರೀ ಮಾಲೋಜಿ ರಾಜೆ ಭೋಸಲೆ ಹಟಗಾರ ಸಮಾಜದ ಆದ್ಯ ಗುರುಗಳು ನಮ್ಮ ರಾಜ ಮನೆತನದ ರಾಜಗುರುಗಳಾಗಿ ಸದಾ ಮಾರ್ಗದರ್ಶನ ನೀಡಿದ್ದು, ಅವರ ಕೃಪೆಯಿಂದ ಸಮಾಜಸೇವೆಗೆ ಅವಕಾಶ ದೊರೆತಿರುವುದು ನಮ್ಮ ಸೌಭಾಗ್ಯ” ಎಂದು ಹೇಳಿದರು.
ಸಮಾಜ ಸೇವಕರಾದ ಸೋಮಶೇಖರ್ ಅಷ್ಟಗಿ, ಶಿವಾನಂದ ಕಲಬುರಗಿ, ಸಿದ್ದಲಿಂಗ ಮೇತ್ರೆ, ಅಂಬದಾಸ ಖರಾಡೆ, ವಿಜಯಕುಮಾರ ಜುಂಜಾ, ಕಲಬುರಗಿ ತೊಗಟವೀರ ಸಮಾಜದ ಅಧ್ಯಕ್ಷ ಶ್ರೀನಿವಾಸ ಬಲಪುರ, ನ್ಯಾಯವಾದಿ ಜೆನವೇರಿ ವಿನೋದಕುಮಾರ, ಭೀಮಳ್ಳಿ ಗ್ರಾಮದ ಯಶವಂತ ರಾಯಗೌಡ ಪೊಲೀಸ್ ಪಾಟೀಲ ಸೇರಿದಂತೆ ಅನೇಕ ಸಾಮಾಜಿಕ ಕಾಳಜಿ ಹೊಂದಿದ ಗಣ್ಯರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಈ ಕಾರ್ಯ ಸ್ಲಾಘನೀಯವಾಗಿದ್ದು, ಹಟಗಾರ ಕೊಷ್ಠಿ ಜನ ಸಮುದಾಯದವರು ಸಮಾವೇಶದ ಸದುಪಯೋಗ ಪಡೆದುಕೊಂಡರು ಎಂದು ನೇಕಾರ ಮಹಾಸಭೆಯ ಮಾಧ್ಯಮ ಸಂಚಾಲಕರಾದ ರಾಜು ಕೊಷ್ಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
