ತೇವಭೂಮಿ ನೀರನ್ನು ಸಂಗ್ರಹಿಸಿ ಭೂಗರ್ಭದ ನೀರಿನ ಮಟ್ಟ ಹೆಚ್ಚಿಸುತ್ತದೆ– ಪುಣ್ಯಶೆಟ್ಟಿ ಬಿ.ಎನ್.
ತೇವಭೂಮಿ ನೀರನ್ನು ಸಂಗ್ರಹಿಸಿ ಭೂಗರ್ಭದ ನೀರಿನ ಮಟ್ಟ ಹೆಚ್ಚಿಸುತ್ತದೆ– ಪುಣ್ಯಶೆಟ್ಟಿ ಬಿ.ಎನ್.
ಕಲಬುರಗಿ: ತೇವಭೂಮಿಗಳು ಮಳೆನೀರನ್ನು ಸಂಗ್ರಹಿಸಿ ಭೂಗರ್ಭದ ನೀರಿನ ಮಟ್ಟ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ತೇವಭೂಮಿಗಳನ್ನು ಗುರುತಿಸುವುದು, ಸಂರಕ್ಷಿಸುವುದು ಹಾಗೂ ಸಮರ್ಪಕವಾಗಿ ನಿರ್ವಹಿಸುವುದು ಎಷ್ಟು ಮುಖ್ಯವೋ, ಅಷ್ಟೇ ಆ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ, ಕಸ ವಿಲೇವಾರಿ ಹಾಗೂ ಹಾನಿಕಾರಕ ಚಟುವಟಿಕೆಗಳನ್ನು ನಿಷೇಧಿಸುವುದೂ ಅಗತ್ಯವಾಗಿದೆ ಎಂದು ನಿವೃತ್ತ ಎ.ಡಿ.ಎ. ಕೃಷಿ ಅಧಿಕಾರಿ ಬಿ.ಎನ್. ಪುಣ್ಯಶೆಟ್ಟಿ ಹೇಳಿದರು.
ನಗರದ ಬರುಕಾ ಆಸ್ಪತ್ರೆ ಸಮೀಪದ ಶ್ರೀ ಶಿವಶರಣ ನಗರದಲ್ಲಿ ಟೆಂಗಳಿ ಅಂಡಗಿ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾದ ‘ವಿಶ್ವ ತೇವಭೂಮಿ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವು ಬಯಲುಭೂಮಿಯಾಗಿದ್ದು ಕೃಷಿಗೆ ಅತ್ಯಂತ ಸೂಕ್ತವಾದ ಪ್ರದೇಶವಾಗಿದೆ. ವಿದ್ಯಾವಂತ ಯುವಕರು ತಮ್ಮ ಉದ್ಯೋಗದ ಜೊತೆಗೆ ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು. ಜೊತೆಗೆ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಬೀಜ ಸಂಸ್ಕರಣಾ ನಿಗಮದ ಕೃಷಿ ಅಧಿಕಾರಿ ಶಿವಶರಣಪ್ಪ ಬುಳ್ಳಾ ಮಾತನಾಡಿ, ರೈತರು ಪ್ರತಿವರ್ಷ ಮಣ್ಣು ಪರೀಕ್ಷೆ ಮಾಡಿಸಿ, ಸರ್ಕಾರದಿಂದ ಸಂಸ್ಕೃತಗೊಂಡ ಬೀಜಗಳನ್ನು ಬಿತ್ತಬೇಕು. ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ವಿವೇಕ ಸಿದ್ದ ಸೇವಾಶ್ರಮದ ಶ್ರೀ ದಯಾಶಂಕರ ಸ್ವಾಮೀಜಿ ಆಶೀರ್ವಚನ ನೀಡಿ, ನಿವೃತ್ತ ಕೃಷಿ ಅಧಿಕಾರಿಯ 80ನೇ ಹುಟ್ಟುಹಬ್ಬವನ್ನು ವೈಯಕ್ತಿಕ ಕಾರ್ಯಕ್ರಮವಾಗಿರಿಸದೆ, ಸಾಮಾಜಿಕ ಉಪಯುಕ್ತತೆಯೊಂದಿಗೆ ರೈತರಿಗೆ ಮಾಹಿತಿ ನೀಡುವ ವೇದಿಕೆಯಾಗಿಸಿದ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದೆ ಎಂದರು ಬಣ್ಣಿಸಿದರು.
ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಉಚಿತ ಯೋಜನೆಗಳಿಂದ ರೈತರ ದುಡಿಮೆ ಕಡಿಮೆಯಾಗಿದ್ದು, ಕಾರ್ಮಿಕ ವೆಚ್ಚ ಹೆಚ್ಚಾಗಿದೆ. ಈ ಹಿನ್ನೆಲೆ ‘ವಿಶ್ವ ತೇವಭೂಮಿ ದಿನಾಚರಣೆ’ ಅಂಗವಾಗಿ ಇಬ್ಬರು ನಿವೃತ್ತ ಕೃಷಿ ಅಧಿಕಾರಿಗಳ ಅನುಭವ ಹಾಗೂ ಸಲಹೆ ಪಡೆಯುವ ಉದ್ದೇಶದಿಂದಲೇ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ನಿಂಗಣ್ಣ ಪೂಜಾರಿ, ಚನ್ನಬಸಪ್ಪ ಹಾಬಾಳ, ಜಗನ್ನಾಥ ಗೋಟೂರ ಉಪಸ್ಥಿತರಿದ್ದರು. ವಿನಾಯಕ ಬುಳ್ಳಾ ಸ್ವಾಗತಿಸಿದರು. ವಿವೇಕಾನಂದ ಬುಳ್ಳಾ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಶರಣಪ್ಪ ಪೂಜಾರಿ, ಎಸ್.ವಿ. ರಸ್ತಂಪೂರ, ಚಂದ್ರಶೇಖರ ಪೂಜಾರಿ, ದಿನೇಶ ದೊಡ್ಡಮನಿ, ಪ್ರಶಾಂತ ನಂದಿಕೂರ, ಮಲ್ಲಮ್ಮ, ಮಹಾದೇವಿ, ವಿಜಯಲಕ್ಷ್ಮಿ, ವಿದ್ಯಾಶ್ರೀ, ಜಗದೇವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
