ಧಾರ್ಮಿಕ–ಪ್ರಾಚೀನ ಮಾಹಿತಿಯನ್ನೊಳಗೊಂಡ 2026ರ ಕ್ಯಾಲೆಂಡರ್ ಲೋಕಾರ್ಪಣೆ
ಧಾರ್ಮಿಕ–ಪ್ರಾಚೀನ ಮಾಹಿತಿಯನ್ನೊಳಗೊಂಡ 2026ರ ಕ್ಯಾಲೆಂಡರ್ ಲೋಕಾರ್ಪಣೆ
ಮೈಸೂರು: ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್ ವತಿಯಿಂದ ಪ್ರತಿ ವರ್ಷ ಪ್ರಕಟಿಸಲಾಗುವ ಧಾರ್ಮಿಕ ಹಾಗೂ ಪ್ರಾಚೀನ ಮಾಹಿತಿಯನ್ನೊಳಗೊಂಡ 2026ನೇ ಸಾಲಿನ ನೂತನ ಕ್ಯಾಲೆಂಡರ್ ಅನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.
ಇಲ್ಲಿನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಮೈಸೂರು ವಿಭಾಗದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ, ಶ್ರೀರಂಗಪಟ್ಟಣದ ಚಂದನವನ ಆಶ್ರಮದ ಶ್ರೀ ಕ್ಷೇತ್ರ ಬೇಬಿ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಕ್ಯಾಲೆಂಡರ್ ಅನಾವರಣಗೊಂಡಿತು.
ಮೇಲುಕೋಟೆ ಕ್ಷೇತ್ರವು ಐತಿಹಾಸಿಕ, ಪೌರಾಣಿಕ ಹಾಗೂ ಸಾಂಪ್ರದಾಯಿಕ ಮಹತ್ವ ಹೊಂದಿದ್ದು, ಜ್ಞಾನಮಂಟಪವೆಂದು ಪ್ರಸಿದ್ಧವಾಗಿದೆ. ಭಗವದ್ ರಾಮಾನುಜರ ತತ್ವ, ಸಿದ್ಧಾಂತ ಮತ್ತು ಸಂಪ್ರದಾಯಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ 1976ರಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಪ್ರಸ್ತುತ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. 2026–27ರಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವ ಆಚರಿಸುವ ಕ್ರಿಯಾಯೋಜನೆಯೂ ರೂಪುಗೊಂಡಿದೆ.
ಸಂಸ್ಥೆಯಲ್ಲಿ ಸಂಗ್ರಹಿತವಾಗಿರುವ 10 ಸಾವಿರಕ್ಕೂ ಅಧಿಕ ತಾಳಪತ್ರ ಹಾಗೂ ಹಸ್ತಪ್ರತಿಗಳ ಸಂರಕ್ಷಣೆಗೆ ಡಿಜಿಟಲೀಕರಣ ಕಾರ್ಯ ಕೈಗೊಳ್ಳಲಾಗಿದ್ದು, ಈಗಾಗಲೇ 4 ಲಕ್ಷಕ್ಕೂ ಅಧಿಕ ತಾಳೆ ಎಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಈ ಸಂಗ್ರಹಗಳ ವಿವರಗಳನ್ನು 18 ಸಂಪುಟಗಳಾಗಿ ಪ್ರಕಟಿಸಲಾಗಿದೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್. ಅಹಲ್ಯಾಶರ್ಮ ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಯ ಕಾರ್ಯಚಟುವಟಿಕೆಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮೇಲುಕೋಟೆಯ ಪ್ರಾಚೀನ ಕೊಳಗಳ ಪರಿಚಯವನ್ನು ಒಳಗೊಂಡಂತೆ ಈ ಕ್ಯಾಲೆಂಡರ್ ರೂಪಿಸಲಾಗಿದೆ. ಡಾ. ಎ. ಪುಷ್ಪಅಯ್ಯಂಗಾರ್, ಡಾ. ಎ. ವೈದೇಹಿ ಅಯ್ಯಂಗಾರ್ ಹಾಗೂ ಮೆ. ಸತ್ಯವತಿ ವಿಜಯರಾಘವಾಚಾರ್ ಛಾರಿಟಬಲ್ ಟ್ರಸ್ಟ್ ಅವರ ಆರ್ಥಿಕ ಸಹಕಾರದಿಂದ ಕ್ಯಾಲೆಂಡರ್ ಪ್ರಕಟವಾಗಿದೆ.
ಕಾರ್ಯಕ್ರಮದಲ್ಲಿ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್‌ನ ಕುಲಸಚಿವ (ಆಡಳಿತ) ಎಸ್. ಕುಮಾರ್, ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಮಾರ್ಗದರ್ಶಕ ಕೆ. ಎಸ್. ಗೋಪಾಲಕೃಷ್ಣ, ಭಾರತೀ ಯೋಗಧಾಮದ ಸಂಸ್ಥಾಪಕ ಡಾ. ಕೆ. ಎಲ್. ಶಂಕರನಾರಾಯಣ ಜೋಯಿಸ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
