ಫೆ.12 ರಂದು ಫ್ರೀಡಂ ಪಾರ್ಕ್ ನಲ್ಲಿ ಈಡಿಗ, ಬಿಲ್ಲವರ ಭಾರಿ ಪ್ರತಿಭಟನೆ ಡಾ. ಪ್ರಣವಾನಂದ ಶ್ರೀಗಳ 41 ದಿನಗಳ 700 ಕೀ . ಮೀ ಐತಿಹಾಸಿಕ ಪಾದಯಾತ್ರೆ ಸಮಾರೋಪ ಕಾರ್ಯಕ್ರಮ
ಫೆ.12 ರಂದು ಫ್ರೀಡಂ ಪಾರ್ಕ್ ನಲ್ಲಿ ಈಡಿಗ, ಬಿಲ್ಲವರ ಭಾರಿ ಪ್ರತಿಭಟನೆ
ಡಾ. ಪ್ರಣವಾನಂದ ಶ್ರೀಗಳ 41 ದಿನಗಳ 700 ಕೀ . ಮೀ ಐತಿಹಾಸಿಕ ಪಾದಯಾತ್ರೆ ಸಮಾರೋಪ ಕಾರ್ಯಕ್ರಮ
ಕಲಬುರಗಿ : ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಬೇಡಿಕೆಗಳನ್ನು ಒತ್ತಾಯಿಸಿ ಜ 6 ರಿಂದ ಆರಂಭಗೊಂಡ 700 ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆ ಫೆಬ್ರವರಿ 12ರಂದು ಬೆಂಗಳೂರು ಫ್ರೀಡಂ ಪಾರ್ಕ್ ತಲುಪಲಿದ್ದು ಕಲ್ಯಾಣ ಕರ್ನಾಟಕದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಮನವಿ ಮಾಡಿದೆ.
ಬೆಂಗಳೂರಿನ ಯಶವಂತಪುರ ಸಮೀಪದ ದಾಸರಹಳ್ಳಿ ಯಿಂದ ಫೆಬ್ರವರಿ 12ರಂದು ಬೆಳಿಗ್ಗೆ 7.30 ಕ್ಕೆ ಐತಿಹಾಸಿಕ ಬೃಹತ್ ಪಾದಯಾತ್ರೆಯು ಹೊರಡಲಿದ್ದು 10 ಗಂಟೆಗೆ ಫ್ರೀಡಂ ಪಾರ್ಕ್ ತಲುಪಿ ಬೃಹತ್ ಪ್ರತಿಭಟನೆ ಆರಂಭವಾಗಲಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ತಿಳಿಸಿದ್ದಾರೆ.
ಕಲಬುರಗಿಯ ಚಿತಾಪುರದ ಕರದಾಳ ಶಕ್ತಿಪೀಠದಿಂದ ಅತಿ ಹಿಂದುಳಿದ ಸ್ವಾಮೀಜಿಗಳ ಸಮ್ಮುಖದಲ್ಲಿ ಜ.6 ರಂದು ಪಾತೆಯಾತ್ರೆಗೆ ಚಾಲನೆ ನೀಡಲಾಗಿದ್ದು ಚಿತಾಪುರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ಮಾಡಿದ್ದರು. ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಸರ್ವ ಪಕ್ಷಗಳ ಮತ್ತು ಅತೀ ಹಿಂದುಳಿದ ಸಮಾಜದವರ ಭಾರೀ ಜನಬೆಂಬಲದೊಂದಿಗೆ ಸಾಗಿದ ಪಾದಯಾತ್ರೆ ತುಮಕೂರು ಜಿಲ್ಲೆಯನ್ನು ಪ್ರವೇಶಿಸಿದ್ದು ಇನ್ನು ಮುಂದಿನ ಒಂದು ವಾರ ತುಮಕೂರು ಜಿಲ್ಲೆಯಲ್ಲಿ ಪಾದಯಾತ್ರೆ ಸಾಗಲಿದೆ. ಫೆಬ್ರವರಿ 12ರಂದು ಫ್ರೀಡಂ ಪಾರ್ಕ್ ನಲ್ಲಿ ಸಮಾಜದ ಗಣ್ಯ ನಾಯಕರ ಸಮ್ಮುಖದಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲು ಸಮುದಾಯದ ಜನರು ಫೆಬ್ರವರಿ 11 ರಂದು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡಬೇಕೆಂದು ಪೂರ್ವ ಸಿದ್ಧತಾ ಸಭೆಯಲ್ಲಿ ಸತೀಶ್ ಗುತ್ತೇದಾರ್ ವಿನಂತಿ ಮಾಡಿದರು. ಆಗಮಿಸುವ ಸಮಾಜ ಬಾಂಧವರಿಗೆ ತುಮಕೂರು ಸಿದ್ದಗಂಗಾ ಮಠದ ಕಲ್ಯಾಣ ಮಂಟಪ ಹಾಗೂ ದಾಸರಹಳ್ಳಿಯ ಎಂಟನೇ ಮೈಲಿ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಬೀದರ್ ನಿಂದ ಮಂಗಳೂರು ವರೆಗಿನ ಸಮುದಾಯದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸಮುದಾಯದ ಬಂಧುಗಳು ರೈಲು,ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಆಗಮಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ.ಸದಾನಂದ ಪೆರ್ಲ ತಿಳಿಸಿದ್ದಾರೆ.
ಜನವರಿ 12ರಂದು ಫ್ರೀಡಂ ಪಾರ್ಕ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಸಮಾವೇಶಗೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಸರಕಾರವು ಕೂಡಲೇ ಪಾದಯಾತ್ರೆಯನ್ನು ಅಂತ್ಯಗೊಳಿಸಲು ಪರಿಹಾರ ಮಾರ್ಗವನ್ನು ಘೋಷಿಸಬೇಕು.ಪ್ರತಿಭಟನೆಯಲ್ಲಿ ಸರಕಾರ ಸ್ಪಂದಿಸದಿದ್ದರೆ ಡಾ. ಪ್ರಣವಾನಂದ ಶ್ರೀಗಳು ಅಮರಣಾಂತ ಉಪವಾಸ ಮಾಡುವುದಾಗಿ ಘೋಷಣೆ ಮಾಡಿರುವುದರಿಂದ ತಕ್ಷಣ ಪರಿಹಾರ ಕಲ್ಪಿಸಬೇಕೆಂದು ಸತೀಶ್ ಗುತ್ತೇದಾರ್ ಹೇಳಿದರು. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷರುಗಳು ಮತ್ತು ಪಾದಯಾತ್ರೆಯ ಸಂಚಾಲನಾ ಸಮಿತಿ ಸದಸ್ಯರು ಫೆಬ್ರವರಿ 12ರಂದು ಬೆಂಗಳೂರಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪೂರ್ವ ತಯಾರಿ ನಡೆಸುವಂತೆ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಮನವಿ ಮಾಡಿದ್ದಾರೆ. ಹೋರಾಟ ಸಮಿತಿ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್, ಶಕ್ತಿಪೀಠದ ಟ್ರಸ್ಟಿ ವೆಂಕಟೇಶ ಗುಂಡಾನೂರು, ಮುಖಂಡರಾದ ಕುಪೇಂದ್ರ ಗುತ್ತೇದಾರ್ ನಾಗೂರ್, ಎ ಇ ತಿಮ್ಮಪ್ಪ ಗಂಗಾವತಿ, ಸುರೇಶ್ ಗುತ್ತೇದಾರ ಮಟ್ಟೂರು ಹಂಬಯ್ಯ ಗುತ್ತೇದಾರ್ ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ್ ಹೋಳಕುಂದ, ಅಂಬಯ್ಯ ಗುತ್ತೇದಾರ ಇಬ್ರಾಹಿಂಪುರ, ಪ್ರವೀಣ್ ಜತ್ತನ್, ರಾಜೇಶ್ ದತ್ತು ಗುತ್ತೇದಾರ್, ಬಿ ಎಂ ರಾವೂರ್,ಸಂತೋಷ್ ಚೌಧರಿ ಮತ್ತಿತರರು ಇದ್ದರು.
