ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವಂತೆ ಅಂಡಗಿ ಮನವಿ
ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವಂತೆ ಅಂಡಗಿ ಮನವಿ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಸಭೆ
ಕಲಬುರಗಿ: ನಗರದಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿದ್ಯಾನಗರ ವೆಲ್ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದು, 2026–27ನೇ ಸಾಲಿನ ಮುಂಗಡ ಪತ್ರದಲ್ಲಿ ನಾಗರಿಕರ ಹಿತದೃಷ್ಟಿಯಿಂದ ಪ್ರಮುಖ ಕಾಮಗಾರಿಗಳನ್ನು ಸೇರಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಹಾನಗರ ಪಾಲಿಕೆ ಸಾರ್ವಜನಿಕರಿಂದ ಸಲಹೆ–ಸೂಚನೆಗಳನ್ನು ಪಡೆಯಲು ಪತ್ರಿಕಾ ಪ್ರಕಟಣೆ ಮೂಲಕ ಕರೆ ನೀಡಿದ ಹಿನ್ನೆಲೆಯಲ್ಲಿ ಅವರು ಸಲ್ಲಿಸಿದ ಮನವಿಯಲ್ಲಿ, ಸೇಡಂ ರಸ್ತೆ ವಿದ್ಯಾನಗರ ಕಾಲೋನಿ ವಾರ್ಡ್ ನಂ. 32ರ ಸರ್ವೆ ನಂ. 73, 81, 82, 83 ರಲ್ಲಿರುವ ಖಾಲಿ ನಿವೇಶನಗಳಲ್ಲಿ ಗಿಡ–ಗಂಟಿಗಳು ಅತಿಯಾಗಿ ಬೆಳೆದು ಹಂದಿ–ನಾಯಿ ವಾಸಕ್ಕೆ ತಾಣವಾಗಿದ್ದು, ಪರಿಸರ ಅಸ್ವಚ್ಛತೆಯೊಂದಿಗೆ ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತಿದೆ ಎಂದು ತಿಳಿಸಿದ್ದಾರೆ. 3–4 ವರ್ಷಗಳ ಹಿಂದೆ ಈ ವಿಷಯದ ಬಗ್ಗೆ ಮಹಾನಗರ ಪಾಲಿಕೆಗೆ ನೋಟಿಸ್ ನೀಡುವಂತೆ ವಿನಂತಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಅನೇಕ ಬಡಾವಣೆಗಳಲ್ಲಿಯೂ ಇದೇ ಸಮಸ್ಯೆ ಎದುರಾಗಿರುವುದರಿಂದ ಖಾಲಿ ಪ್ಲಾಟುಗಳ ಸ್ವಚ್ಛತೆಗೆ ವಿಶೇಷ ಯೋಜನೆ ರೂಪಿಸಿ ಆದ್ಯತೆಯ ಮೇಲೆ ಕಾರ್ಯಗತಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರತಿ ವಾರ್ಡಿನ ನಕ್ಷೆಯನ್ನು ಸಿದ್ಧಪಡಿಸಿ, ಯಾವ ಪ್ರದೇಶ ಯಾವ ವಾರ್ಡಿಗೆ ಸೇರಿದೆ ಎನ್ನುವುದನ್ನು ಸಾರ್ವಜನಿಕರಿಗೆ ಸ್ಪಷ್ಟವಾಗುವಂತೆ ಪಾಲಿಕೆಯ ಕಚೇರಿಯಲ್ಲಿ ಪ್ರದರ್ಶಿಸಬೇಕೆಂದು ಆಗ್ರಹಿಸಿದ್ದಾರೆ. ವಾರ್ಡಿನ ಸಮಸ್ಯೆಗಳನ್ನು ಸದಸ್ಯರಿಗೆ ಮನವರಿಕೆಪಡಿಸಲು ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದರಿಂದ, ಪ್ರತಿ ವಾರ್ಡಿನ ಸದಸ್ಯರಿಗಾಗಿ ‘ಸಮಸ್ಯೆ ಸ್ವೀಕೃತಿ ಕೌಂಟರ್’ ತೆಗೆಯುವಂತೆ ಅವರು ವಿನಂತಿಸಿದ್ದಾರೆ.
“ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಿರುವ ನಿರ್ಣಯ, ಕಾರ್ಯಾರಂಭ ದಿನಾಂಕ ಹಾಗೂ ಪೂರ್ಣಗೊಳಿಸುವ ವೇಳಾಪಟ್ಟಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು,” ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮನವಿಯ ಪ್ರತಿಗಳನ್ನು ಮಹಾಪೌರರು, ನೈರ್ಮಲ್ಯ ವಿಭಾಗ, ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಮತ್ತು ವಾರ್ಡ ಸದಸ್ಯರಿಗೆ ಸಲ್ಲಿಸಲಾಗಿದೆ. ಜೊತೆಗೆ ಖಾಲಿ ನಿವೇಶನಗಳ ಅಸ್ವಚ್ಛತೆಗೆ ಸಂಬಂಧಿಸಿದ ಭಾವಚಿತ್ರಗಳನ್ನು ಕೂಡ ಲಗತ್ತಿಸಲಾಗಿದೆ ಎಂದು ತಿಳಿಸಿದರು.
