ಕನ್ನಡ ಸಿನಿಮಾ ರಂಗದ ವಿಕೇಂದ್ರೀಕರಣ ಅಗತ್ಯ: ವಿ. ಮನೋಹರ್

ಕನ್ನಡ ಸಿನಿಮಾ ರಂಗದ ವಿಕೇಂದ್ರೀಕರಣ ಅಗತ್ಯ: ವಿ. ಮನೋಹರ್

ಕನ್ನಡ ಸಿನಿಮಾ ರಂಗದ ವಿಕೇಂದ್ರೀಕರಣ ಅಗತ್ಯ: ವಿ. ಮನೋಹರ್

ಕಲಬುರಗಿ ಆಕಾಶವಾಣಿ ನೇರ ಫೋನ್_ ಇನ್ ಕಾರ್ಯಕ್ರಮದಲ್ಲಿ ಅಭಿಮತ

(ವರದಿ : ಡಾ. ಸದಾನಂದ ಪೆರ್ಲ) ಕಲ್ಯಾಣ ಕಹಳೆ ವಾರ್ತೆ

ಕಲಬುರಗಿ : ಸಿನಿಮಾ ರಂಗವು ಬೆಂಗಳೂರು ಕೇಂದ್ರೀಕೃತವಾಗದೆ ರಾಜ್ಯದ ಇತರ ಭಾಗಗಳಿಗೂ ವಿಸ್ತರಣೆಗೊಂಡು ವಿಕೇಂದ್ರೀಕರಣಗೊಂಡರೆ ಕನ್ನಡ ಚಲನಚಿತ್ರ ರಂಗಕ್ಕೆ ಉತ್ತಮ ಭವಿಷ್ಯವಿದೆ ಎಂದು ಖ್ಯಾತ ಸಿನಿಮಾ ಸಂಗೀತ ನಿರ್ದೇಶಕರಾದ ವಿ. ಮನೋಹರ್ ಅಭಿಪ್ರಾಯಪಟ್ಟಿದ್ದಾರೆ.

   ಕಲಬುರಗಿ ಆಕಾಶವಾಣಿಯಲ್ಲಿ ಡಿ 4ರಂದು ಕಲ್ಯಾಣವಾಣಿ ನೇರ ಫೋನ್_ ಇನ್ ಕಾರ್ಯಕ್ರಮದಲ್ಲಿ

" ಬದಲಾಗುತ್ತಿರುವ ಸಿನಿಮಾ ರಂಗ " ಎಂಬ ವಿಷಯದ ಕುರಿತಾಗಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ ಚಲನಚಿತ್ರರಂಗವು ಬೆಂಗಳೂರು ಕೇಂದ್ರೀಕರಿಸಿ ಸಿನಿಮಾ ನಿರ್ಮಾಣವಾಗುತ್ತಿರುವುದರಿಂದ ರಾಜ್ಯದ ಇತರ ಭಾಗಗಳ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಒಳಪಡಿಸಿಕೊಳ್ಳಲು ವಿಫಲವಾಗುತ್ತಿದೆ. ರಾಜಧಾನಿ ಬೆಂಗಳೂರಿಗೆ ಇತರ ಪ್ರದೇಶಗಳು ಬಹಳಷ್ಟು ದೂರವಿರುವುದರಿಂದ ಮಧ್ಯ ಕರ್ನಾಟಕ ದಾವಣಗೆರೆಯಂತಹ ಪ್ರದೇಶ ಕೇಂದ್ರೀಕರಿಸಿದರೆ ಉತ್ತಮ. ಉತ್ತರ ಕರ್ನಾಟಕದಲ್ಲಿ ಪ್ರತಿಭಾವಂತ ಕಲಾವಿದರು, ವಿಶಿಷ್ಟ ಭಾಷಾ ಶೈಲಿ ಎಲ್ಲವೂ ಸಮೃದ್ಧವಾಗಿದೆ. ಈ ಭಾಗದಲ್ಲಿ ವೃತ್ತಿರಂಗಭೂಮಿ ಜೀವಂತವಾಗಿದ್ದು ಕವಿ, ಸಾಹಿತಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾ,ರೆ ಆದರೆ ಅವರನ್ನು ಸಿನಿಮಾ ರಂಗವು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದೆ ಎಂದರು. ಓಟಿಟಿ ವೇದಿಕೆಯಲ್ಲಿ ಡಬ್ಬಿಂಗ್ ಸಿನಿಮಾಗಳು ಹೆಚ್ಚಾಗಿ ಪ್ರದರ್ಶನ ಗೊಳ್ಳುತ್ತಿರುವುದರಿಂದ ಕನ್ನಡದಲ್ಲಿ ಬರುವ ಉತ್ತಮ ಚಿತ್ರಗಳು ಸ್ಥಾನ ಪಡೆಯುತ್ತಿಲ್ಲ. ಕನ್ನಡಕ್ಕೆ ಇದು ದೊಡ್ಡ ದುರಂತ ವಾಗಿದೆ. ಸಿನಿಮಾದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಅನಿಮೇಶನ್ ಅಧಿಕ ಬಳಕೆಯಿಂದ ಸಿನಿಮಾ ನೈಜತೆಯನ್ನು ಕಳೆದುಕೊಳ್ಳುತ್ತಿದೆ. ಇದರದ್ದಾಗಿ ಸಹೃದಯಿ ಪ್ರೇಕ್ಷಕನಲ್ಲಿ ರೋಮಾಂಚನ ಮತ್ತು ಮನರಂಜನೆಯ ಸ್ಥಾನವನ್ನು ಕಸಿದುಕೊಳ್ಳುತ್ತಿದೆ ಎಂದರು. ತಾನು ಸಿನಿಮಾ ನಿರ್ದೇಶಕನಾಗಬೇಕೆಂಬ ನಿರೀಕ್ಷೆಯಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು ಉಪೇಂದ್ರ ಅವರಿಂದಾಗಿ ಸಂಗೀತ ನಿರ್ದೇಶಕನಾಗಿ ಬದಲಾದೆ. ವರನಟ ಡಾ. ರಾಜಕುಮಾರ್ ಅವರಂತಹ ಶ್ರೇಷ್ಠ ವ್ಯಕ್ತಿಗಳ ಪ್ರೇರಣೆಯಿಂದ ಸಂಗೀತ ನಿರ್ದೇಶಕನಾಗಿ ಈ ರಂಗದಲ್ಲಿ ಬೆಳೆಯಲು ಪ್ರೋತ್ಸಾಹ ದೊರೆಯಿತು ಎಂದು ಸ್ಮರಿಸಿದರು. ಶೀಘ್ರದಲ್ಲಿ ಬ್ಯೂಟಿ ಮತ್ತು ರುದ್ರಾಭಿಷೇಕಂ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಉತ್ತಮ ಚಿತ್ರಗಳು ಬರುತ್ತಿದ್ದರೂ ವಾರಕ್ಕೆ 10 ರಿಂದ 12 ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆಗೊಳ್ಳುತ್ತಿರುವರಿಂದ ಒಳ್ಳೆಯ ಸಿನಿಮಾಗಳು ಕೂಡ ಅವುಗಳ ಮಧ್ಯೆ ಸೋತು ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಹೊರಾಂಗಣ ಅತ್ಯಂತ ಸುಂದರವಾಗಿದ್ದು ನಿರ್ಮಾಪಕರ ಕೊರತೆಯಿಂದಾಗಿ ಈ ಭಾಗದಲ್ಲಿ ಚಿತ್ರ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ ಎಂದರು.

   ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಬೆಳಗಾವಿಯ ಶಿವಲಿಂಗಯ್ಯ, ಸುರಪುರದ ರಾಘವೇಂದ್ರ ಭಕ್ರಿ, ಬೀದರ್ ನ ಮೋಹನ್, ಶಿಕಾರಿಪುರದ ಮಹೇಶ್, ಕಲಬುರಗಿಯ ನಂದಿನಿ ಸನ್ ಬಾಲ್, ಅಂಕೋಲಾದ ಉದಯ ಶಶಿ, ವಿಜಯಪುರದ ಮಲ್ಲಿಕಾರ್ಜುನ್, ಆಳಂದ ಮಾದನ ಹಿಪ್ಪರಗದ ಶಿವಲಿಂಗಪ್ಪ ಭದ್ರೆ, ಹಂಪಸಾಗರದ ಸುಭಾನ್ ಕೋರಿ ಬೆಂಗಳೂರಿನ ರಾಜಕಿರಣ್ ಕರೆ ಮಾಡಿ ಸಂವಾದದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮವನ್ನು ಸಂಗಮೇಶ್ ಮತ್ತು ಶಾರದಾ ಜಂಬಲದಿನ್ನಿ ನಡೆಸಿಕೊಟ್ಟರು. ಕಾರ್ಯಕ್ರಮ ಮುಖ್ಯಸ್ಥರಾದ ಬಿ ಸಿದ್ದಣ್ಣ ಅವರು ನಿಲಯದ ಪರವಾಗಿ ವಿ . ಮನೋಹರ್ ಗೆ ಸ್ವಾಗತ ಕೋರಿ ಹಾಲು ಹಾಗೂ ಕೃತಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಿನಿಮಾ ನಿರ್ಮಾಪಕರಾದ ಮಂಜು ಪಾಂಡವಪುರ, ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮತ್ತು ಅನಿಲ್ ಕುಮಾರ್ ಎಚ್.ಎನ್, ಗೋವಿಂದ ಕುಲಕರ್ಣಿ,ಶ್ರೀಮತಿ ಅನುಷಾ, ವಿಜಯಕುಮಾರ್ ಗೋತಗಿ, ತಪಿತಾ, ಗುರುಬಸಮ್ಮ ದತ್ತಾತ್ರೇಯ,ಪೂಜಾ, ನಿತಿನ್ ಮತ್ತಿತರರು ಉಪಸ್ಥಿತರಿದ್ದರು.