ಅಮ್ಮ ಪ್ರಶಸ್ತಿ ಭಾವ ಪ್ರಪಂಚದ ದೀಪ : ಶ್ರೀನಿವಾಸಪ್ರಭು

ಅಮ್ಮ ಪ್ರಶಸ್ತಿ ಭಾವ ಪ್ರಪಂಚದ ದೀಪ : ಶ್ರೀನಿವಾಸಪ್ರಭು

10 ಜನ ಸಾಹಿತಿಗಳಿಗೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಪ್ರದಾನ 

ಅಮ್ಮ ಪ್ರಶಸ್ತಿ ಭಾವ ಪ್ರಪಂಚದ ದೀಪ : ಶ್ರೀನಿವಾಸಪ್ರಭು

ಸೇಡಂ :ದೂರದ ಸೇಡಂಗೆ ಬಂದು ಅಮ್ಮ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿ ಪ್ರಶಸ್ತಿ ಪ್ರದಾನ ಮಾಡುವಾಗ ಅಮ್ಮನ ಭಾವ ಪ್ರಪಂಚದಲ್ಲಿ ಮುಳುಗಿದಂತೆ ಭಾಸವಾಗುತ್ತಿದೆ. ಅಮ್ಮ ಎಂಬ ದೀಪ ನಮ್ಮನ್ನೆಲ್ಲಾ ಕಾಯುವ ಶಕ್ತಿ ಎಂದು ಹಿರಿಯ ಚಿತ್ರನಟ ಕೆ.ವಿ.ಶ್ರೀನಿವಾಸಪ್ರಭು ಅಭಿಪ್ರಾಯಪಟ್ಟರು.  

ಪಟ್ಟಣದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನವು ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಬುಧವಾರ ಆಯೋಜಿಸಿದ್ದ 25ನೇ ವರ್ಷದ ಅಮ್ಮ ಪ್ರಶಸ್ತಿ ಪ್ರದಾನ ಮಾಡಿದ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತನ್ನ ಬಹುಮುಖ ಪ್ರತಿಭೆಗಳಿಂದ ದೂರದ ರಾಜಧಾನಿ ಬೆಂಗಳೂರಲ್ಲಿರುವ ನಮ್ಮನ್ನು ಆಕರ್ಷಣೆಗೆ ಒಳಪಡಿಸುವ ಲೇಖಕ, ಪತ್ರಕರ್ತ ಮಹಿಪಾಲರೆಡ್ಡಿ ಅವರು ನಿಷ್ಠಾವಂತ ಸಂಘಟನಾ ಗುಣವುಳ್ಳವರು. ಅಮ್ಮ ಎಂಬ ಭಾವಕೋಶದಲ್ಲಿ ಎಲ್ಲರನ್ನೂ ಹಿಡಿದಿಟ್ಟುಕೊಂಡು ಕಳೆದ 24 ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿ ಪ್ರದಾನ ಮಾಡುತ್ತೊರುವುದು ನಿಜಕ್ಕೂ ಸೆಲ್ಯೂಟ್ ಹೊಡೆಯುವ ಕಾರ್ಯವೇ ಸರಿ ಎಂದು ಸಂತಸ ವ್ಯಕ್ತಪಡಿಸಿದರು.

ಅಮ್ಮ ಪ್ರಶಸ್ತಿ ಪಡೆದ ಹತ್ತು ಜನರ ಮುಂದಿನ ಬರವಣಿಗೆ ದಾರಿ ಇನ್ನು ಅಗಾಧವಾಗಲಿ, ಸಾಮಾಜಿಕ ಜವಾಬ್ದಾರಿಗಳು ಹೆಚ್ಚಾಗಿ ನಿಭಾಯಿಸಿ ಉತ್ತಮ ಕೃತಿ ಹೊರಹೊಮ್ಮಲಿ ಎಂದು ಆಶಯ ಮಾತುಗಳಾಡಿದರು.

 ಮಹಿಪಾಲರೆಡ್ಡಿ ಮುನ್ನೂರ ಅವರು ತನ್ನ ಜೊತೆಗೆ ಇಡೀ‌ ಕುಟುಂಬವನ್ನು ಸಾಹಿತಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುಂದಿನ ಜವಾಬ್ದಾರಿ ವಹಿಸುವ ಪ್ರಯತ್ನ ಮಾದರಿಯಾಗಿದೆ. ಪ್ರಶಸ್ತಿಗಳು ವಯಕ್ತಿಕ ಹಿತಾಸಕ್ತಿ ಪೂರಕವಾಗಿರುವ ನಡುವೆ ಅಮ್ಮ ಪ್ರಶಸ್ತಿ ಅತ್ಯಂತ ಗಟ್ಟಿಯಾಗಿ ನೆಲೆನಿಂತ ತನ್ನ ಬೆಳ್ಳಿ ಸಂಭ್ರಮ ಆಚರಿಸಿಕೊಂಡಿದೆ ಎಂದರು‌.

ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್ ಮಾತನಾಡಿ, ಹೆಚ್ಚು ಆಪ್ತವಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಆದರೆ ಅಮ್ಮ ಪ್ರಶಸ್ತಿ ಸಮಾರಂಭ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಮಿತ್ರ ಮಹಿಪಾಲರೆಡ್ಡಿ ಸದಾ ಹೊಸ ಬಗೆಯ ಆಲೋಚನೆಗಳನ್ನು ಯಶಸ್ವಿಯಾಗಿ ನಡೆಸುತ್ತಾನೆ ಎಂದರು.

ಕಲ್ಯಾಣ ಕರ್ನಾಟಕದಲ್ಲಿ ಸಾಂಸ್ಕೃತಿಕವಾಗಿ ಹೆಚ್ಚು ಶ್ರೀಮಂತಿಕೆ‌ ಇದ್ದರೂ ಕಲಾವಿದರು, ಸಾಂಸ್ಕೃತಿಕ ಸಂಘಟಕರು ಮುನ್ನಲೆಗೆ ಬರಬೇಕು. ಪತ್ರಕರ್ತರಲ್ಲಿನ ಸಾಹಿತಿಕ ಗುಣಕ್ಕೆ ಇಂತಹ ಕಾರ್ಯಕ್ರಮಗಳು ಸುದ್ದಿ ವಿಶ್ಲೇಷಣೆಯಲ್ಲಿ ಹೆಚ್ಚು ಭಾಗಿಯಾಗಲು ಅನುವು ಮಾಡಿಕೊಡುತ್ತದೆ ಎಂದರು.

ಅಧ್ಯಕ್ಷತೆವಹಿಸಿ ಸ್ತ್ರೀರೋಗ ತಜ್ಞೆ ಡಾ.ಭಾಗ್ಯಶ್ರೀ ಪಾಟೀಲ್ ಮಾತನಾಡಿ, ಸೇಡಂ ಒಳಗೊಂಡಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸದಾ ಸಾಂಸ್ಕೃತಿಕ, ಸಾಹಿತ್ಯ ವಾತಾವರಣ ನಿರ್ಮಿಸಲು ಅನೇಕರು ತಮ್ಮ ಪ್ರಯತ್ನದಿಂದ ಅದ್ಭುತ ಕಾರ್ಯಕ್ರಮಗಳನ್ನು ನಿರ್ಮಿಸುತ್ತಾರೆ. ಅಮ್ಮ ಪ್ರಶಸ್ತಿ ಸೇಡಂನಲ್ಲಿ ನಡೆಯುತ್ತದೆ ಎಂದರೆ ಅದೊಂದು ಹೆಮ್ಮೆಯ ಹಾಗೂ ಭಾವನಾತ್ಮಕ ವಿಷಯವಾಗಿದೆ ಎಂದರು.

ಅಮ್ಮ ಎಂದರೆ ಭರವಸೆಯ ಪದಗಳು, ಅಮ್ಮನ ಹೆಸರಿನಲ್ಲಿ ನೀಡುವ ಅಮ್ಮ ಪ್ರಶಸ್ತಿ ನಮ್ಮ ಒಳಗಿನ ಭಾವವ ಹಿಡಿದಿಟ್ಟು ಈ ಕಾರ್ಯಕ್ರಮ ಕರೆದುಕೊಂಡು ಬರುವ ಶಕ್ತಿ ಇದೆ. ನಾನು ಸಹ ಅಮ್ಮ ಎಂಬ ಪದಗಳ ಭಾವದ ಶಕ್ತಿಗೆ ಓಡಿ ಬಂದೆ ಎಂದು ಸಂತೋಪ ವ್ಯಕ್ತಪಡಿಸಿದರು.

ಸಹೋದರ ಮಹಿಪಾಲರೆಡ್ಡಿಯಂತಹ ವ್ಯಕ್ತಿಗಳು ತಾಯಿ ಕರಳು ಉಳ್ಳವರು‌ ಅವರ ಈ ಪ್ರಯತ್ನಕ್ಕೆ ಇಡೀ ಕುಟುಂಬ ಒಂದಾಗಿ ಕೈ ಜೋಡಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿಯೂ ಹೆಚ್ಚು ಪ್ರಕಾಶಮಾನವಾಗಿ ಬೆಳೆಯಲಿ. ನನ್ನಿಂದ ಏನಾದರೂ ಅಲ್ಪ ಸಹಾಯವಾಗುತ್ತದೆ ಎಂದು ನಾನು ಮಾಡಲು ಸಿದ್ದ ಎಂದರು.

ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮುನ್ನೂರು, ಮಹಾದೇವರೆಡ್ಡಿ, ಕಾರ್ತಿಕರೆಡ್ಡಿ ಇದ್ದರು. 

ಸಮೀಕ್ಷಾ ಕುಲಕರ್ಣಿ ಪ್ರಾರ್ಥಿಸಿದರು. ಸಿದ್ದಪ್ರಸಾದರೆಡ್ಡಿ ಸ್ವಾಗತಿಸಿದರು. ಪ್ರತಿಷ್ಠಾನದ ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರ್ ಪ್ರಾಸ್ತವಿಕ ಮಾತನಾಡಿ, ನಿರೂಪಣೆ ಮಾಡಿದರು. ವಿಜಯಭಾಸ್ಕರರೆಡ್ಡಿ ವಂದಿಸಿದರು. 

ನಾಗಪ್ಪ ಮಾಸ್ತರ್ ಮುನ್ನೂರ ಅವರ ಸ್ಮರಣಾರ್ಥ ಇರ್ವ ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.  

ಅಮ್ಮ ಪ್ರಶಸ್ತಿ ಪಡೆದವರಿವರು

ಗೀತಾ ವಸಂತ, ಡಾ.ಬಸವರಾಜ ಸಾದರ, ಸುನಂದಾ ಕಡಮೆ, ವಿಜಯಶ್ರೀ ಹಾಲಾಡಿ, ಸದಾಶಿವ ಸೊರಟೂರು, ಆನಂದ ಕುಂಚನೂರು, ಮುದಿರಾಜ ಬಾಣದ, ಚಂದ್ರಶೇಖರ ಮದಭಾವಿ, ಸದಾನಂದ ಪಾಟೀಲ್, ಬಹುರೂಪಿ ಪ್ರಾಯೋಜಿತ ಮಕ್ಕಳ ವಿಭಾಗದಲ್ಲಿ ಅರುಣಾ ನರೇಂದ್ರ.

ವಿಡಿಯೋ ಕಾಲ್ ಮಾಡಿ ಶುಭ ಕೋರಿದ ಸಚಿವ ಡಾ.ಶರಣಪ್ರಕಾಶ

ಅಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ವಿದೇಶ ಪ್ರಯಾಣ ಬೆಳಸುತ್ತಿರುವ ಕಾರಣಕ್ಕೆ ಗೈರಾಗಿದ್ದರು. ವಿಡಿಯೋ ಕರೆ ಮಾಡುವ ಮೂಲಕ ಪ್ರಶಸ್ತಿ ಪುರಸ್ಕೃತರಿಗೆ ಶುಭ ಕೋರಿಸದರು.