ಪ್ರಭಾವತಿ ಎಸ್ ದೇಸಾಯಿ ಗಜಲ್ ಕಾರ್ತಿ
ಪ್ರಭಾವತಿ ಎಸ್ ದೇಸಾಯಿ ಗಜಲ್ ಕಾರ್ತಿ
ಗಜಲ್ ಕುರಿತು ವಿವರ
ಗಜಲ್ ಅರೇಬಿಕ್ ಕವಿತೆಯಲ್ಲಿ ಹುಟ್ಟಿದ ಒಂದು ರಮಣೀಯ, ರಮ್ಯ ಕವಿತೆ. ಈ ಗಜಲ್ ಗಳು ಪ್ರೀತಿ, ಪ್ರೇಮ, ಪ್ರಣಯ, ಒಲವುಗಳ ಸೂರು ಹಿಡಿದು ಪ್ರೀತಿಯಿಂದಾದ ನೋವು ನಷ್ಟದ ನಡುವೆಯೂ ಪ್ರೀತಿಯ ಸುಂದರತೆ ಪ್ರೀತಿಯ ಅಗಾಧತೆಯನ್ನು ಪ್ರೀತಿಯ ಹರವನ್ನ ಸುಂದರ ಮತ್ತು ತೀಕ್ಷ್ಣ ಶಬ್ದಗಳ ಜೋಡಣೆಯಿಂದ ಕಾವ್ಯವಾಗಿ ಹೊರಹೊಮ್ಮಿಸಿ ಎಲ್ಲರ ಹೃದಯ ಬೇಗನೆ ತಟ್ಟುದುವಂತೆ ಈ ಗಜಲ್ ಗಳು ಇರುತ್ತವೆ. ಪ್ರೀತಿಗೆ ಮಿಡಿಯದ ಹೃದಯ ಜಗದಲ್ಲಿ ಇಲ್ಲ ಎನ್ನಬಹುದು .ಈ ಗಜಲ್ ಎಂಬ ಕಾವ್ಯ ಏಳನೇ ಶತಮಾನದಲ್ಲಿ ಅರೇಬಿಕ್ ಕಾವ್ಯವಾಗಿ ಹುಟ್ಟಿ ಇಸ್ಲಾಮಿಕ್ ಸುಲ್ತಾನರ ಸೂಫಿಗಳ ಪ್ರಭಾವದಿಂದ 12ನೇ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟ ಕಾವ್ಯರೂಪ. ಇದು ದ್ವಿಪದಿಗಳಿಂದ ಕೂಡಿದ್ದು ವಿಷಯ ಒಳ ಹರಿವಿನಲ್ಲಿದ್ದು ಹೊರಗಡೆ ಒಂದಕ್ಕೊಂದು ಸಾಲುಗಳು ಬೇರೆ ಬೇರೆ ಎನ್ನುವಂತೆ ತೋರುತ್ತವೆ. ಸಾಮಾನ್ಯ ಐದರಿಂದ ಹದಿನೈದು ದ್ವೀಪದಿಗಳನ್ನು ಹೊಂದಿದ ಕಾವ್ಯ ಪ್ರಕಾರವಿದು .ಶಬ್ದಗಳ ಗುಚ್ಚ ,ಹರಿತವಾದ ನಿರೂಪಣಾ ಶೈಲಿಯಿಂದ ಕೂಡಿದೆ .ವೈವಿಧ್ಯಮಯ ಅಭಿವ್ಯಕ್ತಿ ಹೊಂದಿ ತನ್ನ ಸಾಮರ್ಥ್ಯವನ್ನು ಬಿತ್ತರಿಸುತ್ತದೆ . ಪ್ರಾಸಬದ್ಧ ಸಾಲುಗಳನ್ನು ಹೊಂದಿದೆ ಇವು ಹಾಡುಗಬ್ಬವೂ ಆಗಿವೆ. ಇಲ್ಲಿ ಶೇರ್, ಮಟ್ಲ, ಕಾಫಿಯಾ, ರಾಡಿಫ್ ,ಮಕಾ, ಬಹ್ರ್ ವಿಶೇಷ ನಿಯಮಗಳನ್ನು ಕಾವ್ಯದಲ್ಲಿ ಬಳಸಲೇಬೇದಾದಂತಹ ನಿಯಮಗಳಿಂದ ಪ್ರಾಸಭದ್ಧ ಕಾವ್ಯವಾಗಿದೆ. ಗಜಲ್ ನ್ನು ಕೇಳ ಹೊರಟರೆ ಇದೊಂದು ರೀತಿಯ ನಶೆ ಇದ್ದ ಹಾಗೆ ಯಾರನ್ನೂ ತನ್ನ ಸೆಳೆತಕ್ಕೆ ಸೆಳೆಯದೆ ಬಿಡದು. ಅಂತರಾಳದಲ್ಲಿ ಅಡಗಿದ ನೂರಾರು ತುಮುಲಗಳ ಪದ ರೂಪದಲ್ಲಿ ಹೊರಹಾಕಿ ,ಮನದ, ಭಾವಾಂತರಾಳದ ,ಭಾವ ಪರವಶತೆಯ ನೂರಾರು ವಿಷಯಗಳನ್ನು, ಕಷ್ಟ, ನೋವು, ಸಿಟ್ಟು,ಪ್ರೀತಿ, ವಿರಹ ಹೆಚ್ಚಾದಾಗ ಹೊರಹೊಮ್ಮುವ ಸಾಹಿತ್ಯವಿದು.
ಪ್ರಮುಖ ಗಜಲ್ ಕವಿಗಳೆಂದರೆ ರೂಮಿ, ಆಫೀಸ್ ಮತ್ತು ಸಾದಿ ಶಿರಾಜಿ, ಭಾರತದ ಮಿರ್ಜಾ ಗಾಲಿಬ್ ಮುಂತಾದವರು ಗಜಲ್ ಕವಿಗಳೆಂದು ಪ್ರಸಿದ್ಧಿ ಪಡೆದಿದ್ದಾರೆ.
ಈಗ ನಮ್ಮ ಕರ್ನಾಟಕದವರಾದ ಅಲ್ಲಾ ಗಿರಿರಾಜ್ ಅಬ್ದುಲ್ ಹೈ ತೋರಣಗಲ್, ಸಿದ್ರಾಮ ಹೊನ್ಕಲ್, ಮಲ್ಲಿನಾಥ. ತಳವಾರ್. ಎಂ. ವೈ. ಯಾಕೊಳ್ಳಿ , ಸಂಗಮೇಶ್ ಜಾದವಾಡಗಿ,ಮಹಿಪಾಲ್ ರೆಡ್ಡಿ ,ಪ್ರಭಾವತಿ. ಎಸ್. ದೇಸಾಯಿ, ಶಮಾ ಜಮಾದಾರ್, ಈಶ್ವರ್ ಮಮದಾಪುರ್ ಹೀಗೆ ಗಜಲ್ಕಾರರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇವರುಗಳಲ್ಲಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಗಜಲ್ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದಂತಹ ಪ್ರಭಾವತಿ ಎಸ್ ದೇಸಾಯಿ ಇವರು ಗಜಲ್ ಕಾರರಲ್ಲಿ ಪ್ರಮುಖರಾಗಿ ಉತ್ತಮ ಗಜಲ್ ಕೃತಿಗಳನ್ನು ಹೊರ ತಂದ ಕೀರ್ತಿ ಹೊಂದಿದ್ದಾರೆ .ಇವರ ಬಗ್ಗೆ ಹೇಳುವುದೆಂದರೆ ತುಂಬಾ ಸಂತೋಷದ ಸಂಗತಿ. ನಮ್ಮ ಕರ್ನಾಟಕದ ಹೆಮ್ಮೆ ನಮ್ಮ ಸ್ತ್ರೀ ಕುಲಕ್ಕೆ ಹೆಮ್ಮೆ.
ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ ಅವರು ಗಿರಿಮಲ್ಲಪ್ಪ ಹಸ್ಮಕಲ್,ಪಾರ್ವತಮ್ಮ ಗಿ.ಹಸ್ಮಕಲ್ ಇವರ ನಾಲ್ಕನೇ ಪುತ್ರಿಯಾಗಿ ದಿನಾಂಕ ೨-೭-೧೯೪೭ರಂದು ರಾಯಚೂರಿನಲ್ಲಿ ಜನಿಸಿದರು.ಮಾಧ್ಯಮೀಕ ಶಿಕ್ಷಣ ರಾಯಚೂರಿನಲ್ಲಿ ಮಾಡಿದ್ದಾರೆ .ಇವರ ಹಿರಿಯ ಅಕ್ಕ ಡಾ.ಶೈಲಜಾ ಉಡಚಣ ಅವರ ಜೊತೆ ಇದ್ದು ,ಪ್ರೌಢ ಶಿಕ್ಷಣ ಹಾಗೂ ಕಾಲೇಜ ಶಿಕ್ಷಣ ವನ್ನು ಗುಲಬರ್ಗಾ ದಲ್ಲಿ ಮುಗಿಸಿ ಹುಬ್ಬಳ್ಳಿ ಯ ಸರಕಾರಿ ಮಹಿಳಾ ತಾಂತ್ರೀಕ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಶನ್ ಡಿಜೈನಿಂಗ್ ದಲ್ಲಿ ಡಿಪ್ಲೊಮಾ ಮಾಡಿ ವಿಜಯಪುರ ದ ಸರಕಾರಿ ಮಹಿಳಾ ವೃತ್ತಿ ತರಬೇತಿ ಕೇಂದ್ರದಲ್ಲಿ ಹೊಲಿಗೆಯ ಮುಖ್ಯ ಭೋದಕರೆಂದು ಕಾರ್ಯ ನಿರ್ವಹಿಸುತ್ತಾ ಎರಡು ಪದವಿ(ಡಿಗ್ರಿ) ಮಾಡಿದ್ದಾರೆ.ನಿವೃತ್ತಿ ಹೊಂದಿದ ಮೇಲೆ ಎಮ್ ಎ ಪಾಸು ಮಾಡಿದ್ದಾರೆ.ಸೇವೆ ಯಿಂದ ನಿವೃತ್ತಿ ಹೊಂದಿದ ಮೇಲೆ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಒಟ್ಟು ೨೩ಕೃತಿಗಳು ಪ್ರಕಟವಾಗಿವೆ.ಕವಿತೆ,ಹನಿಗವನ,ಪ್ರಬಂಧ,ಆಧುನಿಕ ವಚನಗಳು,ಕಥೆ, ಪ್ರವಾಸ ಕಥನ,ಗಜಲ್ (ಕನ್ನಡ) ,ವಿಮಶೆ೯,ಹೀಗೆ ಎಲ್ಲಾ ಸಾಹಿತ್ಯ ಪ್ರಕಾರದಲ್ಲಿ ಕೃತಿಗಳು ಪ್ರಕಟವಾಗಿವೆ.ಕನ್ನಡ ಗಜಲ್ ದಲ್ಲಿ ಒಂಬತ್ತು ಕೃತಿಗಳು ಪ್ರಕಟವಾಗಿವೆ .
ಸುಂದರ ಅರ್ಥಗರ್ಭಿತ ನೂರಾರು ಗಜಲ್ ಗಳನ್ನು ಬರೆದು ನಮ್ಮಗಳ ಮಧ್ಯೆ ಹೆಮ್ಮರವಾಗಿ ಒಬ್ಬ ಪ್ರಭುದ್ಧ ಗಜಲ್ ಕಾರ್ತಿಯಾಗಿ ನಿಂತಿದ್ದಾರೆ ಪ್ರಭಾವತಿಯವರು. ನೂರಾರು ಜನ ಗಜಲ್ ಕಾರರಲಿಲ್ಲಿ ಗುರುತಿಸಿಕೊಂಡು ಬಿಂಕ ,ಬಿಗುಮಾನವಿಲ್ಲದೆ ಎಲ್ಲರೊಂದಿಗೆ ಅವಿನಾಭಾವ ಸಂಬಂಧ ಹೊಂದಿ, ಕಿರಿಯ ಗಜಲ್ ಕಾರರಿಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಸದಾ ಕಾರ್ಯತತ್ಪರರಾಗಿ, ತಮ್ಮ ನಿವೃತ್ತ ಜೀವನವನ್ನು ಅತ್ಯಂತ ಸಂತಸದಾಯಕವಾಗಿ ಮತ್ತು ಪ್ರಯೋಜನಕಾರಿಯಾಗಿ ಪರಿವರ್ತಿಸಿಕೊಂಡು ವಯಸ್ಸಿನ ಅಡೆತಡೆ ಬಾರದಂತೆ ಇಂದಿಗೂ ನವ ಯುವತಿಯಂತೆ ಮನೋಭಾವವನ್ನು ಹೊಂದಿ ನಮ್ಮೆಲ್ಲರ ನಡುವೆ ಒಳ್ಳೆಯ ಸಾಹಿತಿ, ಒಳ್ಳೆಯ ಸಾಧಕಿಯಾಗಿ ಹೊರಹೊಮ್ಮಿದ್ದು ಸ್ತ್ರೀ ಕುಲಕ್ಕೆ ಹೆಮ್ಮೆಯ ಸಂಗತಿ.
ಅವರ ಒಂದು ಗಜಲ್ದ ನಾಲ್ಕು ಸಾಲುಗಳನ್ನು ನೋಡುವುದಾದರೆ,
ಹೃದಯದಿ ಬೆರೆತು ಸ್ವರ್ಗ ತೋರಿಸುವನೆಂದು ನಂಬಿದ್ದೆ
ಕನಸಿನ ಸುಂದರ ಮಹಲನು ಕಟ್ಟುವನೆಂದು ನಂಬಿದ್ದೆ
ಪ್ರತಿ ಹೆಜ್ಜೆಗೂ ಚುಚ್ಚುವ ಮುಳ್ಳಕಂಟಿ ಎದ್ದು ನಿಂತಿವೆ.
ಅಂದದ ಹೂ ತೋಟವನ್ನು ಬೆಳೆಸುವನೆಂದು ನಂಬಿದ್ದೆ.
ಗಜಲ್ದ ಅಂತರಾಳವನ್ನು ಅರಿಯುವುದು ಅಷ್ಟು ಸುಲಭದ ಮಾತಲ್ಲ ಇಲ್ಲಿ ಗಜಲ್ ಕಾರ್ತಿ ತನ್ನ ಮನದ ಇಂಗಿತವನ್ನು ಹೀಗೆ ಅಂದಿದ್ದ ಅದು ಈಗ ಕನಸಾಗಿದೆ ಎಂಬ ಅರ್ಥದಲ್ಲಿ ತನ್ನ ಮನದ ವೇದನೆಯನ್ನು ಬಿತ್ತರಿಸಿದ ರೀತಿ ಸರಳ ಶಬ್ದಗಳಿಂದ ಗದ್ಯ ಪದ್ಯ ಮಿಶ್ರಿತ ಸಾಲುಗಳಿಂದ ಕಟ್ಟಿಕೊಟ್ಟಿದ್ದಾರೆ.
ಇವರ ಇನ್ನೊಂದು ಗಜಲ್ನ ಈ ಸಾಲುಗಳನ್ನು ನೋಡಿದರೆ ಮೋಸ ,ನೋವು, ವಿರಹ ಒಟ್ಟಾಗಿ ಮೌನದ ಉಯ್ಯಾಲೆಯಲ್ಲಿ ತೂಗುವಂತೆ ಈ ಗಜಲ್ ಗೋಚರಿಸುತ್ತದೆ.
ಹೃದಯ ಗುಡಿಯಲಿ ನೂರು ಕನಸುಗಳು ಮೌನವಾಗಿ ಮುದುಡಿವೆ
ಎದೆ ಹೊಲದಲಿ ಮೊಳೆತ ಭಾವಗಳು ಅರಳುವುದು ಅಗತ್ಯವಿದೆ
ಅವನು ಸಾಕಿಯ ಮಧುಶಾಲೆಯಿಂದ ಬಂದಂತೆ ಕಾಣುತಿದೆ
ನಿದಿರೆ ಮಾಡದೆಯೆ ಮಲಗಿದಂತೆ ನಟಿಸುವುದು ಅಗತ್ಯವಿದೆ
ತೋಳ ತೆಕ್ಕೆಯಲಿ ಇದ್ದರೂ ಬೇರೆ ಹೆಸರು ಕನವರಿಸುವನು
ಅವನ ಮೋಸದ ಮೋಹಕ ಕವಚ ಕಳಚುವುದು ಅಗತ್ಯವಿದೆ
ತನ್ನ ಹೃದಯಕ್ಕೆ ಆದ ಗಾಯವನ್ನು ಮರೆಮಾಚಿಕೊಂಡು, ವೇದನೆಯನ್ನು ತಾಳಿಕೊಂಡು ಸುಮ್ಮನಿರುವ ರೀತಿ ,ಮೋಸದ ಪರಿ ಅರಿತರೂ ಮೌನದ ಸಂಕೋಲೆಯಲ್ಲಿ ಸಿಕ್ಕಿಹಾಕಿಕೊಂಡು ಬಳಲುವ ಒಬ್ಬ ಪ್ರೇಮಿಯಾಗಿ, ಪ್ರೇಯಸಿಯಾಗಿ ಈ ಗಜಲ್ನಲ್ಲಿ ಮನದಾಳದ ಅಳಲನ್ನು ಹೊರಗಡೆವಿದಂತಿದೆ.
ಇವರ ಈ ಗಜಲ್ ನಲ್ಲಿ ಸಾಮಾಜಿಕ ಕಳಕಳಿ ಇಂದಿನ ಪರಿಸ್ಥಿತಿಗೆ ಹಿಡಿದ ಹಲವು ಮಜಲುಗಳನ್ನು ನಮಗೆ ಪರಿಚಯಿಸಿದ್ದಾರೆ. ಇಂದಿನ ಪರಿಸರದಲ್ಲಿ ನಮ ಒದಗುವ ಸಂದಿದ್ದ ಸಂಕಟದ ಸವಾಲುಗಳನ್ನು ಎಳೆ ಎಳೆಯಾಗಿ ನಮ್ಮ ಮುಂದೆ ಗಜಲ್ ರೂಪದಲ್ಲಿ ತೆರೆದಿಟ್ಟಿದ್ದಾರೆ.
ಜನರ ನೋವಿಗೆ ಸ್ಪಂದಿಸುವ ಕೆಲಸವಾಗಲಿ
ಹಾಕಿದ ಮುಳ್ಳುಗಳ ಸರಿಸುವ ಕೆಲಸವಾಗಲಿ.
ಹಾದಿ ಬೀದಿಯಲಿ ದಿನ ಕನ್ನೀರು ಹರಿಯುತಿದೆ
ಕ್ರೂರ ಮನದಿ ದಯೆ ಹುಟ್ಟಿಸುವ ಕೆಲಸವಾಗಲಿ
ಅರಳಿ ನಗೆ ಬೀರುವ ಸುಮಕೆ ಉಳಿಗಾಲವಿಲ್ಲ.
ಸೊಕ್ಕಿದಾ ಕಾಮಿಗೆ ಶಿಕ್ಷಿಸುವ ಕೆಸಲವಾಗಲಿ
ಮನುಜರ ನಡೆ ನುಡಿಯು ಇಂದು ಮಿಥ್ಯ ಕಾಣುತಿದೆ
ಬುದ್ಧನ ಬೋಧಿ ವೃಕ್ಷ ಬೆಳೆಸುವ ಕೆಲಸವಾಗಲಿ
ಸಮಾಜದ ಓರೆ ಕೋರೆಗಳನ್ನು ತಮ್ಮ ಗಜಲ್ ಗಳ ಮೂಲಕ ತಿದ್ದುತ್ತಾ ಸಮಾಜ ಸುಭಿಕ್ಷ್ಣವಾಗಬೇಕಾದರೆ ಹೇಗಿರಬೇಕು ಎಂಬ ಸಲಹೆ ಸೂಚನೆಗಳನ್ನು ನೀಡುತ್ತಾ ಸಾಹಿತ್ಯದ ಹಲವು ಮಜಲುಗಳನ್ನು ಹತ್ತಿದವರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿದವರು. ಇವರ ಗಜಲ್ ಗಳು ಸಂದೇಶಗಳನ್ನು ಹೊತ್ತ,ಮಾದರಿಯಾಗಬಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲ ವಿಚಾರಗಳನ್ನು ಹೊಂದಿ ವಿರಹ ಪ್ರೀತಿ ಪ್ರೇಮ ಇವುಗಳನ್ನು ಕೂಡ ಸಾರುವ ಗಜಲ್ ಗಳು ಇವರವಾಗಿವೆ. ಇವರು ಇನ್ನೂ ಉನ್ನತ ಮಟ್ಟಕ್ಕೆ ಏರಲಿ ಎಂಬ ಮಹಾದಾಸೆ ನನ್ನದು. ನೂರಾರು ಉತ್ತಮ ಪ್ರಶಸ್ತಿಗಳನ್ನು ಪಡೆದುಕೊಂಡು ಒಬ್ಬ ಒಳ್ಳೆಯ ಸಾಹಿತಿ ಸಾಧಕಿಯಾಗಿ ನಮಗೆ ಮಾದರಿಯಾಗಲಿ ಎಂಬ ಆಶಯ ನನ್ನದು.
ಡಾ ಅನ್ನಪೂರ್ಣ ಹಿರೇಮಠ ಬೆಳಗಾವಿ ಸಾಹಿತಿ ಶಿಕ್ಷಕಿ ಗಜಲ್ ಕಾರ್ತಿ