ಬಸವಣ್ಣನವರ ಒಂದು ಬೆಡಗಿನ ವಚನ - ಮುಕ್ಕಣ್ಣ ಕರಿಗಾರ

ಬಸವಣ್ಣನವರ ಒಂದು ಬೆಡಗಿನ ವಚನ - ಮುಕ್ಕಣ್ಣ ಕರಿಗಾರ

ಬಸವಣ್ಣನವರ ಒಂದು ಬೆಡಗಿನ ವಚನ - ಮುಕ್ಕಣ್ಣ ಕರಿಗಾರ

      ರಾಯಚೂರು ಜಿಲ್ಲೆಯ ಸಾಂಸ್ಕೃತಿಕ ಚೇತನರುಗಳಲ್ಲಿ ಒಬ್ಬರಾಗಿರುವ ,ರೈತಸಂಘಟನೆ,ಪ್ರಗತಿಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಸಮಾಜಪರ ಚಿಂತನೆಯಿಂದ ದುಡಿಯುತ್ತಿರುವ ನನ್ನ ನಿಡುಗಾಲದ ಸ್ನೇಹಿತರಾದ ಆರ್ ಎಸ್ ಪಾಟೀಲ್ ನಾಗಡದಿನ್ನಿ ಅವರು ನಿನ್ನೆ ರಾತ್ರಿ ಬಸವಣ್ಣನವರ ಒಂದು ವಚನಕಳಿಸಿ ' ಇದರ ಅರ್ಥ ಹೇಳಿ ಸರ್' ಎಂದು ಕೇಳಿದ್ದರು.' ನೀವು ರಾಜಕಾರಣಿಗಳು ಇದು ಯೋಗಬೆಡಗಿನ ವಚನ.ನಿಮಗೂ ಇದಕ್ಕೂ ಎತ್ತಣ ಸಂಬಂಧ' ಎಂದು ಸ್ನೇಹಪೂರ್ವಕವಾಗಿ ಆರ್ ಎಸ್ ಪಾಟೀಲ್ ಅವರನ್ನು ಛೇಡಿಸಿದೆನಾದರೂ ಅವರು ವೈಚಾರಿಕ ನಿಲುವಿನ ಬಸವಾನುಯಾಯಿಗಳು ಎಂದು ಗೊತ್ತಿದ್ದರಿಂದ ನಿಮ್ಮ ಪ್ರಶ್ನೆಗೆ ನಾಳೆ ಒಂದು ಲೇಖನದ ರೂಪದಲ್ಲಿ ಉತ್ತರಿಸುವೆ ಎಂದು ಹೇಳಿದ್ದೆ.ಆರ್ ಎಸ್ ಪಾಟೀಲರು ಡಾಂಭಿಕ ಬಸವ ಭಕ್ತರಲ್ಲ,ಬಸವತತ್ತ್ವವೆಂದರೆ ಸಮಷ್ಟಿಕಲ್ಯಾಣದ ತತ್ತ್ವ ಎಂದು ಗ್ರಹಿಸಿಕೊಂಡು ನಡೆಯುತ್ತಿರುವವರು,ಸಮಾಜದ ಹಿತಚಿಂತನೆಗೆ ದುಡಿಯುತ್ತಿರುವವರು.ಆರ್ ಎಸ್ ಪಾಟೀಲರು ಅರ್ಥವನ್ನು ಕೇಳಿ ಕಳಿಸಿರುವ ಬಸವಣ್ಣನವರ ವಚನ ;

    ಅಂಧಕಾರವೆಂಬ ಗಹ್ವರದೊಳಗೆ

    ನಿದ್ರೆಯೆಂಬ ರಾಕ್ಷಸಿ‌ ಗ್ರಹಿಸಿ

 ‌ ವೀರರ ನಿಗ್ರಹಿಸಿ ನೀರು ಮಾಡಿ,ಧೀರರ ಧೃತಿಗೆಡಿಸಿ,

  ಶಾಪಾನುಗ್ರಹಸಮರ್ಥರ ಸತ್ತಂತಿರಿಸಿ,

 ನಿಚ್ಚ ನಿಚ್ಚ‌ ಜೀವನಾಶವ ಮಾಡುತ್ತಿಹಳು ನೋಡಾ

 ಕೂಡಲಸಂಗಮದೇವಾ.

       ಬಸವಣ್ಣನವರು ಅಲ್ಲಮಪ್ರಭುದೇವರಂತೆ ಯೋಗದಲ್ಲಿ ಬಲ್ಲಿದರಾಗಿದ್ದರು,ಭ್ರೂಮಧ್ಯದಲ್ಲಿ ಕಂಗೊಳಿಪ ದೇಹದೊಳಿರುವ ಮೂರನೇ ಲಿಂಗವಾದ ' ಈತರ ಲಿಂಗ' ವನ್ನೇ ಅವರು ಇಷ್ಟಲಿಂಗವನ್ನಾಗಿ ರೂಪಿಸಿದರು ಎನ್ನುವ ಸಂಗತಿಯನ್ನು ನಾನು ಸಾಕಷ್ಟು ಸಾರೆ ಹೇಳಿದ್ದೇನೆ, ಬರೆದಿದ್ದೇನೆ.ಬಸವಣ್ಣನವರ ಹಿರಿಮೆಯನ್ನೊಪ್ಪದ ಇಷ್ಟಲಿಂಗದ ಪರಿಕಲ್ಪನಾಚಾರ್ಯರು ಬಸವಣ್ಣನವರು ಎಂದು ಒಪ್ಪದ ಮತಿಜಡರುಗಳು ಇಷ್ಟಲಿಂಗಕ್ಕೆ ಇಲ್ಲಸಲ್ಲದ ಇತಿಹಾಸ,ಪ್ರಾಚೀನತೆಯನ್ನು ಆರೋಪಿಸುತ್ತಾರೆ.ಬಸವಪೂರ್ವದಲ್ಲಿ ಕರ್ನಾಟಕದಲ್ಲಿ ಶಿರೋಲಿಂಗಿಗಳು ಇದ್ದರು,ಬಾಹುಲಿಂಗಿಗಳು ಇದ್ದರು,ಸ್ಥಾವರ ಲಿಂಗಪೂಜಕರು ಇದ್ದರು,ಇಷ್ಟಲಿಂಗದ ಪೂಜೆ ಅರ್ಚನೆಗಳು ನಡೆಯುತ್ತಿರಲಿಲ್ಲ.ಬಸವಣ್ಣನವರೇ ತಮ್ಮ ಯೋಗಸಾಧನೆಯ ಬಲದಿಂದ ಆವಿಷ್ಕರಿಸಿದ ಲೋಕೋದ್ಧಾರದ ಶಿವಸೂತ್ರತತ್ತ್ವವೇ ಇಷ್ಟಲಿಂಗ.ಆರ್ ಎಸ್ ಪಾಟೀಲರು ನನಗೆ ಕಳಿಸಿರುವ ವಚನವು ಸಹ ಬಸವಣ್ಣನವರು ಮಹಾನ್ ಯೋಗಿಗಳಾಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ.

     ಬಸವಣ್ಣನವರು ಅಲ್ಲಮಪ್ರಭುಗಳಂತೆ ಕುಂಡಲಿನಿ ಯೋಗ,ಹಠಯೋಗಗಳಲ್ಲಿ ನಿಪುಣರಾಗಿದ್ದರು,ಷಟ್ಚಕ್ರಗಳ ಆರೋಹಣಕ್ರಮವನ್ನರಿತು ಸಹಸ್ರಾರಚಕ್ರವನ್ನು ತಲುಪಿ ಅಲ್ಲಿ ಸಹಸ್ರದಳ ಕಮಲಮಧ್ಯದಲ್ಲಿ ಪವಡಿಸಿರ್ಪ ಸದಾಶಿವನನ್ನು ಕಂಡಿದ್ದರು.ತಾವು ಕಂಡುಂಡ ಸದಾಶಿವನ ಅನುಭವವನ್ನು ಬಸವಣ್ಣನವರು ಮತ್ತೊಂದು ವಚನದಲ್ಲಿ ಮನದುಂಬಿ ಹಾಡಿದ್ದಾರೆ.ಬಸವಣ್ಣನವರ ಈ ವಚನವು ಯೋಗಿಯು ಹೃದಯಚಕ್ರವಾದ ಅನಾಹತಚಕ್ರವನ್ನು ಪ್ರವೇಶಿಸಿದಾಗ ಅನುಭವಿಸುವ ಸ್ಥಿತಿಯನ್ನು ಬಣ್ಣಿಸುತ್ತದೆ.ಕೆಳಗಿನ ಚಕ್ರಗಳಿಗೆ ಆಸರೆಯಾಗಿ ಮೇಲಿನ ಚಕ್ರಗಳ ಸಾರಗ್ರಹಣತತ್ತ್ವವಾಗಿರುವ ಅನಾಹತಚಕ್ರವು ಯೋಗಸಿದ್ಧಿಯ ಮಹತ್ವದ ಚಕ್ರಗಳಲ್ಲಿ ಒಂದು.ಹೃದಯಮಧ್ಯದ ಸಣ್ಣಗುಹೆಯು ಅನಾಹತಚಕ್ರವಾಗಿದೆ.ಹೊರಗೆ ಭೌತಿಕಹೃದಯ ಮಾತ್ರ ಕಾಣಿಸುತ್ತದೆ. ಅದರ ಒಡಲಲ್ಲಿ ಘೋರಕತ್ತಲೆಯನಡುವೆ ಮಿಣುಕು ಬೆಳಕಿನ, ಎಳೆಮಿಂಚಿನ ಪ್ರಕಾಶದ ಯಂ ಅಕ್ಷರವನ್ನೊಳಗೊಂಡ ಅನಾಹತ ಚಕ್ರವಿದೆ.

     ಮೂಲಾಧಾರ,ಸ್ವಾದಿಷ್ಟಾನ ಮತ್ತು ಮಣಿಪೂರ ಚಕ್ರಗಳನ್ನು ಏರಿ ಒಂದೊಂದು ಅನುಭವ,ಒಂದೊಂದು ಅನುಭೂತಿಯನ್ನು ಪಡೆದ ಯೋಗಿ ಅನಾಹತಚಕ್ರವನ್ನು ತಲುಪಿದಾಗ ಅಲ್ಲಿ ಅವನು ದಶವಿಧನಾದಗಳನ್ನು ಕೇಳಿ ತನ್ನನ್ನು ತಾನು ಮರೆಯುತ್ತಾನೆ.ಈ ತನ್ಮಯತೆಯೇ ಯೋಗನಿದ್ದೆಯು.ಯೋಗನಿದ್ದೆಯೇ ನಿದ್ರೆಯೆಂಬ ರಾಕ್ಷಸಿ.ರಾಕ್ಷಸಿಯು ಮನುಷ್ಯರನ್ನು ತಿನ್ನುತ್ತಾಳೆ ,ನುಂಗುತ್ತಾಳೆ.ರಾಕ್ಷಸಿಯದವಡೆಗೆ ಸಿಕ್ಕು ಬಳಲುವ ಪರಿಯೇ ವೀರರು ನಿಗ್ರಹಗೊಂಡು ನೀರಾಗುವ ಪರಿ.ಮೂಲಾಧಾರ,ಸ್ವಾದಿಷ್ಟಾನ,ಮಣಿಪೂರ ಚಕ್ರಗಳನ್ನು ಆರೋಹಿಸಿ ಜೀವಭಾವವನ್ನು ಉಳಿಸಿಕೊಂಡ ಯೋಗಿಯು ಅನಾಹತ ಚಕ್ರಕ್ಕೆ ತಲುಪಿದೊಡನೆ 'ದೇವಭಾವ' ತಳೆಯುತ್ತಾನೆ.ತನ್ನೊಳಗಣ ದೇವತ್ವವನ್ನು ಕಂಡು ನಿಬ್ಬೆರಗುಗೊಳ್ಳುವನು.ಈ ನಿಬ್ಬೆರಗಿನ ವಿಸ್ಮಯವೇ ಸತ್ತಂತೆ ಇರುವ ಮೂಕಕ್ರಿಯೆ.ಕಂಡುದುದನ್ನು ಆಡಲು ಆಗದ,ಭಾಷೆಯಲ್ಲಿ ಹಿಡಿದಿಡಲಾಗದ ಶಬುದುಮುಗದಕ್ರಿಯೆ.ಮೂಲಾಧಾರ ಮತ್ತು ಸ್ವಾದಿಷ್ಟಾನ ,ಮಣಿಪೂರ ಚಕ್ರಗಳ ಕರವಶದಿಂದ ನಿಗ್ರಹಾನುಗ್ರಹಸಾಮರ್ಥ್ಯ ಪಡೆದ ಯೋಗಿ ಅನಾಹತಚಕ್ರದಲ್ಲಿ ದೇಹಭಾವವಳಿದು ಶಿವಭಾವದಲ್ಲಿ ಒಡಗೂಡುವನು.ಜೀವಭಾವವಳಿದು ದೇಹಭಾವವನ್ನು ಅಂಗವಿಸಿಕೊಳ್ಳುವುದೇ ನಿತ್ಯವೂ ಜೀವನಾಶವಾಗುವ ಕ್ರಿಯೆ.ಹುಟ್ಟು ಸಾವುಗಳ ದಂದುಗದಿಂದ ಯೋಗಿಯು ಮುಕ್ತನಾಗುತ್ತಾನೆ ಎನ್ನುವುದು ನಿಚ್ಚನಿಚ್ಚ ಆಗುವ ಜೀವನಾಶದ ಸಂಕೇತ.ಅನಾಹತ ಚಕ್ರಾರೋಹಣದಲ್ಲಿ ತಾವು ಕಂಡುಂಡ ಅನುಭವವನ್ನು ಬಸವಣ್ಣನವರು ಸೊಗಸಾಗಿ ಬೆಡಗಿನ ವಚನದ ರೂಪದಲ್ಲಿ ಬಣ್ಣಿಸಿದ್ದಾರೆ.