ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನ ಯಾರ ಮುಡಿಗೆ.....?
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನ ಯಾರ ಮುಡಿಗೆ.....?
ಕಲಬುರಗಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯು ಇದೇ ನವಂಬರ್ 9 ರ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆ ವರೆಗೆ ಮತದಾನ ನಡೆಯಲಿದ್ದು, ಆನಂತರ ಚುನಾವಣಾ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಅಂದೆ ಫಲಿತಾಂಶ ಪ್ರಕಟಗೊಳ್ಳಲಿದೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ೪ ಜನ ಸೇರಿ ಒಟ್ಟು ೬೦ ಸ್ಪರ್ಧಿಗಳು ಕಣದಲ್ಲಿದ್ದಾರೆ. ಒಬ್ಬ ಮತದಾರ ೨೫ ಮತ ಚಲಾಯಿಸಬಹುದಾಗಿದೆ.
ಅಧ್ಯಕ್ಷರ ಸ್ಥಾನಕ್ಕೆ 1 ಮತ, ಉಪಾಧ್ಯಕ್ಷ ಸ್ಥಾನಕ್ಕೆ 3 ಮತ, ಕಾರ್ಯದರ್ಶಿ ಸ್ಥಾನಕ್ಕೆ 3 ಮತ,
ಪ್ರಧಾನ ಕಾರ್ಯದರ್ಶಿ 1 ಮತ, ಖಜಾಂಚಿ ಸ್ಥಾನಕ್ಕೆ 1 ಮತ, ಜಿಲ್ಲಾ ಕಾರ್ಯಕಾರಿ ಸಮಿತಿಗೆ 15, ರಾಜ್ಯ ಸಮಿತಿಗೆ 1 ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ.
ಬಾಬುರಾವ ಯಡ್ರಾಮಿ ,ಚಂದ್ರಶೇಖರ್ ಕೌಲಗಾ, ದೇವೇಂದ್ರಪ್ಪ ಆವಂಟಿ, ಬಿ. ವಿ ಚಕ್ರವರ್ತಿ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.
ಕಲಬುರ್ಗಿ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೊಂದಾಯಿತ ಸದಸ್ಯರ ಸಂಖ್ಯೆ ೪೧೬ ಮತಗಳಿವೆ, ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ, ಈ ನಾಲ್ವರ ಮಧ್ಯೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ಬಾಬುರಾವ್ ಯಡ್ರಾಮಿ ಅವರು ಈ ಹಿಂದೆ ಮೂರು ಬಾರಿ ಆಯ್ಕೆಯಾಗಿದ್ದು, ನಾಲ್ಕನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ .ಇವರ ಅಧಿಕಾರದ ಅವಧಿಯಲ್ಲಿ ಸಂಘದ ಏಳಿಗೆಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದು, ಪತ್ರಿಕಾ ಭವನ ಹಾಗೂ ಪತ್ರಕರ್ತರಿಗೆ ಸುಸಜ್ಜಿತ ಕಛೇರಿ ಮತ್ತು ಭವನವನ್ನು ನವಿಕರಣಗೊಳಿಸಿದ್ದಾರೆ. ಸಂಘದಲ್ಲಿ ತಕ್ಕ ಮಟ್ಟಿಗೆ ಹಣ ಇಡಗಂಟು ಕೂಡ ಇಟ್ಟಿದ್ದಾರೆಂದು ತಿಳಿದು ಬಂದಿದೆ.
ಪತ್ರಕರ್ತರು ಮರಣ ಹೊಂದಿದರೆ ಅವರಿಗೆ ಶವ ಸಂಸ್ಕಾರಕ್ಕಾಗಿ ಸಹಾಯಧನ ಸಹ ಮೀಸಲಿಟ್ಟಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಪತ್ರಕರ್ತರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದ ಈ ಚುನಾವಣೆ ಗೆಲ್ಲಲು ಬೆಂಬಲಿಸಿ ಎಂದು ಪತ್ರಕರ್ತರಲ್ಲಿ ಮನವಿ ಮಾಡಿದ್ದಾರೆ.
ಚಂದ್ರಶೇಖರ್ ಕೌಲಗಾ ಅವರು ಒಂದು ವರ್ಷದಿಂದ ಚುನಾವಣೆಯ ತಯಾರಿ ನಡೆಸುತ್ತಿದ್ದು, ಈಗಾಗಲೇ ಎಲ್ಲಾ ಮತದಾರರಿಗೆ ತಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡುತ್ತಿದ್ದು, ನನ್ನನ್ನು ಗೆಲ್ಲಿಸಿದರೆ ಸಂಘದ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಅಲ್ಲದೆ ಎಲ್ಲಾ ಪತ್ರಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳುತ್ತಿದ್ದಾರೆ.
ಇನ್ನು ಹಿರಿಯ ಪತ್ರಕರ್ತ ದೇವಿಂದ್ರಪ್ಪ ಆವಂಟಿ ಯವರು ಸರಳ ಜೀವಿಯಾಗಿದ್ದು, ಎಲ್ಲರೊಂದಿಗೆ ಬೆರೆಯುವ ಮನೋಭಾವ ಹೊಂದಿದ್ದಾರೆ. ಪ್ರಥಮ ಬಾರಿಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಇವರು ನಮ್ಮನ್ನು ಬೆಂಬಲಿಸಿದರೆ ಸಂಘದಲ್ಲಿ ಹೊಸ ಬದಲಾವಣೆ ತರುತ್ತೇನೆ ಎಂದು ಆಶ್ವಾಸನೆ ನೀಡುತ್ತಿದ್ದಾರೆ.
ಹಾಗೇಯೇ ಬಿ ವಿ ಚಕ್ರವರ್ತಿ ಇವರು ಸಹ ಹಿರಿಯ ಪತ್ರಕರ್ತರಾಗಿದ್ದು, ರಾಜಕೀಯ ಚುನಾವಣೆಗಳನ್ನು ಎದುರಿಸಿದ ಅನುಭವ ಹೊಂದಿದ್ದಾರೆ. ಈ ಚುನಾವಣೆಯಲ್ಲಿ ಅವರು ತಮ್ಮ ಅನುಭವವನ್ನು ಬಳಸಿಕೊಂಡು ಗೆಲುವಿನತ್ತ ಹೇಗೆ ಹೆಜ್ಜೆ ಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಈ ನಾಲ್ವರಲ್ಲಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.
