ಕೋಟ, ಮಾಲೀಕಯ್ಯ, ಸುನಿಲ್, ಶ್ರೀನಾಥ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಈಡಿಗ,ಬಿಲ್ಲವರ ಭಾರಿ ಶಕ್ತಿ ಪ್ರದರ್ಶನಕ್ಕೆ ಸಜ್ಜು
ಕೋಟ, ಮಾಲೀಕಯ್ಯ, ಸುನಿಲ್, ಶ್ರೀನಾಥ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಈಡಿಗ,ಬಿಲ್ಲವರ ಭಾರಿ ಶಕ್ತಿ ಪ್ರದರ್ಶನಕ್ಕೆ ಸಜ್ಜು
ಕಲಬುರಗಿ : ಡಾ. ಪ್ರಣವಾನಂದ ಸ್ವಾಮೀಜಿಯವರು ಆರಂಭಿಸಿದ 700 ಕಿ.ಮೀ ಐತಿಹಾಸಿಕ ಪಾದಯಾತ್ರೆಯ ಸಮಾರೋಪ ಸಮಾರಂಭ ಫೆ. 12ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದ್ದು ಕೋಟ ಶ್ರೀನಿವಾಸ ಪೂಜಾರಿ, ಮಾಲಿಕಯ್ಯ ಗುತ್ತೇದಾರ್ ,ಎಚ್.ಆರ್ ಶ್ರೀನಾಥ್ ಧಣಿ,ಸುನಿಲ್ ಕುಮಾರ್ ಮುಂತಾದ ನಾಯಕರು ಈಡಿಗರ ಶಕ್ತಿ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರು ಫ್ರೀಡಂ ಪಾರ್ಕ್ ಗೆ ಫೆ .12 ರಂದು ಬೆಳಿಗ್ಗೆ 10 ಗಂಟೆಗೆ ಪಾದಯಾತ್ರೆ ತಲುಪಲಿದ್ದು ಇದಕ್ಕಾಗಿ ರಾಜ್ಯದ ಎಲ್ಲಾ ತಾಲೂಕುಗಳಿಂದ ಬಸ್,ರೈಲು ಮತ್ತು ಖಾಸಗಿ ವಾಹನಗಳ ಮೂಲಕ ಸಮಾಜ ಬಾಂಧವರು ಆಗಮಿಸಲು ಪೂರ್ವ ತಯಾರಿಯನ್ನು ಕೈಗೊಳ್ಳಲಾಗಿದೆ.
ಈ ಹೋರಾಟವು ಸರಕಾರ,ಪಕ್ಷ ಮತ್ತು ವ್ಯಕ್ತಿಗಳ ವಿರುದ್ಧವಲ್ಲ. ಇದು ರಾಜ್ಯದ ಅತಿ ಹಿಂದುಳಿದ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ಸ್ವಾಭಿಮಾನದ ಹೋರಾಟವಾದಗಿದ್ದು ಆರ್ಥಿಕ,ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಮತ್ತು ಕುಲಕಸುಬು ಕಳೆದುಕೊಂಡ ಸಮುದಾಯದ ಜನರಿಗೆ ನ್ಯಾಯ ಒದಗಿಸುವ ಹೋರಾಟವಾಗಿದೆ. ಡಾ. ಪ್ರಣವಾನಂದ ಸ್ವಾಮೀಜಿಯವರು ಮೂರನೇ ಬಾರಿಗೆ ಪಾದಯಾತ್ರೆ ಕೈಗೊಳ್ಳುತ್ತಿರುವುದು ಸಮಾಜದ ಹಿತಕ್ಕಾಗಿ. ಆದುದರಿಂದ ಪಕ್ಷ ಪಂಗಡಗಳೆಂಬ ಭೇದವಿಲ್ಲದೆ ಎಲ್ಲರೂ ಬೆಂಬಲಿಸುವುದು ಅಗತ್ಯವಾಗಿದೆ. ಈ ಹೋರಾಟದಲ್ಲಿ ಸರಕಾರದ ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸಲು ಈಗಾಗಲೇ ಸರಕಾರದ ಅತಿಗಣ್ಯ ನಾಯಕರೊಡನೆ ಚರ್ಚಿಸಲಾಗಿದೆ ಎಂದು ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಸದಸ್ಯರು ಹಾಗೂ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಮಾಜಿ ವಿಧಾನಪರಿಷತ್ ಸದಸ್ಯರಾದ ಸಮಾಜದ ಹಿರಿಯ ಮುಖಂಡ ಎಚ್ ಆರ್ ಶ್ರೀನಾಥ್ ಧಣಿ, ಸಮಾಜದ ಮುಖಂಡರಾದ ಬಿಜೆಪಿಯ ಹಿರಿಯ ನಾಯಕ ಸುನಿಲ್ ಕುಮಾರ್ ಕಾರ್ಕಳ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಾಗರದ ಎಚ್ ಜಿ ಪ್ರಶಾಂತ್, ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಜೆಡಿಎಸ್ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್, ಅಶೋಕ್ ಗುತ್ತೇದಾರ್ ಬಡದಾಳ, ಡಾ ರಾಜಶೇಖರ ಸೇಡಂಕರ್ ಬೀದರ್, ವೆಂಕಟೇಶ ಎಂ ಕಡೇಚೂರ್, ಬಿಲ್ಲವ ಮುಖಂಡರಾದ ಕಾಪು ಚಂದ್ರಶೇಖರ್ , ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ರಾದ ಪ್ರತಿಭಾ ಕುಳಾಯಿ, ವೆಂಕಟೇಶ ಗುಂಡಾನೂರು, ಧೀವರ ನಾಯಕ ಡಾ. ಮಂಚೇಗೌಡ, ಕೆಪಿಎಸ್‌ಸಿ ಮಾಜಿ ಸದಸ್ಯ ಲಕ್ಷ್ಮೀ ನರಸಯ್ಯ, ಮಹಾದೇವ ಗುತ್ತೇದಾರ್, ರಾಷ್ಟ್ರೀಯ ಈಡಿಗ ಮಹಾಮಂಡಲದ ರಾಜ್ಯ ಅಧ್ಯಕ್ಷ ತಿಪ್ಪೇಶ್, ಪ್ರವೀಣ್ ಜತ್ತನ್, ಶಕ್ತಿಪೀಠದ ಮಾಧ್ಯಮ ಸಂಚಾಲಕ ಡಾ. ಸದಾನಂದ ಪೆರ್ಲ, ಕಾಶಿನಾಥ್ ಗುತ್ತೇದಾರ್ ಚಿತ್ತಾಪುರ, ಸುರೇಶ್ ಗುತ್ತೇದಾರ್ ಕರದಾಳ ಶ್ರೀಮತಿ ಪೂರ್ಣಿಮಾ, ರಾಧಾ ಉಮೇಶ್ ಮುಂತಾದ ಅನೇಕ ಗಣ್ಯರು ಶಕ್ತಿ ಪ್ರದರ್ಶನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
*ಬೇಡಿಕೆ ಈಡೇರಿಸದಿದ್ದರೆ ನಿರಶನ ಸತ್ಯಾಗ್ರಹ ಡಾ.ಪ್ರಣವಾನಂದ ಶ್ರೀ*
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ
ಜ.6 ರಿಂದ ಪ್ರಾರಂಭಿಸಿದ ಪಾದಯಾತ್ರೆ ಫೆ. 12ರಂದು ಬೆಂಗಳೂರು ತಲಪುತ್ತಿದ್ದರೂ ಸರಕಾರವು ಹೋರಾಟವನ್ನು ನಿರ್ಲಕ್ಷ್ಯ ಮಾಡಿರುವುದರಿಂದ ಕನಿಷ್ಠ 18 ಬೇಡಿಕೆಗಳಲ್ಲಿ 5 ಬೇಡಿಕೆಗಳನ್ನಾದರೂ ಈಡೇರಿಸ ದಿದ್ದರೆ ಮಾತ್ರ ಹೋರಾಟ ಮುಂದುವರಿಸಲಾಗುವುದು. ಹೋರಾಟಕ್ಕೆ ಸ್ಪಂದಿಸದಿದ್ದರೆ ನಿರಶನ ಸತ್ಯಾಗ್ರಹ ಮುಂದುವರಿಯಲಿ ದೆ ಎಂದು ಡಾ. ಪ್ರಣವಾನಂದ ಶ್ರೀಗಳು ಮತ್ತೆ ಸ್ಪಷ್ಟಪಡಿಸಿದ್ದಾರೆ.
ಈಡಿಗ ಬಿಲ್ಲವ ಸೇರಿದಂತೆ 26ಪಂಗಡಗಳ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನಬದ್ಧವಾಗಿ ಜೀವನ ಮಾಡಲು ಅವಕಾಶ ಕಲ್ಪಿಸಬೇಕು ಮತ್ತು ಕುಲಕಸುಬು ಕಿತ್ತುಕೊಂಡು ಬೀದಿಪಾಲಾದ ಸಮುದಾಯದ ಕಲ್ಯಾಣಕ್ಕಾಗಿ ಈ ಹೋರಾಟ ನಡೆಯುತ್ತಿದ್ದು ಇದರಲ್ಲಿ ಯಾವುದೇ ಪಕ್ಷ ಸಂಘಟನೆ ಎಂಬ ಭೇದವಿಲ್ಲದೆ ಅತಿ ಹಿಂದುಳಿದ ಸ್ವಾಮೀಜಿಗಳ ಬೆಂಬಲದೊಂದಿಗೆ ಪಾದಯಾತ್ರೆ ಸಾಗುತ್ತಿದೆ ಎಂದು ಹೇಳಿದರು.
ಫೆ. 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಶಕ್ತಿ ಪ್ರದರ್ಶನದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಡಾ ಪ್ರಣವಾನಂದ ಶ್ರೀಗಳು ಮನವಿ ಮಾಡಿದ್ದಾರೆ ಎಂದು ಕರದಾಳು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ತಿಳಿಸಿದರು.
