ಮಹಾಶಿವರಾತ್ರಿ ಹಾಗೂ 6ನೇ ಅವತಾರೋತ್ಸವ: ಯಾನಗುಂದಿಯಲ್ಲಿ ವೈಭವದ ಸಿದ್ಧತೆ

ಮಹಾಶಿವರಾತ್ರಿ ಹಾಗೂ 6ನೇ ಅವತಾರೋತ್ಸವ: ಯಾನಗುಂದಿಯಲ್ಲಿ ವೈಭವದ ಸಿದ್ಧತೆ

ಮಹಾಶಿವರಾತ್ರಿ ಹಾಗೂ 6ನೇ ಅವತಾರೋತ್ಸವ: ಯಾನಗುಂದಿಯಲ್ಲಿ ವೈಭವದ ಸಿದ್ಧತೆ

ಯಾನಗುಂದಿ: ಶ್ರೀ ಶ್ರೀ ಶ್ರೀ ಜಗದ್ಗುರು ರೂಪರಹಿತ ಅಹಿಂಸಾ ಯೋಗೇಶ್ವರಿ ವೀರಧರ್ಮಜ ಮಾತಾ (ಶ್ರೀ ಮಾತಾ ಮಾಣಿಕೇಶ್ವರಿ) ಆಶ್ರಮ ಟ್ರಸ್ಟ್, ಯಾನಗುಂದಿ ವತಿಯಿಂದ ಮಹಾಶಿವರಾತ್ರಿ ಹಾಗೂ 6ನೇ ಅವತಾರೋತ್ಸವ ಕಾರ್ಯಕ್ರಮಗಳು ಭಕ್ತಿ ವೈಭವದಿಂದ ಜರುಗಲಿವೆ ಎಂದು ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ತಿಳಿಸಿದರು.

ಸ್ವಸ್ತಿಶ್ರೀ ಶಾಲಿವಾಹನ ಶಕೆ 1947, ಶ್ರೀ ವಿಶ್ವಾವಸು ನಾಮ ಸಂವತ್ಸರ, ಮಾಘ ಬಹುಳ ತ್ರಯೋದಶಿ ರವಿವಾರ, ದಿನಾಂಕ 15-02-2026 ರಂದು ಬೆಳಿಗ್ಗೆ 9.00 ಗಂಟೆಯಿಂದ ಮಹಾನ್ಯಾಸಪೂರ್ವಕ ಮಹಾರುದ್ರಾಭಿಷೇಕ, ಪಾದುಕಾ ಪೂಜೆ, ಮಹಾಮಂಗಳ ಹಾರತಿ ನಡೆಯಲಿದೆ. ಮಧ್ಯಾಹ್ನ 12.00 ಗಂಟೆಯಿಂದ ಮಾತಾಜಿಯವರ ಸನ್ನಿಧಾನದಲ್ಲಿ ಮಹಾಶಿವರಾತ್ರಿ ಉತ್ಸವ ಜರುಗಲಿದೆ.

ಸೋಮವಾರ, 16-02-2026 ರಂದು ಸಂಜೆ 7.00 ಗಂಟೆಗೆ ಮಹಾರಥೋತ್ಸವ ಜರುಗಲಿದ್ದು, ಮಂಗಳವಾರ, 17-02-2026 ರಂದು ಬೆಳಿಗ್ಗೆ 9.00 ಗಂಟೆಗೆ ಪಲ್ಲಕ್ಕಿ ಸೇವೆ ನೆರವೇರಲಿದೆ.

ಇದೇ ವೇಳೆ ಫೆಬ್ರವರಿ 27ರಿಂದ ಮಾರ್ಚ್ 03, 2026ರವರೆಗೆ ಶ್ರೀ ಶ್ರೀ ಶ್ರೀ ಸದ್ಗುರು ರೂಪರಹಿತ ಅಹಿಂಸಾ ಯೋಗೇಶ್ವರಿ ವೀರಧರ್ಮಜ ಮಾತಾಜಿ (ಮಾತಾ ಮಾಣಿಕೇಶ್ವರಿ) ಯವರ 6ನೇ ಅವತಾರೋತ್ಸವ ವೈಭವದಿಂದ ಆಚರಿಸಲಾಗುವುದು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮಹಾದಾಸೋಹ, ಕುಡಿಯುವ ನೀರು ಹಾಗೂ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿವರ್ಷ ಕಾರ್ಯಕ್ರಮದ ಸಂದರ್ಭದಲ್ಲಿ ಸರಗಳ್ಳತನ ಪ್ರಕರಣಗಳು ಜರುಗುತ್ತಿರುವ ಹಿನ್ನೆಲೆ, ಈ ಬಾರಿ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಮಹಿಳಾ ಭಕ್ತಾದಿಗಳು ಅಮೂಲ್ಯವಾದ ಆಭರಣಗಳನ್ನು ಧರಿಸದೆ ಆಗಮಿಸಬೇಕೆಂದು ಮನವಿ ಮಾಡಲಾಗಿದೆ.

ಕಾರ್ಯಕ್ರಮದ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದ್ದು, ಅಗತ್ಯವಿದ್ದಲ್ಲಿ ನೆರೆಯ ತೆಲಂಗಾಣ ರಾಜ್ಯದ ಪತ್ತೆದಳ ಪೊಲೀಸರ ಸಹಕಾರವೂ ಪಡೆಯಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ಸದಸ್ಯ ಶ್ರೀ ಸಿದ್ರಾಮಪ್ಪ ನಮ್ಮೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಭಕ್ತಾದಿಗಳೆಲ್ಲರೂ ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಮಾತಾಜಿಯವರ ದಿವ್ಯ ದರ್ಶನಾಶೀರ್ವಾದ ಪಡೆದು ಪುನೀತರಾಗಬೇಕೆಂದು ಟ್ರಸ್ಟ್ ವತಿಯಿಂದ ಮನವಿ ಮಾಡಲಾಗಿದೆ.