ಮಳಖೇಡ ಅನುದಾನಕ್ಕಾಗಿ ಬ್ಲ್ಯಾಂಕ್ ಚೆಕ್ : ಸಚಿವ ಡಾ.ಶರಣಪ್ರಕಾಶ ಪಾಟೀಲ
ಮಳಖೇಡ ಅನುದಾನಕ್ಕಾಗಿ ಬ್ಲ್ಯಾಂಕ್ ಚೆಕ್ : ಸಚಿವ ಡಾ.ಶರಣಪ್ರಕಾಶ ಪಾಟೀಲ
ನನ್ನ ರಾಜಕೀಯ ಆರಂಭದಿಂದ ಹಿಡಿದು ನಾಲ್ಕು ಭಾರಿ ಶಾಸಕ ಹಾಗೂ ಎರಡು ಭಾರಿ ಸಚಿವನಾಗಿ ಜನರ ಸೇವೆ ಸಲ್ಲಿಸುತ್ತಿರುವುದಕ್ಕೆ ಮೂಲ ಕಾರಣ ಮಳಖೇಡ ಪಂಚಾಯತ್, ನಾನು ಜಿ.ಪಂ ಸದಸ್ಯ ಮಳಖೇಡದಿಂದ ಪ್ರತಿನಿಧಿಸಿ ರಾಜಕೀಯ ಪ್ರವೇಶ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಮಳಖೇಡ ಅನುದಾನ ವಿಷಯದಲ್ಲಿ ಬ್ಲ್ಯಾಂಕ್ ಚೆಕ್ ಇದ್ದ ಹಾಗೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಮಳಖೇಡ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತ ಸಮುದಾಯದವರ ಕಬರಸ್ಥಾನ ಸುತ್ತಲೂ ಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಮಳಖೇಡ ಅಭಿವೃದ್ಧಿಗೆ 2 ಕೋಟಿಗೂ ಅಧಿಕ ಅನುದಾನ ತರಲಾಗಿದ್ದು, ಬಾಕಿ ಇರುವ ಕಾಮಗಾರಿಗಳಿಗೆ 4.5 ಕೋಟಿ ಹಣ ಬಿಡುಗಡರ ಮಾಡಿಸಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದರು.
ಬಹು ದಿನದ ಬೇಡಿಕೆಯಾಗಿದ್ದ ಕಬರ್ ಸ್ಥಾನ ಸುತ್ತಲಿನ ಗೋಡೆಗೆ ಈಗ 10 ಲಕ್ಷ ಮಂಜೂರು ಮಾಡಿದ್ದು, ನಂತರ 20 ಲಕ್ಷ ರೂಗಳನ್ನು ಕಾರ್ಯ ಯೋಜನೆಯಲ್ಲಿ ಇರಿಸಲಾಗಿದೆ. ಮಳಖೇಡ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೂತನ ಜಾಕ್ ವೆಲ್ ನಿರ್ಮಾಣ ಮಾಡಲು ಈಗಾಗಲೇ ಸ್ಥಳ ಗುರುತಿಸಿದ್ದು ಶೀಘ್ಯದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.
ವೇದಿಕೆ ಮೇಲೆ ಕಾಂಗ್ರೆಸ್ ಮುಖಂಡ ರಾಜಶೇಖರ ಪುರಾಣಿಕ್, ಪಂಚಾಯತ್ ಅಧ್ಯಕ್ಷ ದಿನೇಶ್ ಉಪಸ್ಥಿತರಿದ್ದರು.
