ವಕೀಲರ ಯೋಗಕ್ಷೇಮಕ್ಕಾಗಿ ಸ್ಪರ್ಧೆ ರಾಜಕೀಯದಿಂದ ದೂರ, ಸೇವೆಯೇ ಧ್ಯೇಯ ನಾರಾಯಣ ಸ್ವಾಮಿ
ವಕೀಲರ ಯೋಗಕ್ಷೇಮಕ್ಕಾಗಿ ಸ್ಪರ್ಧೆ ರಾಜಕೀಯದಿಂದ ದೂರ, ಸೇವೆಯೇ ಧ್ಯೇಯ ನಾರಾಯಣ ಸ್ವಾಮಿ
ಕಲಬುರಗಿ:ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ನಾರಾಯಣ ಸ್ವಾಮಿ ಅವರು ಇಂದು ಕಲಬುರಗಿ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯದಲ್ಲಿ ಚುನಾವಣಾ ಪ್ರಚಾರ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ತಾವು ಯಾವುದೇ ರಾಜಕೀಯ ಪಕ್ಷ ಅಥವಾ ಗುಂಪಿಗೆ ಸೇರಿದವರಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಕೀಲರ ಯೋಗಕ್ಷೇಮ ಮತ್ತು ಸೇವೆಗಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ತಿಳಿಸಿದರು. ವಕೀಲರ ಮೇಲೆ ಅಟ್ರಾಸಿಟಿ ಪ್ರಕರಣಗಳು ದಾಖಲಾಗಿದಾಗ ಅಥವಾ ಅನ್ಯಾಯವಾದಾಗ ಸದಾ ಧ್ವನಿ ಎತ್ತಿ ಹೋರಾಟ ನಡೆಸಿರುವುದಾಗಿ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಯುವ ವಕೀಲರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗಾಗಲೇ 16 ಜಿಲ್ಲೆಗಳನ್ನು ಸುತ್ತಿ ವಕೀಲರ ಸಮಸ್ಯೆಗಳ ಅರಿವು ಮಾಡಿಕೊಂಡಿದ್ದೇನೆ. ಕೆಲ ಹಿರಿಯ ವಕೀಲರೂ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು. ವಕೀಲರಿಗಾಗಿ ಆರೋಗ್ಯ ವಿಮೆ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
“ನಾನು ರಾಜಕಾರಣಿ ಅಲ್ಲ. ಭ್ರಷ್ಟ ರಾಜಕಾರಣಿಗಳು ತಮ್ಮ ಕ್ಷೇತ್ರಗಳನ್ನು ಕಬಳಿಸಿ ಜನರನ್ನು ಕತ್ತಲಲ್ಲಿ ಇಟ್ಟಿದ್ದಾರೆ. ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಕೀಲರ ಪಾತ್ರ ಮಹತ್ವದ್ದು. ಸ್ವಾತಂತ್ರ್ಯ ಹೋರಾಟದಲ್ಲೂ ವಕೀಲರು ಪ್ರಮುಖ ಪಾತ್ರವಹಿಸಿದ್ದರು,” ಎಂದು ಹೇಳಿದರು.
ಈ ಹಿಂದೆ ಬೆಂಗಳೂರಿನಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದ ಅವರು, ವಕೀಲರು ರಾಜಕೀಯದತ್ತ ಮುಖ ಮಾಡದೆ ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ವಕೀಲರ ರಕ್ಷಣೆಗಾಗಿ ಹೆಚ್ಚಿನ ಕಾನೂನು ರೂಪಿಸುವ ಅಗತ್ಯವಿದೆ ಎಂದೂ ತಿಳಿಸಿದರು.ವಕೀಲರ ಸೇವೆ ಮಾಡಲು ಅವಕಾಶ ನೀಡುವಂತೆ ಮತದಾರರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಂಪೇಗೌಡ ಅವಿನಾಶ್ ರಾಜಶೇಖರ್,ಗುರು ಭಡಾರಿ,ಯಲ್ಲಾಲಿಂಗ ದೊರೆ ಸೇರಿದಂತೆ ಅನೇಕರು ವಕೀಲರು ಉಪಸ್ಥಿತರಿದ್ದರು.
