ಆರೋಗ್ಯ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ: ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ: ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ:

ಆರೋಗ್ಯ ಸೇವೆಗಳನ್ನು ಸುಧಾರಿಸಿ,ಗುಣಮಟ್ಟದ ಸೇವೆ ಖಾತ್ರಿಪಡಿಸಿ

ಆರೋಗ್ಯ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಕಟ್ಟುನಿಟ್ಟಿನ ಸೂಚನೆ

ಕಲಬುರಗಿ,ಫೆ.8( ಕಲ್ಯಾಣ ಕಹಳೆ ವಾರ್ತೆ ) ಬಡವ ಬಲ್ಲಿದ‌ ಎನ್ನದೆ ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಸುಧಾರಣೆಯಾಗಬೇಕು. ಗುಣಮಟ್ಟದ ಸೇವೆಯನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರವಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಲಬುರಗಿ ವಿಭಾಗ ಮಟ್ಟದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಅಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣಗಳು, ಔಷಧಗಳ ಕೊರತೆಯಿಂದ ರೋಗಿಗಳ ಸೇವೆಯಲ್ಲಿ ವ್ಯತ್ಯಯವಾಗದಂತೆ ವೈದ್ಯರು ಎಚ್ಚರಿಕೆ ವಹಿಸಬೇಕು ಎಂದರು.

ಕಲಬುರಗಿ ಜಿಲ್ಲಾ ಆಸ್ಪತ್ರೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕೂಡಲೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದಲ್ಲದೆ ವಿಜಯನಗರ ಹೊಸ ಜಿಲ್ಲೆಗೆ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಔಷಧ ಉಗ್ರಾಣ ಕೇಂದ್ರ ಸ್ಥಾಪನೆಗೆ ಶೀಘ್ರ ಅನುಮೋದನೆ ನೀಡಲಾಗುವುದು ಎಂದರು.

ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಔಷಧ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ, ಕೆ.ಎಸ್‌.ಎಂ.ಎಸ್‌.ಸಿ.ಎಲ್. ಸಂಸ್ಥೆಯಿಂದ ಔಷಧಿಗಳ ಕೊರತೆ, ಹಾಗೂ ಕೊಪ್ಪಳದಲ್ಲಿ ಸಿಬಿನಾಟ್ ಕಾರ್ಟ್ರಿಜ್‌ಗಳ ಅಭಾವದಿಂದ ಕ್ಷಯರೋಗಿಗಳ ಪರೀಕ್ಷೆಗೆ ತೊಂದರೆ ಉಂಟಾಗಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವ ದಿನೇಶ ಗುಂಡೂರಾವ್ ಅವರು, ಮುಂದೆ ಇದು ಮರುಕಳಿಸದಂತೆ ಪರಿಹಾರ ಕ್ರಮ ಕೈಗೊಳ್ಳುವಂತೆವಡಿ.ಎಚ್.ಓ. ಗಳಿಗೆ ನಿರ್ದೇಶನ ನೀಡಿದರು.

ಪ್ರಸಕ್ತ 2025-26ನೇ‌ ಸಾಲಿನಲ್ಲಿ ಡಿಸೆಂಬರ್ ಅಂತ್ಯದ ವರೆಗೆ 90 ತಾಯಿ ಮರಣ ಪ್ರಮಾಣ (ಎಂ.ಎಂ.ಆರ್) ವಿಭಾಗದಲ್ಲಿ ದಾಖಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 28 ತಾಯಂದಿರು ಮರಣ ಹೊಂದಿರುವುದು ಕಳವಳಕಾರ‌ ಸಂಗತಿ. ಪ್ರತಿ ಮರಣದ ಪ್ರಕರಣವನ್ನು ಆಳವಾಗಿ ವಿಶ್ಲೇಷಿಸಿ, ಲೋಪದೋಷಗಳನ್ನು ಸರಿಪಡಿಸಬೇಕು. ಮುಂದಿನ ದಿನದಲ್ಲಿ ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಕಡ್ಡಾಯವಾಗಿ ಆಸ್ಪತ್ರೆ ಹೆರಿಗೆ ಹೆಚ್ಚಿಸಬೇಕು. ಈ ಕುರಿತು ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ‌ ಸಚಿವ‌ ದಿನೇಶ್ ಗುಂಡೂರಾವ್ ತಿಳಿಸಿದರು.

ಕಳೆದ‌ ಆಗಸ್ಟ್ ಮಾಹೆಯಿಂದ ಆರಂಭಿಸಲಾದ "ಗೃಹ ಆರೋಗ್ಯ" ಯೋಜನೆಯಡಿ ಮನೆ ಮನೆಗೆ ತೆರಳಿ ತಪಾಸಣೆ ನಡೆಸುವ ಕಾರ್ಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ 2,40,961 ಜನರನ್ನು ಸ್ಕ್ರೀನಿಂಗ್ ಮಾಡಿ ವಿಭಾಗದಲ್ಲಿಯೆ ಮುಂಚೂಣಿಯಲ್ಲಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಇದೇ‌ ರೀತಿಯ ಪ್ರಗತಿ ಇತರೆ ಜಿಲ್ಲೆಯಿಂದಲು ಅಪೇಕ್ಷಿಸಲಾಗುತ್ತದೆ ಎಂದರಲ್ಲದೆ ಡಯಾಲಿಸಿಸ್ ಸೇವೆ ನೀಡುವಲ್ಲಿ ಕಲಬುರಗಿ ಮತ್ತು ಬೀದರ್ ಜಿಲ್ಲೆಗಳು ಮುಂಚೂಣಿಯಲ್ಲಿರುವುದಕ್ಕೆ ಸಮಾಧಾನಪಟ್ಟರು.

ಟೆನೆಕ್ಟೆಪ್ಲೇಸ್’ ಇಂಜೆಕ್ಷನ್‌ ಲಭ್ಯತೆ ಖಚಿತಪಡಿಸಿಕೊಳ್ಳಿ:

ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಈವರೆಗೆ 83,573 ಇಸಿಜಿಗಳನ್ನು ನಡೆಸಲಾಗಿದ್ದು, ಸುಮಾರು 41,043 ಅಸಹಜ ಇಸಿಜಿಗಳು ಪತ್ತೆಯಾಗಿದ್ದು, ತುರ್ತು ಹೃದಯಾಘಾತದ ಪ್ರಕರಣದಲ್ಲಿ ಇದುವರೆಗೆ 182 ಜನ ರೋಗಿಗಳಿಗೆ ಜೀವ ಉಳಿಸುವ ‘ಟೆನೆಕ್ಟೆಪ್ಲೇಸ್’ ಇಂಜೆಕ್ಷನ್‌ ನೀಡಲಾಗಿದೆ. ಈ ಇಂಜೆಕ್ಷನ್ ಆಸ್ಪತ್ರೆಯಲ್ಲಿ ಲಭ್ಯತೆ ಇರುವಂತೆ ಆರೋಗ್ಯ ಕೇಂದ್ರಗಳು ಖಚಿತಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್, ಶಾಸಕ ಜಗದೇವ್ ಗುತ್ತೇದಾರ್, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭನ್ವರ್ ಸಿಂಗ್ ಮೀನಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಗುರುದತ್ತ ಹೆಗಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ

(ರಾಷ್ಟ್ರೀಯ ಆರೋಗ್ಯ ಅಭಿಯಾನ) ಅವಿನಾಶ ಮೆನನ್ ರಾಜೇಂದ್ರನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಕೆ.ವಸಂತಕುಮಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಪರ ನಿರ್ದೇಶಕಿ ಚೆನ್ನಮ್ಮ ಕಟ್ಟಿ, ಕಲಬುರಗಿ ವಿಭಾಗಿಯ ಸಹ ನಿರ್ದೇಶಕ ಶಂಕ್ರಪ್ಪ ಮೈಲಾರೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಿಗಿ ಸೇರಿದಂತೆ ವಿಭಾಗದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ಇತರೆ ಕಾರ್ಯಕ್ರಮ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.