ಒಕ್ಕಲಿಗ ಮುದ್ದಣ್ಣ

ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ. ಇಂತೀ ನಾಲ್ಕರ ಮಧ್ಯದ ಮನೆಗೆ
ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ,
ಮಾಂಸದ ಗೋಡೆ, ಚರ್ಮದ ಹೊದಿಕೆ,
ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಯ್ಯಾ.
ಆ ಮನೆಗೊಂಬತ್ತು ಬಾಗಿಲು, ಇಡಾ ಪಿಂಗಳ ವೆಂಬ ಗಾಳಿಯ ಬಾದಳ, ಮೃದು ಕಠಿಣ ವೆಂಬವೆರಡು ಅಗುಳಿಯ ಭೇದ ನೋಡಾ,
ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ,
ದಿವಾರಾತ್ರಿಯೆಂಬ ಅರುಹು ಮರಹಿನ ಉಭಯವ ಕದಕಿತ್ತು ನೋಡಯ್ಯಾ.
ಮನೆ ನಷ್ಟವಾಗಿ ಹೋದಡೆಯೂ ಮನೆಯೊಡೆಯ ಮರಳಿ ಮತ್ತೊಂದು ಮನೆಗೆ ಒಪ್ಪುದು ತಪ್ಪದು ನೋಡಯ್ಯಾ ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ, ಕಾಮಭೀಮ ಜೀವಧನದೊಡೆಯ
ನಿಮ್ಮ ಧರ್ಮ ನಿಮ್ಮ ಧರ್ಮ.
**
*ಒಕ್ಕಲಿಗ ಮುದ್ದಣ್ಣ*
** *ವಚನ ಅನುಸಂಧಾನ*
ಶರಣ ಧರ್ಮ; ದುಡಿವವರ ಶ್ರಮಸಂಸ್ಕೃತಿಯ ಧರ್ಮವಾಗಿದೆ. ಗುಡಿಗುಂಡಾರದೊಳಗಿರುವಂಥ ಸ್ಥಾವರ ದೇವರುಗಳ ಪೂಜೆ ಪುನಸ್ಕಾರ ಪುರಾಣ ಪ್ರವಚನ ಜಾತ್ರೆ ಮೋಜುಮೇಜವಾನಿ ಮಾಡುವ ಧರ್ಮ ಇದಲ್ಲಾ! ದೇಹವೇ ದೇವಾಲಯ ಎಂದು ಅಪ್ಪಬಸವಣ್ಣನವರೇ ಸಾರಿದ್ದಾರೆ. ಹಾಗಾಗಿ ಇಲ್ಲಿ ಕಾಯ(ಕ)ವೇ ಕೈಲಾಸ ಎಂದು ಹೇಳು ಮೂಲಕ ಈ ಶರೀರದ ಪ್ರಾಮುಖ್ಯತೆಯನ್ನು ಪ್ರಸ್ತುತ ಈ ಮೇಲಿನ ತಮ್ಮ ವಚನದಲ್ಲಿ ಒಕ್ಕಲಿಗ ಮುದ್ದಣ್ಣ ಶರಣರು ಎತ್ತಿ ತೋರಿಸಿದ್ದಾರೆ. ಈ ವಚನ; ಇಲ್ಲಿ ಶರೀರದ ರಚನಾ ಸ್ವರೂಪ ಕುರಿತಂತೆ ಶರಣತತ್ವ ಸಿದ್ಧಾಂತಗಳ ತಳಹದಿಯ ಮೇಲೆ ಒಂದು ಸೂಕ್ಷ್ಮ ಒಳನೋಟವುಳ್ಳಂಥ ಸುಂದರ ನುಡಿ ಚಿತ್ರಣವನ್ನ ಕಟ್ಟಿಕೊಂಡಿದೆ. ಅದನ್ನೀಗ ಇಲ್ಲಿ ಅನುಸಂಧಾನದ ಮೂಲಕ ಪರಿಶೀಲಿಸಿ ನೋಡೋಣ.
*#ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ.* *ಇಂತೀ ನಾಲ್ಕರ ಮಧ್ಯದ ಮನೆಗೆ*
*ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ*,
*ಮಾಂಸದ ಗೋಡೆ,* *ಚರ್ಮದ ಹೊದಿಕೆ,*
*ಶ್ರೋಣಿತದ ಸಾರದ,* *ಕುಂಭದಿಂದಿಪ್ಪುದೊಂದು ಚಿತ್ರದ ಮನೆ #ನೋಡಯ್ಯಾ.*
ಇದು ದೇಹವೆಂಬ ಮನೆಯ ನುಡಿಚಿತ್ರಣವಾಗಿದೆ ದೊಡ್ಡವೆರಡು ಕಂಬ ಎಂದರೆ ಎರಡು ಕಾಲುಗಳು ಮಧ್ಯದಲ್ಲಿ ಚಿಕ್ಕವೆರಡು ಕಂಬ ಎಂದರೆ ಎರಡು ಕೈಗಳು. ಅಸ್ಥಿಗಳು ಅಂದ್ರೆ ಎಲಬುಗಳು, ಇವನ್ನು ನರದ ದಾರಗಳಿಂದ ಕಟ್ಟಲಾಗಿದೆ. ಇನ್ನ ಮಜ್ಜೆಯ ಅಂದ್ರೆ, ನರಮಂಡಲದ ಅಂಗಾಂಶಗಳಲ್ಲಿ ಜೀವ ಕೋಶಗಳು ಮಾಂಸದ ಗೋಡೆ ಮೇಲೆ ಚರ್ಮದ ಹೊದಿಕೆ ಇರುತ್ತದೆ ಎಂದು ವಚನಕಾರ ಶರಣರು ಹೇಳಿದ್ದಾರೆ. ಶ್ರೋಣಿತದ ಅಂದರೆ ಕೆಂಪು ಬಣ್ಣದ ರಕ್ತಸಾರದ ಹೃದಯ ಕುಂಭದ ಗಡಿಗೆ ಉಳ್ಳ ಚಿತ್ರ ವತ್ತಾದ ಮನೆಯಂತೆ ಎಂದು ಇಲ್ಲಿ ಈ ಶರೀರದ ಚಿತ್ರಣವನ್ನ ಮನೆಗೆ ಪರ್ಯಾಯವಾಗಿ ಹೋಲಿಕೆ ಮಾಡಿ ಇಡೀ ಶರೀರದ ಒಟ್ಟಂದದ ಸ್ವರೂಪವುಳ್ಳ ಚಿತ್ರವನ್ನು ವಚನಕಾರ ಒಕ್ಕಲಿಗ ಮುದ್ದಯ್ಯ ಶರಣರು ಇಲ್ಲಿ ದೇಹವೇ ದೇವಾಲಯ ಎನ್ನುವ ಶರಣರ ತಾತ್ವಿಕ ಪರಿಕಲ್ಪನೆಗೆ ಪೂರಕವಾದಂಥ ಈ ಜೀವ ದೇವನುಳ್ಳ ದೇಹ ದೇವಾಲಯವಾದ ಸುಂದರ ನುಡಿ ಚಿತ್ರಣವನ್ನು ಇಲ್ಲಿ ನೀಡಿದ್ದಾರೆ.
*ಆ ಮನೆಗೊಂಬತ್ತು ಬಾಗಿಲು, ಇಡಾ ಪಿಂಗಳ ವೆಂಬ ಗಾಳಿಯ ಬಾದಳ,* *ಮೃದು ಕಠಿಣ ವೆಂಬವೆರಡು ಅಗುಳಿಯ ಭೇದ ನೋಡಾ,*
*ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ,*
*ದಿವಾರಾತ್ರಿಯೆಂಬ ಅರುಹು ಮರಹಿನ ಉಭಯವ ಕದಕಿತ್ತು #ನೋಡಯ್ಯಾ.*
ವಚನದ ಈ ಭಾಗದ ಸಾಲಿನಲ್ಲಿ; ದೇಹ ಎನ್ನುವ ಮನೆಯ ಒಳ ಆವರಣದಲ್ಲಿಯ ಸಂಗತಿಗಳನ್ನು ಇಲ್ಲಿ ಚಿತ್ರಿಸಿ ದೇಹವೆಂಬ ಈ ಮನೆಗೆ ಒಂಭತ್ತು ಬಾಗಿಲುಗಳು ಎಂದು ನವದ್ವಾರಗಳಿಗೆ ಹೋಲಿಸಿ ಹೇಳಿದ್ದಾರೆ. ಇಡಾ ಪಿಂಗಳ ಎಂಬುವ ಎಡ ಬಲ ಭಾಗದಲ್ಲಿ ಇರುವ (ಆಧ್ಯಾತ್ಮಿಕ ಪರಿಕಲ್ಪನೆಯ) ಉಚ್ವಾಸ ನಿಶ್ವಾಸಗಳ ವಾಯು ನಾಳಗಳ ಆಳವ ನ್ನೇ ಬಾದಳ ಎಂದಿದ್ದಾರೆವಚನಕಾರ ಒಕ್ಕಲಿಗ ಮುದ್ದಣ್ಣ ಶರಣರು. ಇಲ್ಲಿ ಬಾದಳಕ್ಕೆ ಇನ್ನೊಂದು ಅರ್ಥವೆಂದರೆ, ತಳವೇ ಇರದ ಬ್ರಹ್ಮಾಂಡ ಮತ್ತು ಬ್ರಹ್ಮರಂದ್ರ ಕುರಿತು ಹೇಳಿದ್ದು, ಮೃದು (ಚರ್ಮ) ಕಠಿಣ(ಎಲುಬು) ವೆಂಬವೆರಡು ಅಗುಳಿಗಳಿರುವ ಸೋಜಿಗ ನೋಡಾ ಎನ್ನುವ ಬೆರಗನ್ನು ತೋರಿಸಿ, ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ, ದಿವಾರಾತ್ರಿಯೆಂಬ ಅರುಹ ಬೆಳಕಿನಲ್ಲಿ; ಬೆಳಗು ಮತ್ತು ಮರಹು ಎಂಬ ಕತ್ತಲಿನ ಉಭಯ ಕದಗ ಳನ್ನು ಕಿತ್ತುನೋಡಯ್ಯಾ ಎಂದರೆ; ಇಲ್ಲಿ ಶರೀರ ಮಧ್ಯದ ಮೇರುದಂಡದ ಜೊತೆಗೆ ಭಗ ಎಂಬ ತುದಿಯು ಮೂಲಾಧಾರದಿಂದ ಬ್ರಹ್ಮರಂದ್ರದ ವ ರೆಗಿನ ಸುಷುಮ್ನಾಳದ ಎರಡೂ ಬದಿಯ ಮುಚ್ಚಿ ದ ಭಾಗವನ್ನ ಅರಿವು ಮರೆವಿನ ಎರಡು ಕದಗಳು ಎಂದು ದೇಹದ ಅಂತರಂಗದೊಳಗಿನ ಚಿತ್ರಣವ ಇಲ್ಲಿ ಒಕ್ಕಲಿಗ ಮುದ್ದಯ್ಯ ಶರಣ ಪಾರಮಾರ್ಥಿಕ ಪರಿಭಾವನೆಯ ಪರಿಭಾಷೆಯಲ್ಲಿ ಸುಂದರವಾಗಿ ವಿವರಿಸಿ ತಮ್ಮ ಇಷ್ಟಲಿಂಗದ ಮುಂದೆ ನಿವೇದನೆ ಮಾಡಿಕೊಂಡಿದ್ದಾರೆ.
*ಮನೆ ನಷ್ಟವಾಗಿ ಹೋದಡೆಯೂ ಮನೆಯೊಡೆಯ ಮರಳಿ* *ಮತ್ತೊಂದು ಮನೆಗೆ ಒಪ್ಪುದು ತಪ್ಪದು* *ನೋಡಯ್ಯಾ ಇಂತಪ್ಪ* *ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ,* *ಕಾಮಭೀಮ ಜೀವಧನದೊಡೆಯ*
*ನಿಮ್ಮ ಧರ್ಮ ನಿಮ್ಮ #ಧರ್ಮ.*
ಹೀಗೆ ಮೇಲಿನ ಎರಡೂ ಅಂತರಂಗಭಾಗ ಮತ್ತು ಬಹಿರಂಗಭಾಗದ ದೇಹಾಲಯವು ಇದು ಸ್ಥಾವರ ಸ್ವರೂಪ ಆಗಿದ್ದು ಇದಕ್ಕೆ ಅಳಿವುಯಿದೆ. ಆದರೆ ಈ ಮನೆಯೊಡೆಯನಾದ ಆತ್ಮನು ಅವಿನಾಶನು, ಜಂಗಮನು ಆಗಿರುವನು. ಹೀಗಾಗಿ ಆತ ಮತ್ತೆ ಇನ್ನೊಂದು ದೇಹ ಹುಡುಕಿ ಮರಳಿ ಭವಕ್ಕೆ ಬಾರ ದಂತೆ "ಇದೇ ಜನ್ಮ ಕಡೆ" ಮಾಡಯ್ಯಾ ಕಾಮ ಭೀಮ ಜೀವ ಧನದೊಡೆಯಾ ನಿಮ್ಮ ಧರ್ಮ ನಿಮ್ಮ ಧರ್ಮ ಎನ್ನುವಲ್ಲಿ; ಶರಣತತ್ವದ ಪ್ರಕಾರ *ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ'* ಎಂಬ ಹಾಗೂ *'ಇದೇ ಜನ್ಮ ಕಡೆ'* ಎನ್ನುವ ಶರಣ ಧ್ಯೇಯ ಉಳ್ಳಂಥ ನುಡಿಗಟ್ಟನ್ನು ಇಲ್ಲಿನ ಪ್ರಸ್ತುತ ಈ ವಚನವು ಎತ್ತಿ ತೋರಿಸುತ್ತದೆಂದು ಧೈರ್ಯ ದಿಂದ ಹೇಳಬಹುದಾಗಿದೆ.
**
*ಅಳಗುಂಡಿ ಅಂದಾನಯ್ಯ*