ಬಸವಣ್ಣನವರು

ಬಸವಣ್ಣನವರು

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.

ಇವ ನಮ್ಮವ, ಇವ ನಮ್ಮವ, 

ಇವ ನಮ್ಮವನೆಂದೆನಿಸಯ್ಯಾ.

ಕೂಡಲಸಂಗಮದೇವಾ ನಿಮ್ಮ 

ಮನೆಯ ಮಗನೆಂದೆನಿಸಯ್ಯಾ.

ಬಸವಣ್ಣನವರು*

              ಅಪ್ಪ ಬಸವಣ್ಣನವರ 'ಕಾಯಕ' ಬಿಜ್ಜಳ ರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಆಡಳಿತ ವ್ಯವಸ್ಥೆಯ ನಿಭಾಯಿಸುವುದು. ಅಂದರೆ ರಾಜ್ಯದ ಆದ್ಯಂತ ಇರುವ ಸರ್ವ ಜನಾಂಗದ ಯೋಗಕ್ಷೇಮವನ್ನು ತಾರತಮ್ಯವು ಇರದಂತೆ ಸರ್ವಸಮಾನತೆಯಲ್ಲಿ ಕಂಡು ಇಂಬಿಟ್ಟುಕೊಂಡು ಹೋಗುವುದಾಗಿತ್ತು ಎನ್ನುವುದನ್ನು ನಾವು ಇಲ್ಲಿ ಬಹಳ ಮುಖ್ಯವಾಗಿ ಪರಿಭಾವಿಸಿ ಗಮನಿಸಬೇಕಾದ ಅಂಶವಾಗಿದೆ.

ಯಾಕೆಂದ್ರೆ ಈ ಮೇಲಿನ ವಚನ ಅನುಸಂಧಾನ ಮಾಡುವ ಈ ಸಮಯದಲ್ಲಿ ಪ್ರಸ್ತುತ ಮೇಲಿನ ಈ ಅಂಶ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ

ಎನಿಸುತ್ತದೆ. ಅದಕ್ಕೂ ಮೊದಲು ಮೂಲತಃ ಅಪ್ಪ ಬಸವಣ್ಣನವರ ತಾಯಿ ಪ್ರೀತಿಯ ವ್ಯಕ್ತಿತ್ವ ದಲ್ಲಿಯೇ ಸರ್ವಸಮತೆಯ ಸಮಭಾವವು ಜೀವ ದ್ರವ್ಯದಂತೆ ಮಿಳಿತವಾಗಿದೆ ಎನ್ನುವುದ ನಾವಿಲ್ಲಿ ಮನದಟ್ಟು ಮಾಡಿಕೊಂಡು ನೋಡಲು ಸಾಧ್ಯ ವಾದ್ರೆ ಪ್ರಸ್ತುತ ವಚನದ ಅನುಸಂಧಾನ ನಿಜಕ್ಕೂ

ನಿಜದ ನೆಲೆಯಲ್ಲಿ ಅರಳಿ ಬೆಳಗುತ್ತದೆ!

ಚಿಂತನಶೀಲ ಮತ್ತು ಕ್ರಿಯಾಶೀಲ ಮನೋಭಾವ ವನ್ನು ಬೆಳೆಸಿಕೊಂಡು ಬೆಳೆದುಬಂದ ಅಪ್ಪ ಬಸವ ಣ್ಣನವರ ಮೂಲ ವ್ಯಕ್ತಿತ್ವದಲ್ಲಿಯೇ, ಎಲ್ಲರನ್ನೂ ಸರಿಸಮಾನವಾಗಿ ಕಾಣುವ ಸಮತಾ ಗುಣವು ತದ್ಗತವಾಗಿದ್ದುದರಿಂದ ಅವರ ಸಾಂಘಿಕ ಚಟುವ ಟಿಕೆಗಳು ಗಟ್ಟಿಯಾಗಿ ಬೆಳೆದು ಬಂದು ಅದ್ಭುತ ವಾದ ಕ್ರಾಂತಿಕಾರಿ ಸಾಧನೆಯನ್ನ ಮಾಡುವುದಕ್ಕೆ ಸಾಧ್ಯವಾಗಿದೆ ಎನ್ನುವುದು ಕೂಡ ಅಷ್ಟೇ ಮುಖ್ಯ ಸಂಗತಿ ಆಗಿದೆ. 

ಅಪ್ಪ ಬಸವಣ್ಣನವರು ತಮ್ಮ ಹೊಸ ಚಿಂತನೆಗಳ

ಸೈದ್ಧಾಂತಿಕ ಬೆಳೆಯ ಕೃಷಿ ಮಾಡಲು ಅಣಿಯಾದ ಸಮಯದಲ್ಲಿ; ದೇಶ ವಿದೇಶಗಳ ಹೊಸ ಕನಸಿನ ಮನಸುಗಳು ಧಾವಿಸಿ ಬಂದಾಗ ಅವರಲ್ಲಿ ಇನ್ನೂ ಹಳೆಯ ಧಾರ್ಮಿಕ ನಂಬಿಕೆಗಳು ವಿಚಾರಗಳೂ ವಾಸನೆ ಮುಕ್ತವಾಗಿರದ ಸಾಧ್ಯತೆಗಳೂ ಇದ್ದವು.

ಈ ಎಲ್ಲ ರೀತಿಯ ವಿಚಾರಗಳನ್ನು ಒಟ್ಟಂದದಲ್ಲಿ 

ಪರಿಭಾವಿಸಿಕೊಂಡು ಅಪ್ಪ ಬಸವಣ್ಣನವರ ಈ ವಚನವನ್ನ ಗಮನಿಸಬೇಕಾಗುತ್ತದೆ. ಈಗ ವಚನ ವನ್ನ ಗಮನಿಸೋಣ.

*ಇವನಾರವ, ಇವನಾರವ, #ಇವನಾರವನೆಂದೆನಿಸದಿರಯ್ಯಾ.*

'ಇವನಾರವ' ಎನ್ನುವ ಈ ನುಡಿಗಟ್ಟನ್ನ ಇಲ್ಲಿ ಅಪ್ಪ ಬಸವಣ್ಣನವರು ಮೂರು ಬಾರಿ ಬಳೆಸುವಲ್ಲಿನ ಆ ನುಡಿಯ ಭಾವ ತೀವ್ರತೆಯನ್ನು ಗಮನಿಸಿದರೆ ಅವರೊಳಗಿನ ಆ ಕುರಿತಾಗಿರುವ ತವಕ ತಲ್ಲಣ ಹಾಗೂ ತಳಮಳದ ಧೀಂ ತನನದ ತಾಪವನ್ನು ಅಳೆಯಲು ಸಾಧ್ಯವಾಗುತ್ತದೆ. ಶತಶತಮಾನಗಳ ಕಾಲದಿಂದಲೂ ಶೋಷಿತ ಜನವರ್ಗಗಳ ಆ ತನು ಮನ ಭಾವಗಳು, ಛಿನ್ನ ವಿಚ್ಛಿನ್ನವಾಗಿ ಛಿದ್ರವಾಗಿ ಅಭದ್ರತೆಯ ವಾತಾವರಣದಿ ಮರುಮಾತಿಲ್ಲದೆ ಮುರುಟಿ ಹೋಗಿರುವ ಕಾರಣಕ್ಕೆ ಹಿಂಜರಿಕೆಯು ಅವರಲ್ಲಿ ಮನೆ ಮಾಡಿತ್ತು. ಅಂಥವರನ್ನ ಮುಖ್ಯ 

ಧಾರೆಗೆ ತರುವ ನಿಟ್ಟಿನಲ್ಲಿ; "ಅವ ನಮ್ಮವ ಇವ ನಮ್ಮವ" ಎನ್ನುವ ತರತಮದ ತಳ್ಳಾಟ ಸುತ್ತಲೂ ಇರುವುದನ್ನ ಅಪ್ಪ ಬಸವಣ್ಣನವರು ಅರಿತಿದ್ದರು. ಹಾಗಾಗಿ ಅಂಥವರ ಪರವಾಗಿ ಅವರಿಲ್ಲಿ ತಮ್ಮ ಸಾಕ್ಷೀ ಭಾವದ ಸಂಕೇತವಾದ ಕೂಡಲಸಂಗಮ ದೇವನ ಸಾನ್ನಿಧ್ಯದಲ್ಲಿ *ಇವನಾರವ, ಇವನಾರವ, #ಇವನಾರವನೆಂದೆನಿಸದಿರಯ್ಯಾ.* ಎಂದೆನ್ನುವ ಮೂಲಕ ಕಳಕಳಿಯ ಅರಿಕೆಯನ್ನು ಮಾಡಿದ್ದಾರೆ.

ಇನ್ನೂ ಮುಂದುವರೆದು;

*ಇವ ನಮ್ಮವ, ಇವ ನಮ್ಮವ,*

*ಇವ ನಮ್ಮವನೆಂದೆನಿಸಯ್ಯಾ.*

ಎಂದು ಹೀಗೆ ನೇರವಾಗಿ ಒತ್ತಾಯವನ್ನು ಮಾಡಿ ಹೇಳಿರುವ ಈ ನುಡಿಗಟ್ಟಗಳನ್ನು ನೋಡಿ ಓದಿ ಕೇಳಿ ತಿಳಿದುಕೊಳ್ಳಲು ತೊಡಗಿದರೆ ಆಗ, ಅಪ್ಪ ಬಸವಣ್ಣನವರೊಳಗಿನ ಆ ಕಳಕಳಿ ಕಾಳಜಿಯ ಆಳ ಅಗಲಗಳು ಅರಿವಿಗೆ ಖಂಡಿತಾ ಬರುತ್ತವೆ. ಮುಟ್ಟದೇ ದೂರ ಇಟ್ಟು; ಅವ ಅವರವಇವರವ ಎನ್ನುವ ಮೂಲಕ ಮತ್ತಷ್ಟೂ ದೂರ ಸರಿಸುವ ಕಿಗ್ರಭಾವದ ಮನಸುಗಳಿಗೆ ಅರಿವು ಮೂಡಿಸಲು ಈ ಮೂಲಕ ಕೂಡಲ ಸಂಗಯ್ಯನಲ್ಲಿ ಅಪ್ಪ ಬಸ ವಣ್ಣನವರು ಅತ್ಯಂತ ದಯಾರ್ದ್ರ ಭಾವದಿಂದ ಪರಿಪರಿಯಾಗಿ ಕೋರಿಕೊಂಡಿದ್ದಾರೆ. ವಚನದ ಕೊನೆಯ ಸಾಲಲ್ಲಿ ಇನ್ನೂ ಮುಂದುವರಿದು;

*ಕೂಡಲಸಂಗಮದೇವಾ ನಿಮ್ಮ* 

*ಮನೆಯ #ಮಗನೆಂದೆನಿಸಯ್ಯಾ.*

ಎನ್ನುವ ಅಂತರಾಳದ ಬೇಗುದಿಯ ಆ ತಳಮಳ ವನ್ನ ಇಲ್ಲಿ ಅಪ್ಪಬಸವಣ್ಣವರು ತೋಡಿಕೊಂಡು ತಮ್ಮೊಂದಿಗೇ ಆ ಶತ ಶತಮಾನದ ಶೋಷಣೆಗೆ ಒಳಗಾದಂಥವರನ್ನೂ ಸೇರಿಸಿ ಕೊಂಡು ಜಗದ ಮಹಾಮನೆಯ ಒಳಗೆ ಪ್ರವೇಶಿಸಲು ಮುನ್ನುಗ್ಗಿ ನಡೆದು ನುಡಿದ ಈ ಶಿವಭಾವದ ಸಂಭಾಷಣೆಯ ಪರಿಯನ್ನ ನೋಡಿದರೆ; ಅಂದಿನ ಆ ಕ್ರೂರವಾದ ವ್ಯವಸ್ಥೆಯು ನಿರ್ಮಿಸಿದ ಅಮಾನವೀಯವಾದ ಕ್ರೌರ್ಯದ ಕಠೋರತೆಯ ದಾರುಣ ಪರಿಸ್ಥಿತಿಯ ಚಿತ್ರಣಕ್ಕೆ ಎದೆ ನಿಜಕ್ಕೂ ಝಲ್ ಎನ್ನುತ್ತದೆ!!

             

        ಅಳಗುಂಡಿ ಅಂದಾನಯ್ಯ