ಸಪ್ತ ನೇಕಾರ ಸೇವಾ ಸಂಘದ ವಾರ್ಷಿಕೋತ್ಸವದಲ್ಲಿ “ನವ ಪ್ರಕಲ್ಪದಡೆ ನಮ್ಮೆಲ್ಲರ ನಡೆ” ಹೊಸ ನಿರ್ಣಯ

ಸಪ್ತ ನೇಕಾರ ಸೇವಾ ಸಂಘದ ವಾರ್ಷಿಕೋತ್ಸವದಲ್ಲಿ “ನವ ಪ್ರಕಲ್ಪದಡೆ ನಮ್ಮೆಲ್ಲರ ನಡೆ” ಹೊಸ ನಿರ್ಣಯ

ಸಪ್ತ ನೇಕಾರ ಸೇವಾ ಸಂಘದ ವಾರ್ಷಿಕೋತ್ಸವದಲ್ಲಿ “ನವ ಪ್ರಕಲ್ಪದಡೆ ನಮ್ಮೆಲ್ಲರ ನಡೆ” ಹೊಸ ನಿರ್ಣಯ

ಕಲಬುರಗಿ: ಸಪ್ತ ನೇಕಾರ ಸೇವಾ ಸಂಘದ ಸಂಚಾಲಿತ ಶ್ರೀ ದೇವರ ದಾಸಿಮಯ್ಯ ಸ್ವ ಸಹಾಯ ಸಂಘದ ವಾರ್ಷಿಕೋತ್ಸವದ ಅಂಗವಾಗಿ, 2025ರ ದೀಪಾವಳಿ ಹಬ್ಬದ ಸುಸಂದರ್ಭದಲ್ಲಿ ನಡೆದ ಸಭೆಯಲ್ಲಿ “ನವ ಪ್ರಕಲ್ಪದಡೆ ನಮ್ಮೆಲ್ಲರ ನಡೆ” ಎಂಬ ಹೊಸ ಘೋಷಣೆಯಡಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಪ್ತ ನೇಕಾರ ಸಮುದಾಯದ ಆರ್ಥಿಕ ಸದೃಢತೆಗಾಗಿ ಮಹಾನಗರ ಮತ್ತು ಜಿಲ್ಲಾ ವ್ಯಾಪ್ತಿಯ ಸೌಹಾರ್ದ ಸಹಕಾರಿ ಸಂಘ (Co-operative Society) ಸ್ಥಾಪನೆಗೆ ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಯಿತು. ಈ ಪ್ರಸ್ತಾವನೆಯನ್ನು ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಬಲಪುರ ಮಂಡಿಸಿದ್ದು, ಸಭೆಯಲ್ಲಿ ಹಾಜರಿದ್ದ ಹಿರಿಯರು ಹಾಗೂ ಸದಸ್ಯರು ಅದಕ್ಕೆ ಏಕಮತದಿಂದ ಒಪ್ಪಿಗೆ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಹಿರಿಯರು, “25 ವರ್ಷಗಳ ಹಿಂದೆ ಜಾರಿಯಾದ ಕಾಯ್ದೆಯಡಿ ಸಂಘವನ್ನು ಅಧಿಕೃತವಾಗಿ ನೋಂದಾಯಿಸಿ, ಇತರ ಸಮುದಾಯಗಳೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿ, ಮುಖ್ಯ ಧಾರೆಯತ್ತ ಸಾಗೋಣ” ಎಂದು ಅಭಿಪ್ರಾಯಪಟ್ಟರು. ಕಳೆದ ಎರಡು ವರ್ಷಗಳ ಒಟ್ಟು 1 ಲಕ್ಷ 7 ಸಾವಿರ ರೂ. ಲಾಭದಿಂದ ಖರ್ಚುಗಳನ್ನು ವಜಾ ಮಾಡಿ ಉಳಿದ ಹಣವನ್ನು ತವನಿಧಿಯಾಗಿ ಉಳಿಸಿ, ಸದಸ್ಯರ ಕೊಡುಗೆಗೂ ಸೇರಿದಂತೆ ಕಾರ್ಪಸ್ ನಿಧಿ (Corpus Fund) ರೂಪಿಸಲು ತೀರ್ಮಾನಿಸಲಾಯಿತು.

ಮೊದಲ ಹಂತವಾಗಿ, ಸಂಘದ ಅಧಿಕೃತ ಉಳಿತಾಯ ಖಾತೆಯನ್ನು SUCO ಬ್ಯಾಂಕ್ ನಲ್ಲಿ ತೆರೆಯಲು ಡಾ. ಬಸವರಾಜ್ ಚನ್ನಾ ಪ್ರಸ್ತಾಪ ಮಾಡಿದ್ದು, ಮಲ್ಲಿನಾಥ್ ಕುಂಟೋಜಿ ಹಾಗೂ ಸಮಾಜ ಸೇವಕ ಲಕ್ಷೀಕಾಂತ ಜೋಳದ ಅವರು ಸಮ್ಮತಿಸಿದರು.

ನ್ಯಾಯವಾದಿ ಹಾಗೂ ಕಾರ್ಯಕಾರಿ ಸದಸ್ಯರಾದ ಜೇ.ಎಸ್. ವಿನೋದಕುಮಾರ ಮಾತನಾಡಿ, “ಸಂಘದ ಉದ್ದೇಶಗಳನ್ನು ಅರ್ಥಮಾಡಿಕೊಂಡು, ಸಂಸ್ಥಾಪಕ ನಿರ್ದೇಶಕರು ಆಗ ಬಯಸುವವರು ಮೊದಲು ಅಜೀವ ಸದಸ್ಯರಾಗಬೇಕು. ಬದ್ದತೆ ಮತ್ತು ಆರ್ಥಿಕ ಶಕ್ತಿಯುಳ್ಳವರನ್ನೇ ಆಯ್ಕೆ ಮಾಡಬೇಕು” ಎಂದು ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲರು ಹಾಗೂ ಸಂಘದ ಅಧ್ಯಕ್ಷ ಶಿವಲಿಂಗಪ್ಪಾ ಅಷ್ಟಗಿ ಅವರು ಮಾತನಾಡಿ, “ನನಗೆ ಈ ಎರಡು ವರ್ಷಗಳ ಸೇವೆ ಮಾಡುವ ಅವಕಾಶ ನೀಡಿದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಿಮ್ಮ ವಿಶ್ವಾಸ ನನ್ನ ಬಲವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿ, ಸಭೆಯ ಕೊನೆಯಲ್ಲಿ ದೀಪಾವಳಿಯ ಶುಭಾಶಯಗಳೊಂದಿಗೆ ಸಿಹಿತಿಂಡಿ ಹಂಚಿದರು.

ಸಭೆಯ ಅಂತ್ಯದಲ್ಲಿ ನೇಕಾರ ಪ್ರತಿನಿಧಿ ರಾಜು ಕೊಷ್ಠಿ ವಂದನೆ ಸಲ್ಲಿಸಿ, “ಎರಡು ವರ್ಷಗಳ ಹಿಂದೆ ಕಂಡ ಕನಸು ಇಂದು ಸಾಕಾರಗೊಂಡಿದೆ” ಎಂದು ಸಂತೋಷ ವ್ಯಕ್ತಪಡಿಸಿದರು.