ಸಿದ್ದರಾಮಯ್ಯ ಸರ್ಕಾರದ ತಾರತಮ್ಯ ನೀತಿಗೆ ಕಲ್ಯಾಣ ಕರ್ನಾಟಕ ನೇಕಾರ ಮಹಾಸಭೆಯ ಖಂಡನೆ

ಸಿದ್ದರಾಮಯ್ಯ ಸರ್ಕಾರದ ತಾರತಮ್ಯ ನೀತಿಗೆ ಕಲ್ಯಾಣ ಕರ್ನಾಟಕ ನೇಕಾರ ಮಹಾಸಭೆಯ ಖಂಡನೆ

ಸಿದ್ದರಾಮಯ್ಯ ಸರ್ಕಾರದ ತಾರತಮ್ಯ ನೀತಿಗೆ ಕಲ್ಯಾಣ ಕರ್ನಾಟಕ ನೇಕಾರ ಮಹಾಸಭೆಯ ಖಂಡನೆ

ಕಲಬುರಗಿ : ರಾಜ್ಯ ಸರ್ಕಾರದ ತಾರತಮ್ಯಪೂರ್ಣ ಧೋರಣೆಯ ವಿರುದ್ಧವಾಗಿ ಕಲ್ಯಾಣ ಕರ್ನಾಟಕ ನೇಕಾರ ಮಹಾಸಭೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಹಾಸಭೆಯ ಸಂಚಾಲಕರೂ ನ್ಯಾಯವಾದಿಗಳೂ ಆಗಿರುವ ವಿನೋದ್ ಕುಮಾರ್ ಎಸ್.ಜೆ. ಅವರು ಪ್ರಕಟಣೆ ನೀಡಿದ್ದು, ಪ್ರಸ್ತುತ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡವಳಿಕೆಗೆ ಧಿಕ್ಕಾರ ವ್ಯಕ್ತಪಡಿಸಿದ್ದಾರೆ.

ಇದೇ ತಿಂಗಳ 17-10-2025 ರಂದು ಸರ್ಕಾರವು ಕಂಪನಿ ಕಾಯ್ದೆ ಅಡಿ ಐದು ವಿವಿಧ ಸಮಾಜಗಳ ನಿಗಮಗಳನ್ನು ಸ್ಥಾಪಿಸಲು ಆದೇಶ ಸಂಖ್ಯೆ 366/25 ಮೂಲಕ ಆದೇಶ ಹೊರಡಿಸಿದ್ದು, ಅದರಲ್ಲಿ ನೇಕಾರ ಸಮುದಾಯದ ನಿಗಮವನ್ನು ಒಳಪಡಿಸದಿರುವುದು ನೇಕಾರ ಸಮುದಾಯದ ಹಕ್ಕು ಮತ್ತು ಗೌರವಕ್ಕೆ ಧಕ್ಕೆ ತಂದಿದೆ ಎಂದು ಮಹಾಸಭೆ ಖಂಡಿಸಿದೆ.

ಸರ್ಕಾರದ ಈ ತಾರತಮ್ಯ ನೀತಿ ಮತ್ತು ಮಲತಾಯಿ ಧೋರಣೆ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ ವಿನೋದ್ ಕುಮಾರ್ ಎಸ್.ಜೆ. ಅವರು, ನೇಕಾರ ಸಮುದಾಯದ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಅಸ್ವೀಕಾರಾರ್ಹ ಎಂದು ತಿಳಿಸಿದ್ದಾರೆ.

ನೇಕಾರ ಸಮುದಾಯವು ರಾಜ್ಯದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿರುವುದರಿಂದ, ಅವರಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸುವುದು ತಾತ್ಕಾಲಿಕ ಅಗತ್ಯವಾಗಿದೆ ಎಂದು ನೇಕಾರ ಪ್ರತಿನಿಧಿ ರಾಜು ಕೊಷ್ಠಿ ಹೇಳಿದ್ದಾರೆ.

ಅವರು ಸರ್ಕಾರವನ್ನು ಮನವಿ ಮಾಡಿದ್ದು — 17-10-2025ರಂದು ಹೊರಡಿಸಿದ ಆದೇಶವನ್ನು ತಿದ್ದುಪಡಿ ಮಾಡಿ ತಕ್ಷಣ “ಕರ್ನಾಟಕ ರಾಜ್ಯ ನೇಕಾರ ಸಮುದಾಯ ನಿಗಮ”ವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಾಸಭೆಯ ನಾಯಕರು ಮತ್ತು ನೇಕಾರ ಪ್ರತಿನಿಧಿಗಳು ಭಾಗವಹಿಸಿ, ಸರ್ಕಾರದ ತಾರತಮ್ಯ ನೀತಿಗೆ ವಿರೋಧ ವ್ಯಕ್ತಪಡಿಸಿದರು.