ವಿಶ್ವ ಸಾಮಾಜಿಕ ನ್ಯಾಯ ದಿನ .–
ವಿಶ್ವ ಸಾಮಾಜಿಕ ನ್ಯಾಯ ದಿನ .–
ಫೆಬ್ರವರಿ 20 ನ್ಯಾಯ, ಸಮಾನತೆ ಮತ್ತು ಮಾನವ ಗೌರವದ ತತ್ವಗಳ ಮೇಲೆ ನಿರ್ಮಿತವಾದ ರಾಷ್ಟ್ರದ ಬಲಿಷ್ಠ ಅಡಿಪಾಯವೇ ಸಾಮಾಜಿಕ ನ್ಯಾಯ. ಮಾನವ ಸಮಾಜವು ಶಾಂತಿ, ಸೌಹಾರ್ದತೆ ಮತ್ತು ಸಮಾನ ಅವಕಾಶಗಳ ಮೇಲೆ ಬೆಳೆಯಬೇಕಾದರೆ, ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನದ ಹಕ್ಕು ಖಚಿತವಾಗಿರಬೇಕು. ಈ ನಿಟ್ಟಿನಲ್ಲಿ ಫೆಬ್ರವರಿ 20 ರಂದು ಆಚರಿಸಲಾಗುವ ವಿಶ್ವ ಸಾಮಾಜಿಕ ನ್ಯಾಯ ದಿನವು ಜಾಗತಿಕ ಮಟ್ಟದಲ್ಲಿ ಸಮಾನತೆ ಮತ್ತು ಮಾನವ ಹಕ್ಕುಗಳ ಮಹತ್ವವನ್ನು ಸಾರುವ ಮಹತ್ವದ ದಿನವಾಗಿದೆ.
ಸಾಮಾಜಿಕ ನ್ಯಾಯವೆಂದರೆ ಸಮಾಜದಲ್ಲಿರುವ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಬಡವರು, ಶೋಷಿತರು, ಮಂಗಳಮುಖಿಯರು ಹಾಗೂ ಅಂಗವಿಕಲರು ಸೇರಿದಂತೆ ಅಸಹಾಯಕ ವರ್ಗಗಳನ್ನು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲಗೊಳಿಸುವುದು. ಅವರ ಹಕ್ಕುಗಳನ್ನು ಕಾನೂನುಬದ್ಧವಾಗಿ ರಕ್ಷಿಸಿ, ಸಮಾನ ಅವಕಾಶಗಳನ್ನು ಒದಗಿಸುವುದು ಸಾಮಾಜಿಕ ನ್ಯಾಯದ ಮೂಲ ಆಶಯ. ಸಮಾಜದಲ್ಲಿರುವ ಅಸಮಾನತೆಗಳನ್ನು ನಿವಾರಿಸಿ, ಪ್ರತಿಯೊಬ್ಬರೂ ಸಮಾನ ಹಕ್ಕುಗಳೊಂದಿಗೆ ಬದುಕುವ ಸಮ ಸಮಾಜವನ್ನು ನಿರ್ಮಿಸುವುದೇ ಇದರ ಗುರಿಯಾಗಿದೆ.
ಭಾರತದ ಪರಂಪರೆಯಲ್ಲಿ ಸಾಮಾಜಿಕ ನ್ಯಾಯದ ಚಿಂತನೆ ಹೊಸದಲ್ಲ. 11ನೇ ಶತಮಾನದ ವಚನ ಸಾಹಿತ್ಯವು ಸಮಾನತೆ, ಶ್ರಮದ ಗೌರವ ಮತ್ತು ಮಾನವೀಯತೆಯ ಸಂದೇಶಗಳನ್ನು ಸಾರಿತ್ತು. ಅದೇ ತತ್ವಗಳು ಮುಂದಾಳತ್ವದ ಚಿಂತನೆಗಳಿಗೆ ಬುನಾದಿಯಾಗಿ, ಇಂದಿನ ಪ್ರಗತಿಪರ ಕಾನೂನುಗಳಿಗೂ ದಾರಿದೀಪವಾಗಿವೆ. ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸಮಾನ ಅವಕಾಶ ಮತ್ತು ಗೌರವಯುತ ಜೀವನವನ್ನು ಖಚಿತಪಡಿಸುವ ಮಹತ್ವದ ದಸ್ತಾವೇಜಾಗಿದೆ. ಮೀಸಲಾತಿ ಸೇರಿದಂತೆ ಹಲವು ಪ್ರಗತಿಪರ ಕ್ರಮಗಳ ಮೂಲಕ ಶತಮಾನಗಳ ಅಸಮಾನತೆಯನ್ನು ಕಡಿಮೆ ಮಾಡಲು ಅದು ದಾರಿದೀಪವಾಗಿದೆ.
ಸಾಮಾಜಿಕ ನ್ಯಾಯವು ಕೇವಲ ಒಂದು ತತ್ವವಲ್ಲ; ಅದು ರಾಷ್ಟ್ರದ ಶಾಂತಿ, ಸ್ಥಿರತೆ ಮತ್ತು ಪ್ರಗತಿಯ ಮೂಲಾಧಾರ. ಲಿಂಗ ಅಸಮಾನತೆ, ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆ, ಜಾತಿ–ಮತ–ವರ್ಗ ಭೇದ, ಆರ್ಥಿಕ ಅಸಮಾನತೆ ಹಾಗೂ ಸಾಮಾಜಿಕ ಶೋಷಣೆ ಇವುಗಳು ಇಂದಿಗೂ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ದೊಡ್ಡ ಸವಾಲುಗಳಾಗಿವೆ. ಇಂತಹ ಸಂದರ್ಭದಲ್ಲಿ ಧ್ವನಿಯಿಲ್ಲದ ವರ್ಗಗಳು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುವುದು ಅತ್ಯಂತ ಅಗತ್ಯ. ಆಹಾರ, ಬಟ್ಟೆ, ವಸತಿ, ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗವು ಪ್ರತಿಯೊಬ್ಬರ ಮೂಲಭೂತ ಹಕ್ಕುಗಳು. ಈ ಹಕ್ಕುಗಳನ್ನು ಅರಿತು ಪಡೆದುಕೊಳ್ಳುವುದೇ ನಿಜವಾದ ಸ್ವಾತಂತ್ರ್ಯ.
United Nations General Assembly 2007ರ ಫೆಬ್ರವರಿ 20ರಂದು “ವಿಶ್ವ ಸಾಮಾಜಿಕ ನ್ಯಾಯ ದಿನ”ವನ್ನು ಘೋಷಿಸಿ, 2009ರಿಂದ ಅಧಿಕೃತವಾಗಿ ಆಚರಿಸಲು ಆರಂಭಿಸಿತು. ಇದರ ಉದ್ದೇಶ ಜಾಗತಿಕ ಮಟ್ಟದಲ್ಲಿ ಸಮಾನತೆ, ಐಕ್ಯತೆ, ಮಾನವ ಹಕ್ಕುಗಳು ಮತ್ತು ನ್ಯಾಯದ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು. ಸಮಾಜದಲ್ಲಿ ನ್ಯಾಯ ಬಲವಾಗಿದಾಗ ರಾಷ್ಟ್ರ ಬಲಿಷ್ಠವಾಗುತ್ತದೆ; ರಾಷ್ಟ್ರ ಬಲಿಷ್ಠವಾದಾಗ ವಿಶ್ವದಲ್ಲಿ ಶಾಂತಿ ಸಾಧ್ಯವಾಗುತ್ತದೆ.
ಇಂದಿನ ದಿನಮಾನದಲ್ಲಿ ನಾವು ಎಲ್ಲರೂ ಜಾತಿ, ಧರ್ಮ, ಭಾಷೆ ಮತ್ತು ವರ್ಗ ಭೇದಗಳನ್ನು ಮೀರಿ “ಸರ್ವರಿಗೂ ಸಮಬಾಳು – ಸಮಪಾಲು” ಎಂಬ ಸಂವಿಧಾನದ ಆಶಯವನ್ನು ಗೌರವಿಸಬೇಕು. ಸಾಮಾಜಿಕ ನ್ಯಾಯವನ್ನು ಕಾಪಾಡುವುದು ಕೇವಲ ಸರ್ಕಾರದ ಕರ್ತವ್ಯವಲ್ಲ; ಪ್ರತಿಯೊಬ್ಬ ಜಾಗೃತ ನಾಗರಿಕನ ಕರ್ತವ್ಯವೂ ಆಗಿದೆ. ಸಮಾನತೆ, ಮಾನವೀಯತೆ ಮತ್ತು ನ್ಯಾಯದ ಮೌಲ್ಯಗಳನ್ನು ಉಳಿಸಿ ಬೆಳೆಸಿದಾಗ ಮಾತ್ರ ನಮ್ಮ ರಾಜ್ಯ ಮತ್ತು ದೇಶ ನಿಜವಾದ ಅರ್ಥದಲ್ಲಿ ಪ್ರಗತಿಯತ್ತ ಸಾಗುತ್ತದೆ.
ಸಮಾಜದಲ್ಲಿ ನ್ಯಾಯ – ರಾಷ್ಟ್ರದಲ್ಲಿ ಶಕ್ತಿ – ವಿಶ್ವದಲ್ಲಿ ಶಾಂತಿ.
ಸಾಮಾಜಿಕ ನ್ಯಾಯವನ್ನು ಗೌರವಿಸಿ, ಸಮಾನತೆಯ ಭಾರತ ನಿರ್ಮಾಣಕ್ಕೆ ಕೈಜೋಡಿಸೋಣ.
ಜೆ. ಎಸ್. ವಿನೋದಕುಮಾರ
ವಿಶ್ವಸಾಮಾಜಿಕನ್ಯಾಯದಿನ ಶುಭಾಶಯಗಳು.
