ಮಕ್ಕಳಲ್ಲಿ ಬರವಣಿಗೆ ಮತ್ತು ಭಾಷಣ ಕೌಶಲ್ಯ ಬೆಳೆಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ : ಸಲಿಂ ಭಾಷಾ ಅಭಿಮತ.

ಮಕ್ಕಳಲ್ಲಿ ಬರವಣಿಗೆ ಮತ್ತು ಭಾಷಣ ಕೌಶಲ್ಯ ಬೆಳೆಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ : ಸಲಿಂ ಭಾಷಾ ಅಭಿಮತ.

ಮಕ್ಕಳಲ್ಲಿ ಬರವಣಿಗೆ ಮತ್ತು ಭಾಷಣ ಕೌಶಲ್ಯ ಬೆಳೆಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ :ಸಲಿಂ ಭಾಷಾ ಅಭಿಮತ.

ಕಲಬುರಗಿ: ಮಕ್ಕಳು ಮುಕ್ತವಾಗಿ ಮಾತನಾಡಲು ಕಲಿಯಬೇಕು, ವೇದಿಕೆಯ ಭಯ ಹೋಗಲಾಡಿಸಬೇಕು, ತಮ್ಮೊಳಗಿನ ಆಲೋಚನೆಗಳನ್ನು ಸರಳವಾಗಿ ಜನರಿಗೆ ತಲುಪುವಂತೆ ಮಾತನಾಡಿದಾಗ ಮಾತ್ರ ಸಮಗ್ರವಾದ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಮಕ್ಕಳಿಗೆ ಪಠ್ಯದ ಜೊತೆಗೆ ಇತರೆ ಬದುಕಿನ ಕೌಶಲ್ಯಗಳನ್ನು ಕಲಿಸುವುದು ಅವಶ್ಯಕತೆಯಿದೆ. ಶಿಕ್ಷಣದ ಮೂಲ ಉದ್ದೇಶ ಉತ್ತಮ ವ್ಯಕ್ತಿತ್ವ ಬೆಳವಣಿಗೆಯಾಗಿದೆ. 

ಬರವಣಿಗೆ ಹಾಗೂ ಭಾಷಣ ಮಕ್ಕಳ ವ್ಯಕ್ತಿತ್ವ ರೂಪಿಸುತ್ತವೆ ಎಂದು ತರಬೇತುದಾರ ಸಲಿಂ ಭಾಷಾ ಅಭಿಮತ ವ್ಯಕ್ತಪಡಿಸಿದರು. 

ಅವರು ಇತ್ತೀಚೆಗೆ ಕಲಬುರಗಿಯ ಶ್ರೀ ಗುರು ನವೋದಯ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಸಿಂಹವಾಣಿ ಕರ್ನಾಟಕ ವತಿಯಿಂದ ಭಾಷಣ ಮತ್ತು ಸಾಹಿತ್ಯ ಬರವಣಿಗೆ ಕೌಶಲ್ಯ ಕಾರ್ಯಾಗಾರದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಲೇಖಕರಾದ ಕೆ.ಎಂ. ವಿಶ್ವನಾಥ ಮರತೂರ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಬರವಣಿಗೆ ಕೌಶಲ್ಯವನ್ನು ಬೆಳೆಸುವುದು ಅವರ ಬೌದ್ಧಿಕ, ಭಾವನಾತ್ಮಕ ಮತ್ತು ಸೃಜನಾತ್ಮಕ ಬೆಳವಣಿಗೆಯ ಪ್ರಮುಖ ಅಂಶವಾಗಿದೆ. ಸಾಹಿತ್ಯ ಬರವಣಿಗೆ ಎಂದರೆ ಕೇವಲ ಕಥೆ ಅಥವಾ ಕವಿತೆ ರಚನೆ ಅಲ್ಲ, ಅದು ಜೀವನದ ಅನುಭವಗಳನ್ನು ಅಭಿವ್ಯಕ್ತಿಸುವ ಕಲೆಯಾಗಿದೆ. 

ಇದು ಮಕ್ಕಳಲ್ಲಿ ಚಿಂತನೆಗೆ ಪ್ರೇರಣೆ ನೀಡುತ್ತದೆ, ಭಾಷಾ ನೈಪುಣ್ಯವನ್ನು ವೃದ್ಧಿಸುತ್ತದೆ ಮತ್ತು ಕಲ್ಪನೆ ಶಕ್ತಿಯನ್ನು ವಿಸ್ತರಿಸುತ್ತದೆ. ಮಕ್ಕಳಿಗೆ ಸಾಹಿತ್ಯ ಬರೆಯಲು ಪ್ರೋತ್ಸಾಹಿಸಿದಾಗ, ಅವರು ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಈ ಕೌಶಲ್ಯವು ಸಂವಹನ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಆಂತರಿಕ ಚಿಂತನೆಯ ಬೆಳವಣಿಗೆಗೆ ದಾರಿ ಮಾಡುತ್ತದೆ. ಶಿಕ್ಷಣದಲ್ಲಿ ಸಾಹಿತ್ಯ ಬರವಣಿಗೆಗೆ ಮಹತ್ವ ನೀಡಿದರೆ, ವಿದ್ಯಾರ್ಥಿಗಳು ವಿಷಯದೊಂದಿಗೆ ತಾತ್ವಿಕವಾಗಿ ಮತ್ತು ವಿಮರ್ಶಾತ್ಮಕವಾಗಿ ಯೋಚಿಸುವ ಅಭ್ಯಾಸವನ್ನು ಬೆಳೆಸುತ್ತಾರೆ ಎಂದು ಹೇಳಿದರು.

ಈ ಕಾರ್ಯಾಗಾರದ ಎರಡು ದಿನಗಳಲ್ಲಿ “ಸಾರ್ವಜನಿಕ ಭಾಷಣ ಮತ್ತು ಸಾಹಿತ್ಯ ಬರವಣಿಗೆಯನ್ನು ಮಕ್ಕಳಿಗೆ ಚಟುವಟಿಕೆ ಆಧಾರಿತ ಅಧ್ಯಯನ ವಿಧಾನವನ್ನು ಅನುಸರಿಸಿ ತರಬೇತಿ ಸೂತ್ರಗಳನ್ನು ಕಲಿಸಲಾಯಿತು. ಸಾರ್ವಜನಿಕವಾಗಿ ಮಾತನಾಡುವ ಕೌಶಲ್ಯ ಮತ್ತು ಸಾಹಿತ್ಯಾಭಿರುಚಿಯನ್ನು ವಿಕಸಿಸಲು ಕಲಿಕೆ, ಅಭ್ಯಾಸ ಮತ್ತು ಪ್ರದರ್ಶನ ಈ ತತ್ವಗಳ ಆಧಾರದ ಮೇಲೆ ಕಾರ್ಯಾಗಾರ ನಡೆಸಿಕೊಡಲಾಯಿತು. ಸಾಹಿತ್ಯ ಬರವಣಿಗೆಯಲ್ಲಿ ಮಕ್ಕಳಿಗೆ ಕಥೆ, ಕವನ, ಲೇಖನ ಬರೆಯುವ ಸಫಲ ದಾರಿಗಳನ್ನು ಹೇಳಿಕೊಡಲಾಯಿತು. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಪುಸ್ತಕಗಳನ್ನು ಓದುವ ಕೌಶಲ್ಯ, ಪರೀಕ್ಷಾ ಸಂಭ್ರಮ ಇತ್ಯಾದಿ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಂ.ವಿಶ್ವನಾಥ ಮರತೂರ ಹಾಗೂ ಸಲಿಂ ಭಾಷಾ ನಡೆಸಿಕೊಟ್ಟರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರು ನವೋದಯ ತರಬೇತಿ ಕೇಂದ್ರದ ಮುಖ್ಯಸ್ಥರಾದ ಪ್ರಶಾಂತ ರೆಡ್ಡಿ ವಹಿಸಿದ್ದರು.