ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಭರದ ತಯಾರಿ:ಬಸವರಾಜ ಪಾಟೀಲ್ ಸೇಡಂ

ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಭರದ ತಯಾರಿ:ಬಸವರಾಜ ಪಾಟೀಲ್ ಸೇಡಂ

ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಭರದ ತಯಾರಿ:

  ಉತ್ಸವದಲ್ಲಿ ದೇಶ-ವಿದೇಶಗಳ ಜನರ ಸಮಾಗಮ: ಬಸವರಾಜ ಪಾಟೀಲ್ ಸೇಡಂ

ಸೇಡಂ: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೀರನಹಳ್ಳಿ ಕ್ರಾಸ್ ನಲ್ಲಿ ಜನವರಿ 29ರಿಂದ ಫೆಬ್ರವರಿ ಆರರ ತನಕ ಪ್ರಕೃತಿ ನಗರದಲ್ಲಿ ನಡೆಯುವ 9 ದಿನಗಳ ಕಾಲ ನಡೆಯುವ ಏಳನೆಯ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು ದೇಶ ವಿದೇಶಗಳ ಜನರು ಆಗಮಿಸಲಿದ್ದಾರೆ ಎಂದು ಉತ್ಸವದ ಪ್ರಧಾನ ಸಂಯೋಜಕರಾದ ಬಸವರಾಜ ಪಾಟೀಲ್ ಸೇಡಂ ಹೇಳಿದರು. 

    ಸೇಡಂನ ಬೀರನಹಳ್ಳಿ ಕ್ರಾಸ್ ನ 240 ಎಕರೆ ವಿಶಾಲ ಮೈದಾನದಲ್ಲಿ ಉತ್ಸವದ ಸಭಾಂಗಣ ಮಳಿಗೆಗಳ ನಿರ್ಮಾಣ ಸ್ಥಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ 9 ದಿನಗಳಲ್ಲಿ ಕಾಯಕಲೋಕ, ವಿಜ್ಞಾನ ಲೋಕ , ಕಲಾಲೋಕ,

ಸೇವಾ ಲೋಕ ಸೇರಿದಂತೆ 9 ಲೋಕಗಳು ತಲೆ ಎತ್ತಲಿದ್ದು ಪ್ರದರ್ಶನ ಹಾಗೂ ಮಾರಾಟಕ್ಕಾಗಿ 600 ಮಳಿಗೆಗಳು ಸಿದ್ಧವಾಗಲಿದೆ. 9500 ಸ್ವಯಂಸೇವಕರು 9 ದಿನಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯ ಜನರು ಉತ್ಸವದಲ್ಲಿ ಭಾಗವಹಿಸಲು ಈಗಾಗಲೇ ಮಾಹಿತಿ ನೀಡಿದ್ದಾರೆ. 51 ಅನಿವಾಸಿ ಭಾರತೀಯರಿಗೆ, 51 ಪದ್ಮಶ್ರೀ ಪುರಸ್ಕೃತರಿಗೆ, ಭಾರತ ದೇಶದ 51ವಿಶಿಷ್ಟ ಸಾಧಕರಿಗೆ, 18 ರಿಂದ 35 ವಯೋಮಾನದ 51 ಯುವ ಸಾಹಸಿಗರಿಗೆ, ಕಲ್ಯಾಣ ಕರ್ನಾಟಕದಲ್ಲಿ 21 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಮಾಡಿದ 51 ಗಣ್ಯರಿಗೆ ಗೊತ್ತಲ್ಲ ಸ್ವರ್ಣ ಜಯಂತಿಯ ಸಂದರ್ಭದಲ್ಲಿ ಆ ಸಂಸ್ಥೆಯಲ್ಲಿ ಓದಿ ಬೆಳೆದ 51 ಸಾಧಕರಿಗೆ ಸೇಡಂ ತಾಲೂಕಿನ ಸ್ಥಳೀಯ 15 ಹಳ್ಳಿಗಳಲ್ಲಿ ಕೃಷಿ ಗೋಪಾಲನೆ, ಸ್ವಚ್ಛತೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ದುಡಿದ 51 ಮಂದಿಗೆ ಸನ್ಮಾನ ಸಮಾರಂಭ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ್ ಪಾಟೀಲ್ ಹೇಳಿದರು.

      ಭಾರತದಲ್ಲೆ ಅತ್ಯಂತ ವಿಶಿಷ್ಟ ಹಾಗೂ ಬೃಹತ್ ಪ್ರಮಾಣದಲ್ಲಿ ನಡೆಯಲಿರುವ ಈ ಉತ್ಸವದ ಆವರಣ ನಿರ್ಮಾಣಕ್ಕಾಗಿ ಕಲಬುರಗಿ ಸೇಡಂ ರಸ್ತೆಯ ಬೀರನಹಳ್ಳಿ ಕ್ರಾಸ್ ನಲ್ಲಿ ನೂರಾರು ಜನರು ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ. ಹೆದ್ದಾರಿಯಿಂದ ಒಳ ಪ್ರವೇಶಿಸಿದಾಗ ಇಕ್ಕೆಲಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ತದನಂತರ 65,000 ಜನರಿಗೆ ಕುಳಿತುಕೊಳ್ಳುವ ಅನುಭವ ಮಂಟಪ ಪ್ರಧಾನ ವೇದಿಕೆ, ಸಿದ್ಧೇಶ್ವರ ಸ್ವಾಮಿ ಜೀವನ ಚಿತ್ರಣ ನೀಡುವ ವಿಶೇಷ ಮಳಿಗೆ, ಸಿದ್ದರಾಮ ಜಂಬಲದಿನ್ನಿ ವೇದಿಕೆ ಸೇರಿದಂತೆ ಇತರ ಮೂರು ಪ್ರತ್ಯೇಕ ವೇದಿಕೆಗಳು ನಿರ್ಮಾಣವಾಗುತ್ತಿದೆ. ಪ್ರಧಾನ ವೇದಿಕೆಯ ಇಕ್ಕೆಲಗಳಲ್ಲಿ ಸುಮಾರು 20 ಸಾವಿರ ಜನರು ಕುಳಿತುಕೊಂಡು ಪರದೆಯಲ್ಲಿ ಕೂಡಾ ಕಾರ್ಯಕ್ರಮವನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ರೈಲು ಗಾಡಿಗಳಿಗೆ ವಿಶೇಷ ನಿಲುಗಡೆ ವ್ಯವಸ್ಥೆ

 ಉತ್ಸವದಲ್ಲಿ ದ್ವಿಚಕ್ರ ವಾಹನಗಳಿಗೆ ಮತ್ತು ಬಸ್ ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ವಾರಗಳ ತನಕ ಕಲಬುರಗಿ ಮತ್ತು ಸೇಡಂ ಮಾರ್ಗವಾಗಿ ಸಂಚರಿಸುವ ಎಲ್ಲ ರೈಲುಗಾಡಿಗಳಿಗೂ ನಿಲುಗಡೆ ಇಲ್ಲದಿದ್ದರೂ ವಿಶೇಷ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಕಲಬುರಗಿಯಿಂದ ಮತ್ತು ಸೇಡಂನಿಂದ ಹೆಚ್ಚುವರಿ ಬಸ್ಸುಗಳ ಸಂಚಾರ ವ್ಯವಸ್ಥೆ ಕೂಡ ಕಲ್ಪಿಸಲು ಸಾರಿಗೆ ಇಲಾಖೆಯವರ ಜೊತೆ ಮಾತುಕತೆ ನಡೆದಿದೆ. ಕಲಬುರಗಿಯ ಖರ್ಗೆ ಪೆಟ್ರೋಲ್ ಬಂಕ್ ಹಾಗೂ ಬೇಡಿಕೆ ಬಂದರೆ ಹಿಂದಿ ಪ್ರಚಾರ ಸಭಾ ದಿಂದ ವಿಶೇಷ ಬಸ್ಸುಗಳನ್ನು ಬಿಡುವ ವ್ಯವಸ್ಥೆ ಮಾಡಲಾಗುವುದು. ಸೇಡಂ ಬಸ್ ನಿಲ್ದಾಣದಿಂದಲೂ ಉತ್ಸವ ಸ್ಥಳಕ್ಕೆ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸ್ಕೌಟ್ ಮತ್ತು ಗೈಡ್ಸ್ ನ 200 ಟೆಂಟ್

ಭಾರತ ಸ್ಕೌಟ್ ಮತ್ತು ಗೈಡ್ಸ್ ನವರು 200 ವಿಶೇಷ ಟೆಂಟ್ ಗಳನ್ನು ಉತ್ಸವ ಸ್ಥಳದಲ್ಲಿ ನಿರ್ಮಿಸುತ್ತಿದ್ದುಅದರಲ್ಲಿ ಒಂದು 10ರಲ್ಲಿ 20 ಮಂದಿ ವಸತಿ ಮಾಡುವ ವ್ಯವಸ್ಥೆ ಇದ್ದು ಅದರಲ್ಲಿ ಆರು ವಿಐಪಿ ಟೆಂಟ್ ಗಳನ್ನು ನಿರ್ಮಿಸಲಾಗುತ್ತಿದೆ ಬಿಎಸ್ಎನ್ಎಲ್ ವಿಶೇಷ ಟವರ್ ನ ವ್ಯವಸ್ಥೆ ಮಾಡಿದ್ದು ಸುಮಾರು 20 ದೂರವಾಣಿ ಸಂಪರ್ಕವನ್ನು ನೀಡಲಿದ್ದಾರೆ. ಸಂಪರ್ಕ ನೆಟ್ವರ್ಕ್ ವ್ಯವಸ್ಥೆಗಾಗಿ 7 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು ಕುಡಿಯುವ ಶುದ್ಧ ನೀರಿಗಾಗಿ ಸುಮಾರು ಎರಡರಿಂದ ಮೂರು ಸಾವಿರ ಕ್ಯಾನ್ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ 25ಕ್ಕೂ ಹೆಚ್ಚು ವಾಕಿ ಟಾಕಿ ವ್ಯವಸ್ಥೆಯನ್ನು ನೀಡಲಾಗುತ್ತಿದೆ. ಭದ್ರತೆಗಾಗಿ ಪೊಲೀಸ್ ಇಲಾಖೆ ಈಗಾಗಲೇ ಸಿದ್ಧತೆ ಪ್ರಾರಂಭಿಸಿದ್ದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಕೂಲಂಕಷ ಚರ್ಚೆ ನಡೆಸಿದ್ದಾರೆ.

ಸ್ವಚ್ಛತೆಗೆ ಆದ್ಯತೆ

ಉತ್ಸವದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಸುಮಾರು 300ಕ್ಕೂ ಹೆಚ್ಚು ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಲಿದ್ದಾರೆ ಗ್ರಾಮ ಪಂಚಾಯತ್ ನ ಕಾರ್ಮಿಕರು ಕೂಡ ಭಾಗವಹಿಸಲಿದ್ದು ಪ್ರಚಾರದ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ಉತ್ಸವ ಸ್ಥಳದಲ್ಲಿ ಉಚಿತ ಊಟ ವ್ಯವಸ್ಥೆ

ಉತ್ಸವಕ್ಕೆ ಆಗಮಿಸುವ ಎಲ್ಲರಿಗೂ ಉಚಿತ ಊಟದ ವ್ಯವಸ್ಥೆ ಇದ್ದು ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಊಟವನ್ನು ಬಡಿಸಲಾಗುತ್ತದೆ ಈ ಮಧ್ಯ ಒಂದು ತಾಸು ಮಾತ್ರ ಬಿಡುವು ನೀಡಲಾಗುವುದು ಇದಕ್ಕಾಗಿ ಬೇರೆ ಬೇರೆ ಊರುಗಳಿಂದ ಮತ್ತು ನಗರಗಳಿಂದ ಸ್ವಯಂಸೇವಕರು ಆಗಮಿಸುತ್ತಿದ್ದು ಪೂರ್ಣ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ ಎಂದರು.

 ಹಾರಕೂಡ ಶ್ರೀಗಳು ಉತ್ಸವದ ವಿಶೇಷ ಅತಿಥಿ

ಹಾರಕೂಡ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಮಠದ ಡಾಕ್ಟರ್ ಚನ್ನವೀರ ಶಿವಾಚಾರ್ಯರು ಭಾರತೀಯ ಸಂಸ್ಕೃತಿ ಉತ್ಸವದ ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಸಂಗೀತ ಕಾಯಕ ವಿವಿಧ ಕಲೆ ಮುಂತಾದವುಗಳಿಗೆ ಧರ್ಮ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಸಂರಕ್ಷಣೆ ಮತ್ತು ಪ್ರೋತ್ಸಾಹ ನೀಡುತ್ತಿರುವ ಅಪರೂಪದ ಹಾರಕೂಡ ಮಠದ ಶ್ರೀಗಳನ್ನು ಸ್ವರ್ಣ ಜಯಂತಿಯ ನೆನಪಿನಲ್ಲಿ ವಿಶೇಷ ಅತಿಥಿಯನ್ನಾಗಿ ಪರಿಗಣಿಸಲಾಗಿದೆ ಎಂದು ಬಸವರಾಜ ಪಾಟೀಲ್ ಸೇಡಂ ಹೇಳಿದರು. 

ದೇಸಿ ತಿಂಡಿ ಮಳಿಗೆಗಳಿಗೂ ಅವಕಾಶ

ಮಾರಾಟ ಮಳಿಗೆ ಮತ್ತು ಪ್ರದರ್ಶನ ಮಳಿಗೆಯ ಪಕ್ಕದಲ್ಲಿ ಸುಮಾರು 30ರಷ್ಟು ದೇಸಿ ಆಹಾರ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಜೊತೆಗೆ ಬಸ್ಸು ತಂಗಿ ದಾನದ ಸಮೀಪ ಕ್ಯಾಂಟೀನ್ ವ್ಯವಸ್ಥೆಯನ್ನು ತೆರೆಯಲಾಗುವುದು ಊಟಕ್ಕಾಗಿ ನಾಲ್ಕು ವಿಶೇಷ ಕೇಂದ್ರಗಳನ್ನು ತೆರೆಯುತ್ತಿದ್ದು ಮೊದಲನೆಯ ಕೌಂಟರ್ ಬಿವಿ ಐ ಪಿ ಗಳಿಗೆ ಮೀಸಲಾದರೆ ಇನ್ನು ಮೂರು ಕೌಂಟರ್ ಗಳು ಸಾರ್ವಜನಿಕರಿಗೆ ಮೀಸಲಿಡಲಾಗಿದೆ. ಉಚಿತ ಊಟದ ಜೊತೆಗೆ ದೇಸಿ ಊಟವನ್ನು ಸವಿಯುವ ಅವಕಾಶವನ್ನು ಉತ್ಸವದಲ್ಲಿ ಕಲ್ಪಿಸಲಾಗಿದೆ ಎಂದರು. 

ಮಾಜಿ ರಾಷ್ಟ್ರಪತಿ, ಕ್ರಿಕೆಟ್ ಪಟು ಸಂತರು ಗೆಸ್ಟ್

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ದಿನ ಪಾಲ್ಗೊಳ್ಳಲಿದ್ದು ವಿಶೇಷ ಅತಿಥಿಗಳಾಗಿ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್, ಸಂತ ಗುರು ಬಾಬಾ ರಾಮ್ ದೇವ್, ಮಂತ್ರಾಲಯದ ಶ್ರೀ ಸುಭದ್ರೆ ತೀರ್ಥ ಸ್ವಾಮಿಗಳು, ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳು ಶ್ರೀ ಜಗದ್ಗುರು ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮಿ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಧರ್ಮಸ್ಥಳದಡಾ. ಡಿ. ವೀರೇಂದ್ರ ಹೆಗ್ಗಡೆ,ಆರ್ ಎಸ್ ಎಸ್ ನ ದತ್ತಾತ್ರೇಯ ಹೊಸಬಾಳೆ, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಎಚ್ ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಬಿ ಸೋಮಣ್ಣ, ಮನ್ಸುಖ್ ಮಾಂಡವಿಯ ಭಾಗವಹಿಸಲಿದ್ದಾರೆ. 

ಪ್ರತಿದಿನ ಮೂರು ಲಕ್ಷ ಜನರ ನಿರೀಕ್ಷೆ

ಪ್ರತಿದಿನ ಉತ್ಸವಕ್ಕೆ ಕನಿಷ್ಠ 3 ಲಕ್ಷ ನಿರೀಕ್ಷೆಯಿದ್ದು ಒಂಬತ್ತು ದಿನಗಳಲ್ಲಿ ಸುಮಾರು 9 ಲಕ್ಷ ಜನರು ಪಾಲ್ಗೊಳ್ಳುವಲ್ಲಿದ್ದಾರೆ. ಕಲಬುರ್ಗಿ ಕಂಪು ಉತ್ಸವದ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಆಗಮಿಸಿದ ವೇಳೆ ಒಂದು ಲಕ್ಷದ ಅರವತ್ತು ಸಾವಿರ ಜನ ಸೇರಿದರು ಹಾಗೆ ವಿಶೇಷ ಅತಿಗಳು ಈ ಬಾರಿ ಆಗಮಿಸುತ್ತಿರುವುದರಿಂದ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಲಿದೆ.

ವಿಶೇಷ ಮಾಧ್ಯಮ ಕೇಂದ್ರ

ಕಾರ್ಯಕ್ರಮದ ವರದಿ ಮಾಡಲು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದವರಿಗಾಗಿ ಉತ್ಸವ ಸ್ಥಳದ ಪ್ರಧಾನ ವೇದಿಕೆ ಹಿಂಭಾಗದಲ್ಲಿ ವಿಶೇಷ ಸೌಲಭ್ಯಗಳನ್ನು ಹೊಂದಿದ ಮಾಧ್ಯಮ ಕೇಂದ್ರವನ್ನು ತೆರೆಯಲಾಗುತ್ತದೆ ಅದರಲ್ಲಿ ಇಂಟರ್ನೆಟ್ ಸೌಲಭ್ಯ ಹೊಂದಿದ ಕಂಪ್ಯೂಟರ್ ದೂರವಾಣಿ ಹಾಗೂ ಉತ್ಸವಕ್ಕೆ ಆಗಮಿಸುವ ಗಣ್ಯರು ಪತ್ರಿಕಾಗೋಷ್ಠಿ ನಡೆಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಲಬುರಗಿ ಕಂಪು ಸಂಕಲ್ಪ ಈಡೇರಿಕೆ

  ಕಲ್ಬುರ್ಗಿ ಕಂಪು ಉತ್ಸವ ನಡೆದ ಸಂದರ್ಭದಲ್ಲಿ ಕೈಗೊಂಡ ದೂರದೃಷ್ಟಿಯಂತೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಎರಡು ತಾಸು ಅಧಿಕ ಕೆಲಸ ಮಾಡಬೇಕು, ಕನಿಷ್ಠ ಒಂದು ಕೋಟಿ ಗಿಡಗಳನ್ನು ನೆಡಬೇಕು ಎಂಬ ಸಂಕಲ್ಪದಂತೆ ಈಗಾಗಲೇ 50 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಸೇಡಂನ 15 ಹಳ್ಳಿಗಳಲ್ಲಿ 40 ಸಾವಿರ ಗಿಡಗಳನ್ನು ನೆಡುವಲ್ಲಿ ಯಶಸ್ವಿಯಾಗಿದ್ದೇವೆದೇಸಿ ತಳಿಯ ಸಂತತಿ ಅಭಿವೃದ್ಧಿಗೆ ಬೆಂಬಲ ನೀಡಬೇಕು ಜೊತೆಗೆ ಸಾಹಿತ್ಯ ಪ್ರಸಾರ ನಿರಂತರ ಪ್ರಕ್ರಿಯೆ ಆಗಬೇಕು ಆ ಮೂಲಕ ಸುಮಾರು 10 ಕೋಟಿ ರೂಪಾಯಿಯ ಸಾಹಿತ್ಯ ಮಾರಾಟ ಮಾಡಬೇಕೆಂಬ ಅಪೇಕ್ಷೆಯಂತೆ ಪ್ರತಿ ವರ್ಷ 30 ರಿಂದ 40 ಲಕ್ಷ ರೂಪಾಯಿಯ ಸಾಹಿತ್ಯ ಕೃತಿಗಳು ಮಾರಾಟಗೊಂಡು ನಾಲ್ಕೈದು ಕೋಟಿ ರೂಪಾಯಿಗಳ ಸಾಹಿತ್ಯ ಮಾರಾಟವಾಗಿದೆ. ಈ ಬಾರಿಯ ಉತ್ಸವದಲ್ಲಿ ಸುಮಾರು ಐದು ಕೋಟಿ ರೂಪಾಯಿಯ ಸಾಹಿತ್ಯ ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಇಂತಹ ಉತ್ಸವದಿಂದ ಭಾರತೀಯ ಸಂಸ್ಕೃತಿಯ ಅನಾವರಣಗೊಂಡು ಹೆಮ್ಮೆಯ ಭಾವವನ್ನು ಪಸರಿಸಲು ಸಾಧ್ಯವಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಉತ್ಸವವು ಭಾರತೀಯ ಮಕ್ಕಳ ಹಿರಿಮೆ-ಗರಿಮೆಯನ್ನು ಪ್ರದರ್ಶಿಸಿ ಭರತಮಾತೆಯ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುವ ಬಲುದೊಡ್ಡ ಆದರ್ಶವನ್ನು ಈ ಉತ್ಸವದಲ್ಲಿ ಕಂಡುಕೊಳ್ಳಲಾಗುತ್ತಿದೆ ಎಂದು ಹೇಳಿದರು. 'ನಿಂದಕ ನಿಜ ರಾಕೋ'ಎಂಬ ಕಬೀರರ ಮಾತಿನಂತೆ ನಿಂದಕರಿಗೆ ಪಕ್ಕದಲ್ಲಿ ಮನೆಯನ್ನು ಕಟ್ಟಿಕೊಡಬೇಕು ಆ ಮೂಲಕ ತಪ್ಪಿನ ಅರಿವು ಆಗಿ ಜಾಗೃತಗೊಳ್ಳಲು ಸಾಧ್ಯವಾಗುತ್ತದೆ. ಟೀಕೆ ಟಿಪ್ಪಣಿಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಆಮಂತ್ರಣದಲ್ಲಿ ಮುದ್ರಿಸಲಾದ ಎಲ್ಲಾ ಅತಿಥಿಗಳಿಗೂ ಗೌರವಯುತವಾಗಿ ಆಹ್ವಾನ ನೀಡಲಾಗಿದೆ. ಭಾಗವಹಿಸುವಿಕೆ ಅವರವರಿಗೆ ಬಿಟ್ಟಿದ್ದು ಸೇಡಂನ ಶಾಸಕರು ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸಿಗೆ ನೆರವಾಗಿದ್ದಾರೆ ಎಂದು ಬಸವರಾಜ ಪಾಟೀಲ್ ಸೇಡಂ ಹೇಳಿದರು. 

  ಉತ್ಸವದ ದಾಖಲೀಕರಣ ಕ್ಕೆ ಸಿದ್ಧತೆ

9 ದಿನಗಳ ಈ ಉತ್ಸವವು ಮುಂದಿನ ಜನಾಂಗಕ್ಕೆ ದಾಖಲೆಯಾಗಿ ಕೈಗೆ ಸಿಗಬೇಕು ಎನ್ನುವ ಉದ್ದೇಶದಿಂದ ಉತ್ಸವ ಕಳೆದು ನಾಲ್ಕು ತಿಂಗಳಲ್ಲಿ ಕನ್ನಡ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪುಸ್ತಕ ರೂಪದಲ್ಲಿ ದಾಖಲೀಕರಣ ಮಾಡಲು ನಿರ್ಧರಿಸಲಾಗಿದೆ. ಪ್ರತಿ ಭಾಷೆಗಳಲ್ಲಿ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ ದೇಶ ವಿದೇಶದ ಜನರಿಗೆ ಇದನ್ನು ಹಂಚಲು ಉದ್ದೇಶಿಸಲಾಗಿದೆ.

ಉತ್ಸವ ವೀಕ್ಷಣೆಗಾಗಿ ತಜ್ಞರ ತಂಡ

9 ದಿನಗಳ ಉತ್ಸವ ಯಶಸ್ವಿಯಾಗಿ ಮುನ್ನಡೆಯಲು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ಚಿಂತಕಿ ವೀಣಾ ಬನ್ನಂಜೆ, ತಜ್ಞರಾದ ಎನ್ ಎಂ ಬಿರಾದಾರ್, ಡಾ. ಲೀಲಾ ಕಾರಟಗಿ, ಮಹೇಶ್ ಮಾಶಾಳ, ನವದೆಹಲಿಯ ಗೀತಾ ಸಿಂಗ್ , ಅಶೋಕ್ ಠಾಕೂರ್ ಮುಂತಾದ 8 ಮಂದಿ ತಜ್ಞರ ತಂಡವು ದಿನನಿತ್ಯ ವೀಕ್ಷಣೆ ಮಾಡಿ ದಾಖಲು ಮಾಡುವ ಹಾಗೂ ಕಾರ್ಯಕ್ರಮಕ್ಕೆ ಸಂದರ್ಭೋಚಿತ ಸಲಹೆಗಳನ್ನು ನೀಡಿ ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಲು ರೂಪುರೇಷೆ ಸಿದ್ದಗೊಂಡಿದೆ. 

ಉತ್ಸವದಲ್ಲಿ ದಿಶಾ ನಿರ್ದೇಶನ ಕೇಂದ್ರಬಿಂದು

  ಉತ್ಸವದಲ್ಲಿ ದಿಶಾ ನಿರ್ದೇಶನ ಕಾರ್ಯಕ್ರಮವು ಕೇಂದ್ರ ಬಿಂದುವಾಗಿದ್ದು ಇದರಿಂದ ಹೆಚ್ಚಿನ ಚಿಂತನೆ ವಿನಿಮಯವಾಗುವ ಅವಕಾಶವಿದೆ. ಉತ್ಸವದ ಪ್ರತಿದಿನ ಮಧ್ಯಾಹ್ನ ಮೂರು ಗಂಟೆಗೆ ದಿಶಾ ನಿರ್ದೇಶನ ಕಾರ್ಯಕ್ರಮವು ನಡೆಯಲಿದೆ.

11 ಎಕ್ರೆ ಸ್ಥಳದಲ್ಲಿ ಕೃಷಿ ಲೋಕ ಸೃಷ್ಟಿ

ಉತ್ಸವ ಸಭಾಂಗಣದ ಪಕ್ಕದ 11 ಎಕರೆ ಪ್ರದೇಶದಲ್ಲಿ ಕೃಷಿ ಲೋಕ ಸೃಷ್ಟಿಯಾಗಿದೆ ಎಂದು ಕೃಷಿ ವಿಭಾಗದ ಮುಖ್ಯಸ್ಥರಾದ ವಿ.ಶಾಂತ ರೆಡ್ಡಿ ಮಾಹಿತಿ ನೀಡಿದರು.

   ಕೃಷಿ ಲೋಕದಲ್ಲಿ ಕಳೆದ ಮೂರು ತಿಂಗಳಿಂದ ಕೃಷಿಗೆ ಬೇಕಾದ ಆವರಣವನ್ನು ಸೃಷ್ಟಿಸಿ ಬೆಳೆಯನ್ನು ಬೆಳೆಸಲಾಗಿದೆ. ಹಿಪ್ಪು ನೇರಳೆ, ಕಬ್ಬು, ಕೆಂಪು ಬಾಳೆ, ಪೇರಳೆ ಸೀಬೆ ನಿಂಬೆ ಮಾವು, ಅರಿಶಿಣ ಉಳ್ಳಾಗಡ್ಡಿ, ಪಾಲಕ್, ಟೊಮೇಟೊ, ಬದನೆಕಾಯಿ ಹೀಗೆ ಬಳ್ಳಿ, ಕಾಯಿ ಹೂಗಳ ಸುಂದರ ಕೃಷಿ ಲೋಕವು ನಿರ್ಮಾಣವಾಗಿದೆ, ಬಹುವರ್ಣದ ಡಬ್ಬು ಮೆಣಸಿನಕಾಯಿ , ಕಲ್ಲಂಗಡಿ, ಸೌತೆ ಗುಡುಮೆಕಾಯಿ ಮುಂತಾದ ಬೆಳೆಗಳನ್ನು ಬೆಳೆಸಲಾಗಿದೆ. ಕೃಷಿ ಲೋಕಕ್ಕೆ ಸುಮಾರು ನಾಲ್ಕೈದು ಕಿಲೋಮೀಟರ್ ದೂರದ ಕಾಗಿಣಾ ನದಿಯಿಂದ ನೀರನ್ನು ತರುವ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ಸವ ಸ್ಥಳಕ್ಕೆ ಆಗಮಿಸುವವರಿಗೆ ಭಾರತೀಯ ಕೃಷಿ ಪದ್ಧತಿಯಲ್ಲಿ ಆಸಕ್ತಿ ಹುಟ್ಟಿಸಲು ಕೃಷಿ ಲೋಕವು ಪ್ರೇರಣೆ ನೀಡಲಿದೆ ಎಂದು ಶಾಂತರೆಡ್ಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಅನುರಾಧಾ ಪಾಟೀಲ್, ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಮತ್ತು ಪ್ರಭಾಕರ್ ಜೋಶಿ, ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.