ರಾಘವೇಂದ್ರ ಹಳಿಪೇಟಿ ರಚಿಸಿದ ನಮ್ಮೊಳಗೊಬ್ಬ ಶರಣ ನಾಟಕ ಕೃತಿ ಬಿಡುಗಡೆ ಶರಣ ಸಾಹಿತ್ಯದಿಂದ ಆಂತರಿಕ ಸಾಮರ್ಥ್ಯ ಹೆಚ್ಚಳ

ರಾಘವೇಂದ್ರ ಹಳಿಪೇಟಿ ರಚಿಸಿದ ನಮ್ಮೊಳಗೊಬ್ಬ ಶರಣ ನಾಟಕ ಕೃತಿ ಬಿಡುಗಡೆ
ಶರಣ ಸಾಹಿತ್ಯದಿಂದ ಆಂತರಿಕ ಸಾಮರ್ಥ್ಯ ಹೆಚ್ಚಳ
ಕಲಬುರಗಿ : ಜಗತ್ತಿನ ಭಾಷೆಗಳಲ್ಲಿಯೇ ವಿಶಿಷ್ಟವಾದ ವಚನವಿವೇಕದ ಶರಣ ಸಾಹಿತ್ಯದ ಅಧ್ಯಯನದಿಂದ ನಮ್ಮೊಳಗಿರುವ ಆಂತರಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡೀನ್, ಲೇಖಕ ಪ್ರೊ.ವಿಕ್ರಮ ವಿಸಾಜಿ ಅಭಿಪ್ರಾಯ ಪಟ್ಟರು.
ರಂಗಶಿಕ್ಷಕ, ನಿರ್ದೇಶಕ ರಾಘವೇಂದ್ರ ಹಳಿಪೇಟಿ ರಚಿಸಿದ, ರಾಣೆ ಬೆನ್ನೂರಿನ ರಂಗಕುಸುಮ ಪ್ರಕಾಶನ ಪ್ರಕಟಿಸಿದ ನಮ್ಮೊಳಗೊಬ್ಬ ಶರಣ ನಾಟಕ ಕೃತಿಯ ಪರಿಚಯ ಮಾಡಿಸಿದ ಅವರು, ಬರಹಗಾರರಿಗೆ, ಲೇಖಕರಿಗೆ, ನಾಟಕಕಾರರಿಗೆ ಶರಣ ಸಾಹಿತ್ಯವೆಂದರೆ, ಅದ್ಭುತವಾದ ಗಣಿಯಿದ್ದಂತೆ. ತೆಗೆದಷ್ಟೂ ಸಿಗುವ, ಶರಣರ ನಿಷ್ಠುರ ನಿಲುವು, ಮನುಷ್ಯಪ್ರೀತಿ ಎಲ್ಲ ಕಾಲಕ್ಕೂ ಅನ್ವಯವಾಗುವುದರಿಂದ ಶರಣರ ವಿಚಾರಗಳನ್ನು ಸಂರಕ್ಷಿಸುವುದು ಆಧುನಿಕ ಕಾಲದ ಎಲ್ಲ ಲೇಖಕರ ಹೊಣೆಯಾಗಿದೆ ಎಂದರು. ಈ ದಿಸೆಯಲ್ಲಿ ಮಾದಾರ ಚೆನ್ನಯ್ಯನಂತಹ ಶರಣರ ವಿಷಯವನ್ನು ತೆಗೆದುಕೊಂಡು ನಾಟಕ ರಚಿಸಿದ ರಾಘವೇಂದ್ರ ಅವರ ಸಾಹಸ ಮೆಚ್ಚುವಂತಹದ್ದಾಗಿದೆ.
ನಾಟಕ ಕೃತಿಯನ್ನು ಬಿಡುಗಡೆಗೊಳಿಸಿದ ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ರಂಗಪ್ರಯೋಗಕ್ಕೂ ಮುನ್ನ ಬರೆದ ನಾಟಕಗಳು ಕೇವಲ ಸಾಹಿತ್ಯ ಕೃತಿಗಳಾಗಿಯೇ ಉಳಿಯುತ್ತವೆ. ರಂಗದ ಮೇಲೆ ತಂದನಂತರ ಪ್ರಕಟಿಸಿದರೆ, ಉತ್ತಮ ಕೃತಿಯಾಗುವ ಸಂಭವ ಇರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶಿವಗಂಗಮ್ಮ ರುಮ್ಮಾ ಮಾತನಾಡಿ, ಶರಣ ಚಳುವಳಿಯಲ್ಲಿ ಸ್ವಯಂ ವ್ಯಕ್ತಿತ್ವದ ವಿಕಸನ ಮಾಡಿಕೊಳ್ಳುವುದರ ಜೊತೆಗೆ ಇದುರಿನ ವ್ಯಕ್ತಿತ್ವಗಳಿಗೆ ಗೌರವ ಕೊಡುವ ಮೂಲಕ ಹೋರಾಟಗಳನ್ನು ಹೇಗೆ ಕಾಪಾಡಬಹುದು ಎಂಬುದನ್ನು ನಾಟಕಕಾರ ರಾಘವೇಂದ್ರ ಅವರು ತಮ್ಮ ಈ ಕೃತಿಯಲ್ಲಿ ಸೂಚಿಸಿದ್ದಾರೆ. ಜಾಗತಿಕ ಚರಿತ್ರೆಯಲ್ಲಿ ದಾಖಲಾದ ಅಪೂರ್ವ ಘಟನೆಯನ್ನು ಸೀಮಿತ ಅವಧಿಯೊಳಗೆ ಚಿತ್ರಿಸುವುದು ಸಾವಾಲಿನ ಕೆಲಸವಾಗಿದ್ದು, ಅದರಲ್ಲಿ ನಾಟಕಕಾರರು ಯಶಸ್ವಿಯಾಗಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವನಾಯ್ಕ ದೊರೆ, ಪ್ರಕಾಶಕರಾದ ವೆಂಕಟೇಶ ಈಡಿಗರ, ನಾಟಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ.ಮಲ್ಲೇಶ ಪಾವಗಡ, ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ.ಸಂದೀಪ ಮಾಳಗಿ ಉಪಸ್ಥಿತರಿದ್ದರು. ನಾಟಕಕಾರ ರಾಘವೇಂದ್ರ ಹಳಿಪೇಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತುಳಸಾಬಾಯಿ ಹಳಿಪೇಟಿ, ರೇಖಾ ರಾಘವೇಂದ್ರ, ವಿಶಾಲ ಪಾಟೀಲ, ಡಾ.ವಿಶ್ವರಾಜ ಪಾಟೀಲ, ಶಂಕ್ರಯ್ಯ ಘಂಟಿ, ಹುಲುಗಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಹಳಿಪೇಟಿ, ಶಿವಕುಮಾರ ಹಳಿಪೇಟಿ, ಸಂತೋಷ ಹಳಿಪೇಟಿ, ಲಕ್ಷ್ಮಿಬಾಯಿ, ರಾಧಾಬಾಯಿ, ರಮೇಶ ಹಳಿಪೇಟಿ, ಶಾಂತಲಿಂಗಯ್ಯ ಮಠಪತಿ, ಬಸವಪ್ರಭು, ಡಾ.ಕೆ.ಲಿಂಗಣ್ಣ, ಅಶೋಕ ತೊಟ್ನಳ್ಳಿ, ಶ್ರೀಶೈಲ ಘೂಳಿ, ವಿಶ್ವನಾಥ ಭಕ್ರೆ, ಮಲ್ಲಿಕಾರ್ಜುನದೊಡ್ಡಮನಿ, ವಿಜಯಲಕ್ಷ್ಮಿ ದೊಡ್ಡಮನಿ, ನಾಗರಾಜ ಸಾಲೋಳ್ಳಿ ಇದ್ದರು, ಆರ್‌ಜೆ ವಾಣಿ ನಿರೂಪಿಸಿದರು. ಡಾ.ಸಂದೀಪ ಮಳಗಿ ವಂದಿಸಿದರು.
ರಂಜಿಸಿದ ರಂಗಸಂಗೀತ
ಪುಸ್ತಕ ಬಿಡುಗಡೆಗೂ ಮುನ್ನ ಏರ್ಪಡಿಸಿದ್ದ ರಂಗಸಂಗೀತವು ಸಭಿಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ರಂಗಕರ್ಮಿಗಳಾದ ಯಶವಂತ ಕುಚಬಾಳ, ಅರುಣ ಮಾನ್ವಿ, ಕಲ್ಯಾಣಿ ಭಜಂತ್ರಿ ಅವರು ರಂಗಗೀತೆಗಳ ಗಾಯನ ಮಾಡಿ ರಂಜಿಸಿದರು.