ಹಗಲುಗಳ್ಳರು ಕಥಾ ಸಂಕಲನ

ಹಗಲುಗಳ್ಳರು ಕಥಾ ಸಂಕಲನ

ಹಗಲುಗಳ್ಳರು (ಕಥಾ ಸಂಕಲನ)

ಇಂದಿನ ಸಮಕಾಲೀನ ಸಮಸ್ಯೆ - ಸವಾಲುಗಳನ್ನು ಎತ್ತಿಕೊಂಡು ಕಥೆಗಳನ್ನು ಹೆಣೆಯುತ್ತಿರುವ ಹಲವರಲ್ಲಿ ಮಚ್ಚೇಂದ್ರ ಅಣಕಲ್ ಅವರೂ ಒಬ್ಬರು. ಹಳ್ಳಿಯಲ್ಲಿ ಜನಿಸಿ ಅಕ್ಷರದ ಬೆಳಕನ್ನು ದಕ್ಕಿಸಿಕೊಂಡು ಆರಂಭದಲ್ಲಿ ಫೋಟೋಗ್ರಾಫರರಾಗಿ ನಂತರ ಪತ್ರಿಕಾ ವರದಿಗಾರರಾಗಿ ಶಿಕ್ಷಕ ವೃತ್ತಿಯಲ್ಲಿ ತೊಡಗಿದವರು. ಸುತ್ತಲ ಸಮಾಜವನ್ನು ತೆರೆದ ಕಣ್ಣು-ಮನಸ್ಸಿನಿಂದ ಗಮನಿಸುತ್ತಾ ಬಂದ ಮಚ್ಚೇಂದ್ರ ಸಾತ್ವಿಕ ವೇಷದ ಮರೆಯಲ್ಲಿಯ ಕಪಟತನ, ಮೋಸ ಇತ್ಯಾದಿಗಳನ್ನು ತಮ್ಮ "ಹಗಲುಗಳ್ಳರು" ಕಥೆಯಲ್ಲಿ ಬಿಚ್ಚಿಟ್ಟಿದ್ದಾರೆ.

ಭಕ್ತರನ್ನು ಸಮ್ಮೋಹನಗೊಳಿಸುವ, ಭಕ್ತಿ ಹಾಗೂ ದೇವರ ಹೆಸರಿನಲ್ಲಿ ಸುಲಿಗೆ ಮಾಡುವ ನಯಗಾರಿಕೆಯನ್ನು ಈ "ಹಗಲುಗಳ್ಳರು" ಕಥೆಯು ಬಯಲು ಮಾಡುತ್ತದೆ. ಅವರ ಇನ್ನೊಂದು ಕಥೆ “ಶ್ರೀಮಠದ ಕೃಪಾಶೀರ್ವಾದ" ಇದು ಇಂದಿನ ರಾಜಕಾರಣ, ಮಠಾಧೀಶರೆನಿಸಿಕೊಂಡವರ ಸ್ವಾರ್ಥಪರ ತಂತ್ರಗಾರಿಕೆ ಜನಸಾಮಾನ್ಯರ ಮುಗ್ಧತನವನ್ನು ಅನಾವರಣಗೊಳಿಸುತ್ತಲೇ ವ್ಯವಸ್ಥೆಯನ್ನು ವಿಡಂಬಿಸುವ ಕಾರ್ಯ ಮಾಡುತ್ತದೆ.

ಒಂದು....ಎರಡು....ಮೂರು....ಎಂಬ ಕಥೆಯು ಭಾನಾಮತಿಯನ್ನು ಕುರಿತಂತೆ ಹೇಳುತ್ತದೆ. ಈ ಭಾನಾಮತಿಗೆ ಸಿಕ್ಕ ಹೆಣ್ಣುಮಗಳ ನಡೆಯನ್ನು ಇಲ್ಲಿ ಕಾಣಬಹುದು. ಒಂದೆಡೆ ಪ್ರಗತಿಪರರು, ಕೆಲವು ಮನೋವಿಜ್ಞಾನಿಗಳು ಈ ಭಾನಾಮತಿ ಎಂಬುದು ಇಲ್ಲವೇ ಇಲ್ಲ, ಇದು ಅವರವರ ಮಾನಸಿಕ ಭ್ರಮೆ ಎಂದು ವಿಶ್ಲೇಷಿಸುತ್ತಾರೆ. ಇನ್ನೊಂದೆಡೆ ಅನೇಕರು ಇದರ ಹಿಡಿತಕ್ಕೆ ಸಿಕ್ಕು ಬದುಕನ್ನು ನರಕವಾಗಿಸಿಕೊಳ್ಳುತ್ತಿದ್ದಾರೆ

ಸತ್ಯವೇನೆಂದು ಅರಿತು ಬದುಕಬೇಕಾದ ಮನೋಸ್ಥಿತಿಯನ್ನು ರೂಢಿಸಿಕೊಳ್ಳಬೇಕಾದ ಸತ್ಯವನ್ನು ಈ ಕಥೆಯು ಸಾದರಿಪಡಿಸುತ್ತದೆ.

ತನ್ನ ಮಗನನ್ನೇ ಅಪಘಾತದಲ್ಲಿ ಕಳೆದುಕೊಂಡ ಅಪ್ಪನಿಗೆ ಅದು ಅರಿವಿಗೆ ಬಂದಾಗಿನ ಸಂಕಟ, ಅನಿರೀಕ್ಷಿತತೆಯ ಆಘಾತ ಇತ್ಯಾದಿಗಳು ಅಪಘಾತ ಕಥೆಯನ್ನೊಳಗೊಂಡಿದೆ. ಮನುಷ್ಯ ಸ್ವಾರ್ಥದ, ಗೋಮುಖ ವ್ಯಾಘ್ರತನದ ಮಾನಸಿಕ ತುಮಲ-ತಳಮಳ, ಸಂಶಯದ ಕಾರಣಕ್ಕೆ ಕೌಟುಂಬಿಕ ವ್ಯವಸ್ಥೆಯಲ್ಲಿನ ಬಿರುಕು, ಅದರಿಂದ ಅನುಭವಿಸುವ ಸಂಕಟ, ಬರಗಾಲದ ಬವಣೆ, ಇಂತಹದ್ದರಲ್ಲಿ ಶ್ರಮಿಕರನ್ನು 'ಮೊಕಾದಂ' ನಂತಹವರು ನಡೆಸಿಕೊಳ್ಳುವ ಪರಿ ಇತ್ಯಾದಿ ಮಚ್ಚೇಂದ್ರ ಅಣಕಲ್ ಅವರು ಕಣ್ಣಿಗೆ ಕಟ್ಟುವಂತೆ ಕಥೆಗಳಲ್ಲಿ ಹೆಣದಿದ್ದಾರೆ.

ವಾಸ್ತವ ಬದುಕನ್ನು ಕಣ್ಮುಂದಿಟ್ಟುಕೊಂಡು ಅದರ ಓರೆ-ಕೋರೆಗಳನ್ನು ಓದುಗ ಪ್ರಪಂಚಕ್ಕೆ ಪರಿಚಯಿಸುವ, ಸಾಧ್ಯವಾದರೆ ಒಂದಷ್ಟು ಬದಲಾವಣೆಗೆ ಚಿಂತಿಸುವ ನಿಟ್ಟಿನಲ್ಲಿ ಇಲ್ಲಿಯ ಕಥೆಗಳು ಮೂಡಿಬಂದಿವೆ.

ಮಚ್ಚೇಂದ್ರ ಅಣಕಲ್ ಅವರು ತೀರ ಅವಸರದಲ್ಲಿ ಈ ಕಥಾ ಸಂಕಲನಕ್ಕೆ ಮುನ್ನುಡಿಯ ಮಾತುಗಳನ್ನು ಬರೆಯಲು ನನಗೆ ಒಪ್ಪಿಸಿದ್ದಾರೆ. ಈ ನೆಪದಲ್ಲಿ ಅವರ ಕಥೆಗಳನ್ನೋದುವ ಅವಕಾಶ ಲಭಿಸಿದೆ. ಚಿಂತನೆಗೆ ತೊಡಗಿಸಿದೆ. ಕಥೆಗಾರರು ಈಗಾಗಲೇ ಎರಡು ಕಥಾ ಸಂಕಲನಗಳನ್ನು ಪ್ರಕಟಿಸಿದಷ್ಟೇ ಅಲ್ಲದೇ 6ನೇ ಅಕ್ಕ ವಿಶ್ವ ಕನ್ನಡ ಕಥಾ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗೂ ಹಲವಾರು ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟವಾಗಿ ಜನಮನ್ನಣೆ ಗಳಿಸಿದ್ದಾರೆ. ಇವರು ಹೀಗೆಯೇ ಬರಹದಲ್ಲಿ ಮುಂದುವರಿಯಲಿ. ಇವರಿಂದ ವ್ಯವಸ್ಥೆಯ ಕೊಳೆಯನ್ನು ತೊಳೆಯುವಂತಹ ಕಥೆಗಳು ಇನ್ನೂ ಹೆಚ್ಚು ಹೆಚ್ಚಾಗಿ ಮೂಡಿಬರಲಿ, ಎಂಬುವದೆ ಈ ಪುಸ್ತಕದ ಒಳ ಅರ್ಥ .

ಲೇಖಕರು ,ಮಚ್ಚೇಂದ್ರ ಅಣಕಲ್ 

ಮುದ್ರಣ.೨೦೨೯

ಪುಟ ೧೦0

ಬೆಲೆ.೧೨೦

ಪ್ರಕಾಶಕರು, ಲಕ್ಷ್ಮೀ ಕಾಂತ ಪ್ರಕಾಶನ, ಶರಣನಗರ ಕಿಣ್ಣಿ. ತಾ.ಬಸವಕಲ್ಯಣ ಜಿ.ಬೀದರ್

   -ಡಾ. ಸೂರ್ಯಕಾಂತ ಸುಜ್ಯಾತ್ ಕಲಬುರಗಿ.