ಜ. 6 ರಿಂದ ಕರದಾಳು ಬ್ರಹ್ಮಶ್ರೀ ನಾರಾಯಣ ಗುರುಪೀಠದಿಂದ ಬೆಂಗಳೂರಿಗೆ ಪಾದಯಾತ್ರೆ: ಡಾ. ಪ್ರಣವಾನಂದ ಶ್ರೀ

ನ.2ರಂದು ಕಲಬುರಗಿಯಲ್ಲಿ ಪೂರ್ವ ಸಿದ್ಧತಾ ಸಭೆಗೆ ನಿರ್ಧಾರ
ಜ. 6 ರಿಂದ ಕರದಾಳು ಬ್ರಹ್ಮಶ್ರೀ ನಾರಾಯಣ ಗುರುಪೀಠದಿಂದ ಬೆಂಗಳೂರಿಗೆ ಪಾದಯಾತ್ರೆ: ಡಾ. ಪ್ರಣವಾನಂದ ಶ್ರೀ
ಕಲಬುರಗಿ: ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸದೆ ರಾಜ್ಯ ಸರ್ಕಾರವು ಸಮುದಾಯವನ್ನು ಕಡೆಗಣಿಸುವುದರ ವಿರುದ್ಧ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಜನವರಿ 6 ರಿಂದ 42 ದಿನಗಳ ಕಾಲ ಐತಿಹಾಸಿಕ ಪಾದಯಾತ್ರೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಚಿತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೀಠಾಧಿಪತಿಗಳಾದ ಡಾ. ಪ್ರಣವಾನಂದ ಶ್ರೀಗಳು ಘೋಷಣೆ ಮಾಡಿದ್ದಾರೆ.
ಜನವರಿ 6 ರಂದು ಶಕ್ತಿ ಪೀಠದಿಂದ ಪಾದಯಾತ್ರೆ ಪ್ರಾರಂಭಗೊಂಡು 42 ದಿನಗಳಲ್ಲಿ 700 ಕಿಲೋಮೀಟರ್ ಪಯಣಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ. ಇಷ್ಟರಲ್ಲಿ ಬೇಡಿಕೆ ಈಡೇರದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಲಾಗುವುದು ಎಂದು ಅಕ್ಟೋಬರ್ ಆರರಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದಿನ ಸರಕಾರವಿದ್ದಾಗ ಚಿಂಚೋಳಿಯಿಂದ ಕಲಬುರಗಿ ವರೆಗೆ ಹಾಗೂ ಮಂಗಳೂರಿಂದ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಮಾಡಿದ ಪರಿಣಾಮವಾಗಿ ಎರಡು ಪ್ರಮುಖ ಬೇಡಿಕೆಗಳಾದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮ ಹಾಗೂ ಕುಲಶಾಸ್ತ್ರೀಯ ಅಧ್ಯಯನಕ್ಕೆ ಬಿಜೆಪಿ ಸರಕಾರ ಘೋಷಣೆ ಮಾಡಿದ್ದು. ಆದರೆ ಈ ಬಗ್ಗೆ ಅನುದಾನ ಪ್ರಕಟಿಸದೆ ಮೂರು ಬಜೆಟ್ ಗಳ ಮಂಡನೆ ಆದರೂ ನಯಾ ಪೈಸೆ ನೀಡದೆ ಈ ಸರಕಾರ ಸಮುದಾಯದವರ ಬೇಡಿಕೆಗಳನ್ನು ಕಡೆಗಣಿಸಿತ್ತು ಪ್ರಬಲ ಒತ್ತಾಯದ ನಂತರ ಮೊನ್ನೆಯಷ್ಟೇ ಈಡಿಗ ನಿಗಮಕ್ಕೆ ಮಂಜುನಾಥ ಪೂಜಾರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರೂ ಹತ್ತು ದಿನಗಳಾದರೂ ಆದೇಶ ಪತ್ರವನ್ನು ನೀಡಿಲ್ಲ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಸಮುದಾಯದವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ ಖರ್ಗೆ, ಡಾ. ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗವನ್ನು ಪ್ರತಿನಿಧಿಸುವ ರಾಜಕೀಯ ನಾಯಕರು ಪೂರ್ಣ ಬೆಂಬಲ ನೀಡುವುದಾಗಿ ಮತ್ತು ತಮ್ಮ ಸರಕಾರ ಬಂದರೆ ಆಶ್ವಾಸನೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದರೂ ಸರಕಾರ ಬಂದು ಎರಡುವರೆ ವರ್ಷ ಕಳೆದರೂ ಕನಿಷ್ಠ ಮುಖ್ಯಮಂತ್ರಿಗಳ ಭೇಟಿಗೂ ಅವಕಾಶ ಮಾಡಿಕೊಡದೆ ಕಡೆಗಣಿಸಿರುವುದು ಖಂಡನೀಯ. ಸಮುದಾಯದ ನಿಗಮಕ್ಕೆ 500 ಕೋಟಿ ಅನುದಾನ, ಬೆಂಗಳೂರಿನಲ್ಲಿ ನಾರಾಯಣ ಗುರುಗಳ ಪ್ರತಿಮೆ ಪ್ರತಿಷ್ಠಾಪನೆ, ಸಮಾಜವನ್ನು ಈಗಿರುವ 2 ಎ ಯಿಂದ ಪರಿಶಿಷ್ಟ ವರ್ಗಕ್ಕೆ ಶಿಫಾರಸು, ಮದ್ಯ ಮಾರಾಟದಲ್ಲಿ ಶೇಕಡ 50ರಷ್ಟು ಸಮುದಾಯದವರಿಗೆ ಮೀಸಲಾತಿ, ಕುಲಕಸಬು ಕಳೆದುಕೊಂಡವರಿಗೆ ಪುನರ್ವಸತಿ, ನಾರಾಯಣ ಗುರುಗಳ ಅಧ್ಯಯನಪೀಠ ಪ್ರಾರಂಭ ಸೇರಿದಂತೆ ಒಟ್ಟು 16 ಬೇಡಿಕೆಗಳನ್ನು ಒತ್ತಾಯಿಸಿ ಕರದಾಳು ಶಕ್ತಿಪೀಠದಿಂದ ಚಿತ್ತಾಪುರ, ವಾಡಿ, ಶಹಬಾದ್, ಜೇವರ್ಗಿ, ಶಹಾಪುರ, ಲಿಂಗಸಗೂರು, ತಾವರೆಗೆರೆ, ಗಂಗಾವತಿ, ಹೊಸಪೇಟೆ, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಪಾದಯಾತ್ರೆಯ ಪೂರ್ವಭಾವಿ ಸಿದ್ಧತೆಗಾಗಿ ನವೆಂಬರ್ ಎರಡರಂದು ಕಲಬುರಗಿಯ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಸಮುದಾಯದ ಮುಖಂಡರ ಸಭೆಯನ್ನು ಕರೆಯಲಾಗಿದೆ. ರಾಷ್ಟ್ರೀಯ ಈಡಿಗ ಮಹಾಮಂಡಲವು ಪಾದಯಾತ್ರೆಗೆ ಈಗಾಗಲೇ ಬೆಂಬಲ ವ್ಯಕ್ತಪಡಿಸಿದೆ. ಸಮುದಾಯದ ರಾಷ್ಟ್ರೀಯ ನಾಯಕರಾದ ಬಿ.ಕೆ ಹರಿಪ್ರಸಾದ್, ತೆಲಂಗಾಣ ಮಾಜಿ ಸಚಿವರಾದ ಶ್ರೀನಿವಾಸ ಗೌಡ, ಕೋಟ ಶ್ರೀನಿವಾಸ ಪೂಜಾರಿ ಮುಂತಾದವರ ಮಾರ್ಗದರ್ಶನದಲ್ಲಿ ಪಾದಯಾತ್ರೆ ನಿರ್ಧಾರ ಕೈಗೊಳ್ಳಲಾಗಿದೆ. ಪಾದಯಾತ್ರೆ ಉದ್ಘಾಟನೆಗೆ ಕೇಂದ್ರ ಸಚಿವರಾದ ಯಸ್ಸೊ ಶ್ರೀಪಾದ ನಾಯಕ ಸೇರಿದಂತೆ ಸಮಾಜದ ಸಚಿವರು ಶಾಸಕರು ಸ್ವಾಮೀಜಿಗಳನ್ನು ಆಹ್ವಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಪೀಠದ ಟ್ರಸ್ಟಿಗಳಾದ ವೆಂಕಟೇಶ ಕಡೇಚೂರ್, ವೆಂಕಟೇಶ ಗುಂಡಾನೂರು, ಮುಖಂಡರಾದ ಮಲ್ಲಿಕಾರ್ಜುನ ಕುಂದಿ ಮಹೇಶ್ ಹೋಳಕುಂದ ಅಶೋಕ್ ಭೀಮಳ್ಳಿ ರಮೇಶ್ ಗುತ್ತೇದಾರ್ ಹಾಗೂ ಕರದಾಳು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಮತ್ತಿತರರಿದ್ದರು.
ಶ್ರೀ ಜಯಮೃತ್ಯುಂಜಯ ಶ್ರೀಗಳ ಪದಚ್ಯುತಿಗೆ ಆಕ್ರೋಶ
ಕೂಡಲಸಂಗಮ ಪಂಚಮಸಾಲಿ ಪೀಠದ ಪೂಜ್ಯರಾದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಪಂಚಮಸಾಲಿ ಪೀಠದಿಂದ ಪದಚ್ಯುತಿಗೊಳಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಪಂಚಮಸಾಲಿ ಸಮುದಾಯದಲ್ಲಿರುವ ಭಿನ್ನಾಭಿಪ್ರಾಯಗಳನ್ನು ತಮ್ಮೊಳಗೆ ಚರ್ಚಿಸಿ ಪರಿಹಾರ ಕೈಗೊಳ್ಳಬೇಕೆ ವಿನಃ ಏಕಾಏಕಿ ಪದಚ್ಯುತಿಗೊಳಿಸಿದ ವಿಜಯಾನಂದ ಕಾಶಪ್ಪನವರು ಸೇರಿದಂತೆ ಬೆಂಬಲಿಗರ ಕ್ರಮ ಖಂಡನೀಯ. ರಾಜಕೀಯ ತೆವಳಿಗಾಗಿ ಸ್ವಾಮೀಜಿಯವರನ್ನು ಬಲಿಪಶು ಮಾಡಿದ ಘಟನೆ ತೀರಾ ಅನ್ಯಾಯವಾಗಿದ್ದು ಈ ಬಗ್ಗೆ ಕರ್ನಾಟಕ ಸಾಧುಸಂತರ ಸಮಾವೇಶದಲ್ಲಿ ಚರ್ಚಿಸಿ ಮುಂದಿನ ಕ್ರಮಕ್ಕೆ ಸಿದ್ಧತೆ ಕೈಗೊಳ್ಳಲಾಗುತ್ತದೆ. ರಾಜ್ಯದ ಎಲ್ಲಾ ಸ್ವಾಮೀಜಿಗಳು ಇಂತಹ ಘಟನೆಗಳನ್ನು ಏಕಕಂಠದಿಂದ ಖಂಡಿಸಬೇಕಾಗಿದೆ.
ಡಾ. ಪ್ರಣವಾನಂದ ಶ್ರೀ