ಶಹಾಬಾದನಲ್ಲಿ ಅದ್ಧೂರಿ ದಸರಾ – ವಿಜಯದಶಮಿ ಉತ್ಸವ

ಶಹಾಬಾದನಲ್ಲಿ ಅದ್ಧೂರಿ ದಸರಾ – ವಿಜಯದಶಮಿ ಉತ್ಸವ
ಶಹಾಬಾದ: ದಿ. 1.10.2025 ಮತ್ತು 2.10.2025 ರಂದು ದಸರಾ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ನಗರದ ಮಡ್ಡಿ ನಂ. 1ರಲ್ಲಿ ಇರುವ ಪ್ರಸಿದ್ಧ ಓಂ ಶ್ರೀ ಮಾತಾ ಮಹಾಕಾಳಿ , ಯಲ್ಲಮ್ಮದೇವಿ ಹಾಗೂ ಭಾಗ್ಯವಂತಿ ದೇವಸ್ಥಾನದಲ್ಲಿ ಶಕ್ತಿ ದೇವಿಯರ ಅದ್ಧೂರಿ ವಿಜಯೋತ್ಸವ ಜರಗಿತು.
ಬೆಳಿಗ್ಗೆ 5 ಗಂಟೆಗೆ ದೇವಿಯರ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಿತು. ವಂಶ ಪರಂಪರೆಯಿಂದ ಪೂಜಾ ಕಾರ್ಯ ನಿರ್ವಹಿಸುತ್ತಿರುವ ಚಿಂತಾಮಣಿ ಕುಟುಂಬದ 3ನೇ ತಲೆಮಾರಿನ ಮುಖ್ಯ ಅರ್ಚಕರಾದ ಬಲಬೀಮ ಚಿಂತಾಮಣಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸಿದರು.
ಹಬ್ಬದ ನಿಮಿತ್ತ ಬೆಳಗ್ಗಿನಿಂದಲೇ ಭಕ್ತರು ಬಂದು ದೇವಿಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಪುನೀತರಾದರು. ಸಂಜೆ 6ರಿಂದ ರಾತ್ರಿ 9ರ ವರೆಗೆ ದೇವಸ್ಥಾನ ಆವರಣದಲ್ಲಿ ಸಂಗೀತ, ನೃತ್ಯಗಳೊಂದಿಗೆ ಭಕ್ತರ ಮನಸ್ಸು ಭಕ್ತಿಭಾವದಲ್ಲಿ ತೇಲಿತು.
ವಿಜಯದ ದಶಮಿ ದಿನದಂದು ಬನ್ನಿ ಬಂಗಾರವನ್ನು ಭಕ್ತರಿಗೆ ವಿತರಿಸಲಾಯಿತು. ದೇವಸ್ಥಾನ ಟ್ರಸ್ಟಿನ ಉಪಾಧ್ಯಕ್ಷೆ ಶ್ರೀಮತಿ ದುರ್ಗಾ ಚಿಂತಾಮಣಿ ಮತ್ತು ಖಜಾಂಚಿ ಕುಮಾರಿ ನೀಲಮ್ಮ ಚಿಂತಾಮಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಉತ್ಸವದ ಅಂಗವಾಗಿ ಸೇವೆ ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಅರ್ಚಕ ಹಾಗೂ ದೇವಸ್ಥಾನದ ಅಧ್ಯಕ್ಷರಾಗಿರುವ ಬಲಬೀಮ ಚಿಂತಾಮಣಿ ತಿಳಿಸಿದ್ದಾರೆ.