ಪೌರ ಕಾರ್ಮಿಕರ ಆರೋಗ್ಯ ನೋಡಿಕೊಳ್ಳುವುದು ನಮ್ಮ ಹೊಣೆ ಮತ್ತು ಜವಾಬ್ದಾರಿಯಾಗಿದೆ :..
ಪೌರ ಕಾರ್ಮಿಕರ ಆರೋಗ್ಯ ನೋಡಿಕೊಳ್ಳುವುದು ನಮ್ಮ ಹೊಣೆ ಮತ್ತು ಜವಾಬ್ದಾರಿಯಾಗಿದೆ :..
ಶಹಾಬಾದ : - ನಗರದ ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರವನ್ನು ನಿಯಮಿತವಾಗಿ ನಡೆಸುವದರ ಜೊತೆಗೆ ಅವರು ಆರೋಗ್ಯವಾಗಿರುವಂತೆ ನೋಡಿಕೊಳ್ಳ ಬೇಕಿರುವುದು ನಮ್ಮ ಹೊಣೆ ಮತ್ತು ಕರ್ತವ್ಯವಾಗಿದೆ ಎಂದು ಪೌರಾಯುಕ್ತ ಡಾ. ಕೆ. ಗುರುಲಿಂಗಪ್ವ ತಿಳಿಸಿದರು.
ಅವರು ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮತ್ತು ನಗರ ಸಭೆ ಶಹಾಬಾದ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪೌರ ಕಾರ್ಮಿಕರಾಗಿ ಏರ್ಪಡಿಸಿದ ದಂತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆರೋಗ್ಯದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌರಕಾರ್ಮಿಕರು ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಕೊಡುಗೆ ಅಪಾರವಾಗಿದೆ, ಪೌರ ಕಾರ್ಮಿಕರಿಗೆ ವರ್ಷಕ್ಕೆ ಪ್ರತಿ ಮೂರು ತಿಂಗಳಿಗೊಮ್ಮೆ ನಗರಸಭೆ ಮೂಲಕ ಆರೋಗ್ಯ ತಪಾಸಣಾ ಶಿಬಿರ ನಡೆಸ ಲಾಗುತ್ತದೆ ಎಂದು ತಿಳಿಸಿದರು.
ಆರೋಗ್ಯ ಕೇಂದ್ರದ ದಂತ ವೈದ್ಯಾದಿಕಾರಿ ಡಾ. ಸಂಧ್ಯಾ ಕಾಣೆಕರ ಮಾತನಾಡಿ, ದೇಹದ ಆರೋಗ್ಯ ಕಾಪಾಡುವಲ್ಲಿ ಬಾಯಿ ಆರೋಗ್ಯ ಪ್ರಮುಖ ಹಾಗಾಗಿ ನಿಯಮಿತವಾಗಿ ಹಲ್ಲು ಮತ್ತು ಬಾಯಿ ಸ್ವಚ್ಛತೆ ಕಾಪಾಡು ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ಮತ್ತು ಹಲವು ರೋಗಗಳಿಂದ ದೂರ ಇರಬಹುದು ಎಂದರು.
ಕೆಲ ಕಾರ್ಮಿಕರು ಧೂಮಪಾನ, ಮದ್ಯಪಾನದಂತಹ ಚಟಗಳಿಗೆ ಒಳಗಾಗಿದ್ದಾರೆ, ಇಂತಹ ಅನಾರೋಗ್ಯಕರ ಚಟಗಳಿಂದ ದೂರವಿರಬೇಕು, ಆರೋಗ್ಯದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು, ಅವರ ಚಟಗಳನ್ನು ಬಿಡಿಸುವ ಕೆಲ ಕೇಂದ್ರಗಳಿದ್ದು ಅಲ್ಲಿಗೆ ಸೇರಿಸುವ ಮೂಲಕ ಆರೋಗ್ಯವಂತರನ್ನಾಗಿ ಮಾಡಲು ಸ್ಥಳೀಯ ಸಂಸ್ಥೆಗಳು ಹಾಗೂ ಕಾರ್ಮಿಕ ಸಂಘಗಳು ಪ್ರಯತ್ನಿಸಬೇಕು ಎಂದರು.
ಆರೋಗ್ಯ ಶಿಬಿರದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯೋಜಕರಾದ ಸುಜಾತ ಪಾಟೀಲ ರವರು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ವಿವರಿಸಿ ಹೇಳಿದರು.
ನಗರ ಸಭೆಯ ನೈರ್ಮಲ್ಯ ನಿರೀಕ್ಷಕರಾದ
ಶಿವರಾಜಕುಮಾರ, ಮೈನೋದ್ದಿನ, ಸಾಬಣ್ಣ ಸುಂಗುಲಕರ ಸೇರಿದಂತೆ ಪೌರಕಾರ್ಮಿಕರು ಉಪಸ್ಥಿತರಿದ್ದರು.