ಬಸವಕಲ್ಯಾಣವು ಅಂತರಾಷ್ಟ್ರೀಯ ಮಟ್ಟದ ಸ್ಮಾರಕವಾಗಬೇಕು : ಡಾ. ವೀರಶೆಟ್ಟಿ ಗಾರಂಪಳ್ಳಿ

ಬಸವಕಲ್ಯಾಣವು ಅಂತರಾಷ್ಟ್ರೀಯ ಮಟ್ಟದ ಸ್ಮಾರಕವಾಗಬೇಕು : ಡಾ. ವೀರಶೆಟ್ಟಿ ಗಾರಂಪಳ್ಳಿ
ಕಲಬುರಗಿ:ಬಸವಣ್ಣನ ತತ್ವ-ವಿಚಾರಗಳು ಹಾಗೂ ಬಸವಕಲ್ಯಾಣದ ಐತಿಹಾಸಿಕ ಸ್ಮಾರಕಗಳ ಕುರಿತು ನಗರದ ಬಸವ ಸಮಿತಿಯಲ್ಲಿ ನಡೆದ ಉಪನ್ಯಾಸದಲ್ಲಿ ಡಾ. ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿದರು.
ಅವರು ಮಾತನಾಡಿ – “ಇಟಲಿ, ಲಂಡನ್ ಮುಂತಾದ ದೇಶಗಳ ಹೆಸರುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ಆದರೆ ಬಸವಕಲ್ಯಾಣದ ಮಹತ್ವ ಇನ್ನೂ ಪ್ರಪಂಚದ ಗಮನಕ್ಕೆ ಬಂದಿಲ್ಲ. ಬಸವಕಲ್ಯಾಣವನ್ನು ಅಂತರಾಷ್ಟ್ರೀಯ ಸ್ಮಾರಕವನ್ನಾಗಿ ರೂಪಿಸಬೇಕು,” ಎಂದು ಕಳವಳ ವ್ಯಕ್ತಪಡಿಸಿದರು.
ಚನ್ನಬಸವಣ್ಣನ ವಚನಗಳಲ್ಲಿ ಉಲ್ಲೇಖವಾದಂತೆ ಬಸವಕಲ್ಯಾಣವು 12 ಯೋಜನೆಗಳು, 360 ಬಾಗಿಲು, 25 ದ್ವಾರಗಳು ಹಾಗೂ 450 ಸುವರ್ಣ ಕಂಬಗಳನ್ನು ಹೊಂದಿದ್ದ ಮಹಾನಗರವಾಗಿತ್ತು. ಕಾಲಜ್ಞಾನವುಳ್ಳವರು ಒಂದೇ ಸಮಯದಲ್ಲಿ 72 ಕೆಲಸಗಳನ್ನು ನಿರ್ವಹಿಸುತ್ತಿದ್ದರು ಎಂಬ ದಾಖಲೆಗಳಿವೆ ಎಂದು ಅವರು ವಿವರಿಸಿದರು.
ತಿಪ್ರಾಂತ ಕೆರೆಯ ಐತಿಹಾಸಿಕ ಮಹತ್ವವನ್ನು ಅವರು ನೆನಪಿಸಿದರು. ಅದರ ಪೂರ್ವ ಘಂಟೆ, ಪಕ್ಕದಲ್ಲಿದ್ದ ಬಾವಿ ಹಾಗೂ ಬೇವಿನ ಮರವು ಶಿಲಾಶಾಸನಗಳಲ್ಲಿ ಉಲ್ಲೇಖಿತವಾಗಿದ್ದು, ಇಂದಿಗೂ ಬಾವಿ ಅಸ್ತಿತ್ವದಲ್ಲಿದೆ ಎಂದು ಹೇಳಿದರು. ಕ್ರಿ.ಶ. 1141ರಲ್ಲಿ ಚಂಡಿಮಯ್ಯ ನಾಯಕ ಹಾಗೂ ನೂಲಿಗ ಚಂದಯ್ಯ ಎಂಬ ಇಬ್ಬರು ವಿದ್ವಾಂಸರು ಒಂದೇ ವ್ಯಕ್ತಿ ಎಂಬ ನಿಲುವು ಇತಿಹಾಸಕಾರರಲ್ಲಿದೆ ಎಂದು ತಿಳಿಸಿದರು.
ಬಸವಕಲ್ಯಾಣದ ಶರಣರ ಗುಹೆಗಳಲ್ಲಿ ಅನೇಕ ಸ್ಥಾವರ ಲಿಂಗಗಳು ಕಂಡುಬರುತ್ತವೆ. ಹಲವಾರು ಹಳ್ಳಿಗಳಲ್ಲಿದ್ದ ಗರ್ಭಕೋಟಿಗಳು ಕಲ್ಯಾಣಕ್ಕೆ ಹೋಗುವ ಗುಹೆ ಮಾರ್ಗಗಳಾಗಿದ್ದವು ಎಂಬುದು ಜನಪದ ನಂಬಿಕೆ. ಶರಣರ ವಿಚಾರಗಳು, ಶಿಲ್ಪ ಪರಂಪರೆಗಳು ಬಾಯಿಂದ ಬಾಯಿಗೆ ಹಾಡಿ ಹರಡಿದವು ಎಂದು ಅವರು ಹೇಳಿದರು.
“ಶರಣರ ಸಂಬಂಧಿತ ಸ್ಥಳಗಳಿಗೆ ನಾಮಫಲಕಗಳನ್ನು ಅಳವಡಿಸಿ, ಅವುಗಳನ್ನು ಅಂತರ್ಜಾಲದ ಮೂಲಕ ಪ್ರಸಾರ ಮಾಡಿದರೆ ವಿಶ್ವಮಟ್ಟದಲ್ಲಿ ಬಸವಕಲ್ಯಾಣದ ಪ್ರಚಾರ ಸಾಧ್ಯ,” ಎಂದರು.
ಅವರು ಮುಂದುವರೆದು – “ಬಸವಣ್ಣನ ವಚನಗಳಲ್ಲಿ ಹೇಳಿದಂತೆ, ಎಲ್ಲರನ್ನು ಒಟ್ಟುಗೂಡಿಸಿ ವಿಚಾರ ಹಂಚಿಕೊಳ್ಳುವುದರಿಂದ ಸಮಾನತೆಯ ಸಂದೇಶ ಹರಡುತ್ತದೆ. ಭಾರತದ 564 ವಿಶ್ವವಿದ್ಯಾಲಯಗಳಿಗೆ ಶರಣರ ರೇಖಾಚಿತ್ರ ಹಾಗೂ ಛಾಯಾಚಿತ್ರಗಳನ್ನು ಮುದ್ರಿಸಿ ಕಳುಹಿಸಿದರೆ ವಿದ್ಯಾರ್ಥಿಗಳಿಗೆ ದೊಡ್ಡ ಸಹಾಯವಾಗುತ್ತದೆ,”ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ವಿಲಾಸ್ವತಿ ಖೂಬಾ, ಡಾ. ಅನಂದ ಸಿದ್ದಾಮಣಿ ಹಾಗೂ ಅನೇಕರು ಉಪಸ್ಥಿತರಿದ್ದರು.