ಮೂರು ದಶಕಗಳ ಪತ್ರಿಕಾ ಸೇವೆಗೆ ಬಸವರಾಜ್ ಖಾನಾಪುರ್–ಉಮಾಕಾಂತ್ ಜಡೆಗೆಕರರಿಗೆ ಸನ್ಮಾನ

ಮೂರು ದಶಕಗಳ ಪತ್ರಿಕಾ ಸೇವೆಗೆ ಬಸವರಾಜ್ ಖಾನಾಪುರ್–ಉಮಾಕಾಂತ್ ಜಡೆಗೆಕರರಿಗೆ ಸನ್ಮಾನ

ಮೂರು ದಶಕಗಳ ಪತ್ರಿಕಾ ಸೇವೆಗೆ ಬಸವರಾಜ್ ಖಾನಾಪುರ್–ಉಮಾಕಾಂತ್ ಜಡೆಗೆಕರರಿಗೆ ಸನ್ಮಾನ

ಕಲಬುರಗಿ: 4.9.2025ನಗರದ ಸಪ್ತ ನೇಕಾರರ ಸೇವಾ ಸಂಘದ ಕಛೇರಿಯಲ್ಲಿ ಗುರುವಾರ ಸಂಜೆ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ರಾಜು ಕೋಷ್ಟಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಂಯುಕ್ತ ಕರ್ನಾಟಕದ ಹಿರಿಯ ಪತ್ರಕರ್ತ ಹಾಗೂ ನೇಕಾರ ಸಂಘದ ಹಿರಿಯ ಸದಸ್ಯ ಸುಭಾಷ್ ಬಣಗಾರ್ ಅವರು, ಕಲಬುರಗಿಯ ಹಿರಿಯ ಪತ್ರಿಕಾ ವಿತರಕರಾದ ಬಸವರಾಜ್ ಖಾನಾಪುರ್ ಮತ್ತು ಉಮಾಕಾಂತ್ ಜಡೆಗೆಕರರನ್ನು ಶಾಲು ಹೊದಿಸಿ, ನುಲಿನ ಹಾರ ಹಾಕಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಗರದಲ್ಲಿ ಸಂಯುಕ್ತ ಕರ್ನಾಟಕ ಹಾಗೂ ಪ್ರಜಾವಾಣಿ ಪತ್ರಿಕೆಗಳನ್ನು ಕಳೆದ 30 ವರ್ಷಗಳಿಂದ ಮನೆಯಿಂದ ಮನೆಗೆ ತಲುಪಿಸುತ್ತಾ, ಜನಮನದಲ್ಲಿ ಅಚ್ಚಳಿಯದ ನೆನಪು ಮೂಡಿಸಿರುವುದು ಇವರ ಅಪರೂಪದ ಸೇವೆ” ಎಂದರು.

ಸಂಘದ ಸದಸ್ಯ ಹಾಗೂ ನ್ಯಾಯವಾದಿ ವಿನೋದಕುಮಾರ ಮಾತನಾಡಿ, “ಕಡಿಮೆ ಆದಾಯ ಇದ್ದರೂ ವೃತ್ತಿಯನ್ನು ಅಪ್ಪಿಕೊಂಡು ತೃಪ್ತಿಯಿಂದ ಸಾಗುತ್ತಿರುವ ನಿಮ್ಮ ಬದುಕು ಎಲ್ಲರಿಗೂ ಮಾದರಿ” ಎಂದು ಅಭಿಪ್ರಾಯಪಟ್ಟರು.

ಗೌರವ ಸ್ವೀಕರಿಸಿದ ಬಸವರಾಜ್ ಮತ್ತು ಜಡೆಗೆಕರರು ತಮ್ಮ ಅನುಭವ ಹಂಚಿಕೊಳ್ಳುತ್ತಾ, “ಮೊದಲು ಸೈಕಲ್ ಮೇಲೆ ಪತ್ರಿಕೆ ಹಂಚಿದ ದಿನಗಳಿಂದಲೇ ಇಂದು ನಿಮ್ಮೆದುರು ದೃಢಕಾಯವಾಗಿ ನಿಲ್ಲಲು ಸಾಧ್ಯವಾಗಿದೆ. ನಿಮ್ಮೆಲ್ಲರ ಓದು ನಿಲುವೇ ನಮ್ಮ ಜೀವನದ ಆಸರೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಶಿವಲಿಂಗಪ್ಪಾ ಅಷ್ಟಗಿ, “ಒಮ್ಮೆ ದರ್ಬಾರ್ ಮಾಲೀಕರು ವಿತರಕರಿಗೆ ಸಮವಸ್ತ್ರ ನೀಡಿ ವೃತ್ತಿಯಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡಿದುದನ್ನು ನಾನು ಸಾಕ್ಷಿಯಾಗಿ ಕಂಡಿದ್ದೇನೆ. ಇಂದಿನ ದಿನ ಪತ್ರಿಕಾ ವಿತರಕರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ” ಎಂದರು.

ಕೊನೆಯಲ್ಲಿ ಸಂಘದ ಖಜಾಂಚಿ ರಾಜಗೋಪಾಲ ಭಂಡಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಕಾಂತ ರಾಜಾಪುರ, ತ್ರಿವೇದಿ ವಿಜಯಕುಮಾರ, ಸಂತೋಷ ಗುರಮಿಠಕಲ್, ಸತೀಶ ಜಮಖಂಡಿ, ರಾಹುಲ ಕೋಷ್ಟಿ, ರಾಜಶೇಖರ್ ಸಬಸಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.