ಬಸವಕಲ್ಯಾಣ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಾರಕೂಡ ಶ್ರೀಗಳ ಆಶೀರ್ವಚನ

ಬಸವಕಲ್ಯಾಣ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಾರಕೂಡ ಶ್ರೀಗಳ ಆಶೀರ್ವಚನ

ಬಸವಕಲ್ಯಾಣ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಾರಕೂಡ ಶ್ರೀಗಳ ಆಶೀರ್ವಚನ

ಅತ್ಯಂತ ಶ್ರೇಷ್ಠವಾದ ಜ್ಞಾನದ ಕಣಜ ಹೊಂದಿರುವ, ಅದ್ಭುತವಾದ ಶೈಕ್ಷಣಿಕ ಹಿನ್ನೆಲೆಯುಳ್ಳ, ಅಧ್ಯಾತ್ಮದ ಪ್ರಯೋಗ ಶಾಲೆ ಯಾಗಿರುವ ಭಾರತ, ಇವತ್ತಿಗೂ ಜಗತ್ತಿಗೆ ವಿವೇಕ ಮಾರ್ಗ ತೋರುತ್ತಿರುವುದು ಪ್ರತಿ ಭಾರತೀಯನ ಹೆಮ್ಮೆ.

 ಇಂತಹ ವಿಶಿಷ್ಟವಾದ ಜ್ಞಾನ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಶಿಕ್ಷಕ ಸಮುದಾಯ ನಿಜವಾಗಿಯೂ ಸಮಾಜದ ಕೆನೆಪದರು ಎಂದು ಹೇಳಿದರೆ ಅತಿಶೋಕ್ತಿಯಾಗದು.

 ಶಿಕ್ಷಣ ಎಂಬುದು ಶಕ್ತಿಯ ಖಜಾನೆ, ಈ ಅದ್ಭುತ ಖಜಾನೆಯಿಂದ ಜ್ಞಾನ ಶಕ್ತಿಯನ್ನು ಸಮಾಜಕ್ಕೆ ವರ್ಗಾಯಿಸುವ ಶ್ರೇಷ್ಠ ಕಾರ್ಯದಲ್ಲಿ ತೊಡಗಿರುವ ಶಿಕ್ಷಕ ಸಮುದಾಯದ ಪವಿತ್ರ ಸೇವೆಯನ್ನು ಸ್ಮರಿಸುವ, ಗೌರವಿಸುವ ದಿನವೇ ಶಿಕ್ಷಕರ ದಿನಾಚರಣೆ.

 ವ್ಯವಹಾರಿಕವಾಗಿ ವರ್ಷಕ್ಕೊಮ್ಮೆ ಶಿಕ್ಷಕರ ದಿನಾಚರಣೆ ಆಚರಿಸಿದರೆ, ವಾಸ್ತವವಾಗಿ ಪ್ರತಿ ದಿನವೂ ಶಿಕ್ಷಕರ ದಿನಾಚರಣೆ ಯಾಗಿರುತ್ತದೆ.

 ಸಮಾಜದ ಉನ್ನತಿಗಾಗಿ ಪ್ರತಿದಿನವೂ ಪ್ರಯತ್ನಶೀಲನಾಗಿರುವ, ಸದ್ದಿಲ್ಲದೆ ಶ್ರಮಿಸುತ್ತಿರುವ ಶಿಕ್ಷಕ ರಾಷ್ಟ್ರ ನಿರ್ಮಾಣದ ಶಿಲ್ಪಿ ಎಂದೇ ಹೇಳಬಯಸುತ್ತೇವೆ.

 ಪ್ರತಿಕೂಲ ಸನ್ನಿವೇಶಗಳನ್ನು ಸಮರ್ಥವಾಗಿ, ಸಮ ಚಿತ್ತದಿಂದ ಎದುರಿಸುವ ಮತ್ತು ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಬೆಳೆಸುವ ಜ್ಞಾನ ಮತ್ತು ಕೌಶಲ್ಯವೇ ಶಿಕ್ಷಣ ಎಂದಿರುವ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರು ತಮ್ಮ ಜನುಮ ದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲು ಕರೆ ಕೊಟ್ಟಿರುವುದು ಅರ್ಥಪೂರ್ಣವಾಗಿದೆ.

 ಜ್ಯೋತಿಬಾ ಫುಲೆ, ಸಾವಿತ್ರಾ ಬಾಯಿ ಫುಲೆ, ಫಾತಿಮಾ ಶೇಕ ರಂತಹ ಮಹನಿಯರು ಸಮಾಜದ ಪರಿವರ್ತನೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ತಿಳಿದು ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟು ಆದರ್ಶ ಸಮಾಜ ಕಟ್ಟುವಲ್ಲಿ ತಮ್ಮನ್ನು ಸಮರ್ಪಿಸಿಕೊಂಡವರು.

 ಶಿಕ್ಷಣದಲ್ಲಿ ಬಲವಾದ ನಂಬಿಕೆ ಇಟ್ಟಿರುವ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು, Education could transform social and economic empowerment ಎಂದು ಹೇಳಿರುವುದನ್ನು ಇವತ್ತಿನ ಶಿಕ್ಷಕರು ಅತ್ಯಂತ ಗಂಭೀರವಾಗಿ ಪರಿಗಣಿಸಿ ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

 ಬುದ್ಧ ಬಸವ ಬಾಬಾ ಸಾಹೇಬ್ ಅಂಬೇಡ್ಕರ್ ರವರು, ಅಲ್ಲಮ ಅಕ್ಕಮಹಾದೇವಿ, ಪರಮಹಂಸ, ವಿವೇಕಾನಂದರು, ಕನಕದಾಸ, ಅರವಿಂದ, ಮಹಾತ್ಮ ಗಾಂಧಿ, ಎಪಿಜೆ ಅಬ್ದುಲ್ ಕಲಾಂ, ಕುವೆಂಪು ರವರು ಹೀಗೆ ಅನೇಕಾನೇಕ ದಾರ್ಶನಿಕರು ಇಡೀ ಸಮಾಜವನ್ನೇ ವಿದ್ಯಾರ್ಥಿಯಾಗಿ ಸ್ವೀಕರಿಸಿ, ಅದರ ಸರ್ವೋನ್ನತಿಗಾಗಿ, ಸರ್ವರ ಬದುಕಿನ ಯಶಸ್ಸಿಗಾಗಿ, ಅವಿರತವಾಗಿ ದುಡಿದು ತಮ್ಮ ಇಡೀ ಬದುಕನ್ನೇ ಸಮರ್ಪಿಸಿದ್ದಾರೆ.

 ಇಂತಹ ಮಹಾತ್ಮರ ಬೆಳಕಿನಲ್ಲಿ ಸುಂದರ ಸಮಾಜ ಕಟ್ಟುವ ಹೊಣೆ ನಮ್ಮದಾಗಿದೆ ಎಂಬುದನ್ನು ಅರಿತು, ಆ ನಿಟ್ಟಿನಲ್ಲಿ ಸಾರ್ಥಕ ಹೆಜ್ಜೆ ಇಡಬೇಕೆನ್ನುವುದೇ ನಮ್ಮ ಆಶಯವಾಗಿದೆ.

 ಶಿಕ್ಷಣ ಲೋಕದ ಬಾನಂಗಳದಲ್ಲಿ ಯಾವತ್ತೂ ಮಾನವೀಯ ಮೌಲ್ಯಗಳ, ರಾಷ್ಟ್ರ ಪ್ರೇಮದ ಪತಾಕೆ ಹಾರಾಡುತ್ತಿರುವಂತೆ ಪ್ರತಿಯೊಬ್ಬರೂ ಹೊಣೆಗಾರಿಕೆಯ ಹೆಗಲು ನೀಡಬೇಕಾಗಿರುವುದು ಅವಶ್ಯವೂ ಹೌದು, ಅನಿವಾರ್ಯವೂ ಹೌದು.

 ಬಸವಾದಿ ಶರಣರ ಕಾಯಕ ಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕರ, ಗುರು ಮಾತೆಯರ ಕುರಿತಾದ ಅಂತ:ಕರಣದಿಂದ ನಾವು ಸತತವಾಗಿ 36 ವರ್ಷಗಳಿಂದ ಬಸವಕಲ್ಯಾಣ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ.

 ತಮ್ಮೆಲ್ಲರ ವೃತ್ತಿನಿಷ್ಠೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ತಾಲೂಕಿನ ಶೈಕ್ಷಣಿಕ ಗುಣಮಟ್ಟ ಸರ್ವತೋಮುಖವಾಗಿ ವೃದ್ಧಿಯಾಗಿ, ರಾಷ್ಟ್ರ ಬೆಳಗುವ ಅದ್ಭುತ ಪ್ರತಿಭೆಗಳು ಹೊರಹೊಮ್ಮಲಿ ಹಾಗೂ ಸರ್ವರ ಬದುಕು ಶ್ರೇಯಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸುತ್ತೇವೆ.