ಜಿಲ್ಲೆಯಲ್ಲಿ ವ್ಯಾಪಕ ಮಳೆ ಸಚಿವ ಪ್ರಿಯಾಂಕ್ ಖರ್ಗೆ ಸಾರ್ವಜನಿಕರಲ್ಲಿ ಮನವಿ
ಜಿಲ್ಲೆಯಲ್ಲಿ ವ್ಯಾಪಕ ಮಳೆ ಸಚಿವ ಪ್ರಿಯಾಂಕ್ ಖರ್ಗೆ ಸಾರ್ವಜನಿಕರಲ್ಲಿ ಮನವಿ
ಕಲಬುರಗಿ : ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿರುವ ಹಿನ್ನಲ್ಲೇಯಲ್ಲಿ ಆರೆಂಜ್ ಹಾಗೂ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಾರ್ವಜನಿಕರಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಮನವಿಮಾಡಿದ್ದಾರೆ.
ಜಿಲ್ಲಾದ್ಯಂತ ವ್ಯಾಪಕ ಮಳೆ ಬೀಳುತ್ತಿದ್ದು ಹಾಗೆ ಮುಂದುವರೆಯುವ ಸಂಭವವಿದ್ದು ಭಾರತೀಯ ಹವಾಮಾನ ಇಲಾಖೆ ದಿನಾಂಕ 02-09-2024 ಬೆಳಿಗ್ಗೆ 8.30 ರವರೆಗೆ “ಆರೆಂಜ್ ಅಲರ್ಟ್ ” ಹಾಗೂ ದಿನಾಂಕ 3 ರ ಬೆಳಿಗ್ಗೆ 8.30 ರವರೆಗೆ ” ಯಲ್ಲೋ ಅಲರ್ಟ್ ” ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅತಿ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು ಜಿಲ್ಲೆಯಲ್ಲಿ ಅದರಲ್ಲೂ ಸೇಡಂ ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಾಗೆ ಇದೇ ರೀತಿ ಮುಂದುವರೆಯಲಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಮುಂಜಾಗರೂಕತೆ ವಹಿಸಿಕೊಳ್ಳಬೇಕು.
ಅತೀ ಹೆಚ್ಚು ಮಳೆಯಾಗುವ ಕಾರಣ ಗ್ರಾಮದಲ್ಲಿನ ಕೆರೆ, ಹಳ್ಳ-ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆಯಿರುವುದರಿಂದ ಜಾನುವಾರುಗಳಿಗೆ ನೀರು ಕುಡಿಸಲು ಹೊಳೆಯ ಸಮೀಪ ತೆಗೆದುಕೊಂಡು ಹೋಗಬಾರದೆಂದು ಹಾಗೂ ಸಾರ್ವಜನಿಕರು ಸಹ ನದಿ, ಹಳ್ಳದ ದಂಡೆ ಕಡೆ ಹೋಗಬಾರದೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರೈತರಲ್ಲಿ ಮನವಿ:
ಹೊಲದಲ್ಲಿ ಕೆಲಸ ಮಾಡುವ ರೈತ ಭಾಂದವರು ಕೀಟನಾಶಕ ಸಿಂಪರಣೆಯನ್ನು ಮುಂದೂಡುವುದು ಒಳ್ಳೆಯದು. ಹೆಸರು, ಉದ್ದು ಬೆಳೆಗಳು ಕಟಾವಿಗೆ ಬಂದಿರುವ ಕಾರಣ ಬೇಗನೆ ಕಟಾವು ಮಾಡಬಹುದಾಗಿದೆ. ಹೊಲ-ಗದ್ದೆಗಳಲ್ಲಿ ಹೆಚ್ಚಿನ ನೀರು ನಿಂತು ಬೆಳೆ ಹಾನಿಯಾಗುವ ಸಂಭವ ಇರುವುದರಿಂದ ಹೊಲದಲ್ಲಿ ಬಸಿಗಾಲಿವೆ ಮಾಡಿ ನೀರನ್ನು ಹೊರಹಾಕಿ ಬೆಳೆ ಸಂರಕ್ಷಿಸಿಕೊಳ್ಳಬೇಕೆಂದು ಸಚಿವರು ರೈತ ಬಾಂಧವರಿಗೆ ಮನವಿ ಮಾಡಿದ್ದಾರೆ.